ಮಂಗಳವಾರ, ಜನವರಿ 28, 2020
17 °C

ಜಗಕೆ ಬೆಳಕಾದ ದೇವದೂತನ ಸ್ಮರಣೆ

ವೆಂಕಟೇಶ್ ಜಿ.ಎಚ್ Updated:

ಅಕ್ಷರ ಗಾತ್ರ : | |

ಕ್ರೈಸ್ತರು ಮಾತ್ರವಲ್ಲ ಮಾನವೀಯತೆಯನ್ನು ಬದುಕಾಗಿಸಿಕೊಂಡ ಎಲ್ಲರ ಹಬ್ಬ ಕ್ರಿಸ್ ಮಸ್ ಮತ್ತೆ ಬಂದಿದೆ. ಪ್ರೀತಿ, ಕರುಣೆಯ ಮಂತ್ರವನ್ನು ಜಗತ್ತಿಗೆ ಸಾರಿದ ದೇವದೂತ ಏಸುಕ್ರಿಸ್ತರ ಹುಟ್ಟುಹಬ್ಬವಾದ ಕ್ರಿಸ್‌ಮಸ್‌ ಈಗ ಜಾಗತಿಕ ಮನ್ನಣೆಯ ಹಬ್ಬ.ಏಕೀಕರಣಕ್ಕೆ ಮುನ್ನ ಮುಂಬೈ ಪ್ರಾಂತ್ಯಕ್ಕೆ ಸೇರಿದ್ದ ಹುಬ್ಬಳ್ಳಿ–ಧಾರವಾಡ ಅವಳಿ ನಗರ, ಹಿಂದೊಮ್ಮೆ ಬ್ರಿಟೀಷ್ ಆಡಳಿತದ ಕೇಂದ್ರ ಸ್ಥಾನವಾಗಿತ್ತು. ಈಸ್ಟ್‌ ಇಂಡಿಯಾ ಕಂಪೆನಿಯ ಅಧಿಕಾರಿ ವರ್ಗ, ಸಿಬ್ಬಂದಿ ಸೇರಿದಂತೆ ಶಿಕ್ಷಣ, ಆರೋಗ್ಯ ಹಾಗೂ ಧಾರ್ಮಿಕ ಸೇವಾಸಕ್ತರು ಆಗಿನಿಂದಲೇ ದೊಡ್ಡ ಪ್ರಮಾಣದಲ್ಲಿ ಹುಬ್ಬಳ್ಳಿ–ಧಾರವಾಡದಲ್ಲಿ ನೆಲೆಸಲು ಆರಂಭಿಸಿದರು.ಮುಂದೆ ಹುಬ್ಬಳ್ಳಿ ರೈಲ್ವೆ ವಲಯದ ಕೇಂದ್ರ ಸ್ಥಾನವಾಗುತ್ತಿದ್ದಂತೆಯೇ ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಉತ್ತರ ಭಾರತದ ಕಡೆಯಿಂದ ಉದ್ಯೋಗ ಅರಸಿ ಬಂದ ಕ್ರೈಸ್ತ ಬಾಂಧವರು ಇಲ್ಲಿಯೇ ನೆಲೆನಿಂತರು.ಇಲ್ಲಿ ಕ್ರೈಸ್ತ ಸಮುದಾಯದ ಗಣನೀಯವಾಗಿ ಹೆಚ್ಚುತ್ತಿದ್ದಂತೆಯೇ ಉತ್ತರ ಕರ್ನಾಟಕದ ಇತರೆಡೆಗಿಂತ ಹುಬ್ಬಳ್ಳಿ–ಧಾರವಾಡದಲ್ಲಿ ಕ್ರಿಸ್‌­ಮಸ್‌ ಆಚರಣೆಗೆ ವಿಶೇಷತೆ ಕಲ್ಪಿಸಿತು.ಹಬ್ಬದ ರೂಪದ ಸ್ಮರಣೆ...

