ಭಾನುವಾರ, ಜೂನ್ 20, 2021
26 °C

ಜನಮುಖಿ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ

–ಆರ್.ಕೆ. Updated:

ಅಕ್ಷರ ಗಾತ್ರ : | |

ಹೊಸೂರು ವಾಸಿ ಚಾಲಕನೊಬ್ಬ  ರಸ್ತೆಯಲ್ಲಿ ಹೋಗುವಾಗ ಅಪಘಾತವಾಗುತ್ತದೆ. ಆತ ಚಿಕಿತ್ಸೆಗಾಗಿ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲಾಗುತ್ತಾನೆ. ಕಾಲುಗಳನ್ನು ಆಪರೇಷನ್‌ ಮೂಲಕ ಸರಿಪಡಿಸಲು ರೂ.30ರಿಂದ ರೂ.40 ಸಾವಿರ ಖರ್ಚಾಗಬಹುದೆಂದು ವೈದ್ಯರು ಹೇಳುತ್ತಾರೆ. ಆತ ರೂ.40 ಸಾವಿರ ಹೊಂದಿಸಬಹುದೆಂಬ ಭರವಸೆಯೊಂದಿಗೆ ಆಪರೇಷನ್ನಿಗೆ ಒಪ್ಪಿಗೆ ಸೂಚಿಸುತ್ತಾನೆ. ಆದರೆ ಒಂದು ಫ್ಯಾಕ್ಚರ್‌ ಇದ್ದದ್ದು ಎರಡು ಫ್ಯಾಕ್ಚರ್‌ ಆಗಿ ಆಪರೇಷನ್ನಿಗೆ ರೂ.1.20 ಲಕ್ಷ ಪಾವತಿಸಬೇಕಾಗಿ ಬರುತ್ತದೆ. ಆತ ಪರಿಚಯವಿದ್ದವರ ಬಳಿ ಅಷ್ಟೋ ಇಷ್ಟೋ ಹಣವನ್ನು ಕೂಡಿಸಿದರೂ ಆಸ್ಪತ್ರೆ ಬಿಲ್‌ನಷ್ಟು ಹಣ ಸಂಗ್ರಹಿಸುವಲ್ಲಿ ವಿಫಲನಾಗುತ್ತಾನೆ. ದಿಕ್ಕು ತೋಚದೆ ಕಂಗಾಲಾದ ಆತ ಸಾಯುವ ನಿರ್ಧಾರಕ್ಕೂ ಬರುತ್ತಾನೆ. ಈತನ ಕಷ್ಟ ನೋಡಿದ ಅಲ್ಲಿನ ವೈದ್ಯರೊಬ್ಬರು ತಮ್ಮ ಹಣದಿಂದಲೇ ಆತನ ಆಪರೇಷನ್ನಿನ ಹಣವನ್ನು ಪಾವತಿಸುತ್ತಾರೆ. ಕಷ್ಟದಲ್ಲಿದ್ದ ಚಾಲಕನ ನೆರವಿಗೆ ಬಂದ ವೈದ್ಯ ಡಾ. ಚಂದ್ರಶೇಖರ ಚಿಕ್ಕಮುನಿಯಪ್ಪ (ಮೂಳೆ ತಜ್ಞ).ಇಂಥ ಅನೇಕ ಘಟನೆಗಳು ಮಹಾನಗರದಲ್ಲಿ ನಿತ್ಯವೂ ನಡೆಯುತ್ತಲೇ ಇರುತ್ತವೆ. ಅಪಘಾತಗಳಿಂದ ಜೀವ ಕಳೆದುಕೊಳ್ಳುವ ಜನ ಒಂದೆಡೆಯಾದರೆ, ಕೈಕಾಲುಗಳನ್ನು ಕಳೆದುಕೊಂಡು ಶಾಶ್ವತವಾಗಿ ಅಂಗವಿಕಲರಾಗುವವರೂ ಇದ್ದಾರೆ. ದುಬಾರಿ ಹಣ ನೀಡಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲಾಗದವರೂ ನೋವುಂಡು ಸುಮ್ಮನಾಗುತ್ತಾರೆ. ಇಂಥ ಸಾಮಾನ್ಯ ವರ್ಗದ ಜನರಿಗಾಗಿ ಆರಂಭವಾದ ಆಸ್ಪತ್ರೆಯೇ ‘ಪೀಪಲ್‌ ಟ್ರೀ ಹಾಸ್ಪಿಟಲ್ಸ್‌’.ಆಸ್ಪತ್ರೆ, ವೈದ್ಯರ ಮೇಲೆ ಜನರಲ್ಲಿ ನಂಬಿಕೆ ಕಡಿಮೆಯಾಗುತ್ತಿರುವ ದಿನವಿದು. ಇಂಥ ಸಂದರ್ಭದಲ್ಲಿ ಜನರು ಹಾಗೂ ವೈದ್ಯರ ನಡುವೆ ಸಂಬಂಧ ಸುಧಾರಿಸುವ, ಕಡಿಮೆ ವೆಚ್ಚದಲ್ಲಿ ಸೂಪರ್‌ ಸ್ಪೆಷಾಲಿಟಿ ಸೇವೆ ಒದಗಿಸುವ ಉದ್ದೇಶದಿಂದ 20 ಮಂದಿ ಸಮಾನಮನಸ್ಕ ವೈದ್ಯರು ಸೇರಿ ‘ಪೀಪಲ್‌ ಟ್ರೀ’ ಆಸ್ಪತ್ರೆಯನ್ನು ಆರಂಭಿಸಿದ್ದಾರೆ. ಆರು ತಿಂಗಳ ಹಿಂದಷ್ಟೇ ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಲ್ಲಿ ಈ ಆಸ್ಪತ್ರೆ ಕಾರ್ಯಾರಂಭ ಮಾಡಿದೆ.