ಶನಿವಾರ, ಮೇ 21, 2022
23 °C

ಚಿಲ್ಡ್ರನ್ಸ್ ಇಂಡಿಯಾ ಸಂಸ್ಥೆಯ ಪ್ರಯತ್ನಕ್ಕೆ ಮೆಚ್ಚುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಬೆಂಗಳೂರು: ‘ಮನೆ ಮುಂದೆ ಮಕ್ಕಳ ಸಿನಿಮಾ ಎಂಬ ವಿನೂತನ ಕಲ್ಪನೆಯ ಮೂಲಕ ಚಿಲ್ಡ್ರನ್ಸ್ ಇಂಡಿಯಾ ಸಂಸ್ಥೆಯು ನಗರದ ಎಲ್ಲ ಬಡಾವಣೆಗಳಲ್ಲಿ ಮಕ್ಕಳ ಸಿನಿಮಾಗಳನ್ನು ಪ್ರದರ್ಶಿಸುತ್ತಿರುವುದು ಉತ್ತಮ ಪ್ರಯತ್ನ’ ಎಂದು ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮೆಚ್ಚುಗೆ ವ್ಯಕ್ತಪಡಿಸಿದರು.ಚಿಲ್ಡ್ರನ್ಸ್ ಇಂಡಿಯಾ ಸಂಸ್ಥೆಯು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಮನೆ ಮುಂದೆ ಮಕ್ಕಳ ಸಿನಿಮಾ’ ಸಮಾರಂಭ ಉದ್ಘಾಟಿಸಿ  ಮಾತನಾಡಿದರು.‘ಮಕ್ಕಳ ಚಿತ್ರಗಳನ್ನು ಹಿರಿಯರೂ ವೀಕ್ಷಿಸಿ ಪ್ರೋತ್ಸಾಹಿಸಬೇಕು. ಈ ರೀತಿಯ ಪ್ರದರ್ಶನವನ್ನು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸದೇ ರಾಜ್ಯದಾದ್ಯಂತ ಏರ್ಪಡಿಸಿ, ಮಕ್ಕಳ ಮನಗೆಲ್ಲಬೇಕು. ಗ್ರಾಮೀಣ ಪ್ರದೇಶಗಳ ಮಕ್ಕಳಿಗೂ ಮನೆ ಬಳಿಯೇ ಸಿನಿಮಾವನ್ನು ವೀಕ್ಷಿಸುವಂತಹ ಅವಕಾಶವನ್ನು ಕಲ್ಪಿಸಿಕೊಡಬೇಕು’ ಎಂದರು.ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ಮಾತನಾಡಿ, ‘ಇಂದಿನ ಆಧುನಿಕ ಯುಗದಲ್ಲಿ ಪೋಷಕರಿಂದ ಮಕ್ಕಳು ದೂರವಾಗುತ್ತಿದ್ದಾರೆ. ಹಾಗಾಗಿ ಮಕ್ಕಳನ್ನು ಉತ್ತಮ ಶಿಲ್ಪಿಗಳನ್ನಾಗಿ ತಿದ್ದುವ ಕೆಲಸವನ್ನು ಸಿನಿಮಾಗಳು ಮಾಡಬೇಕಿದೆ’ ಎಂದರು.ಸಂಸ್ಥೆಯ ಅಧ್ಯಕ್ಷ ಎನ್.ಆರ್.ನಂಜುಂಡೇಗೌಡ, ‘2011ರ ಡಿಸೆಂಬರ್ 25ರವರೆಗೆ ಪ್ರತಿ ಶನಿವಾರ ಮತ್ತು ಭಾನುವಾರ ಬಿಬಿಎಂಪಿ ಸಹಯೋಗದಲ್ಲಿ ನಗರದ ಎಲ್ಲ ಬಡಾವಣೆಗಳಲ್ಲಿ ವಿವಿಧ ಭಾಷೆಗಳ ಮಕ್ಕಳ ಸಿನಿಮಾಗಳನ್ನು ಪ್ರದರ್ಶಿಸಲಾಗುವುದು’ ಎಂದು ತಿಳಿಸಿದರು.‘ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಕಲಾ ಮಂದಿರಗಳಲ್ಲಿ ಮಕ್ಕಳ ಸಿನಿಮಾಗಳ ಪ್ರದರ್ಶನಕ್ಕೆ ಸರ್ಕಾರ ಅವಕಾಶ ಕಲ್ಪಿಸಿಕೊಡಬೇಕು. ಇದರಿಂದ ಮಕ್ಕಳ ಸಿನಿಮಾ ತಯಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದಂತಾಗುತ್ತದೆ. ಬಾಲಭವನವನ್ನು ಮಕ್ಕಳ ಸಿನಿಮಾ ಪ್ರದರ್ಶನಕ್ಕೆ ಮೀಸಲಿಡಬೇಕು. ಹಾಗೆಯೇ ಅತ್ಯುತ್ತಮ ಮಕ್ಕಳ ಚಲನಚಿತ್ರಗಳಿಗೆ 25 ಲಕ್ಷ ರೂ. ನೆರವು ನೀಡಬೇಕು’ ಎಂದು ಆಗ್ರಹಿಸಿದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು, ‘ನಗರದ ಪ್ರತಿಯೊಂದು ಬಡಾವಣೆಗಳಲ್ಲಿ ಮಕ್ಕಳ ಚಲನಚಿತ್ರಗಳ ಪ್ರದರ್ಶನ ಏರ್ಪಡಿಸುತ್ತಿರುವುದು ಆರೋಗ್ಯಕರವಾದ ಬೆಳವಣಿಗೆಯಾಗಿದೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ 2009ರ ರಾಜ್ಯ ಪ್ರಶಸ್ತಿ ವಿಜೇತ ಬಾಲ ನಟರಾದ ಮನೋಜ್ ಮತ್ತು ಸಾನ್ಯ ಐಯ್ಯರ್ ಅವರನ್ನು ಸನ್ಮಾನಿಸಲಾಯಿತು.ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಎ.ಎಸ್.ಸದಾಶಿವಯ್ಯ, ವಾರ್ತಾ ಇಲಾಖೆ ನಿರ್ದೇಶಕ ಡಾ.ಮುದ್ದುಮೋಹನ್, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಟಿ.ಎಸ್.ನಾಗಾಭರಣ, ಬಿಬಿಎಂಪಿ ಲೆಕ್ಕ ಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಗಂಗಬೈರಯ್ಯ, ನಟಿ ತಾರಾ ವೇಣು, ನಟ ಜೈಜಗದೀಶ್, ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್ ಇತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.