ಬೆಂಗಳೂರು: ಬಸವಣ್ಣ ಮೊದಲೋ ಪಂಚಪೀಠಗಳು ಮೊದಲೋ ಎಂಬ ಬಗ್ಗೆ ಇದ್ದಂತಹ ತಾತ್ವಿಕ ಗೊಂದಲ ಹಾಗೂ ಜಿಜ್ಞಾಸೆಗಳನ್ನು ನಿವಾರಿಸಿದ್ದ ಅಪರೂಪದ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ.

‘ಲಿಂಗಾಯತರ ಪಾಲಿಗೆ ಧರ್ಮಗ್ರಂಥ ಎಂದರೆ ಬಸವಾದಿ ಶರಣರ ವಚನಗಳೇ ಆಗಿರಬೇಕು, ಧರ್ಮಗುರು ಬಸವಣ್ಣ ಮತ್ತು ಧರ್ಮದೈವ ಇಷ್ಟಲಿಂಗವೇ ಇರಬೇಕು. ಕಾಯಕ ದಾಸೋಹವನ್ನು ಪ್ರತಿಯೊಬ್ಬ ಲಿಂಗಾಯತನೂ ಅಳವಡಿಸಿಕೊಳ್ಳಬೇಕು ಮತ್ತು ಭಕ್ತರ ಮನೆಗಳೇ ಮಠಗಳಾಗಿ ಪರಿವರ್ತನೆ ಆಗಬೇಕು...’
ಇವು ಕಲಬುರ್ಗಿಯವರು ಎಲ್ಲೇ ಹೋದರು ಪ್ರತಿಪಾದಿಸುತ್ತಿದ್ದ ಸದಾಶಯಗಳಾಗಿದ್ದವು.

ವಾಸ್ತವದಲ್ಲಿ ಇಂದಿನ ಮಠಾಧೀಶರ ನಡೆನುಡಿಗಳಿಗೆ ಅದರಲ್ಲೂ ಲಿಂಗಾಯತ ಮಠಾಧೀಶರ ವೈಭೋಗಗಳ ಬಗ್ಗೆ ಅಂತರಂಗದಲ್ಲಿ ಆಗಾಗ್ಗೆ ಆಪ್ತರ ಬಳಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಅವರು, ‘ಈ ಮಠೀಯ ವ್ಯವಸ್ಥೆ ಜನರನ್ನು ಮತ್ತಷ್ಟು ಮೌಢ್ಯದೆಡೆಗೆ ಕೊಂಡೊಯ್ಯುತ್ತಿದೆ’ ಎಂದೇ ಹೇಳುತ್ತಿದ್ದರು. ಈ ದಿಸೆಯಲ್ಲಿ ಪಂಚಪೀಠಗಳ ವರ್ತನೆಯ ಬಗೆಗಂತೂ ಅವರು ಕಠೋರ ವಿರೋಧ ಹೊಂದಿದ್ದರು.