ಲೂಕನ ಸುವಾರ್ತೆಯ 2ನೇ ಅಧ್ಯಾಯ 1ರಿಂದ 14ರಲ್ಲಿ ಏಸುಸ್ವಾಮಿಯ ಜನನದ ವೃತ್ತಾಂತವಿದ್ದು, ಅಲ್ಲಿ ‘ದೇವರ ಆತ್ಮವೇ ತಾಯಿ (ಮರಿಯಾ) ಗರ್ಭದಲ್ಲಿ ಅಂಕುರಿಸಿದೆ’ ಎಂದು ಹೇಳಲಾಗಿದೆ.ಈಗ ಇಸ್ರೇಲ್‌ ಮತ್ತು ಗಾಜಾ ಪಟ್ಟಿಯಲ್ಲಿ ಹಂಚಿಹೋಗಿರುವ ಜೆರುಸಲೇಂನಲ್ಲಿರುವ ಬೆತ್ಲ­ಹೆಮ್‌ ಊರಿನ ದನದ ಕೊಟ್ಟಿಗೆಯಲ್ಲಿ ಡಿಸೆಂಬರ್‌ 25ರಂದು ಹುಟ್ಟಿದ್ದಾರೆ. ತಾಯಿ ಮರಿಯಾಗೆ ಕೇಳಿಸಿದ ದೇವವಾಣಿಯ ಅನ್ವಯ ಜಗತ್ತಿಗೆ ಬೆಳಕು ನೀಡಲು ಏಸುಸ್ವಾಮಿ ಜನಿಸಿದ ಆ ಕ್ಷಣವನ್ನು ಹಬ್ಬದ ರೂಪದಲ್ಲಿ ಸ್ಮರಿಸಲಾಗುತ್ತಿದೆ.ಕೊಟ್ಟಿಗೆ (ಗೋದಲಿ), ನಕ್ಷತ್ರ...

