ಬುಧವಾರ, ಜನವರಿ 22, 2020
20 °C
ಸಾಹಿತ್ಯ ಸಮ್ಮೇಳನ ನಿರೀಕ್ಷೆ ಏನು?

ಜಡತ್ವ ನೀಗುವತ್ತ...

ವಿಕ್ರಂ ವಿಸಾಜಿ Updated:

ಅಕ್ಷರ ಗಾತ್ರ : | |

ಮಡಿಕೇರಿಯಲ್ಲಿ ಮುಂದಿನ ತಿಂಗಳು ನಡೆಯಲಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ ಸಜ್ಜಾಗುತ್ತಿದೆ. ಈ ಸಾಹಿತ್ಯ  ಸಮ್ಮೇಳನ ಹೇಗಿರಬೇಕು? ಈ ಸಮ್ಮೇಳನದಲ್ಲಿ ಸಾಹಿತ್ಯಾಸಕ್ತಿಯೇ ವಿಜೃಂಭಿಸಬೇಕೆಂಬ ಆಶಯ ಈಡೇರುವುದು ಸಾಧ್ಯವೇ? ಉನ್ನತ ಸಾಹಿತ್ಯ ಚಿಂತನೆಗಳು ಭಿನ್ನ ನೆಲೆಗಳಲ್ಲಿ ಮೂಡಲು ಸಾಹಿತ್ಯ ಸಮ್ಮೇಳನ ವೇದಿಕೆಯಾಗುವುದು ಹೇಗೆ? ಇತ್ಯಾದಿ ಪ್ರಶ್ನೆಗಳ ಸುತ್ತ ಲೇಖಕ ವಿಕ್ರಂ ವಿಸಾಜಿ ಅವರು ಮಂಡಿಸಿರುವ ವಿಚಾರಗಳು ಇಲ್ಲಿವೆ...ಸಮ್ಮೇಳನವೆಂದರೆ ಸಾಹಿತ್ಯ ಕುರಿತ  ಗೋಷ್ಠಿಗಳು,  ಕರ್ನಾಟಕ ಕುರಿತ  ಚಿಂತನೆ, ಪುಸ್ತಕ  ಖರೀದಿ, ಹಿರಿಯರ  ಮತ್ತು ಗೆಳೆಯರ  ಜೊತೆ ಒಡನಾಟ,  ಮಾತುಕತೆ. ಇವೆಲ್ಲ  ಸರಿಯಾದ  ದಾರಿಯಲ್ಲಿ ಸಾಗಿವೆಯೇ? ಒಂದೆರಡು ಅಪರೂಪದ ಭಾಷಣ, ಚರ್ಚೆಗಳನ್ನು ಬಿಟ್ಟರೆ ಸಮ್ಮೇಳನದ ಸ್ವರೂಪ ಜಡವಾಗಿಬಿಟ್ಟಿದೆ. ಮಾತು,  ಚರ್ಚೆ ಎಲ್ಲೆಲ್ಲೋ ಹರಿದಾಡಿ ಗಂಭೀರ ಸಂವಾದಕ್ಕೆ ಆಸ್ಪದವೇ ಇಲ್ಲದಂತಾಗಿದೆ.ಹಾಗಂತ ಮೂರು ದಿನಗಳ ಸಮ್ಮೇಳನ ದಿಢೀರಂತ ಏನೋ ದೊಡ್ಡ ಬದಲಾವಣೆ ತರುತ್ತದೆ ಎಂಬ ಭ್ರಮೆಯೂ ಇಲ್ಲ. ಆದರೆ ಕರ್ನಾಟಕ ಹಾಗೂ ಸಾಹಿತ್ಯದ ಕುರಿತು ಒಂದು ಮಟ್ಟಿಗಿನ ಕ್ರಿಯಾಶೀಲವಾದ, ಸೂಕ್ಷ್ಮವಾದ, ಮನಸ್ಸನ್ನು ಬೆಳೆಸುವ ಜೀವಂತ ಚರ್ಚೆಯನ್ನು ನಾನಂತೂ ಬಯಸುವೆ. ಅದು ಇಲ್ಲ ಎಂದಾದರೆ ಅಷ್ಟರಮಟ್ಟಿಗೆ ಅದು ಜಡವಾಗಿದೆಯೆಂತಲೇ ಅರ್ಥ.ಸಾಹಿತ್ಯದ ಗೋಷ್ಠಿಗಳು ಸರಳ ಸಮಾಜಶಾಸ್ತ್ರೀಯ ಗೋಷ್ಠಿಗಳಾಗದಂತೆ, ಕರ್ನಾಟಕದ ಕುರಿತು ನಡೆವ ಚರ್ಚೆಗಳು ಚೀರು ಧ್ವನಿಯಲ್ಲಿ ಅಸೂಕ್ಷ್ಮವಾಗದಂತೆ ಮಾಡುವುದು ಹೇಗೆ? ಎಲ್ಲ ಪ್ರದೇಶ, ಜಾತಿಗಳ ಸೂಕ್ಷ್ಮಜ್ಞರನ್ನು ಸರಿಯಾಗಿ ಗುರುತಿಸುವಂತಾದರೆ ಇದಕ್ಕೆ ಸ್ವಲ್ಪಮಟ್ಟಿಗಿನ ಉತ್ತರ ಸಿಗಬಹುದು.

