ಮಂಗಳವಾರ, ಮೇ 18, 2021
28 °C
ಇಂದು ಫೈನಲ್ `ಮಹಾಸಮರ'; ದೋನಿ ಬಳಗಕ್ಕೆ ಆತಿಥೇಯ ಇಂಗ್ಲೆಂಡ್ ತಂಡದ ಸವಾಲು

ಚಾಂಪಿಯನ್ಸ್ ಟ್ರೋಫಿ ಕಿರೀಟ ಯಾರಿಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಂಪಿಯನ್ಸ್ ಟ್ರೋಫಿ ಕಿರೀಟ ಯಾರಿಗೆ?

ಬರ್ಮಿಂಗ್‌ಹ್ಯಾಂ: ಅದ್ಭುತ ಫಾರ್ಮ್‌ನಲ್ಲಿ ಆಡುತ್ತಿರುವ ಭಾರತ ತಂಡ ಕಿರೀಟ ಮುಡಿಗೇರಿಸಿಕೊಳ್ಳಲಿದೆಯೇ? ಮಹೇಂದ್ರ ಸಿಂಗ್ ದೋನಿ ಬಳಗ ಐಸಿಸಿಯ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುವುದೇ?ದೇಶದ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳನ್ನು ಕಾಡುತ್ತಿರುವ ಪ್ರಶ್ನೆಯಿದು. ಇದಕ್ಕೆ ಭಾನುವಾರ ರಾತ್ರಿಯ ವೇಳೆ ಉತ್ತರ ಲಭಿಸಲಿದೆ. ಬರ್ಮಿಂಗ್‌ಹ್ಯಾಂನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಆತಿಥೇಯ ಇಂಗ್ಲೆಂಡ್‌ನ ಸವಾಲನ್ನು ಎದುರಿಸಲಿದ್ದು, ತುರುಸಿನ ಪೈಪೋಟಿ ನಿರೀಕ್ಷಿಸಲಾಗಿದೆ.ಟೂರ್ನಿಯಲ್ಲಿ ಇದುವರೆಗೆ ತೋರಿದ ಪ್ರದರ್ಶನವನ್ನು ನೋಡಿದಾಗ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣುತ್ತದೆ. ಏಕೆಂದರೆ ದೋನಿ ಬಳಗಕ್ಕೆ ಯಾವುದೇ ತಂಡವೂ ತಕ್ಕ ಪೈಪೋಟಿಯನ್ನೇ ನೀಡಿಲ್ಲ. ಭಾರತ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ್ದರೆ, ಅಲಸ್ಟೇರ್ ಕುಕ್ ಬಳಗ ದಕ್ಷಿಣ ಆಫ್ರಿಕಾ ವಿರುದ್ಧ ಜಯ ಪಡೆದಿತ್ತು.ದೋನಿ ಸಾರಥ್ಯದಲ್ಲಿ ಏಕದಿನ ವಿಶ್ವಕಪ್ ಗೆದ್ದಿರುವ ಭಾರತ ಮತ್ತೊಂದು ಪ್ರಮುಖ ಟ್ರೋಫಿಯನ್ನು ಜಯಿಸುವ ವಿಶ್ವಾಸ ಹೊಂದಿದೆ. ಭಾರತ 2002 ರಲ್ಲಿ ಶ್ರೀಲಂಕಾ ಜೊತೆ ಈ ಪ್ರಶಸ್ತಿಯನ್ನು ಜಂಟಿಯಾಗಿ ಗೆದ್ದುಕೊಂಡಿತ್ತು. ಅಂದು ಫೈನಲ್ ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಗಿತ್ತು.ಇಂದಿನ ಫೈನಲ್ ಭಾರತದ ಬ್ಯಾಟ್ಸ್‌ಮನ್‌ಗಳು ಹಾಗೂ ಇಂಗ್ಲೆಂಡ್‌ನ ಬೌಲರ್‌ಗಳ ನಡುವಿನ ಹೋರಾಟವಾಗಿ ಪರಿಣಮಿಸಿದೆ. `ಮಹಿ' ಬಳಗದ ಬ್ಯಾಟ್ಸ್‌ಮನ್‌ಗಳಿಗೆ ಟೂರ್ನಿಯಲ್ಲಿ ಇದುವರೆಗೆ ನಿಜವಾದ ಅಗ್ನಿಪರೀಕ್ಷೆ ಎದುರಾಗಿಲ್ಲ. ಆದರೆ ಜೇಮ್ಸ ಆ್ಯಂಡರ್‌ಸನ್ ಅವರನ್ನೊಳಗೊಂಡ ಇಂಗ್ಲೆಂಡ್‌ನ ಬೌಲಿಂಗ್ ವಿಭಾಗ ದೋನಿ ಬಳಗಕ್ಕೆ ಸವಾಲಾಗಿ ಪರಿಣಮಿಸುವುದು ಖಚಿತ. ಆತಿಥೇಯರು ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 39 ಓವರ್‌ಗಳ ಒಳಗೆ ಆಲೌಟ್ ಮಾಡಿದ್ದರು. ಜೇಮ್ಸ ಆ್ಯಂಡರ್‌ಸನ್, ಸ್ಟೀವನ್ ಫಿನ್, ಸ್ಟುವರ್ಟ್ ಬ್ರಾಡ್ ಮತ್ತು ಜೇಮ್ಸ ಟ್ರೆಡ್‌ವೆಲ್ ಉತ್ತಮ ಲಯದಲ್ಲಿ ಬೌಲ್ ಮಾಡುತ್ತಿದ್ದಾರೆ.