ದನದ ಕೊಟ್ಟಿಗೆ (ಗೋದಲಿ) ಮತ್ತು ನಕ್ಷತ್ರ ಇವು ಕ್ರಿಸ್‌ಮಸ್‌ನ ಸಂಕೇತಗಳು. ಗೋದಲಿ ಏಸುವಿನ ಜನ್ಮಸ್ಥಳದ ಸಂಕೇತವಾದರೆ, ನಕ್ಷತ್ರ ಸಂಭ್ರಮ ಹಾಗೂ ದೇವವಾಣಿಯನ್ನು ಬಿಂಬಿಸುತ್ತದೆ. ಇನ್ನು ಬಾಲ ಏಸುವನ್ನು ಸ್ವಾಗತಿ­ಸಲು ಸೇರಿದ ಕುರುಬರು, ಜ್ಞಾನಿಗಳ ಮೂರ್ತಿ­ಗಳನ್ನು ಅಲ್ಲಿ ಕಾಣಬಹುದು. ಕ್ರಿಸ್‌ಮಸ್‌ ವೇಳೆ ಕ್ರೈಸ್ತ ಸಮುದಾಯದ ಪ್ರತಿಯೊಬ್ಬರ ಮನೆಗಳ ಎದುರು, ಚರ್ಚ್‌, ಸಮುದಾಯದ ಸಂಸ್ಥೆಗಳ ಆವರಣದಲ್ಲಿ ಕ್ರಿಸ್ತರ ಜನನ ವೃತ್ತಾಂತವನ್ನು ಈ ಪ್ರತಿಮೆಗಳ ಮೂಲಕ ಕಾಣಬಹುದಾಗಿದೆ.ಕ್ರಿಸ್‌ಮಸ್‌ಗೂ ನಾಲ್ಕು ವಾರಗಳ ಮುನ್ನವೇ ‘ಪ್ರಭು ಕ್ರಿಸ್ತರ ಆಗಮನದ ತಯಾರಿ’ ನಡೆ­ಯುತ್ತದೆ. ಬೈಬಲ್ ಪಠಣ, ಪ್ರಾರ್ಥನೆ, ತ್ಯಾಗ, ದಾನ ಮತ್ತು ಧರ್ಮಗಳು ಆ ತಯಾರಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.  ಈ ಅವಧಿಯಲ್ಲಿ ಸಮುದಾಯದವರೆಲ್ಲ ಒಟ್ಟಾಗಿ ಸೇರಿ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಹಾಗೂ ಮನೆಗಳಲ್ಲಿ ವಿಶೇಷ ಪ್ರಾರ್ಥನೆ, (ಕ್ಯಾರೋಲ್ಸ್‌) ಧ್ಯಾನ ಮಾಡುತ್ತಾರೆ. ಅದಕ್ಕಾಗಿ ಧ್ಯಾನ­ಕೂಟಗಳೂ ಇವೆ.ಹುಬ್ಬಳ್ಳಿಯ ರೋಮನ್‌ ಕ್ಯಾಥೋಲಿಕ್‌ ಪಂಗ­ಡದ ಸೆಂಟ್ ಜೋಸೆಫ್ ಚರ್ಚ್‌ನಲ್ಲಿ ಕನ್ನಡ, ಕೊಂಕಣಿ, ತಮಿಳು, ಇಂಗ್ಲಿಷ್‌ ಹಾಗೂ ಮಲ­ಯಾಳಂನಲ್ಲಿ ವಿಶೇಷ ಪ್ರಾರ್ಥನೆ ಮಾಡಲಾ­ಗುತ್ತದೆ. ‘ಏಸುಕ್ರಿಸ್ತರು ಜಗತ್ತಿನ ಉದ್ಧಾರಕ್ಕೆ ಮತ್ತೆ ಹುಟ್ಟಿ ಬರಲಿದ್ದಾರೆ. ದೇವರ ಕರೆ ಬರುವ ತನಕ ಉತ್ತಮ ಜೀವನ ನಡೆಸಿರಿ, ಆತನಿಂದ ಯಾವುದೇ ಸಂದರ್ಭದಲ್ಲಿ ಕರೆಬರಬಹುದು. ಸಾವಿಗೆ ಹೆದರದೆ ಸಿದ್ಧರಾಗಿ’ ಎಂಬ ಸಂದೇಶ ಹಬ್ಬದ ಆಚರಣೆಯ ಹಿಂದಿದೆ ಎನ್ನುತ್ತಾರೆ ಸೇಂಟ್‌ ಜೋಸೆಫ್‌ ಚರ್ಚ್‌ನ ರೆವರೆಂಡ್ ಫಾದರ್‌ ಜೋಸೆಫ್ ರೋಡ್ರಿಗ್ಸ್.ಗಾಂಧಿವಾಡದ ಬ್ಯಾಪಿಸ್ಟ್ ಚರ್ಚ್ ತೆಲುಗು ಕ್ರೈಸ್ತರ ಪ್ರಾರ್ಥನಾ ಸ್ಥಳವಾಗಿದೆ. ಇಲ್ಲಿ ತೆಲುಗು ಭಾಷೆಯಲ್ಲಿ ಪ್ರಾರ್ಥನೆ ನಡೆಯುತ್ತದೆ. ಕ್ರಿಸ್‌­ಮಸ್ ಅವಧಿಯಲ್ಲಿ ನಿತ್ಯ ಸಂಜೆ ಪ್ರಾರ್ಥನೆಯ ನಂತರ ಸಾಮೂಹಿಕವಾಗಿ ಕ್ರಿಸ್‌ಮಸ್‌ ಗೀತೆ­ಗಳನ್ನು ಹಾಡುತ್ತಾ ಮೇಣದ ಬತ್ತಿ ಹಿಡಿದು ಮೆರವಣಿಗೆ ಇಲ್ಲಿಯ ವಿಶೇಷವಾಗಿದೆ.ಹುಬ್ಬಳ್ಳಿಯ ಪುರಾತನ ಪ್ರಾಟೆಸ್ಟೆಂಟ್‌ ಪಂಗಡದ ಚರ್ಚ್‌ಗಳಲ್ಲಿ ಒಂದಾದ ಬಾಸೆಲ್‌­ಮಿಶನ್, ದೇಶಪಾಂಡೆ ನಗರದ ಸ್ವರ್ಗಾರೋಹಣ ದೇವಾಲಯ, ಕ್ರಿಶ್ಚಿಯನ್‌ ಕಾಲೊನಿಯ ಏಸುನಾಮ ಮಹಾದೇವಾಲಯ, ರೈಲ್ವೆ ಆಸ್ಪತ್ರೆ ಸಮೀಪದ ಸೇಂಟ್ ಆಂಡ್ರ್ಯೂ ಚರ್ಚ್ ಮೊದ­ಲಾದೆಡೆ ಕನ್ನಡದಲ್ಲಿ ಪ್ರಾರ್ಥನೆ ನಡೆಯುತ್ತದೆ.ವೈವಿಧ್ಯಮಯ ಕೇಕ್, ಚಾಕೊಲೇಟ್‌, ಖಾರ, ಮಾಂಸಹಾರಿ ಖಾದ್ಯಗಳು, ಚಕ್ಕುಲಿ, ಉಂಡೆ, ಕರ್ಜಿಕಾಯಿ, ಗುಲಾಬ್‌ ಜಾಮೂನ್, ಬೆಲ್ಲ–ಅಕ್ಕಿ ಹಿಟ್ಟು ಸೇರಿಸಿ ತಯಾರಿಸಿದ ಸಿಹಿ ತಿನಿಸು, ದ್ರಾಕ್ಷಾರಸ (ವೈನ್‌), ಜೊತೆಗೊಂದಷ್ಟು ಜೀವನ ಪ್ರೀತಿ ಹಬ್ಬದ ಸಂಭ್ರಮದಲ್ಲಿ ಕ್ರೈಸ್ತಬಾಂಧವರ ಜೊತೆಗೂಡುತ್ತವೆ.ಸಾಂತಾಕ್ಲಾಸ್ ರಂಜನೆ...

