ಬುಧವಾರ, ಜನವರಿ 22, 2020
28 °C

ಚೆಲ್ಲಾಟ... ಪ್ರಾಣ ಸಂಕಟ

ಚಿತ್ರ–ಲೇಖನ: ಎಂ.ಆರ್‌.ಮಂಜುನಾಥ್‌ Updated:

ಅಕ್ಷರ ಗಾತ್ರ : | |

ಸೂರ್ಯ ಇನ್ನೂ ಉದಯಿಸಿರಲಿಲ್ಲ, ಮೈಕೊರೆಯುವ ಚಳಿ. ಪಕ್ಷಿತಜ್ಞ ಶಿವಕುಮಾರ ಪಾಟೀಲ ಅವರೊಂದಿಗೆ ಬೈಕ್‌ಹತ್ತಿ ಹುಬ್ಬಳ್ಳಿಯಿಂದ ಸುಮಾರು ೬೫ ಕಿ.ಮೀ ದೂರದ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನಲ್ಲಿರುವ ಮಾಗಡಿ ಕೆರೆಯ ಪಕ್ಷಿಕಾಶಿಗೆ ಪಯಣ ಬೆಳೆಸಿದೆ.

ಪೂರ್ವದಿಕ್ಕಿನಿಂದ ನೇಸರ ತಣ್ಣಗೆ ಹೊನ್ನಿನ ಕಿರಣಗಳನ್ನು ಸೂಸುತ್ತಿದ್ದ ಆ ಸಮಯಕ್ಕೆ ಮಾಗಡಿಕೆರೆಯ ಪಕ್ಷಿಕಾಶಿ ಸೇರಿದೆವು.

ಆ ಹೊತ್ತಿನ ಬೆಳಕಿನಲ್ಲಿ ಒಂದಿಷ್ಟು ಹಕ್ಕಿಗಳ ಕಲರವ. ನೀರಿನ ಮಧ್ಯೆ ಬೆಳ್ಳಕ್ಕಿ, ಬಿಳಿ ಕೊಕ್ಕರೆಗಳು ಏನೇನೋ ಹುಡುಕುತ್ತಿದ್ದವು. ಗಿಡಗಳ ಮೇಲೆ ಹತ್ತಾರು ವಿಧದ ಹಕ್ಕಿಗಳದ್ದೇ ಕಾರುಬಾರು, ಅವುಗಳ ಹಾರಾಟ-, ನಲಿದಾಟ, ಅವುಗಳ ಹಾಡುಗಾರಿಕೆ ಕಂಡು ಕೆಲ ಕಾಲ ಕ್ಯಾಮೆರಾ ಕ್ಲಿಕ್ಕಿಸದೇ ನಿಂತು ಬಿಟ್ಟಿತ್ತು!

ನೀರಿನ ಮಧ್ಯೆ ಗೀರು ತಲೆಯ ಬಾತುಕೋಳಿ (ಬಾರ್ ಹೆಡೆಡ್ ಗೂಸ್) ಗುಂಪು ಗೋಚರಿಸಿತು. ಪರಸ್ಪರ ಮುದ್ದಿನಿಂದ ಮೈ ಉಜ್ಜಿಕೊಂಡು ಉಲ್ಲಾಸದಿಂದ ರೆಕ್ಕೆಗಳನ್ನು ಬಡಿಯುತ್ತ ತಮ್ಮ ಭಾಷೆಯಲ್ಲಿ ಮಾತನಾಡಿಕೊಳ್ಳುತ್ತ ನೀರಿನಲ್ಲಿ ಮುಳುಗುತ್ತ, ಪಲ್ಟಿ ಹೊಡೆಯುತ್ತ, ರೆಕ್ಕೆಗಳನ್ನು ಸೂರ್ಯನ ಕಿರಣಗಳತ್ತ ಚಾಚುತ್ತ, ಅತ್ತಿಂದಿತ್ತ ಈಜುತ್ತ  ಜೊತೆಯಾಗಿ ಮೈ ಮರೆತು ನಲಿಯುತ್ತಿದ್ದವು, ತಮ್ಮದೇ ಲೋಕದಲ್ಲಿ ವಿಹರಿಸಿಕೊಂಡಿದ್ದವು. ಬಿಸಿಲಿನ ತಾಪ ಕ್ರಮೇಣ ಹೆಚ್ಚುತ್ತಿದ್ದು ಯಾವುದನ್ನೂ ಲೆಕ್ಕಿಸದೆ ಹೆಬ್ಬಾತುಗಳು ತಮ್ಮ ಪಾಡಿಗೆ ತಾವು ರಂಗಿನಾಟದಲ್ಲಿ ತೊಡಗಿದ್ದವು.

