ಮಂಗಳವಾರ, ಮೇ 24, 2022
26 °C

ಚಿನ್ನದ ಬಾಲೆಯರು- ಸಿಂಧ್ಯ ಹರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿನ್ನದ ಬಾಲೆಯರು- ಸಿಂಧ್ಯ ಹರ್ಷ

ಬೆಂಗಳೂರು: ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡದ ಹೊರತು ದೇಶ ಉದ್ಧಾರ ಆಗುವುದಿಲ್ಲ. ಯಾವುದೇ ಜನಾಂಗದ ಅಭಿವೃದ್ಧಿಯಾಗಬೇಕಾದರೆ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲೇಬೇಕು ಎಂದು ಜೆಡಿಎಸ್  ಕಾರ್ಯಾಧ್ಯಕ್ಷ ಪಿ.ಜಿ.ಆರ್. ಸಿಂಧ್ಯ ಇಲ್ಲಿ ಹೇಳಿದರು.ಬೆಂಗಳೂರು ಈಡಿಗರ ವಿದ್ಯಾರ್ಥಿ ನಿಲಯದ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಭಾನುವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿವೇತನ ಹಾಗೂ ಚಿನ್ನದ ಪದಕಗಳ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ಸಮಾರಂಭದಲ್ಲಿ ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನದ ಪದಕ ಪಡೆದ ಬಗ್ಗೆ ಅತೀವ ಶ್ಲಾಘನೆ ವ್ಯಕ್ತಪಡಿಸಿದ ಅವರು, ಹೆಣ್ಣಿಗೆ ಶಿಕ್ಷಣ ಸಿಕ್ಕರೆ ಆಕೆ ಏನನ್ನಾದರೂ ಸಾಧಿಸಿಯಾಳು ಎಂದರು.ಇದೇ ಸಂದರ್ಭದಲ್ಲಿ ತಮ್ಮ ತಾಯಿ ಸರಸ್ವತಿ ಅವರನ್ನು ಸ್ಮರಿಸಿದ ಸಿಂಧ್ಯ ಅವರು, ಅವಿದ್ಯಾವಂತೆಯಾಗಿರುವ ತಮ್ಮ ತಾಯಿ ಯಾವ ರೀತಿ ಕಷ್ಟಪಟ್ಟು ಈ ಸ್ಥಾನಕ್ಕೆ ತಮ್ಮನ್ನು ಏರಿಸಿದರು ಎಂಬ ಬಗ್ಗೆ ಭಾವುಕರಾಗಿ ನುಡಿದರು.ಈಡಿಗ ಸಮುದಾಯದ ರಾಜಕೀಯ ಮುಖಂಡರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸುತ್ತ, ‘ರಾಜಕೀಯದಲ್ಲಿ ಧುಮುಕಿರುವ ಈಡಿಗ ಸಮುದಾಯ ಗಣ್ಯರು ಜಾತ್ಯತೀತರಾಗಿ ರಾಜ್ಯದ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೆ ರಾಜಕೀಯದಲ್ಲಿನ ಏರುಪೇರುಗಳಿಂದ ಅವರಿಗೆ ಸಿಗಬೇಕಾದ ನ್ಯಾಯ ಸಮ್ಮತ ಹಕ್ಕು ಸಿಕ್ಕಿಲ್ಲ’ ಎಂದು ವಿಷಾದಿಸಿದರು.ಬಹುತೇಕ ರಾಜಕಾರಣಿಗಳು ಅಥವಾ ಇನ್ನಾವುದೇ ಕ್ಷೇತ್ರದ ಮುಖಂಡರು ತಮ್ಮದೇ ಜಾತಿ-ಜನಾಂಗದ ಏಳಿಗೆಗಾಗಿ ದುಡಿಯುತ್ತಾರೆ. ಆದರೆ ಬಂಗಾರಪ್ಪ, ಜಾಲಪ್ಪ, ಜನಾರ್ದನ ಪೂಜಾರಿ ಮುಂತಾದ ಮುಖಂಡರು ತಮ್ಮ  ಅಧಿಕಾರಾವಧಿಯಲ್ಲಿ ಕೇವಲ ಜನಾಂಗಕ್ಕೆ ಸೀಮಿತಗೊಳ್ಳದೆ, ಎಲ್ಲರಿಗೂ ಅನುಕೂಲ ಆಗುವ ಕಾರ್ಯಕ್ರಮ ರೂಪಿಸಿರುತ್ತಾರೆ ಎಂದರು.ಬೃಹತ್ ಸಂಖ್ಯೆಯ ಈಡಿಗ ಸಮುದಾಯವರಲ್ಲಿ ಐಎಎಸ್ ಅಥವಾ ಕೆಎಎಸ್‌ನಂತರ ಉನ್ನತ ಸ್ಥಾನವನ್ನು ಏರಿರುವವರು ಬಹಳ ವಿರಳ. ಅಧಿಕಾರ ಎಂದರೆ ಬರಿಯ ವಿಧಾನಸೌಧದಲ್ಲಿನ ಮಂತ್ರಿಗಿರಿ ಅಲ್ಲ. ಬೇರೆ ಕ್ಷೇತ್ರದಲ್ಲಿಯೂ ಜನಾಂಗದವರು ಮುಂದೆ ಬರಬೇಕಾದ ಅಗತ್ಯ ಇದೆ ಎಂದರು. ಅಂತೆಯೇ  ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳು ಜನಾಂಗಕ್ಕೆ ದೊಡ್ಡ ಕೊಡುಗೆ ನೀಡಿವೆ. ಕೋಟ್ಯಂತರ ಜನತೆಯ ಹೃದಯಗೆದ್ದಿರುವ ಪತ್ರಿಕೆಗಳು ವಿದೇಶದಲ್ಲಿಯೂ ಛಾಪು ಮೂಡಿಸಿವೆ ಎಂದು ಶ್ಲಾಘಿಸಿದರು.ಸರ್ಕಾರದಿಂದಲೇ ನಿರೀಕ್ಷಿಸಬೇಡಿ: ಶೇಷಾದ್ರಿಪುರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವೂಡೆ ಪಿ.ಕೃಷ್ಣ ಮಾತನಾಡಿ, ಎಲ್ಲ ಸೌಲಭ್ಯಗಳನ್ನು ಸರ್ಕಾರವೇ ಒದಗಿಸಬೇಕು ಎಂದು ಆಶಿಸುವುದು ಸರಿಯಲ್ಲ. ಜನಾಂಗದಲ್ಲಿಯೇ ಇರುವ ಅನುಕೂಲಸ್ಥರು ಮುಂದೆ ಬಂದು ಬಡಜನರಿಗೆ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸಹಾಯ ಮಾಡಬೇಕಾಗಿದೆ ಎಂದರು.ಸಮಾಜದ ಬಡ ವಿದ್ಯಾರ್ಥಿಗಳಿಗೆ ಆಶ್ರಯ ನೀಡುತ್ತಿರುವ ವಿದ್ಯಾರ್ಥಿನಿಯಲದ ಕಾರ್ಯವನ್ನು ಅವರು ಶ್ಲಾಘಿಸಿದರು.

ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕ ಗುರುಮೂರ್ತಿ ಮಾತನಾಡಿದರು. ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಆರ್.ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು.ಸಂಘದ ಉಪಾಧ್ಯಕ್ಷ ಇ.ವಿ.ಸತ್ಯನಾರಾಯಣ ಸ್ವಾಗತಿಸಿದರು. ಸಮಾಜದ ಗಣ್ಯರಾದ ಎಚ್.ಆಂಜನಪ್ಪ, ಎಸ್. ಎಂ.ರಾಮಹನುಮಯ್ಯ, ಎ.ಆರ್. ರಾಮಯ್ಯ ಮುಂತಾದವರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ವೈ.ಅಭಿಷೇಕ್, ಎಸ್.ಮೇಘನಾ, ಆರ್.ಪವಿತ್ರಾ, ಎನ್.ಮಮತಾ ಲಕ್ಷ್ಮಿ, ಕೆ. ಪುನೀತ್ ಪ್ರಕಾಶ್, ಪಿ.ಪಿ. ಸುನೀತಾ ಅವರಿಗೆ ಚಿನ್ನದ ಪದಕ ಹಾಗೂ ಇತರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಯಿತು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಪ್ರಾಂಶುಪಾಲ ಪ್ರೊ.ಜಿ.ವಿ.ದಾಸೇಗೌಡ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದ ‘ಪ್ರಜಾವಾಣಿ’ ಹಿರಿಯ ವರದಿಗಾರ್ತಿ ಸುಚೇತನಾ ನಾಯ್ಕ ಹಾಗೂ ಅತ್ಯುತ್ತಮ ವಿನ್ಯಾಸಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆದ ಎಸ್.ರಾಜೇಶ್ ಅವರನ್ನು ಸನ್ಮಾನಿಸಲಾಯಿತು. ಜಂಟಿ ಕಾರ್ಯದರ್ಶಿ ಎಚ್.ಭದ್ರಪ್ಪ ವಂದನೆ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.