ಸಾಹಿತ್ಯಕ್ಕೆ ಸೀಮಿತಗೊಳಿಸಿ ಕೆಲ ಮಾತುಗಳನ್ನು ಹೇಳುವೆ. ಒಂದು ಕೃತಿ ಹೇಗೆ ಎಲ್ಲ ತೆರದಲ್ಲಿ ತನ್ನ ಒಳ ಎಚ್ಚರವನ್ನು ಅಭಿವ್ಯಕ್ತಿಸಿದೆ? ಅದರ ಚರ್ಚೆಯು ಯಾವ್ಯಾವ ನೆಲೆಗಳಿಗೆ ವಿಸ್ತಾರಗೊಳ್ಳಬಲ್ಲದು? ಕನ್ನಡ ಪ್ರಜ್ಞೆಯನ್ನು ಇದು ರೂಪಿಸಿದ ಬಗೆ ಎಂಥದ್ದು? ಎಂಬುದು ನನಗಂತೂ ಅತ್ಯಾಸಕ್ತಿಯ ವಿಷಯ.ಕನ್ನಡಿಗರು ಇಂಥ ಚರ್ಚೆಗಳಲ್ಲಿ ತೊಡಗುವಂತಾದರೆ  ಒಳ್ಳೆಯದು. ಕನ್ನಡದ ಯಾವ ಅನುಭವ ಲೋಕ ಇನ್ನೂ ಮರೆಯಲ್ಲೇ ಉಳಿದಿದೆ? ಅದು ಸಾಹಿತ್ಯದ ಅಥವಾ ಶಾಸ್ತ್ರದ ತಿಳಿವಳಿಕೆಯಾಗಿ ಬರಲು ಇರುವ ತೊಡಕುಗಳೇನು? ಕನ್ನಡ ಸಾಹಿತ್ಯದ ಈ ಹೊತ್ತಿನ ಸ್ಪಂದನೆ ಏನು? ಕನ್ನಡ ಸಾಹಿತ್ಯದಲ್ಲಿ ಭಾಷೆಯ ಸಾಧ್ಯತೆಗಳು ಚಪ್ಪಟೆಯಾಗಿವೆಯೇ? ಹಲವು ಕನ್ನಡಂಗಳು ಅನುಭವಲೋಕದಲ್ಲಿ ಮೈದಾಳಲು ಇರುವ ಹಿಂಜರಿಕೆಗಳೇನು? ಎನ್ನುವುದನ್ನು ಸಮ್ಮೇಳನದಲ್ಲಿ ಶೋಧಿಸುವಂತಾಗಬೇಕು.ಕನ್ನಡದಲ್ಲಿ ಬೇರೆ ಭಾಷೆಯ ಕೃತಿಗಳು ಅನುವಾದಗೊಳ್ಳುತ್ತಿವೆ. ಕನ್ನಡ ಕೃತಿಗಳು ಬೇರೆ ಭಾಷೆಗೆ ಯಾವ ಪ್ರಮಾಣದಲ್ಲಿ ಅನುವಾದ ಗೊಳ್ಳುತ್ತಿವೆ? ಕನ್ನಡದ ಕೆಲವೇ ಕೃತಿಗಳು ಯಾಕೆ ಮತ್ತೆ ಮತ್ತೆ ಅನುವಾದಗೊಂಡಿವೆ? ಕನ್ನಡದ ಮುಖ್ಯ ಕೃತಿಗಳನ್ನು ಮರುಪ್ರಕಟಿಸುವುದರ ಜೊತೆಗೆ ಅವುಗಳನ್ನು ಇತರ ಭಾಷೆಗಳಿಗೆ ಅನುವಾದ­ಗೊಳಿಸುವ ದೊಡ್ಡ ಯೋಜನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಹಾಕಿಕೊಳ್ಳಬೇಕು. ಇದಕ್ಕಾಗಿ ಒಂದುಮಟ್ಟಿಗಿನ ಚರ್ಚೆ ಸಮ್ಮೇಳನದಲ್ಲಾದರೆ ತಪ್ಪಲ್ಲ. ಇದು ಕಾಲದ ಅಗತ್ಯ. ಕನ್ನಡ ಪ್ರಜ್ಞೆ ವಿಶ್ವಪ್ರಜ್ಞೆಯ ಜೊತೆ ಕೂಡಿಕೊಳ್ಳುವ, ಬೆಳೆಸುವ ಅವಕಾಶವನ್ನು ಕನ್ನಡಿಗರು ತಪ್ಪಿಸಿಕೊಳ್ಳಬಾರದು.