ಭಾನುವಾರ, ಫೆಬ್ರವರಿ 28, 2021
23 °C
ನಾದಲೋಕ

ಚಿತ್ತಪ್ರಧಾನ ಸುಮನ್ ಗಾಯನ

ಶ್ರೀದೇವಿ ಕಳಸದ Updated:

ಅಕ್ಷರ ಗಾತ್ರ : | |

ಚಿತ್ತಪ್ರಧಾನ ಸುಮನ್ ಗಾಯನ

ಆ ಸಂಪಿಗೆ ಮರಸಾಲು, ಗೋಧೂಳಿ, ಶ್ರಾವಣದ ಹೊಸ್ತಿಲಿನ ಮಳೆ ಸೆಳಕು, ಆ ಮಣ್ಣ ಘಮ... ಮಾಧುರ್ಯವತಿ ‘ಮಧುವಂತಿ’ ಸ್ವರ ಮಂಡಲದೊಳಗೆ ಸಜ್ಜಾಗಿ ಕುಳಿತಿದ್ದಳು.ಹೂ ಕಂಡಾಗ ದುಂಬಿಗೆ ಹೀರುಧ್ಯಾನಕ್ಕಿಳಿವ ಚಂದನೆಯ ಅವಸರವಿರುತ್ತದಲ್ಲ, ಹಾಗಿತ್ತು ಸುಮನ್ ಅವರ ಬಂದಿಶ್ ಪ್ರವೇಶಿಕೆ. ಆರಂಭಿಕ ಆಲಾಪದಲ್ಲಿ ಹೆಚ್ಚು ವಿಹರಿಸದೆ, ವಿಲಂಬಿತ್ ಏಕತಾಲದಲ್ಲಿ ಅವರೆತ್ತಿಕೊಂಡ ಚೀಝ್ ‘ಮೆಹಮಾನತ ಸೆ ಕಾಲಡಿಯೆ’. ಧೃತ್‌ನಲ್ಲಿ ‘ಕಸ್ತೂರಿ ತಿಲಕೌ ಲಲಾಟ ಪಟಮೆ...’ ಆ ಸ್ವರ ಲಗಾವ್, ಬಂದಿಶ್‌ನ ಪ್ರಯೋಗ, ಆಲಾಪ್, ತಾನ್ ಸಂಯೋಜನೆ ಎಲ್ಲವೂ ಗುರು ಪಂ. ಜಸರಾಜ್ ಅವರದೇ ಛಾಪು.ಮೀನುಗಾರ ತೂರಿಬಿಡುವ ಬಲೆಯಂತೆ ಮಂದ್ರ ಸಪ್ತಕದ ಖುಲ್ಲಾತನ. ಬಿದ್ದ ಮೀನುಗಳನ್ನು ಎಳೆಯುವ ಗತ್ತಿನಂತೆ ಮಧ್ಯಸಪ್ತಕ, ಅವೆಲ್ಲವನ್ನೂ ಹೊತ್ತೊಯ್ಯುವಾಗಿನ ನಿಯಂತ್ರಿತ ನಡಿಗೆಯಂತೆ ತಾರಕಪ್ರವೇಶ.ಮೇವಾತಿ ಘರಾಣೆಯ ಕಲಾವಿದ ಪಂ. ಸುಮನ್ ಘೋಷ್ ಅವರ ಈ ಬನಿಗೆ ಸಾಕ್ಷಿಯಾಗಿದ್ದು ಮಲ್ಲೇಶ್ವರದ ‘ಅನನ್ಯ’ ಸಭಾಂಗಣ. ಈ ಮೆಹಫಿಲ್ ನ ಆಯೋಜಕರು ಶ್ರೀ ರಾಮಕಲಾವೇದಿಕೆ ಮತ್ತು ’ಅನನ್ಯ’.ವಿವಶಳಾದ ರಾಧೆ