ವಿಶ್ವ ಚಾಂಪಿಯನ್ನರು ಈ ಪಂದ್ಯದಲ್ಲೂ ಶಿಖರ್ ಧವನ್ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಧವನ್ ಮತ್ತು ರೋಹಿತ್ ಶರ್ಮ ಈ ಹಿಂದಿನ ಪಂದ್ಯಗಳಲ್ಲಿ ಉತ್ತಮ ಆರಂಭ ನೀಡಿದ್ದರು. ಆದ್ದರಿಂದ ಫೈನಲ್‌ನಲ್ಲೂ ಇವರು ತಂಡದ ಇನಿಂಗ್ಸ್‌ಗೆ ಭದ್ರ ಅಡಿಪಾಯ ಹಾಕಿಕೊಟ್ಟರೆ ಇತರ ಬ್ಯಾಟ್ಸ್‌ಮನ್‌ಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ.ಟೂರ್ನಿಯಲ್ಲಿ ಇದುವರೆಗೆ ಮಧ್ಯಮ ಕ್ರಮಾಂಕದ ಆಟಗಾರರಿಗೆ ಬ್ಯಾಟ್ ಮಾಡಲು ಹೆಚ್ಚಿನ ಅವಕಾಶ ಲಭಿಸಿಲ್ಲ. ಆದರೆ ಇದು `ಆತಂಕದ ವಿಷಯವಲ್ಲ' ಎಂದು ದೋನಿ ಸೆಮಿಫೈನಲ್‌ಗೆ ಮುನ್ನವೇ ಹೇಳಿದ್ದರು. ದಿನೇಶ್ ಕಾರ್ತಿಕ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ದೋನಿ ಹಾಗೂ ರವೀಂದ್ರ ಜಡೇಜ ಯಾವುದೇ ಸವಾಲನ್ನು ಮೆಟ್ಟಿನಿಲ್ಲುವ ತಾಕತ್ತು ಹೊಂದಿದ್ದಾರೆ.ಇಂಗ್ಲೆಂಡ್ ಪಿಚ್‌ಗಳಲ್ಲಿ ಹೇಗೆ ಬೌಲ್ ಮಾಡಬೇಕೆಂಬ ಕಲೆಯನ್ನು ಭಾರತದ ಬೌಲರ್‌ಗಳು ಕರಗತಮಾಡಿ ಕೊಂಡಿರುವುದು ಸಕಾರಾತ್ಮಕ ಅಂಶ. ಲಂಕಾ ವಿರುದ್ಧ ಪ್ರಭಾವಿ ಬೌಲಿಂಗ್ ತೋರಿದ್ದ ಭುವನೇಶ್ವರ್ ಕುಮಾರ್, ಇಶಾಂತ್ ಶರ್ಮ ಮತ್ತು ಉಮೇಶ್ ಯಾದವ್ ಅದೇ ಪ್ರದರ್ಶನವನ್ನು       ಪುನರಾವರ್ತಿಸುವ ವಿಶ್ವಾಸ ಹೊಂದಿದ್ದಾರೆ. ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜ ತಮ್ಮ ್ಪನ್ `ಜಾದೂ' ತೋರಲು ಸಜ್ಜಾಗಿದ್ದಾರೆ.ಇಂಗ್ಲೆಂಡ್ ತಂಡದಲ್ಲಿ ಕೆಲವು ಅಪಾಯಕಾರಿ ಬ್ಯಾಟ್ಸ್‌ಮನ್‌ಗಳಿದ್ದಾರೆ. ನಾಯಕ ಕುಕ್ ಅಲ್ಲದೆ ಜೊನಾಥನ್     ಟ್ರಾಟ್, ಜೋ ರೂಟ್ ಮತ್ತು ಎಯೊನ್ ಮಾರ್ಗನ್ ತಂಡದ ಬ್ಯಾಟಿಂಗ್‌ಗೆ ಬಲ ನೀಡಲಿದ್ದಾರೆ. ಟ್ರಾಟ್ ಈ ಟೂರ್ನಿಯಲ್ಲಿ 69.67ರ ಸರಾಸರಿಯಲ್ಲಿ 209 ರನ್ ಕಲೆಹಾಕಿದ್ದಾರೆ. ಏಕದಿನ ಕ್ರಿಕೆಟ್‌ನ ಇತಿಹಾಸದಲ್ಲಿ ಇಂಗ್ಲೆಂಡ್ ಇದುವರೆಗೆ ಐಸಿಸಿಯ ಪ್ರತಿಷ್ಠಿತ ಕಿರೀಟ ಮುಡಿಗೇರಿಸಿಕೊಂಡಿಲ್ಲ. ಆದ್ದರಿಂದ ತವರು ನೆಲದ ಅಭಿಮಾನಿಗಳ ಮುಂದೆ ಚಾಂಪಿಯನ್ ಟ್ರೋಫಿ ಗೆದ್ದು ತನ್ನ ಪ್ರಶಸ್ತಿಯ ಬರವನ್ನು ನೀಗಿಸುವುದೇ ಎಂಬುದನ್ನು ನೋಡಬೇಕು.