ಈ ಹೆಬ್ಬಾತುಗಳು ಅಂತಿಂಥ ಅತಿಥಿಗಳಲ್ಲ. ಪ್ರಕೃತಿದೇವತೆಯ ಸೌಂದರ್ಯವನ್ನು ಹೆಚ್ಚಿಸಿ ನೋಡುಗರ ಕಣ್ಮನಗಳಲ್ಲಿ ಹಬ್ಬದ ವಾತಾವರಣ ತುಂಬುವ ಹಕ್ಕಿಗಳು. ಇದು ಗದಗ ನಗರದಿಂದ ೩೦ ಕಿ.ಮೀ ದೂರದಲ್ಲಿರುವ ಮಾಗಡಿ ಕೆರೆಗೆ ಬಂದಿರುವ ಹೆಬ್ಬಾತುಗಳು. ಬಾರ್ ಹೆಡೆಡ್ ಗೂಸ್, ಸಿಳ್ಳೆ ಬಾತು, ಚಲುಕ ಬಾತು, ಸೂಜಿಬಾಲದ ಬಾತುಗಳು ಎಂದೆಲ್ಲ ಇವು ಗುರುತಿಸಿಕೊಳ್ಳುತ್ತವೆ. ಅವು ಪ್ರತಿವರ್ಷ ಟಿಬೆಟ್‌ನಿಂದ ಹಾರುತ್ತ ಹಿಮಾಲಯವನ್ನು ದಾಟಿ ಭಾರತಕ್ಕೆ ವಲಸೆ ಬರುತ್ತವೆ.

ಇವುಗಳಿಗೆ ಮಾಗಡಿ ಕೆರೆಯ ಮೇಲೆ ಅದೆನೋ ವಿಶೇಷ ಅಕ್ಕರೆ ಇಲ್ಲಿಯ ಶೀತೋಷ್ಣ ವಾತಾವರಣ ಅವುಗಳಿಗೆ ಮುದ ನೀಡುತ್ತವೆ. ಆಹಾರ, ವಂಶಾಭಿವೃದ್ಧಿ ಪಡಿಸಲು ಅನುಕೂಲಕರವಾದ ವಾತಾವರಣ ಇರುವುದರಿಂದ ಅವು ಇಲ್ಲಿಗೆ ಬರುತ್ತವೆ.

ಸುಮಾರು ೭೦ ಎಕರೆಯಲ್ಲಿ ನಿರ್ಮಾಣಗೊಂಡಿರುವ ಪಕ್ಷಿಸಂಕುಲಗಳಿಗೆ ಹೇಳಿ ಮಾಡಿಸಿದ ಕೆರೆ ಇದು. ಸಾವಿರಾರು ಮೈಲುಗಳಿಂದ ಇಲ್ಲಿಗೆ ಹಲವಾರು ಬಗೆಯ ಪಕ್ಷಿಗಳು ವಲಸೆ ಬರುತ್ತವೆ. ಅವುಗಳಲ್ಲಿ ಮುಖ್ಯವಾದದ್ದು ಬಾರ್ ಹೆಡೆಡ್ ಗೂಸ್ ಇದರ ಜೊತೆಗೆ ಕಂದು ಹೆಬ್ಬಾತುಗಳು. ಇವು ಸುಮಾರು ೧೮ ಸಾವಿರ ಅಡಿಗಳಿಗಿಂತ ಮೇಲೆ ಹಾರಬಲ್ಲವು. ಈ ಹಕ್ಕಿಗಳಿಗೆ ಪ್ರಪಂಚದಲ್ಲಿ ಅತ್ಯಂತ ಎತ್ತರ ಹಾರಬಲ್ಲ ಪಕ್ಷಿಯೆಂದು ಅಗ್ರಸ್ಥಾನವಿದೆ.