ಆ ದಿನ ಕೃಷ್ಣನಿಗದು ಸಂಕಟ ಕಾಲ. ರಾಧೆ ಅವನ ಲಕುಟಿ (ಚಿನ್ನದ ಛಡಿ)ಯನ್ನು ಯಾವುದೋ ಮಾಯೆಯಲ್ಲಿ ಕಸಿದುಕೊಂಡಿರುತ್ತಾಳೆ. ‘ಕೊಡೆ ರಾಧೆ ಲಕುಟಿ...’ ಎಂದು ಕೇಳಿದ್ದಕ್ಕೆ,  ‘ಯಮುನೆಯಿಂದ ನನ್ನ ಬಿಂದಿಗೆ ತುಂಬಿಕೊಟ್ಟರೆ ಮಾತ್ರ...’ ಎಂದು ಪ್ರತಿಯಾಡುತ್ತಿರುತ್ತಾಳೆ. ಕೊನೆಗವನು ಒಪ್ಪಿದರೂ ಸುಮ್ಮನಾಗದ ಅವಳು, ‘ನಾನು ಶ್ರೀಮಂತ ಮನೆತನದಿಂದ ಬಂದವಳು. ಸುಮ್ಮಸುಮ್ಮನೆ ನನ್ನೊಂದಿಗೆ ಆಟವಾಡಬೇಡ. ಅಷ್ಟಕ್ಕೂ ನಾ ನಿನಗೆ ಹೆದರಿಕೊಳ್ಳುವುದೂ ಇಲ್ಲ’ ಎಂದು ಜೋರು ಮಾಡುತ್ತಿರುತ್ತಾಳೆ. ರಂಜನೀಯ ಗಳಿಗೆಗೆ ಸುಸಮಯವೆಂದರಿತ ಕೃಷ್ಣ, ‘ಆಯ್ತು ಬಿಂದಿಗೆ ತುಂಬಿಕೊಡುತ್ತೇನೆ, ಗೋಪಿಕೆಯರ ವಸ್ತ್ರಗಳನ್ನೂ ಮರಳಿಸುತ್ತೇನೆ, ನನ್ನ ಲಕುಟಿ ಕೊಡು’ ಎನ್ನುತ್ತಾನೆ.ಅವನು ಹೀಗೆ ಕೇಳಿಕೊಳ್ಳುವ ಪರಿಪರಿಯ ರೀತಿಗೆ ಪ್ರೀತಿಗೆ ವಿವಶಳಾದ ರಾಧೆ ತನಗರಿವಿಲ್ಲದೇ ಲಕುಟಿ ಕೈಬಿಟ್ಟಿರುತ್ತಾಳೆ; ‘ಘಟ ಭರ ದೇವೋ ಲಕುಟಿ ತಬ ದೇವೋ’ ಸೂರದಾಸರ ಈ ಭಜನೆಯನ್ನು ಸುಮನ್ ‘ಯಮನ್’ನಲ್ಲಿ ಅದ್ದಿ ತೆಗೆದ ಹಾದಿ ಬಲು ಮೋಹಕ, ಶೃಂಗಾರ ಹರಿವು. ಸಂಜೆ ಬಾಗಿಲಿಗೆ ಬೆಳಗು ಬಂದಿಳಿದಂತೆ  

ಇತರೆ ಘರಾಣೆಗಳಂತೆ ಕೌಟುಂಬಿಕ ಪರಂಪರೆಗಷ್ಟೇ ಸೀಮಿತವಾಗದೆ, ಸೌಹಾರ್ದಯುತ ನಾದಮಾರ್ಗವನ್ನು ಕಂಡುಕೊಂಡಿದ್ದು ಮೇವಾತಿ ಘರಾಣೆಯ ವೈಶಿಷ್ಟ್ಯ. ಅಂತೆಯೇ ಹಿಂದೂ ಮತ್ತು ಮುಸ್ಲಿಂ ಕಲಾ ಪ್ರಕಾರಗಳ ಪ್ರಭಾವ ಇಲ್ಲಿ ಧಾರಾಳವಾಗಿದೆ.ಸೂಫಿ ಮತ್ತು ಕೀರ್ತನಕಾರ ಶೈಲಿಯ ಪ್ರಸ್ತುತಿ ಛಾಯೆ ಈ ಗಾಯಕಿಯಲ್ಲಿದ್ದರೆ, ಈ ಎರಡೂ ಧರ್ಮಗಳ ಪದ್ಯಗಳು ಬಂದಿಶ್‌ಗೆ ಅಳವಡಿಸಲ್ಪಟ್ಟಿವೆ. ‘ಜೈವಿಕ ಲಯ ಸಿದ್ಧಾಂತ’ವನ್ನು ಬದಿಗಿರಿಸಿ, ತನ್ನ ಮತ್ತು ಆಸ್ವಾದಕರ ಲಹರಿಗೆ ತಕ್ಕಂತೆ ಸಾಗುವುದು ಇಲ್ಲಿ ಮುಖ್ಯ. ಹಾಗೆ ಸಾಗುತ್ತಿದ್ದಾಗ ಸೃಷ್ಟಿಯಾಗುವ ಪ್ರಭಾವಳಿಯೇ ಅವರವರ ಅಧ್ಯಾತ್ಮ ಕೇಂದ್ರ.    ಹೀಗೆ ಮಧುವಂತಿ ಮತ್ತು ಯಮನ್ ನಂತರ ಸುಮನ್, ಕೇಳುಗರ ಅನುಮತಿಯೊಂದಿಗೆ ಹೊರಳಿದ್ದು ಬೆಳಗಿನ ‘ಭೈರವ್- ಬಹಾರ’ದೆಡೆ. ಇಪ್ಪತ್ತು ನಿಮಿಷದಷ್ಟು ಗಂಭೀರ ಮತ್ತು ಶಾಂತರಸದೊಳಗಾಡಿ ಅವರ ಮನಸ್ಸು ಮತ್ತೆ ಜಿಗಿದಿದ್ದು ರಾತ್ರಿಯ ರಾಗಕೆ. ರಾಗ ಜೋಗ್‌ನಲ್ಲಿ ಹಾಡಿದ್ದು ಹನುಮಂತನನ್ನು ಸ್ಮರಿಸುವ ಬಂದಿಶ್.ಲಯಕಾರಿ ಬದಲಾಗಿ ಸರಗಮ್ ಅನ್ನು ಧಾರಾಳವಾಗಿ ಪ್ರಸ್ತುತಪಡಿಸಿದ್ದು ಗಮನಾರ್ಹ ಅಂಶ. ಏಕೆಂದರೆ, ಲಯಕ್ಕೆ ತಕ್ಕಂತೆ ಶಬ್ದಗಳನ್ನು ವಿಸ್ತರಿಸುವ ಮಾದರಿಯಿಂದ ರಾಗದ ರಸ-ಭಾವದ ಮೇಲೆ ಒತ್ತಡ ಉಂಟಾಗಿ, ರಸಾಭಾಸವಾಗುವ ಸಾಧ್ಯತೆ ಇರುತ್ತದೆ ಎನ್ನುವುದು ಈ ಘರಾಣೆಯ ಒಕ್ಕಣೆ. ಆದ್ದರಿಂದ ಈ ಕ್ರಮವನ್ನು ತಪ್ಪಿಸಲು ಮೀಂಡ್ ಮತ್ತು ಗಮಕ್ ಶೈಲಿಯ ಆಲಾಪ-ತಾನ್ ಬಾಜೆಗೆ ಇವರು ಪ್ರಾಧಾನ್ಯ ಕೊಡುತ್ತಾರೆ.ಭೈರವಿಯ ನಂತರವೂ...    