ಕರ್ನಾಟಕದಲ್ಲಿರುವ ಹಲವು ವಿಶ್ವವಿದ್ಯಾ­ಲಯಗಳಲ್ಲಿ ಕನ್ನಡ ವಿಭಾಗಗಳಿವೆ. ಪ್ರತ್ಯೇಕವಾಗಿ ಕನ್ನಡ ವಿಶ್ವವಿದ್ಯಾಲಯವಿದೆ. ಇವುಗಳ ಚಟುವಟಿಕೆ, ಸಾಧಕ-ಬಾಧಕಗಳ ಕುರಿತು ನಿರ್ಭಿಡೆಯ ಚರ್ಚೆ­ಯಾಗಬೇಕು. ಕನ್ನಡ ಸಾಹಿತ್ಯ ಸಂಸ್ಕೃತಿಯ ಕಲಿಕೆ ಮತ್ತು ಸಂಶೋಧನೆಯ ಭಾಗವಾಗಿರುವ ಇವುಗಳ ಮೌಲ್ಯಮಾಪನಕ್ಕೆ ಸಮ್ಮೇಳನದ ವೇದಿಕೆ­ಯಲ್ಲಿ ಅವಕಾಶ ಕಲ್ಪಿಸುವುದು ತಪ್ಪಲ್ಲ. ಕನ್ನಡ ವಿಭಾಗಗಳ ಅವಸಾನವೋ, ಬೆಳವಣಿಗೆಯೋ, ಪುನರ್ ನಿರ್ಮಾಣದ ಪರಿಕಲ್ಪನೆಯೋ ವ್ಯಕ್ತಿಗತ ನೆಲೆಯನ್ನು ಮೀರಿ ಚರ್ಚಿಸುವಂತಾಗಬೇಕು. ಕನ್ನಡದ ಹಲವು ತಲೆಮಾರುಗಳು ಇಲ್ಲಿ ಕಲಿಯುವುದರಿಂದ ಇವುಗಳ ಆರೋಗ್ಯ ಕುರಿತು ಚಿಂತನೆ ನಡೆಯಲಿ. ಇದನ್ನು ತಿಳಿದುಕೊಳ್ಳುವುದು ಕನ್ನಡಿಗರ ಹಕ್ಕು. ಇವುಗಳ ಉಸಾಬರಿ ನಮಗೇಕೆ ಅಂತ ಸುಮ್ಮನಿದ್ದರೆ ಅದು ಬೇಜವಾಬ್ದಾರಿ.ಕನ್ನಡದಲ್ಲಿ ಇತರ ಶಾಸ್ತ್ರಗಳ ಬೆಳವಣಿಗೆ ಹೇಗಿದೆ? ಸಮಾಜಶಾಸ್ತ್ರ, ಇತಿಹಾಸ, ಭಾಷಾಶಾಸ್ತ್ರ ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ತಂತ್ರಜ್ಞಾನ, ವೈದ್ಯಕೀಯ ಇತ್ಯಾದಿ. ಇವುಗಳ ನೈಜ ಚಿಂತನೆ ಕನ್ನಡದಲ್ಲಿ ನಡೆದಿದೆಯೇ? ಬರೀ ಸಾಹಿತ್ಯದ ಅಭಿವ್ಯಕ್ತಿ ಸಾಧ್ಯತೆಗಳು ತೆರೆದುಕೊಂಡರೆ ಸಾಕೇ? ಜಗತ್ತಿನ ಅನೇಕ ಸಣ್ಣ ಪುಟ್ಟ ಭಾಷೆಗಳು ಇಂಥ ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಚಿಂತಿಸುತ್ತಾ, ಅವುಗಳ ತಾತ್ವಿಕತೆಯಲ್ಲಿ ಬಹುದೊಡ್ಡ ಬದಲಾವಣೆ ತರುತ್ತಿರುವುದನ್ನು ಗೆಳೆಯರಿಂದ ಕೇಳಿ ತಿಳಿದಿರುವೆ. ಇಂಥ ಕ್ಷೇತ್ರಗಳಲ್ಲಿ ಆಸಕ್ತರಾದವರು ಜಾಗತಿಕವಾಗಿ ಈ ಬೆಳವಣಿಗೆ­ಯನ್ನು ಗಮನಿಸಿ ಕನ್ನಡದಲ್ಲಿ ಇದಕ್ಕೊಂದು ದಾರಿ ತೆರೆಯುವಂತಾದರೆ ಒಳ್ಳೆಯದು. ಡಾ.ಚಂದ್ರ ಪೂಜಾರಿ, ಪ್ರೊ.ಷ.ಷಟ್ಟರ್, ಡಿ.ಎನ್.ಶಂಕರಭಟ್ಟರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕಾಣಿಸಿದ ಎಳೆಗಳು ಕನ್ನಡದಲ್ಲಿ ವಿಸ್ತಾರಗೊಳ್ಳಬೇಕಿದೆ.ಸಾಹಿತ್ಯ ಸಮ್ಮೇಳನ ಕನ್ನಡವು ಹಲವು ನಿಟ್ಟಿನಲ್ಲಿ ರೂಪುಗೊಳ್ಳಬೇಕಾದ ಮಾರ್ಗಗಳನ್ನು ಕುರಿತು ಯೋಚಿಸಲು ಮತ್ತು ಅಗೋಚರ ಒತ್ತಡವನ್ನು ಕನ್ನಡಿ ಗರಲ್ಲಿ ಮೂಡಿಸುವಂತಾದರೆ ಅದು ಸಾರ್ಥಕ ಪ್ರಯತ್ನ.ವೆಬ್‌ಸೈಟ್‌ಗೆ ಕೃತಿ

