ಮಂಗಳವಾರ, ಸೆಪ್ಟೆಂಬರ್ 17, 2019
21 °C

ಚೇತರಿಕೆ ಕಾಣದ ಕಾರು ಮಾರಾಟ

Published:
Updated:

ನವದೆಹಲಿ (ಪಿಟಿಐ): ದೇಶದ ಮೂರು ಮುಂಚೂಣಿ ಕಾರು ತಯಾರಿಕಾ ಕಂಪೆನಿಗಳಾದ ಮಾರುತಿ ಸುಜುಕಿ, ಹುಂಡೈ ಮೋಟಾರ್, ಟಾಟಾ ಮೋಟಾರ್ಸ್ ಆಗಸ್ಟ್ ತಿಂಗಳ ಮಾರಾಟದಲ್ಲಿ ಇಳಿಕೆ ದಾಖಲಿಸಿವೆ. ಮಾರುತಿ ಸುಜುಕಿ ಕಂಪೆನಿಯ ಮಾನೇಸರ ತಯಾರಿಕಾ ಘಟಕದಲ್ಲಿ ಕಾರ್ಮಿಕರು ನಡೆಸುತ್ತಿರುವ ಮುಷ್ಕರ ಕೂಡ ತಿಂಗಳ ಮಾರಾಟದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.ಬಡ್ಡಿ ದರ ಮತ್ತು ತೈಲ ಬೆಲೆ ಹೆಚ್ಚಳದಿಂದ ಕಾರು ಖರೀದಿಸುವ ಗ್ರಾಹಕ ಆತ್ಮವಿಶ್ವಾಸ ತಗ್ಗಿದೆ. ಮಾರಾಟ ಸಹಜ ಸ್ಥಿತಿಗೆ ಮರಳಲು ಇನ್ನಷ್ಟು ದಿನಗಳು ಬೇಕಾಗಬಹುದು ಎಂದು ಸುಜುಕಿ ಪ್ರಕಟಣೆ  ತಿಳಿಸಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಮಾರುತಿ ಸುಜುಕಿ ಕಾರುಗಳ ಮಾರಾಟ  ಶೇ 16ರಷ್ಟು ಕುಸಿದಿದ್ದು, 92,674ರಿಂದ 77,086ಕ್ಕೆ ಇಳಿಕೆಯಾಗಿದೆ.ಈ ಅವಧಿಯಲ್ಲಿ ಹುಂಡೈ ಮೋಟಾರ್ 26,677 ವಾಹನಗಳನ್ನು ಮಾರಾಟ ಮಾಡಿದೆ. ಜುಲೈ ತಿಂಗಳಿಗೆ ಹೋಲಿಸಿದರೆ ಮಾರಾಟ ಶೇ 6ರಷ್ಟು ಇಳಿಕೆ ಕಂಡಿದೆ.  ಆಗಸ್ಟ್ ತಿಂಗಳಲ್ಲಿ ಟಾಟಾ ಮೋಟಾರ್ಸ್ 16,829 ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪೆನಿ ಒಟ್ಟು 25,215 ವಾಹನಗಳನ್ನು ಮಾರಾಟ ಮಾಡಿತ್ತು. ಇದು ಶೇ 33ರಷ್ಟು ಇಳಿಕೆ ಕಂಡಿದೆ. ಸಣ್ಣ ಕಾರು ನ್ಯಾನೊ ಮಾರಾಟ ಶೇ 80ರಷ್ಟು ಕುಸಿದಿದೆ.ಟೊಯೊಟ ಕಿರ್ಲೊಸ್ಕರ್ ಮೋಟಾರ್ (ಟಿಕೆಎಂ), ಜನರಲ್ ಮೋಟಾರ್ಸ್ ಇಂಡಿಯಾ ಸಣ್ಣ ಕಾರುಗಳ ಮಾರಾಟದಲ್ಲಿ ಗಣನೀಯ ಪ್ರಗತಿ ದಾಖಲಿಸಿವೆ. ಟೊಯೊಟಾ ಮಾರಾಟ ಶೇ 83ರಷ್ಟು ವೃದ್ಧಿಸಿದೆ. ಇನೋವಾ, ಇಟಿಯೋಸ್, ಲಿವಾ ಮಾದರಿಗಳ ಬೇಡಿಕೆ ಹೆಚ್ಚಿದೆ.

 

ಜನರಲ್ ಮೋಟಾರ್ಸ್ ಒಟ್ಟು 9,050 ಕಾರುಗಳನ್ನು ಮಾರಾಟ ಮಾಡಿದ್ದು, ಶೇ 14ರಷ್ಟು ಪ್ರಗತಿ ದಾಖಲಿಸಿದೆ. ಮಹೀಂದ್ರಾ ಅಂಡ್ ಮಹೀಂದ್ರಾ ಕಂಪೆನಿ ಮಾರಾಟ ಶೇ 31ರಷ್ಟು ಹೆಚ್ಚಾಗಿದೆ. ಫೋರ್ಡ್ ಇಂಡಿಯಾ ಆಗಸ್ಟ್ ತಿಂಗಳಲ್ಲಿ ಶೇ 9ರಷ್ಟು ಮಾರಾಟ ಪ್ರಗತಿ ದಾಖಲಿಸಿದೆ. ಫೋಕ್ಸ್‌ವ್ಯಾಗನ್ ಕಾರುಗಳ ಮಾರಾಟ ಶೇ 72ರಷ್ಟು ಹೆಚ್ಚಾಗಿದೆ. 6,907 ಕಾರುಗಳನ್ನು ಮಾರಾಟ ಮಾಡಿರುವ ಹೋಂಡಾ ಶೇ 25ರಷ್ಟು ಮಾರಾಟ ಪ್ರಗತಿ ದಾಖಲಿಸಿದೆ.

Post Comments (+)