ಗುರುವಾರ , ಮೇ 19, 2022
25 °C

ಜನತಂತ್ರದ ಜೀವಂತಿಕೆಗೆ ಸಾಂಕೇತಿಕ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಾ. ಯು.ಆರ್. ಅನಂತಮೂರ್ತಿ ಅವರ ‘ಸೆಕ್ಯುಲರ್ ಮಚ್ಚೆಯ ಪ್ರದರ್ಶನ’ (ಪ್ರ.ವಾ. ಮಾ.03) ಲೇಖನ ಓದುಗನಲ್ಲಿ ಹಲವು ಪ್ರಶ್ನೆಗಳನ್ನು ಪ್ರಚೋದಿಸಿದರೆ ಅಚ್ಚರಿಯಿಲ್ಲ. ಮರುಳಸಿದ್ದಪ್ಪನವರ (ಕೆ.ಎಂ.ಎಸ್.) ಸ್ಪರ್ಧೆ ಸಾಂಕೇತಿಕವೇ ಇರಬಹುದಾದರೂ ಅದನ್ನು ಅನಂತಮೂರ್ತಿಯವರು ‘ವೈರಿಯ ಪ್ರತಿಕೃತಿಯನ್ನು ಹೆಣದಂತೆ ಸುಡುವುದು’ ಎಂಬುದರ ಜೊತೆ ತಳಕು ಹಾಕಿರುವುದು ಸರ್ವಥಾ ಒಪ್ಪುವುದಕ್ಕೆ ಸಾಧ್ಯವಿಲ್ಲ. ಸದ್ಯದ ಸಂದರ್ಭದಲ್ಲಿ ಈ ಹೋಲಿಕೆ ಶೋಭೆ ತರುವಂಥದಲ್ಲ.ಕೆ.ಎಂ.ಎಸ್. ಅವರ ಸ್ಪರ್ಧೆಯಿಂದ, ಒಟ್ಟು ಇಂಥ ‘ಸಾಂಕೇತಿಕ ಕ್ರಿಯೆಗಳಿಂದ’ ‘ಪ್ರಭುತ್ವದ ಪಾಲಿಗೆ’ ಏನೂ ಪರಿಣಾಮ ಬೀರುವುದು ಸಾಧ್ಯವಿಲ್ಲ ಎಂದೂ ಅನಂತಮೂರ್ತಿ ಅವರ ವಾದ, ಅವರಿಗೇ ತಿಳಿದಿರುವಂತೆ, ಮತ್ತೆ ಸ್ವತಃ ತಾವೂ ಕೂಡ ಕ್ರಿಯಾಶೀಲವಾಗಿ ಭಾಗವಹಿಸುವಂತೆ, ಕೆ.ಎಂ.ಎಸ್. ಅವರು ನೂರಾರು ಪ್ರತಿಭಟನೆಗಳಲ್ಲಿ, ಧರಣಿ ಕಾರ್ಯಕ್ರಮಗಳಲ್ಲಿ, ವ್ಯವಸ್ಥೆಯ ವಿರುದ್ಧದ ಮೋರ್ಚಾಗಳಲ್ಲಿ ಭಾಗವಹಿಸಿದ್ದಾರೆ. ನೂರಾರು ಲೇಖನಗಳು, ವಾಚಕರವಾಣಿಗೆ ಪತ್ರಗಳನ್ನು ಬರೆದಿದ್ದಾರೆ. ಹಾಗಂದ ಮಾತ್ರಕ್ಕೆ ಮರುದಿನವೆ ಸೂರ್ಯನೇನು ಹೆಚ್ಚು ತಂಪಾಗುತ್ತಾನೇನು ಅಥವಾ ಗಾಳಿಯೇನು ಮತ್ತಷ್ಟು ಹಿತವಾಗಿ ಬೀಸುತ್ತದೇನು ಅಥವಾ ಯಡಿಯೂರಪ್ಪನವರೇನು ಕುರ್ಚಿ ಖಾಲಿ ಮಾಡಿ ನಡೆದುಬಿಡುತ್ತಾರೇನು? ಇದು ಯಾವುದೂ ಇಲ್ಲದಿದ್ದರೂ ನಮ್ಮ ಯತ್ನಗಳನ್ನು ನಾವು ಕೈಬಿಡುವುದಿಲ್ಲ. ಹಾಗಂದ ಮಾತ್ರಕ್ಕೆ ನಮ್ಮ ಯತ್ನಗಳು ಸಾಂಕೇತಿಕವಷ್ಟೇ ಅಲ್ಲ; ಅವು ದೃಢನಂಬಿಕೆಯ ಆಧಾರದ ಮೇಲೆ ರೂಪಿಸಿದವು. ಇಂಥ ಕ್ರಿಯೆಗಳು ವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದಕ್ಕಿಂತ ಹೆಚ್ಚಿಗೆ ಪತ್ರಿಕೆ ಓದುವ, ಸಭೆಗಳಿಗೆ ಬರುವ, ಧರಣಿಗಳಲ್ಲಿ ಭಾಗವಹಿಸುವ ನೂರಾರು ಜನಗಳ ಮನಸ್ಸಿನಲ್ಲಿ ಮೂಡಿಸುವ ಆಸೆ, ಭವಿಷ್ಯದ ಕನಸು ಮತ್ತು ವೈಯಕ್ತಿಕ ಹಾಗೂ ಸಾಮೂಹಿಕ ಅಹಿಂಸಾತ್ಮಕ ಚಳವಳಿಗಳಲ್ಲಿ ನಂಬಿಕೆ ಇವುಗಳು ಮುಖ್ಯವಾಗುತ್ತವೆ. ಹೀಗಾಗಿ ಒಂದು ಅರ್ಥದಲ್ಲಿ ಸಾಂಕೇತಿಕವಷ್ಟೇ ಆದರೂ ಅದು ನಿಶ್ಶಬ್ದ ರೀತಿಯಲ್ಲಿ ಕ್ರಿಯಾಶೀಲವಾಗಿರುತ್ತದೆ.ಸದ್ಯದ ಸಂದರ್ಭದಲ್ಲಿ ಕೆ.ಎಂ.ಎಸ್ ಅವರ ಸ್ಪರ್ಧೆ ಕೂಡ ಈ ಬಗೆಯ ಪ್ರಸ್ತುತತೆಯನ್ನೂ ಮತ್ತು ಇಂಥ ಸ್ಪರ್ಧೆಗಳ ಅವಶ್ಯಕತೆಗಳನ್ನೂ ಸ್ಥಾಪಿಸುವುದರಲ್ಲಿ ಯಶಸ್ವಿಯಾಗುತ್ತದೆ, ಕಾಂಗ್ರೆಸ್, ಜೆ.ಡಿ.ಎಸ್ ಅವರನ್ನು ಬಳಸಿಕೊಳ್ಳುತ್ತಿದ್ದಾರೋ ಇಲ್ಲವೋ, ಅಥವಾ ಅವರು ಕೇವಲ ದಾಳವಷ್ಟೇ ಹೌದೋ ಈ ಎಲ್ಲ ಪ್ರಶ್ನೆಗಳಿಗಿಂತ ಸಾಮಾನ್ಯ ಜನತೆಯ ಮೇಲೆ ಇದರ ಕುರಿತಾಗಿ ಯಾವ ರೀತಿ ಪರಿಣಾಮ ಬೀರುತ್ತದೆ ಅನ್ನುವುದು ಮುಖ್ಯ. ತತ್‌ಕ್ಷಣದಲ್ಲಿ ‘ಛೆ, ಇಂಥ ಮನುಷ್ಯ ಇಂಥ ಹೊಲಸಿನಲ್ಲಿ ಸಿಲುಕಿದರಲ್ಲ’ ಅನ್ನಿಸಬಹುದು, ‘ಸೋಲುವುದಕ್ಕೆ ಯಾಕೆ ನಿಲ್ಲಬೇಕು?’ ಎಂದೂ ಅನ್ನಿಸಬಹುದು; ಆದರೆ ನಿಧಾನದಲ್ಲಿ ಗುಪ್ತವಾಗಿ ಪ್ರಜಾಪ್ರಭುತ್ವದಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದೇ ಒಂದು ಮಹತ್ವದ ಕ್ರಿಯೆ ಎಂದು ತಿಳಿಯುತ್ತ ಹೋಗುತ್ತದೆ.ರಾಜಕೀಯ ‘ಹೊಲಸಾ’ಗಿದ್ದರೆ ಅದಕ್ಕೆ ಜವಾಬ್ದಾರರೂ ನಾವೂ ಹೌದು ಎಂದು ತಿಳಿಯುತ್ತ ಹೋಗುತ್ತದೆ. ಅಂದಮೇಲೆ ಕೆ.ಎಂ.ಎಸ್ ಅಂಥವರು, ಯು.ಆರ್. ಅನಂತಮೂರ್ತಿ ಅಂಥವರು ಸ್ಪರ್ಧಿಸಿದಾಗ ಅದು ಹತಾಶೆಯ ಅಸಹಾಯಕತೆ ಅಂಚಿನಲ್ಲಿ ನರಳುತ್ತಿರುವ ಜನಗಳ ಮನಸ್ಸಿನಲ್ಲಿ ಹೊಸ ಆಸೆ ಹುಟುವುದಕ್ಕೆ ಕಾರಣವಾಗುತ್ತದೆ ಎಂದೇ ಸಾಂಕೇತಿಕತೆಯೂ ಕ್ರಿಯಾಶೀಲ ಮಹತ್ವ ಪಡೆಯುತ್ತದೆಯೇ ಹೊರತು ಖಂಡಿತ ‘ಒಂದು ಚೇಷ್ಟೆ’ಯಾಗಿ ಕಾಣುವುದು ಸಾಧ್ಯವಿಲ್ಲ. ನಾನು ಯತ್ನಿಸಿದ್ದೆಲ್ಲ ಯಶಸ್ವಿಯಾಗಲೇಬೇಕು ಎಂಬ ಹಟವಿದ್ದವರು ಏನನ್ನೂ ಯತ್ನಿಸಲಾರ, ಒಂದು ಹೆಜ್ಜೆ ಕೂಡ ಮುಂದಿಡಲಾರ. ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಂತೂ ದಿನನಿತ್ಯದ ಯತ್ನಗಳು, ಯೋಜನೆಗಳು, ಕಾರ್ಯನೀತಿಗಳು ಇವುಗಳನ್ನು ರೂಪಿಸಿಕೊಳ್ಳುತ್ತಿದ್ದರೂ ದುರದೃಷ್ಟವಶಾತ್ ಸಾಧಿಸಲಾಗುವುದು ನೂರಕ್ಕೆ ಹತ್ತರಷ್ಟು, ಐದರಷ್ಟು, ಅಷ್ಟೆ. ಹಾಗೆಂದು ನಮ್ಮ ಯತ್ನಗಳನ್ನು ಕೈಬಿಡಲಾಗುವುದಿಲ್ಲ, ಬಿಡುವುದಿಲ್ಲ.ಕೆ.ಎಂ.ಎಸ್ ಅವರಿಗೆ ಸಿಕ್ಕ ಅವಕಾಶ ಯಾರಿಗೇ ಸಿಕ್ಕರೂ ಅದನ್ನು ಜಯ-ಅಪಜಯ, ಸಾರ್ಥಕ-ವ್ಯರ್ಥ ಲೆಕ್ಕಾಚಾರದಲ್ಲಿ ಆಲೋಚಿಸುವುದೇ ತಪ್ಪು. ಪ್ರಜಾತಂತ್ರದ ವ್ಯವಸ್ಥೆಯಲ್ಲಿ ರಾಜಕೀಯದಲ್ಲಿ ಭಾಗವಹಿಸದಷ್ಟು ಯಾರೂ ದೊಡ್ಡವರಲ್ಲ, ಯಾರೂ ಅತಿ ಪವಿತ್ರರೂ ಅಲ್ಲ.