ಶುಕ್ರವಾರ, ಮೇ 14, 2021
25 °C

ಚಿದಂಬರ ರಾವ್ ಜಂಬೆಗೆ ಪ್ರೊ. ಕು.ಶಿ ಜಾನಪದ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ರಂಗಭೂಮಿ ಕ್ಷೇತ್ರದಲ್ಲಿ ಹೆಸರಾಂತ ರಂಗನಿರ್ದೇಶಕರಲ್ಲಿ ಒಬ್ಬರಾದ ಸಾಗರದ ಹೆಗ್ಗೋಡಿನ ಚಿದಂಬರ ರಾವ್ ಜಂಬೆ ಅವರಿಗೆ ರಂಗಭೂಮಿಯಲ್ಲಿ ತನ್ನನ್ನೇ ಮುಡುಪಾಗಿಸಿಕೊಂಡ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ `ಪ್ರೊ. ಕು.ಶಿ.ವಿಶೇಷ ಜಾನಪದ ಪ್ರಶಸ್ತಿ~ ಘೋಷಿಸಲಾಗಿದೆ.1967ರಲ್ಲಿ ಪಿ.ಯು.ಸಿ ಶಿಕ್ಷಣ ಮುಗಿಸಿದ ಜಂಬೆ ಅವರು ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ 1977-78ರಲ್ಲಿ ಯಕ್ಷಗಾನ ತರಬೇತಿ, 1978ರಲ್ಲಿ ಬೆಂಗಳೂರಿನಲ್ಲಿ ಕೇಟರಿಂಗ್ ತರಬೇತಿ, 1979-82ರ ನಡುವೆ ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಡಿಪ್ಲೋಮಾ ಮುಗಿಸಿದರು.1982-2004 ರ ನಡುವಣ 22 ವರ್ಷಗಳ ಸುದೀರ್ಘ ಅವಧಿಯಲ್ಲಿ ಹೆಗ್ಗೋಡಿನ ನೀನಾಸಂನ ಪ್ರಾಂಶುಪಾಲರಾಗಿ, 2004-08ರ ನಡುವೆ ಮೈಸೂರಿನ ರಂಗಾಯಣದ ನಿರ್ದೇಶಕರಾಗಿ, 2008 ರಿಂದ 2010ರ ನಡುವೆ ಸಾನೆಹಳ್ಳಿಯ ಶಿವಕುಮಾರ ರಂಗಪ್ರಯೋಗ ಶಾಲೆಯ ಗೌರವ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಕೃತ ಬೆಂಗಳೂರಿನ ಎನ್.ಎಸ್.ಡಿ.ಯ ನಿರ್ದೇಶಕರಾಗಿದ್ದಾರೆ.ಜಂಬೆಯವರು ಅನೇಕ ರಂಗ ತರಬೇತಿ ಶಿಬಿರಗಳನ್ನು, ಅನೇಕ ರಂಗಪ್ರಯೋಗಗಳನ್ನು ನಿರ್ದೇಶಿಸಿದವರು. ಗಂಗೊಳ್ಳಿಯಲ್ಲಿ ಮೀನುಗಾರರಿಗಾಗಿ ರಂಗ ತರಬೇತಿ, ಮಂಚಿಕೇರಿಯಲ್ಲಿ ಸಿದ್ಧಿಜನಾಂಗದವರಿಗಾಗಿ ರಂಗ ತರಬೇತಿ, ದಾವಣಗೆರೆಯಲ್ಲಿ ಪ್ರತಿಭಾ ಸಭಾದ ವತಿಯಿಂದ ನಡೆದ ರಂಗತರಬೇತಿ, ಮಣಿಪುರದ ಇಂಫಾಲ್‌ನಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಕನ್ನಯ್ಯಲಾಲರೊಂದಿಗೆ ನಡೆಸಿಕೊಟ್ಟ ರಂಗತರಬೇತಿ ಇತ್ಯಾದಿಗಳಲ್ಲಿ ರಂಗನಿರ್ದೇಶನದಲ್ಲಿ ಅಪಾರ ಅನುಭವಗಳಿಸಿದರು.