ಸಾಕಲ್ಲ ಮಿಂದಿದ್ದು... ಎಂದು ಭೈರವಿಯನ್ನು ಆವಾಹಿಸಿಕೊಂಡು ‘ಮಾತಾ ಕಾಲಿಕಾ ಭವಾನಿ’ಯನ್ನು ಸ್ಮರಿಸಿದ ನಂತರವೂ ಕೇಳುಗರ ಒತ್ತಾಯಕ್ಕೆ ಮೂಡಿದ್ದು ರಾಗ ಮಾರವಾ. ‘ಬಸ್, ಏಕ್ ಕಬೀರ ಭಜನ್’ ಮತ್ತೆ ಕೇಳುಗ ಪ್ರಭುವಿನ ಬಿನ್ನಹದಂತೆ ಭೈರವಿಯಲ್ಲಿ ಕಬೀರದಾಸರ ‘ಝೀನಿ ಝೀನಿ ಬಿನಿ ಚಾದರಿಯಾ...’ಸುಮನ್ ಅವರ ಈ ರಸಯಾನಕ್ಕೆ ಜೊತೆಯಾಗಿದ್ದು ತಬಲಾದಲ್ಲಿ ಪಂ. ರವೀಂದ್ರ ಯಾವಗಲ್ ಮತ್ತು  ಹಾರ್ಮೋನಿಯಂನಲ್ಲಿ ಡಾ. ರವೀಂದ್ರ ಕಾಟೋಟಿ.ಎಂದಿನಂತೆ ಹದವರಿತ ಸಾಥಿ.  

ಘರಾಣೆಯ ಹೊರತಾಗಿಯೂ ಆಯಾ ಕಲಾವಿದರಿಗೆ ಅವರದೇ ಆದ ದನಿಬನಿ ಇರುತ್ತದೆ. ಇಂಥ ಸಾಧ್ಯತೆಗಳು ಹೊಮ್ಮುವುದು ಸ್ವಂತಿಕೆಗೆ ಒತ್ತು ಕೊಟ್ಟಾಗ ಮಾತ್ರ. ಆಗಷ್ಟೇ ಗಾಯಕನ ಪ್ರಸ್ತುತಿ ತನ್ನ ಗುರುವಿನ ನೆರಳಿನಾಚೆಗೂ ಪ್ರಜ್ವಲಿಸಲು ಸಾಧ್ಯ. ಇದಕ್ಕಾಗಿ ಸ್ವಲ್ಪ ಕಟ್ಟು ಸಡಿಲಿಸಿದ್ದರೂ ಸಾಕಿತ್ತು, ಇಡೀ ಕಛೇರಿ ಏಕತಾನತೆಯನ್ನು ಮೀರುತ್ತಿತ್ತು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.