ಪ್ರಜಾತಂತ್ರದಲ್ಲಿ ಪ್ರತಿಯೊಂದು ನಡೆ-ನುಡಿ, ಕ್ರಿಯೆಗಳೂ ರಾಜಕೀಯವೇ ಕವನ ರಚನೆಯೂ ಸೇರಿದ ಹಾಗೆ ಪ್ರತಿ ಸ್ಪಷ್ಟ್ಯಾತ್ಮಕ ಕ್ರಿಯೆಯೂ ರಾಜಕೀಯವೇ, ಜ.ಹೋ ನಾರಾಯಣಸ್ವಾಮಿಯವರು ಕೇಳಿದ ಪ್ರಶ್ನೆ ‘ಸಾಹಿತಿಗಳೋ, ರಾಜಕಾರಣಿಗಳೋ’ ತೀರ ಅಪ್ರಸ್ತುತ ಹಾಗೂ ಪ್ರಜಾತಂತ್ರ ವಿರೋಧಿ ಪ್ರಶ್ನೆ, ಸಾಹಿತಿಯನ್ನು ದಂತಗೋಪುರದ ಗೊಂಬೆಯಾಗಿ ಕೂರಿಸಲು ಸಾಧ್ಯವಿಲ್ಲ. ಹಾಗೆ ಕೂತು ರಚಿಸಿದ ಅವನ ಸಾಹಿತ್ಯ ಎಳ್ಳುಕಾಳಿನಷ್ಟು ಬೆಲೆಯುಳ್ಳದ್ದಲ್ಲ.ಅನಂತಮೂರ್ತಿಯವರು ಗಾಂಧೀಜಿಯವರ ಉದಾಹರಣೆ ಕೊಟ್ಟಿದ್ದಾರೆ. ಗಾಂಧೀಜಿಯವರು ‘ಒಂದು ಹಿಡಿಯುಪ್ಪನ್ನು ಹಿಡಿದು ಮುಷ್ಟಿಯನ್ನು ಮೇಲಕ್ಕೆತ್ತುವ ಘಳಿಗೆಯೇ’ ಭಾರತ ಸ್ವತಂತ್ರವಾದುದು ಎಂದಿದ್ದಾರೆ. ಇದಕ್ಕೆ ನನ್ನ ಭಿನ್ನವಾದ ನಿಲುವಿದೆ. ಉಪ್ಪಿನ ಸತ್ಯಾಗ್ರಹದ ವೇಳೆಗಾಗಲೇ ಗಾಂಧೀಜಿಯವರು ‘ಮಹಾತ್ಮ’ರೆನಿಸಿಕೊಂಡಿದ್ದರು. ಸಾವಿರಾರು ಜನ ಅವರನ್ನು ನಾಯಕರೆಂದು ಒಪ್ಪಿಯಾಗಿತ್ತು.ಅಂತರ್ರಾಷ್ಟ್ರೀಯ ಮನ್ನಣೆ ಸಿಕ್ಕಿಯೂ ಆಗಿತ್ತು, ಆಗಿನ ಅವರ ಸತ್ಯಾಗ್ರಹಕ್ಕಿಂತ ನನಗೆ ಮತ್ತೂ ಮಹತ್ವದ್ದು ಮತ್ತು ಅತ್ಯಂತ ದಿಟ್ಟ, ಬದ್ಧ ಕ್ರಿಯೆಯೂ ಅನ್ನಿಸುವುದು 1893 ರಲ್ಲಿ ಅವರು 24 ವರ್ಷದ ಯುವಕರಾಗಿದ್ದಾಗ ದಕ್ಷಿಣ ಆಫ್ರಿಕಾದಲ್ಲಿ ನಡುರಾತ್ರಿಯಲ್ಲಿ ರೈಲಿನ ಮೊದಲ ದರ್ಜೆ ಬೋಗಿಯಿಂದ ಹೊರದೂಕಿಸಿಕೊಂಡರಲ್ಲ ಅದು. ಕೇವಲ ಮೋಹನದಾಸ ಕರಮಚಂದ್ ಗಾಂಧಿ ಅಷ್ಟೇ ಆಗಿದ್ದವರು. ನೌಕರಿಗಾಗಿ ಹೋಗಿದ್ದವರು. ಹೆಂಡತಿ ಮಕ್ಕಳನ್ನು ಸಾಕುವ ಜವಾಬ್ದಾರಿ ಹೊತ್ತಿದ್ದವರು. ಯಾವುದೋ ಪರದೇಶ. ತನಗೆ ಪರಿಚಯವಿಲ್ಲದ ಆ ದೇಶದ ಕಾನೂನು. ಆದರೆ ಈ ಕಾನೂನು ಅಮಾನವೀಯ, ಕ್ರೂರ ಹಾಗೂ ಮನುಷ್ಯನ ವ್ಯಕ್ತಿತ್ವಕ್ಕೆ ಮಾಡಿದ ಘೋರ ಅವಮಾನ ಎಂದು ತಿಳಿದ ಕೂಡಲೇ ತಮ್ಮ ತತ್‌ಕ್ಷಣದ ವೈಯಕ್ತಿಕ ತುರ್ತುಗಳನ್ನೆಲ್ಲ ಮರೆತು ಒಬ್ಬ ಮನುಷ್ಯನಾಗಿ ದಿಟ್ಟತನದಿಂದ ಈ ಕಾನೂನನ್ನು ಪ್ರತಿಭಟಿಸಿ ಧಿಕ್ಕರಿಸಿ ಇಡೀ ಮನುಷ್ಯಕುಲದ ಘನತೆಗೆ, ಸ್ವತಂತ್ರಶೀಲತೆಗಳ ಸ್ಥಾಪನೆಗೆ ಅದ್ಭುತ ನಾಂದಿ ಹಾಡಿದರು. ಇದು ಭಾರತದ ಸ್ವಾತಂತ್ರ್ಯದ ಕಹಳೆಯಷ್ಟೇ ಅಲ್ಲ, ಇಡೀ ಜಗತ್ತಿನ ಎಲ್ಲ ಶೋಷಿತ ಜನಾಂಗಗಳದ್ದೂ ಹೌದು. ಹಾಗಂದ ಮಾತ್ರಕ್ಕೆ ಮಾರನೆ ದಿನವೇ ದಕ್ಷಿಣ ಆಫ್ರಿಕಾ ದೇಶದ ಕಣ್ಣು ತೆರೆಸಿಬಿಟ್ಟರೆ? ಹಾಗೆ ನಿರೀಕ್ಷಿಸುವುದೂ ತರ್ಕಸಮ್ಮತವೇ.ಮತ್ತೆ ಅನಂತಮೂರ್ತಿ ಅವರು ದೇವೇಗೌಡರಿಗೆ ಅವರ ಬಿ.ಜೆ.ಪಿ. ಪರದ ವಕಾಲತ್ತನ್ನು ಪ್ರತಿಭಟಿಸುವುದು ಚುನಾವಣೆಗೆ ನಿಂತೇ ಮಾಡಬೇಕಾದ್ದೇನಿರಲಿಲ್ಲ. ಅದಕ್ಕೂ ಮೊದಲು ಅವರು ವಿರೋಧಿಸಿದ್ದರು. ಚುನಾವಣೆಗೆ ನಿಂತು ವಿರೋಧಿಸಿದ್ದು ತಮ್ಮ ಸ್ವದೇಶಿ ಮಹತ್ವ ತಂದುಕೊಟ್ಟಿತು, ಅಂಥದ್ದೇನೂ ಸಂದರ್ಭವಿಲ್ಲದ ಕೆ.ಎಂ.ಎಸ್ ಅವರ ಸ್ಪರ್ಧೆ ಕೇವಲ ರಾಜಕೀಯ ಪಕ್ಷಗಳ ಸ್ವಾರ್ಥದ ಕ್ರಿಯೆಗಳು ಎಂದು ಹೇಳುವುದು ದಿಢೀರ್ ವ್ಯಾಖ್ಯಾನವಾಗುತ್ತದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.