ಹೊಸಕೋಟೆ ತಾಲ್ಲೂಕಿನ ರಾಮಗೋವಿಂದಪುರದ ಡಾ. ಚಂದ್ರಶೇಖರ್‌ ಪ್ರೌಢ ಶಿಕ್ಷಣ ಮಾಡಿದ್ದು ತುರುವೇಕೆರೆಯಲ್ಲಿ. ಬೆಂಗಳೂರು ಮೆಡಿಕಲ್‌ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದು ಇಂಗ್ಲೆಂಡಿನಲ್ಲಿ ನಾಲ್ಕು ವರ್ಷ ವೈದ್ಯರಾಗಿ ಸೇವೆ ಸಲ್ಲಿಸಿ ಮರಳಿ ಬೆಂಗಳೂರಿಗೆ ಬಂದವರೇ ಅನೇಕ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸಿದರು. ಬಡವರು ಉತ್ತಮ ವೈದ್ಯಕೀಯ ಚಿಕಿತ್ಸೆ ಪಡೆಯುವಲ್ಲಿ ವಂಚಿತರಾಗುತ್ತಿರುವುದನ್ನು ಅರಿತು ವೈದ್ಯರನ್ನು ಒಟ್ಟುಗೂಡಿಸಿ ತಾವೇ ಒಂದು ಆಸ್ಪತ್ರೆ ಆರಂಭಿಸಲು ತೀರ್ಮಾನಿಸಿದರು. ‘ಲಾಭದ ಉದ್ದೇಶವಿಲ್ಲದೇ ಆರಂಭಿಸಿರುವ ನಮ್ಮ ಆಸ್ಪತ್ರೆಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಹೊರ ರೋಗಿಗಳ ವಿಭಾಗಕ್ಕೆ ದಿನಕ್ಕೆ ನೂರಕ್ಕೂ ಹೆಚ್ಚು ಮಂದಿ ಬರುತ್ತಿದ್ದಾರೆ. ನಮ್ಮ ಕುಟುಂಬದವರನ್ನು ನೋಡಿಕೊಳ್ಳುವ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ನಗರದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿನ ಶುಲ್ಕಕ್ಕಿಂತ ಇಲ್ಲಿ ಶೇ 30ರಿಂದ 40ರಷ್ಟು ಶುಲ್ಕ ಕಡಿಮೆಯಿದೆ. ಪ್ರತಿವಾರ ಉಚಿತ ಆರ್ಥೋಪೆಡಿಕ್ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗುತ್ತದೆ.ಒಟ್ಟಾರೆ ಎಲ್ಲಾ ವರ್ಗದ ಜನರಿಗೂ ವೈದ್ಯಕೀಯ ಸೌಲಭ್ಯ ನೀಡಬೇಕೆಂಬ ಕಾರಣಕ್ಕಾಗಿ ಆಸ್ಪತ್ರೆ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಪೀಪಲ್‌ ಟ್ರೀ ಕಲ್ಪನೆಯಲ್ಲಿ ಆಸ್ಪತ್ರೆಗಳನ್ನು ಆರಂಭಿಸಲಿದ್ದು, ಸ್ಥಳೀಯ ವೈದ್ಯರು ಆಸಕ್ತಿವಹಿಸಿ ಮುಂದೆ ಬಂದರೆ ಜಿಲ್ಲಾ ಮಟ್ಟದಲ್ಲೂ ಶಾಖೆಗಳನ್ನು ಪ್ರಾರಂಭಿಸುತ್ತೇವೆ’ ಎನ್ನುತ್ತಾರೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆದ ಡಾ. ಚಂದ್ರಶೇಖರ ಚಿಕ್ಕಮುನಿಯಪ್ಪ.ಐದು ಮಹಡಿಯ ಆಸ್ಪತ್ರೆಯಲ್ಲಿ ಮೂಳೆ, ಕೃತಕ ಕೀಲು ಜೋಡಣೆ, ಗೂನು ಬೆನ್ನಿನ ಶಸ್ತ್ರಚಿಕಿತ್ಸೆ, ಮಕ್ಕಳ ವಿಭಾಗ, ಪ್ರಸೂತಿ, ಸ್ತ್ರೀ ರೋಗ, ಭ್ರೂಣ, ನರರೋಗಶಾಸ್ತ್ರ, ಚರ್ಮ ರೋಗ, ಸೌಂದರ್ಯವರ್ಧಕ, ಕಿವಿ, ಮೂಗು ಹಾಗೂ ಗಂಟಲು ವಿಭಾಗಗಳಿವೆ. 120 ಹಾಸಿಗೆಗಳ ಸೌಲಭ್ಯವಿದೆ. ಮೂರು ಆಪರೇಷನ್‌ ಥಿಯೇಟರ್‌ಗಳಿವೆ.ಗೋಲ್ಡ್‌, ಪ್ಲಾಟಿನಂ ಕಾರ್ಡ್