‘ಕಾಳಾಮುಖ, ಪಾಶುಪತ, ಕಾಪಾಲಿಕ, ಶ್ರೋತ್ರೀಯ ಶೈವ ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ಲಿಂಗಾಯತದೊಳಗೆ ಲೀನವಾಗಿ ಹೋದವು. ಹೀಗಿದ್ದೂ, ಅವುಗಳ ಮಠಾಧೀಶರು ಕರ್ನಾಟಕದಲ್ಲಿ ಬಸವ ಪರಂಪರೆಯ ‘ಜಂಗಮ’ರಾಗಿ, ಆಂಧ್ರಪ್ರದೇಶದಲ್ಲಿ ವೈದಿಕ ಪರಂಪರೆಯ ‘ಆರಾಧ್ಯ’ರಾಗಿ ರೂಪುಗೊಂಡರು...’ -ಈ ರೀತಿಯ ಅನೇಕ ವಿವರಗಳನ್ನು ಕಲಬುರ್ಗಿಯವರು ತಮ್ಮ ‘ಜಂಗಮರು ಮೂಲತಃ ಬ್ರಾಹ್ಮಣರು !’ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದ ಬಸವ ಪರಂಪರೆಯ ‘ಜಂಗಮ’ ಮಠಾಧೀಶರಿಗೆ ಆಂಧ್ರದ ಇಷ್ಟಲಿಂಗದ ಆರಾಧ್ಯ ಮಠಾಧೀಶರು, ‘ಸೈದ್ಧಾಂತಿಕವಾಗಿ ನಾವಿಬ್ಬರೂ ಒಂದೇ’ ಎಂಬ ಭ್ರಮೆ ಹುಟ್ಟಿಸಿ, ಇವರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು, ಇವರಿಗೂ ತಮ್ಮ ‘ಶಿವಾಚಾರ್ಯ’ ಪ್ರತ್ಯಯ ಅಂಟಿಸಿಬಿಟ್ಟರು. ಹೀಗಾಗಿ ಈ ನಾಲ್ಕು ಶಾಖೆಗಳ ಎಲ್ಲ ಮಠಾಧೀಶರನ್ನು ‘ಶಿವಾಚಾರ್ಯ’ರೆಂದು ಕರೆಯುವುದು ರೂಢಿಯಲ್ಲಿ ಬಂದಿತು. ಸಾಲದುದಕ್ಕೆ ಈ ಶಿವಾಚಾರ್ಯರು ಬಸವಣ್ಣನ ‘ಲಿಂಗಾಯತ’ಕ್ಕೆ ಪರ್ಯಾಯವಾಗಿ ‘ವೀರಶೈವ’ ಪದವನ್ನೂ ಪ್ರಚಾರಕ್ಕೆ ತಂದರು...

ಇಂತಹ ವಿವರಣೆಗಳಿಗೆ ಕಲಬುರ್ಗಿ ಅವರು ವಿಶ್ವಾಸಾರ್ಹ ಆಕರ, ಸತ್ಯಘಟನೆಗಳ ದಾಖಲೆ, ಶಾಸನಗಳನ್ನು ಈ ಲೇಖನದಲ್ಲಿ ಆಧಾರವಾಗಿ ಒದಗಿಸಿದ್ದಾರೆ.
ಕಲ್ಬುರ್ಗಿಯವರು ನಿಷ್ಠುರ ಬಸವತತ್ವ ಪ್ರತಿಪಾದಕರಾಗಿದ್ದರು. ಭಾಲ್ಕಿಯ ಹಿರೇಮಠ, ಗದಗಿನ ತೋಂಟದಾರ್ಯ, ಇಳಕಲ್ನ ವಿಜಯ ಮಹಾಂತೇಶ್ವರ, ನಿಡುಮಾಮಿಡಿ, ಧಾರವಾಡ ಮತ್ತು ಚಿತ್ರದುರ್ಗದ ಮುರುಘಾಮಠ, ಬೆಳಗಾವಿಯ ರುದ್ರಾಕ್ಷಿ ಮಠ, ಸಂಕೇಶ್ವರ ತಾಲ್ಲೂಕಿನ ನಿಡಸೋಸಿಯ ದುರದುಂಡೇಶ್ವರ ಮಠ.. ಹೀಗೆ ನಾಡಿನ ಶೂನ್ಯ ಪೀಠ ಪರಂಪರೆಯ ಹತ್ತುಹಲವು ವಿರಕ್ತ ಮಠಗಳು ಮತ್ತು ಪ್ರಗತಿಪರ ಮಠಾಧೀಶರ ಜೊತೆ ಅವರು ತಮ್ಮನ್ನು ನಿಕಟವಾಗಿ ಗುರುತಿಸಿಕೊಂಡಿದ್ದರಾದರೂ ತಮ್ಮದೇ ಆದ ಅಂತರವನ್ನು ಕಾಪಾಡಿಕೊಂಡು ಬಂದಿದ್ದರು.

ವೀರಶೈವರು ಎಲ್ಲಿಯವರು?: ‘ವೀರಶೈವ ಅನ್ನುವ ಶಬ್ದ ಕರ್ನಾಟಕದಲ್ಲಿ ಹುಟ್ಟಿದ್ದೇ 1368ಕ್ಕೆ. ಬಸವ ಪುರಾಣದೊಳಗೆ ಮೊಟ್ಟಮೊದಲು ವೀರಶೈವ ಪದ ಬರುತ್ತೇ. ಅದಕ್ಕಿಂತ ಮೊದಲು ಬರುವುದಿಲ್ಲ. ಪಂಚಾಚಾರ್ಯ ಪೀಠ ಅಥವಾ ಚತುರಾಚಾರ್ಯರ ಒಕ್ಕೂಟ ಹುಟ್ಟಿದ್ದು 1530ರೊಳಗೆ. ಅದು ಹುಟ್ಟಿದ್ದು ಶಿವಗಂಗೆ ಬೆಟ್ಟದೊಳಗೆ. ಅದಕ್ಕಿಂತ ಮೊದಲು ಪಂಚಾಚಾರ್ಯ ಅಥವಾ ಚತುರಾಚಾರ್ಯರು ಹುಟ್ಟಲೇ ಇಲ್ಲ. ಅಲ್ಲಿಯವರೆಗೂ ಎಲ್ಲಿಯೂ ಬರುವುದಿಲ್ಲ. ಅದೇನರ ಬಂದಿದ್ದರೆ ಅದೆಲ್ಲ ಕೃತಕವಾದದ್ದು ಎಂದು ಹೇಳಬೇಕಾಗುತ್ತದೆ. ಅದಕ್ಕೆ ಆಧಾರ ನನ್ನ ಹತ್ತಿರ ಇದೆ...’
ಇವು ಕಲಬುರ್ಗಿಯವರ ಖಚಿತ ನಿಲುವು ಮತ್ತು ನುಡಿಗಳಾಗಿದ್ದವು.

ಈ ಕುರಿತಂತೆ ‘ಬಸವ ಮಾರ್ಗ’ದಲ್ಲಿ ಪ್ರಕಟವಾಗಿರುವ ‘ಚತುರಾಚಾರ್ಯರು, ಪಂಚಾಚಾರ್ಯರು ಅಸಲಿಗೇ ಸುಳ್ಳು! 1530ರಿಂದ ಆಚೆಗೆ ಇವರಾರ ಸುಳಿವೇ ಇಲ್ಲವು!!’ ಎಂಬ ಲೇಖನದಲ್ಲಿ ಅವರು ಉಲ್ಲೇಖಿಸುವುದು ಹೀಗೆ...

‘ಸತ್ಯವನ್ನು ಮುಚ್ಚಿಟ್ಟು ಒಳ ಒಳಗೆ ಮುಸುಕಿನ ಗುದ್ದಾಟ ಮಾಡಿದರೆ ಸಮಾಜ ಉದ್ಧಾರ ಆಗಲ್ಲ. ಆದ್ದರಿಂದ ನಾವು ಇನ್ನು ಮೇಲಾದರೂ ಪಂಡಿತಾರಾಧ್ಯ ಪರಂಪರೆ ಅಂದರೇನು? ಬಸವ ಪರಂಪರೆ ಅಂದರೇನು? ಸಿದ್ಧರಾಮ ಪರಂಪರೆ ಅಂದರೇನು? ಅವುಗಳ ಸ್ವರೂಪ ಏನು? ಅಂತ ನಿಚ್ಚಳವಾಗಿ ತಿಳಿದುಕೊಳ್ಳಬೇಕು ನೋಡಿ, ಸಿದ್ಧರಾಮ ಪರಂಪರೆ ಲಿಂಗಾಯತ ಧರ್ಮದಲ್ಲಿ ಲೀನವಾಗಿ ಹೋಗಿಬಿಟ್ಟಿತು. ಅದರಂತೆ ಆಗ ಪಂಡಿತಾರಾಧ್ಯ ಪರಂಪರೆಯೂ ಲೀನವಾಗಿ ಹೋಗಿಬಿಟ್ಟಿದ್ದರೆ ಯಾವುದೇ ಗದ್ದಲ ಇರುತ್ತಿರಲಿಲ್ಲ. ಅದು ಹಾಗೇ ಉಳಿದ ಕಾರಣವಾಗಿ ಹೀಗಾಗಿದೆ’.