ನೀನಾಸಂ, ರಂಗಾಯಣ, ರಂಗಕಿಶೋರ, ಮೈಸೂರಿನ ನಿರಂತರ ಫೌಂಡೇಶನ್, ಮುಂತಾದ ರಂಗಸಂಸ್ಥೆಗಳ ವತಿಯಿಂದ ನಡೆದ ರಂಗಪ್ರಯೋಗಗಳನ್ನು ನಿರ್ದೇಶಿಸಿದ್ದಾರೆ. ಅವರು ನಿರ್ದೇಶಿಸಿದ ನಾಟಕಗಳಲ್ಲಿ ಕನ್ನಡ (ಬೆಕ್ಕು ಬಾವಿ) ಇತ್ಯಾದಿ ಹಿಂದಿಯಿಂದ ಅನುವಾದಿತ (ಆಷಾಢದ ಒಂದು ದಿನ ), ಇಂಗ್ಲೀಷಿನಿಂದ ಅನುವಾದಿತ (ಕೆಳಗಿನವರು ಮೂಲ : ಮೇಕ್ಸಿಂ ಗಾರ್ಕಿ), ಮರಾಠಿ ಅನುವಾದಿತ (ಸದ್ದು: ವಿಚಾರಣೆ ನಡೆಯುತ್ತಿದೆ, ಮೂಲ: ವಿಜಯ್ ತೆಂಡೂಲ್ಕರ್), ಶೇಕ್ಸ್‌ಪಿಯರ್‌ನಿಂದ ಅನುವಾದಿತ (ಲಿಯರ್ ಮಹಾರಾಜ ಇತ್ಯಾದಿ), ಶಕುಂತಲೆ (ಯಕ್ಷಗಾನ), ಲೋಕ ಶಾಕುಂತಲ (ಕಾಳಿದಾಸನಿಂದ ಅನುವಾದಿತ), ತಾಮ್ರಪತ್ರ (ಬಂಗಾಳಿಯಿಂದ ಅನುವಾದಿತ ಇತ್ಯಾದಿ), ಮಕ್ಕಳನಾಟಕ (ಕಾಡಿನಲ್ಲಿ ಕಥೆ) ಇತ್ಯಾದಿ ಸೇರಿವೆ.  ಅಂತಾರಾಷ್ಟ್ರೀಯ ಖ್ಯಾತಿಯ ವಿವಿಧ ದೇಶಗಳ ನಾಟಕಕಾರರ ರಚನೆಗಳ ಅನುವಾದಗಳನ್ನು ಆಯ್ಕೆಮಾಡಿ ಕನ್ನಡ ರಂಗಭೂಮಿಗೆ ತಂದ ಕೀರ್ತಿ ಜಂಬೆ ಅವರದು.ರಂಗಭೂಮಿಯ ಉತ್ಕಷ್ಟ ಸಾಧನೆಗಾಗಿ ಅವರಿಗೆ ಅನೇಕ ಪ್ರಶಸ್ತಿಗಳೂ, ಗೌರವಸ್ಥಾನಗಳೂ ಸಂದಿವೆ. ಕರ್ನಾಟಕ ನಾಟಕ ಅಕಾಡೆಮಿಯ ಪುರಸ್ಕಾರ, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ಸದಸ್ಯತ್ವ (2002-2004), ಕೇರಳ ಸಂಗೀತ ನಾಟಕ ಅಕಾಡೆಮಿಯ ವತಿಯಿಂದ ನಡೆದ 2003ರ ರಾಷ್ಟ್ರೀಯ ನಾಟಕೋತ್ಸವದ ನಿರ್ದೇಶಕತ್ವ, ಲಲಿತಕಲೆಗಳ ಕಾಲೇಜು, ಮೈಸೂರು, ಇದರ ಗುಬ್ಬಿವೀರಣ್ಣ ಪೀಠದ ಅಧ್ಯಕ್ಷತೆ, ರುಜುವಾತು ಪ್ರಕಾಶನದ ಫೆಲೋಶಿಪ್ (2003)ಇತ್ಯಾದಿ ಅವರಿಗೆ ಸಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.