‘ಪಟ್ಟೆತಲೆ ಹೆಬ್ಬಾತು’ ಸುಮಾರು ೭೫ ಸೆ.ಮೀನಿಂದ ಕೂಡಿದ್ದು, ಇದನ್ನು ಸಂಸ್ಕೃತದಲ್ಲಿ ಕದಂಬ ಅಥವಾ ರಾಜಹಂಸ ಎನ್ನುವರು. ಸ್ಥಳೀಯರು ಇದನ್ನು ಗೀರುತಲೆ ಹಂಸ, ಪಟ್ಟೆತಲೆಯ ಹೆಬ್ಬಾತು, ಶಿರರೇಖಿ ಹೆಬ್ಬಾತು ಎಂದು ಕರೆಯುತ್ತಾರೆ. ಇದು ನೋಡಲು ಬಾತು ಕೋಳಿಗಿಂತ ದೊಡ್ಡದಾದ ಬೂದು ಬಣ್ಣದ ಪಕ್ಷಿ. ಇದರ ತಲೆ ಬಿಳಿಯಾಗಿದ್ದು ತಲೆಯ ಮೇಲೆ ಎರಡು ಕಪ್ಪುಪಟ್ಟಿಗಳು ಹೊಂದಿರುತ್ತದೆ. ಕತ್ತಿನ ಇಕ್ಕೆಲಗಳು ಬಿಳಿಯ ಬಣ್ಣ, ಪ್ರಬಲವಾದ ಹಾಗೂ ದೂರದ ಹಾರಾಟಕ್ಕೆ ತಕ್ಕುದಾದ ಸಣ್ಣ ಸಪೂರ, ಸದೃಢವಾದ ರೆಕ್ಕೆ ಬೂದು ಬಣ್ಣದಿಂದ ಕೂಡಿದ್ದು ರೆಕ್ಕೆಯ ತುದಿಯಲ್ಲಿ ಕಪ್ಪು ಪಟ್ಟಿ ಕಂಡುಬರುತ್ತದೆ.

ಬಾಲವು ಬಿಳಿಬೂದು ಬಣ್ಣದಿಂದ ಮಿಶ್ರಿತ ಗೊಂಡಿದೆ. ಜಾಲರಿಯಂತೆ ಹಳದಿ ಕೊಕ್ಕು, ಈಜಾಡಲು  ಚಪ್ಪಟೆಯಾದ ಜಲಪಾದಗಳುಳ್ಳ ಚಿಕ್ಕ ಕಾಲುಗಳು ತಿಳಿಗುಲಾಬಿ ಬಣ್ಣದಿಂದ ಕಂಡುಬರುತ್ತದೆ. ಇವುಗಳು ದೊಡ್ಡ ಕೆರೆಗಳಲ್ಲಿ ಗುಂಪುಗುಂಪಾಗಿ ವಾಸ ಮಾಡುವ ಹಕ್ಕಿಗಳು. ಇವುಗಳು ಸಂತಾನ ಅಭಿವೃದ್ಧಿಗೊಳಿಸಲು ನೆಲದ ಮೇಲೆ ಅಥವಾ ಮರದ ಪೊಟರೆಗಳೊಳಗೆ ಗೂಡು ಕಟ್ಟು­ತ್ತವೆ. ನವೆಂಬರ್‌ ತಿಂಗಳಲ್ಲಿ ಬಂದು ವಂಶಾಭಿವೃದ್ಧಿ ಮಾಡಿಕೊಂಡು ಮಾರ್ಚ ತಿಂಗಳ ಕೊನೆಯವರೆಗೆ ಇಲ್ಲಿರುತ್ತವೆ. ಮಾಗಡಿ ಕೆರೆಯಲ್ಲಿ ತಾಯಿಯೊಂದಿಗೆ ಮರಿಗಳು ಸಾಲಾಗಿ ಈಜಿಕೊಂಡು ಹೋಗು­ವುದನ್ನು ನೋಡುವುದೇ ಕಣ್ಣಿಗೆ ಹಬ್ಬ.

ಕೈಯಲ್ಲೊಂದು ಕ್ಯಾಮೆರಾ ತೆಗೆದು ಕೊಂಡು ಹೋಗುವುದನ್ನು ಮರೆಯಬೇಡಿ. ಮನಗಳು ತಣಿಯುವಷ್ಟು ಈ ಹಕ್ಕಿಗಳ ಛಾಯಾಚಿತ್ರ ಸೆರೆ ಹಿಡಿಯಬಹುದು.

ಅದು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಕೃಷ್ಣಮೃಗಗಳ ಧಾಮ. ಅಂದು ಕೃಷ್ಣಮೃಗಗಳೆಲ್ಲ ತಮ್ಮ ಮುದ್ದುಮಕ್ಕಳ ಜೊತೆಯಲ್ಲಿ ನಿರ್ಭಿಡೆಯಿಂದ ಆಡುತ್ತಿದ್ದವು, ಧಾಮವೆಲ್ಲ ತಮ್ಮದೇ ಎಂಬಂತೆ ನಲಿಯುತ್ತಿದ್ದವು, ಜಿಗಿಯುತ್ತಿದ್ದವು.

***

ಅಬ್ಬಾ! ಅದೆಲ್ಲಿತ್ತೋ ಆ ಹಸಿದ ಹೆಬ್ಬಾವು, ಆಟದಲ್ಲಿ ಮೈಮರೆತ ಕೃಷ್ಣಮೃಗಗಳು ಕಣ್ಣಿಗೆ ಬಿದ್ದದ್ದೇ ತಡ, ಭೂರಿ ಭೋಜನ ಸಿಕ್ಕಿತು ಎಂದು ಸಂತೋಷದಿಂದ ಬೀಗಿತು. ತನ್ನ ಹೊಟ್ಟೆಯ ಸಾಮರ್ಥ್ಯವನ್ನೂ ಮರೆಯಿತು. ೫೦ ಕೆ.ಜಿ ತೂಕದ ಕೃಷ್ಣಮೃಗದ ಮರಿಯನ್ನು ಗುರಿಯಾಗಿಸಿಕೊಂಡಿತು. ಮರಿ ಸ್ವಲ್ಪ ಸನಿಹವಾಗುತ್ತಿದ್ದಂತೇ ಗಬಕ್‌ ಎಂದು ಬಾಯೊಳಕ್ಕೆ ಸೇರಿಸಿಯೇಬಿಟ್ಟಿತು!

ದೊಡ್ಡದಾಗಿ ಬಾಯಿ ತೆರೆದು ದೇಹವನ್ನು ಇಮ್ಮಡಿಗೊಳಿಸಿ ಮರಿಯನ್ನು ನುಂಗುತ್ತ ತನ್ನ ಆಹಾರವನ್ನು ಆಸ್ವಾದಿಸುತ್ತಿದ್ದರೆ, ಅರೆಬರೆ ಜೀವವಾಗಿದ್ದ ಮರಿ, ತನ್ನ ಜೀವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿತ್ತು. ಯಾರಾದರೂ ತನ್ನನ್ನು ಕಾಪಾಡಿ ಬಂಧಮುಕ್ತಗೊಳಿಸುತ್ತಾರೆಯೋ ಎಂದು ಒದ್ದಾಡುತ್ತಿತ್ತು. ತನ್ನ ಕಂದಮ್ಮನನ್ನು ರಕ್ಷಿಸಿಕೊಳ್ಳಲಾರದೇ ಅದರ ಅಮ್ಮ ವೇದನೆಯಿಂದ ನೋಡುತ್ತಿದ್ದರೆ, ಉಳಿದ ಕೃಷ್ಣಮೃಗಗಳೂ ಏನೂ ಮಾಡದೇ ಅಸಹಾಯಕವಾಗಿದ್ದವು.

ಹಸಿದ ಹೊಟ್ಟೆ ತುಂಬಿಸಿಕೊಳ್ಳುವ ಆತುರದಲ್ಲಿದ್ದ ಹೆಬ್ಬಾವು ಮಾತ್ರ ಕೃಷ್ಣಮೃಗದ ಮರಿಯನ್ನು ಗುಳುಂ ಎಂದು ನುಂಗುತ್ತಿತ್ತು. ಮರಿ ಹೊಟ್ಟೆ ಸೇರುತ್ತಿತ್ತು, ಪ್ರಾಣವನ್ನೂ ಬಿಟ್ಟಿತ್ತು. ಹೆಬ್ಬಾವು ಮೈಯನ್ನು ಸುರುಳಿಯಂತೆ ಸುತ್ತಿಕೊಂಡು ಹೊಟ್ಟೆ ಸೇರಿದ ಮರಿಯ ಮೈಮೂಳೆಗಳನ್ನು ಪುಡಿ ಪುಡಿಯಾಗಿ ಮುರಿದು­ಬಿಟ್ಟಿತು. ಜಿಂಕೆಯ ರುಂಡ ಭಾಗ ಸಂಪೂರ್ಣ ಹೊಟ್ಟೆ ಸೇರಿತು. ಮುಂಡ ಭಾಗವನ್ನು ಎಷ್ಟು ಬೇಕೋ ಅಷ್ಟು ಸೇವಿಸಿದ ಹಾವು, ಉಳಿದ ಭಾಗವನ್ನು ಹೊರಗೆ ಉಗುಳಿ ನಿಟ್ಟುಸಿರು ಬಿಟ್ಟಿತ್ತು.