‘ಸಂಶೋಧನೆ ಎಂದರೆ ಅಲ್ಪ ವಿರಾಮದಿಂದ ಪೂರ್ಣ ವಿರಾಮದ ಕಡೆಗೆ ಸಾಗುವ ಕ್ರಿಯೆಯಾಗಿದೆ’ ಎನ್ನುತ್ತಿದ್ದ ಅವರು, ‘ಮುಗ್ಧ ಭಕ್ತರನ್ನ, ಮೂರ್ಖ ಭಕ್ತರನ್ನ ಕೂಡಿ ಹಾಕಿ, ಸುಳ್ಳು ಪ್ರಚಾರವನ್ನು ಮಾಡಿ ಸಮಾಜವನ್ನು ಆಳುವಂತಹ ಕೆಲಸ ಮಾಡಬಾರದು. ನಮ್ಮ ಸಮಾಜವನ್ನು ಸತ್ಯ ಆಳಬೇಕು. ಅಸತ್ಯ ಆಳಬಾರದು’ ಎಂದು ಮಠಾಧೀಶರನ್ನು ಸದಾ ತಮ್ಮ ಚಾರ್ವಾಕ ಕೂರಂಬುಗಳಿಂದ ತಿವಿಯುತ್ತಿದ್ದರು.

‘ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಕಾಲಂ ಕೊಡಿ’
ಪಂಚಪೀಠಗಳ ಪಾರುಪತ್ಯವನ್ನು ಕೊನೆಗಾಣಿಸುವ ಉದ್ದೇಶದಿಂದ 2008ರ ಫೆಬ್ರುವರಿ ತಿಂಗಳಿನಲ್ಲಿ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠ ಮತ್ತು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠಗಳು ಅಸ್ತಿತ್ವಕ್ಕೆ ಬಂದವು. ಈ ಮಠಗಳ ಬಗ್ಗೆ ಒಂದಷ್ಟು ಮೃದು ಧೋರಣೆ ಹೊಂದಿದ್ದ ಕಲಬುರ್ಗಿಯವರು, ‘ಇವು ಪಂಚಪೀಠಗಳಿಗಿಂತ ಭಿನ್ನವಾಗಿ ಬಸವತತ್ವ ಅನುಸರಿಸದೇ ಹೋದರೆ ಲಿಂಗಾಯತ ಸಮಾಜಕ್ಕೆ ತಾತ್ವಿಕ ತಳಹದಿ ಇಲ್ಲವಾಗುತ್ತದೆ’ ಎಂದು ಎಚ್ಚರಿಸುತ್ತಿದ್ದರು. ಇತ್ತೀಚೆಗೆ ರಾಜ್ಯದಲ್ಲಿ ಜಾತಿ ಸಮೀಕ್ಷೆ ಆರಂಭಿಸುವುದಕ್ಕೂ ಮುನ್ನ ಮುಖ್ಯಮಂತ್ರಿಗಳಿಗೆ ವೈಯಕ್ತಿಕವಾಗಿ ಪತ್ರ ಬರೆದಿದ್ದ ಕಲಬುರ್ಗಿಯವರು, ‘ಲಿಂಗಾಯತ ಸಮುದಾಯವನ್ನು ಪ್ರತ್ಯೇಕ ಧರ್ಮದ ಕಾಲಂನಲ್ಲಿಯೇ ಗುರುತಿಸಬೇಕು’ ಎಂದೂ ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.