ಈ ಸಾಂತಾ ಕ್ಲಾಸ್‌ ಎಂಬುದು ಸಂತ ನಿಕೋಲಾಸ್‌ ಎಂಬ ಪಾದ್ರಿಯ ಅಪಭ್ರಂಶ ಪದ. ಸಾಂತಾ ಕ್ಲಾಸ್‌ಗೂ ಕ್ರಿಸ್‌ಮಸ್‌ಗೂ ಸಂಬಂಧ­ವಿಲ್ಲ ಆದರೂ ಇಂದು ಸಾಂತಾಕ್ಷಾಸ್‌ ವೇಷಧಾರಿ ಕ್ರಿಸ್‌ಮಸ್ ಆಚರಣೆಯ ಭಾಗವೇ ಆಗಿರುವುದು ವಿಶೇಷವಾಗಿದೆ.

 

ಕೈಯಲ್ಲಿ ಹಿಡಿದ ಮಂತ್ರದಂಡ, ಟೋಪಿ, ಪೋಷಾಕಿನೊಂದಿಗೆ ಕ್ರಿಸ್ ಮಸ್‌ ಗೀತೆಗಳನ್ನು ಹಾಡುತ್ತಾ, ಸಾಂತಾಕ್ಲಾಸ್ ವಿಶೇಷವಾಗಿ ಮಕ್ಕಳ ಮನಗೆಲ್ಲುತ್ತಾರೆ. ಎಲ್ಲರಿಗೂ ಹಬ್ಬದ ಶುಭಾಶಯ ಕೋರುತ್ತಾ, ಕುಂಕುಳಲ್ಲಿ ಇಟ್ಟುಕೊಂಡ ಚೀಲ­ದಿಂದ ಸಿಹಿ ಹಂಚುತ್ತಾ ಸಾಂತಾಕ್ಲಾಸ್‌ ಸಾಗು­ವುದನ್ನು ಕಾಣಬಹುದು.

ಪ್ರತಿಕ್ರಿಯಿಸಿ (+)