ಕೇರಳದಲ್ಲಿ ಅಲ್ಲಿನ ಸಾಹಿತ್ಯ ಅಕಾಡೆಮಿ ಒಂದೂವರೆ ಲಕ್ಷ ಕೃತಿಗಳನ್ನು ವೆಬ್‌ಸೈಟಿಗೆ ಅಳವಡಿಸಿದೆ. ಅವುಗಳನ್ನು ಎಟಿಎಂ ಮಾದರಿ­ಯಲ್ಲಿ ಕೆಲ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದು ಯಾರು ಬೇಕಾದರೂ ಅಲ್ಲಿಗೆ ಬಂದು ಓದ ಬಹುದು, ಡೌನ್‌ಲೋಡ್ ಮಾಡಿಕೊಳ್ಳ­ಬಹುದು, ಬೇಕಾದ ಪುಟಗಳನ್ನು ಮುದ್ರಿಸಿಕೊಳ್ಳ­ಬಹುದು. ಅಂದರೆ ಒಂದು ಭಾಷೆಯ ಜನ ತಮ್ಮ ಭಾಷೆಯ ಅತ್ಯುತ್ತಮ ಕೃತಿಗಳ ಒಡನಾಟ­ದಲ್ಲಿರಲು ನೆರವಾಗುವಂತೆ ಸಮ್ಮೇಳನ, ಪರಿಷತ್ತು ಯೋಚಿಸಬೇಕು. ರಾಜ್ಯದಲ್ಲಿ ಬೇಂದ್ರೆಯವರ ಕೃತಿಗಳನ್ನೇ ಕನ್ನಡಿಗರಿಗೆ ಸರಿಯಾಗಿ ತಲುಪಿಸಲು ಸಾಧ್ಯವಾಗಿಲ್ಲ. ಇದು ಕನ್ನಡದ ದುರದೃಷ್ಟ.

ಪ್ರತಿಕ್ರಿಯಿಸಿ (+)