ಭಾನುವಾರ, ಜನವರಿ 19, 2020
25 °C

ಚಿನ್ನ: ಇನ್ನಷ್ಟು ದುಬಾರಿ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಚಿನ್ನದ ಬೆಲೆಯು ಸತತ ಮೂರನೇ ವರ್ಷವೂ ಏರಿಕೆಯಾಗಲಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ಗೆ ದಾಖಲೆ ಎನ್ನಬಹುದಾದ 2000 ಡಾಲರ್‌ವರೆಗೆ (ರೂ 1,04,000) ಹೆಚ್ಚಳಗೊಳ್ಳುವ ನಿರೀಕ್ಷೆ ಇದೆ.ಲಂಡನ್ ಚಿನಿವಾರ ಪೇಟೆ ಸಂಘದ (ಎಲ್‌ಬಿಎಂಎ) ಸಮೀಕ್ಷೆ ಪ್ರಕಾರ, ಚಿನ್ನ ಈ ವರ್ಷ ಇನ್ನಷ್ಟು ದುಬಾರಿಯಾಗುವ ಸಾಧ್ಯತೆಗಳಿವೆ. ಈ ಸಂಘವು ಅಂತರರಾಷ್ಟ್ರೀಯ ಚಿನ್ನ ಮತ್ತು ಬೆಳ್ಳಿಯ ಸಗಟು ಮಾರಾಟಗಾರರನ್ನು ಪ್ರತಿನಿಧಿಸುತ್ತದೆ.26 ಪ್ರಮುಖ ಲೋಹಗಳ ವಿಶ್ಲೇಷಕರ ಅಭಿಪ್ರಾಯ ಆಧರಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಪ್ರಸಕ್ತ ಸಾಲಿನಲ್ಲಿ ಚಿನ್ನದ ಸರಾಸರಿ ಬೆಲೆಯು ಪ್ರತಿ ಔನ್ಸ್‌ಗೆ 1,766 ಡಾಲರ್‌ಗಳಷ್ಟು (ರೂ 92,352) ಇರಲಿದೆ. ಪ್ರತಿ ಗ್ರಾಂಗೆ ರೂ 3,257ರಷ್ಟು ಆಗಲಿದೆ. ಇದು 2011ರ ಸರಾಸರಿ ಬೆಲೆ ಮಟ್ಟಕ್ಕಿಂತ ಶೇ 12.34ರಷ್ಟು ಮತ್ತು ಈ ವರ್ಷದ ಜನವರಿ ತಿಂಗಳ ಮೊದಲ ವಾರದ ಬೆಲೆಗೆ ಹೋಲಿಸಿದರೆ ಶೇ 10.2ರಷ್ಟು ಹೆಚ್ಚಳ ಆಗಿರಲಿದೆ.

ಸಮೀಕ್ಷೆಯಲ್ಲಿ ಚಿನ್ನದ ಬೆಲೆ ಅಂದಾಜು ಮಾಡಿರುವ ಹೆಚ್ಚಿನ ಪರಿಣತರು ಪ್ರತಿ ಔನ್ಸ್‌ಗೆ 2000 ಡಾಲರ್ ಮಟ್ಟವನ್ನೂ ದಾಟಬಹುದು ಎಂದೂ ಲೆಕ್ಕ ಹಾಕಿದ್ದಾರೆ.ದೇಶಿ ಚಿನಿವಾರ ಪೇಟೆಯಲ್ಲಿ  ಒಂದು ಔನ್ಸ್ ಚಿನ್ನಕ್ಕೆ,  28.35 ಗ್ರಾಂ ಚಿನ್ನ ಎಂದು ಲೆಕ್ಕ ಹಾಕಲಾಗುತ್ತಿದ್ದು, ಇದರ ಆಧಾರದ ಮೇಲೆ ಹೇಳುವುದಾದರೆ 10 ಗ್ರಾಂ ಚಿನ್ನದ ಬೆಲೆ ರೂ 36,684 ರವರೆಗೂ ಏರಬಹುದು.

ಕಳೆದ ವರ್ಷ `ಸುರಕ್ಷಿತ ಹೂಡಿಕೆ ಸ್ವರ್ಗ~ ಎನ್ನುವ ಕಾರಣಕ್ಕೆ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆ ಬರೆದಿತ್ತು.

ಜಾಗತಿಕ ಆರ್ಥಿಕ ಹಿನ್ನಡೆ ಮತ್ತು ಹೆಚ್ಚುತ್ತಿರುವ ಹಣದುಬ್ಬರದ ಕಾರಣಕ್ಕೆ ದೇಶದಲ್ಲಿ ಚಿನ್ನದ ಬೆಲೆಯು (ಶೇ 99.5ರಷ್ಟು ಶುದ್ಧತೆ) ತಲಾ 10 ಗ್ರಾಂಗಳಿಗೆ 29,000ದ ಗಡಿ ದಾಟಿತ್ತು.  ಡಿಸೆಂಬರ್ ತಿಂಗಳಿನಲ್ಲಿ 29,155ಕ್ಕೆ ಏರಿಕೆ ಕಂಡಿತ್ತು.ಚಿನ್ನ ದುಬಾರಿಯಾಗುತ್ತಿದ್ದರೂ ಇತರ ಅಪೂರ್ವ ಲೋಹಗಳಾದ ಬೆಳ್ಳಿ, ಪ್ಲ್ಯಾಟಿನಂಗೆ ಇಂತಹ ಅದೃಷ್ಟ ಇಲ್ಲ ಎಂದೂ ಪರಿಣತರು ವಿಶ್ಲೇಷಿಸಿದ್ದಾರೆ. ಬೆಳ್ಳಿ ಬೆಲೆಯು ಶೇ 3.2ರಷ್ಟು ಕುಸಿತವಾಗುವ ಸಾಧ್ಯತೆ ಇದೆ.

ಪ್ರತಿಕ್ರಿಯಿಸಿ (+)