ಎಚ್‌ಐವಿ ಜಾಗೃತಿ ಅಭಿಯಾನಕ್ಕೆ ಅರ್ಪಣೆ

ಬರ್ಮಿಂಗ್‌ಹ್ಯಾಂ (ಪಿಟಿಐ) ಈ ಫೈನಲ್ ಪಂದ್ಯವನ್ನು ಐಸಿಸಿ ತನ್ನ ಎಚ್‌ಐವಿ ಅಭಿಯಾನಕ್ಕೆ ಅರ್ಪಿಸಿದೆ.ಐಸಿಸಿಯು ಯುನಿಸೆಫ್ ಮತ್ತು ಯುಎನ್‌ಎಐಡಿಎಸ್ ಜೊತೆ ಸೇರಿಕೊಂಡು ವಿಶ್ವದಾದ್ಯಂತ `ಥಿಂಕ್ ವೈಸ್' ಹೆಸರಿನಲ್ಲಿ ಎಚ್‌ಐವಿ ಜಾಗೃತಿ ಅಭಿಯಾನ ನಡೆಸುತ್ತಿದೆ. ಇದು ಅತ್ಯಂತ ಯಶಸ್ವಿ ಅಭಿಯಾನ ಎನಿಸಿಕೊಂಡಿದೆ.

ತಂಡಗಳ ಶಕ್ತಿ, ದೌರ್ಬಲ್ಯ

ಭಾರತ

ಶಕ್ತಿ: ಬಲಿಷ್ಠ ಬ್ಯಾಟಿಂಗ್ ಕ್ರಮಾಂಕ. ಆಡಿದ ಎಲ್ಲ ಪಂದ್ಯಗಳಲ್ಲೂ ಮಿಂಚಿದ ಬ್ಯಾಟ್ಸ್‌ಮನ್‌ಗಳು. ರನ್ ಬೆನ್ನಟ್ಟಿ ಗೆಲುವು ಪಡೆಯುವ ವೇಳೆ ಭಾರತ ಎರಡಕ್ಕಿಂತ ಹೆಚ್ಚು ವಿಕೆಟ್ ಕಳೆದುಕೊಂಡೇ ಇಲ್ಲ.

ದೌರ್ಬಲ್ಯ: ಬೌಲರ್‌ಗಳು ಕೆಲವು ಪಂದ್ಯಗಳಲ್ಲಿ ಮಿಂಚಿರುವರಾದರೂ, ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿಲ್ಲ. ತಮ್ಮದೇ ನೆಲದಲ್ಲಿ ಆಡುತ್ತಿರುವ ಕಾರಣ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಪರಿಸ್ಥಿತಿಯ ಲಾಭ ಎತ್ತಿಕೊಳ್ಳುವ ಸಾಧ್ಯತೆಯಿದೆ.

ಪ್ರಮುಖ ಆಟಗಾರರು: ಶಿಖರ್ ಧವನ್, ರವೀಂದ್ರ ಜಡೇಜ

ಇಂಗ್ಲೆಂಡ್

ಶಕ್ತಿ: ಪರಿಸ್ಥಿತಿಗೆ ತಕ್ಕಂತೆ ಆಡುವ ಸಾಮರ್ಥ್ಯ ಹೊಂದಿರುವ ಬ್ಯಾಟಿಂಗ್ ಕ್ರಮಾಂಕ ಹೊಂದಿದೆ. ಜೇಮ್ಸ ಆ್ಯಂಡರ್‌ಸನ್ ಅವರನ್ನೊಳಗೊಂಡ ಬೌಲಿಂಗ್ ವಿಭಾಗ ಟೂರ್ನಿಯ `ಶ್ರೇಷ್ಠ ಬೌಲಿಂಗ್ ವಿಭಾಗ' ಎನಿಸಿಕೊಂಡಿದೆ.ದೌರ್ಬಲ್ಯ: ಅಗ್ರ ಕ್ರಮಾಂಕದ ಆಟಗಾರರು ನಿಧಾನಗತಿಯಲ್ಲಿ ರನ್ ಪೇರಿಸುವುದರಿಂದ ಕೆಲವೊಮ್ಮೆ ತಂಡದ ಲೆಕ್ಕಾಚಾರ ತಲೆಕೆಳಗಾಗುತ್ತದೆ. ಇದರಿಂದ ಮಧ್ಯಮ ಹಾಗೂ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ.

ಪ್ರಮುಖ ಆಟಗಾರರು: ಜೊನಾಥನ್ ಟ್ರಾಟ್, ಜೇಮ್ಸ ಆ್ಯಂಡರ್‌ಸನ್

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.