ಬಡವರು ಹಾಗೂ ಮಧ್ಯಮ ವರ್ಗದವರನ್ನು ಗುರಿಯಾಗಿಸಿಕೊಂಡು ಗೋಲ್ಡ್‌ ಹಾಗೂ ಪ್ಲಾಟಿನಂ ಕಾರ್ಡ್‌ ಸೌಲಭ್ಯವನ್ನು ಕಲ್ಪಿಸಿದ್ದಾರೆ. ಒಂದು ಸಾವಿರ ರೂಪಾಯಿಗೆ ಪ್ಲಾಟಿನಂ ಕಾರ್ಡ್‌ ದೊರೆಯುತ್ತದೆ. ಕುಟುಂಬದ ಆರು ಮಂದಿ 12 ಬಾರಿ ಚಿಕಿತ್ಸೆ ಪಡೆಯಬಹುದು. ಲ್ಯಾಬ್‌ ಶುಲ್ಕದಲ್ಲಿ 10 ರಷ್ಟು ರಿಯಾಯಿತಿ ಇರುತ್ತದೆ. ಐದು ನೂರು ರೂಪಾಯಿ ಪಾವತಿಸಿ ಗೋಲ್ಡ್‌ ಕಾರ್ಡ್‌ ಪಡೆದರೆ 6 ಬಾರಿ ಚಿಕಿತ್ಸೆ ಪಡೆಯಬಹುದು. ಈ ಎರಡೂ ಸೇವೆಯಲ್ಲಿ ವೈದ್ಯರ ಸೇವಾ ಶುಲ್ಕ ಮಾತ್ರ ಉಚಿತವಾಗಿರುತ್ತದೆ.

ಮಾಹಿತಿಗೆ: 99000 91881

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.