ಶುಕ್ರವಾರ, ಏಪ್ರಿಲ್ 23, 2021
27 °C

ಚುನಾವಣೆ ಸ್ಪರ್ಧೆಗೆ ಆಕಾಂಕ್ಷಿಯಲ್ಲ: ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ‘ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಆಕಾಂಕ್ಷಿಯಲ್ಲ. ಈ ಸಂಬಂಧ ನಾನು ರೇಸ್‌ನಲ್ಲಿಯೇ ಇಲ್ಲ’ ಎಂದು ವಿಧಾನ ಪರಿಷತ್ತಿನ ಸದಸ್ಯ ಪುಟ್ಟಣ್ಣ ಪ್ರತಿಕ್ರಿಯಿಸಿದರು.ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷರ ಸಂಘ ಜಂಟಿಯಾಗಿ ನಗರದ ಗುರುಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.‘ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿರುವ ನನಗೆ ಇನ್ನೂ ಮೂರು ವರ್ಷಗಳ ಕಾಲ ಅಧಿಕಾರ ಇದೆ. ಈ ಅವಧಿಯಲ್ಲಿ ಶಿಕ್ಷಕರ ಹಲವಾರು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರದ ವಿರುದ್ಧ ಹೋರಾಟಗಳನ್ನು ರೂಪಿಸಬೇಕಾಗಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.‘ನಮ್ಮ ಸರ್ಕಾರ ಬರಬೇಕು. ಆಗ 6 ತಿಂಗಳಲ್ಲಿ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಬೇಕು. ಅಲ್ಲಿ ತನಕ ನನಗೆ ಸಮಾಧಾನ ಇಲ್ಲ’ ಎಂದು ಅವರು ಹೇಳಿದರು.

‘ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಯಾರಾಗುತ್ತಾರೆ ಎಂಬ ತೀರ್ಮಾನ ಇನ್ನೂ ಆಗಿಲ್ಲ. ಕ್ಷೇತ್ರದ ಜನತೆ, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಈ ಚುನಾವಣೆಯಲ್ಲಿ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರು ಅಭ್ಯರ್ಥಿಯಾಗಬೇಕು ಎಂದು ಬಯಸಿದ್ದಾರೆ. ನನ್ನದೂ  ಇದೇ ನಿಲುವಾಗಿದೆ’ ಎಂದು ಅವರು ಪ್ರತಿಕ್ರಿಯಸಿದರು.‘ಸಂಸದರಾಗಿರುವ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ಹಾಗೂ ಮುಖ್ಯಮಂತ್ರಿ ಅವರ ಹಲವಾರು ಹಗರಣಗಳನ್ನು ಪತ್ರಿಕಾಗೊಷ್ಠಿಗಳ ಮೂಲಕ ಬಹಿರಂಗಗೊಳಿಸಿದ್ದಾರೆ. ಈ ಹಗರಣಗಳ ಬಗ್ಗೆ ಸಮರ್ಥವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಅವರು ವಿಧಾನಸಭೆ ಪ್ರವೇಶಿಸಬೇಕು ಎಂಬುದು ನಮ್ಮೆಲ್ಲರ ಆಶಯ ಆಗಿದೆ. ಈ ವಿಷಯವನ್ನು ಕುಮಾರಸ್ವಾಮಿ ಅವರಿಗೆ ಈಗಾಗಲೇ ತಿಳಿಸಿದ್ದೇವೆ. ಮುಂದಿನ ನಿರ್ಧಾರ ಅವರಿಗೆ ಬಿಟ್ಟದ್ದು’ ಎಂದು ಪುಟ್ಟಣ್ಣ ತಿಳಿಸಿದರು.ಕುಮಾರಸ್ವಾಮಿ ಅವರು ವಿಧಾನಸಭೆಗೆ ಆಯ್ಕೆಯಾದರೆ ಲೋಕಸಭಾ ಸ್ಥಾನಕ್ಕೆ ಉಪ ಚುನಾವಣೆ ಆಗುತ್ತದೆ. ಅದನ್ನು ಸಮರ್ಥವಾಗಿ ಎದುರಿಸಲು ಪಕ್ಷ ಸಿದ್ಧವಿದೆ ಎಂದು ಅವರು ಹೇಳಿದರು. ಒಂದು ವೇಳೆ ಕುಮಾರಸ್ವಾಮಿ ಅವರು ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯೇ ಜಯಗಳಿಸುತ್ತಾರೆ ಎಂದರು.ಪೋಷಕರ ಪತ್ತೆ ಹಚ್ಚಲು ಮನವಿ

ರಾಮನಗರ: ಮಾಗಡಿ ತಾಲ್ಲೂಕಿನ ಕುದೂರು ಪೊಲೀಸ್ ಠಾಣೆ ಸಮೀಪ ಒಂದು ತಿಂಗಳ ಹಸುಗೂಸು ದೊರೆತಿದ್ದು, ಮಗುವಿನ ಪೋಷಕರನ್ನು ಪತ್ತೆ ಹಚ್ಚಲು ಸಾರ್ವಜನಿಕರು ನೆರವು ನೀಡಬೇಕು ಎಂದು ರಾಮನಗರ ಬಾಲಕಿಯರ ಬಾಲಮಂದಿರದ ಅಧೀಕ್ಷಕರು ಮನವಿ ಮಾಡಿದ್ದಾರೆ.ಈ ಮಗುವಿಗೆ ಸಂಸ್ಥೆಯು ಜೋಸ್ ಎಂದು ಹೆಸರಿಟ್ಟಿದೆ. ಮಗುವಿನ ತಾಯಿ, ತಂದೆ ಯಾರು ಎಂದು ಗೊತ್ತಿಲ್ಲ. ಮಗು ಹುಟ್ಟಿದ ಸ್ಥಳ, ಧರ್ಮ ಮತ್ತು ಜಾತಿ ಯಾವುದು ತಿಳಿದಿಲ್ಲ. 51 ಸೆಂ.ಮೀ ಎತ್ತರ, ಕಂದು ಬಣ್ಣ, ಗುಂಡುಮುಖ ಹೊಂದಿದೆ. ಈ ಬಗ್ಗೆ ಮಾಹಿತಿ ಬೇಕಾದಲ್ಲಿ ಮಕ್ಕಳ ಕಲ್ಯಾಣ ಸಮಿತಿ, ಉಪ ನಿರ್ದೇಶಕರು, ಹೊನ್ನಮ್ಮ ಕಲ್ಯಾಣ ಮಂಟಪ ಮುಂಭಾಗ, ಜಾಲಮಂಗಲ ರಸ್ತೆ, ರಾಮನಗರ, ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.