 

ಇನ್ನೇನು ಹೊಟ್ಟೆ ಪೂರ್ತಿ ತುಂಬಿ ಸುಖವಾದ ನಿದ್ದೆಗೆ ಜಾರಬಹುದೆಂದು ಅಂದುಕೊಂಡಿದ್ದ ಹಾವು ವಿಲಿವಿಲಿ ಒದ್ದಾಡಲು ಶುರುಮಾಡಿತು. ಹೊಟ್ಟೆಯೊಳಗಿನ ಸಂಕಟಕ್ಕೆ ತತ್ತರಿಸಿ ಹೋಯಿತು. ಏನಾಯಿತೆಂದು ತಿಳಿದುಕೊಳ್ಳಲೂ ಆಗದೇ ತನ್ನನ್ನು ಯಾರಾದರೂ ಕಾಪಾಡಿ ಎಂದು ರೋದಿಸಿತು. ಏಕೆಂದರೆ ಕೃಷ್ಣಮೃಗದ ಮೂಳೆ ಮುರಿಯುವ ರಭಸದಲ್ಲಿದ್ದಾಗ ಅದರ ಕೋಡುಗಳ ಹಾವಿನ ಹೊಟ್ಟೆ ಸೀಳಿ ಹೊರಕ್ಕೆ ಬಂದು ಬಿಟ್ಟಿದ್ದವು!

ಹಾವಿನ ಪುಣ್ಯವೋ, ಏನೋ. ದನ ಮೇಯಿಸುವ ಹುಡುಗರು ಅದನ್ನು ಗಮನಿಸಿ ಅರಣ್ಯ ಇಲಾಖೆಯವರಿಗೆ ತಿಳಿಸಿದರು.ಅರಣ್ಯ ಸಂರಕ್ಷಣಾಧಿಕಾರಿ ಹನುಮಂತರಾಜ ಗುತ್ತೆಪ್ಪ ನೇತೃತ್ವದಲ್ಲಿ ಹೆಬ್ಬಾವನ್ನು ಕಾಡಿನಿಂದ ಹೊರಗೆ ತರಲಾಯಿತು. ಪಶುವೈದ್ಯಾಧಿಕಾರಿಯಾದ ಡಾ. ಪರಮೇಶ್ ಚಿಕಿತ್ಸೆ ನೀಡಿದರು. ಸುಮಾರು ೪ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಲಾಯಿತಾದರೂ ಸೂಕ್ತ ಶಸ್ತ್ರಚಿಕ್ಕಿತ್ಸಾ ಘಟಕದ ಕೊರತೆಯಿಂದ ಕೃಷ್ಣಮೃಗದ ತಲೆಯ ಭಾಗ ಹೊಟ್ಟೆಯಲ್ಲಿಯೇ ಉಳಿಸಬೇಕಾಯಿತು. ಆದರೆ ಕೋಡನ್ನು ತೆಗೆದು ಮೂರು ದಿನಗಳವರೆಗೆ ಔಷಧೋಪಚಾರ ನೀಡಲಾಯಿತು. ‘ಗಾಯ ವಾಸಿಯಾಗುವವರೆಗೆ ನಂಜುರೋಗ ಬಾರದಂತೆ ಬೇವಿನ ಎಣ್ಣೆ, ಅರಿಶಿಣ ಪುಡಿಯನ್ನು ಹಾಕಿ ಗಮನವಿಟ್ಟು ಗುಣಪಡಿಸಿದ್ದೇವೆ’ ಎಂದು ಅರಣ್ಯಾಧಿಕಾರಿ ಲಕ್ಷ್ಮಿನಾರಾಯಣ ತಿಳಿಸಿದರು. ಮೂರು ದಿನಗಳ ಕಾಲ ವಿಶ್ರಾಂತಿ ಪಡೆದ ಹೆಬ್ಬಾವು ಮತ್ತೆ ಕಾಡಿನ ಕಡೆ ತೆರಳಿತು.

ಪ್ರತಿಕ್ರಿಯಿಸಿ (+)