ಬುಧವಾರ, ಮೇ 18, 2022
27 °C

ಜಮೀನಿನಲ್ಲಿ ಶವ ಸಂಸ್ಕಾರ: ವಿವಾದಕ್ಕೆ ತೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಾ: ತಾಲ್ಲೂಕಿನ ಪಟ್ಟನಾಯಕನಹಳ್ಳಿಯ ಧಾರ್ಮಿಕ ಸ್ಥಳದಲ್ಲಿ ಶವ ಹೂಳುವುದಾಗಿ ಪಟ್ಟು ಹಿಡಿದು ಜಾತಿ ಸಂಘರ್ಷಕ್ಕೆ ಕಾರಣವಾಗಿದ್ದ ಪ್ರಕರಣ ಅಂತ್ಯ ಕಂಡಿದೆ. ಮೃತರ ಸಂಬಂಧಿಕರ ಜಮೀನಿನಲ್ಲಿ ಮಂಗಳವಾರ ಮಧ್ಯಾಹ್ನ ಶವ ಸಂಸ್ಕಾರ ನೆರವೇರಿತು.ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಸ್ಥಳಕ್ಕೆ ಆಗಮಿಸಿ ಸ್ವತಃ ಶವ ಎತ್ತಿ ಪೊಲೀಸರ ಸಹಾಯದಿಂದ ಮಠಕ್ಕೆ ಸುಮಾರು ಅರ್ಧ ಕಿ.ಮೀ. ದೂರದ ಖಾಸಗಿ ಜಮೀನಿಗೆ ಮೃತ ದೇಹ ಸಾಗಿಸಿದರು. ಅಲ್ಲಿ ಜೆಸಿಬಿಯಿಂದ ಗುಂಡಿ ತೆಗೆದು ಮೃತರ ಸಂಬಂಧಿಕರ ಸಮ್ಮುಖದಲ್ಲಿಯೇ ಸಂಸ್ಕಾರ ನಡೆಸಿದರು.`ತಮ್ಮ ಪೂರ್ವಿಕರು ಗುರುಗುಂಡ ಬ್ರಹ್ಮೇಶ್ವರ ಮಠಕ್ಕೆ ಜಮೀನು ದಾನ ನೀಡಿದ್ದು, ಮಠದ ಆವರಣದಲ್ಲಿಯೇ ಶವ ಹೂಳಲು ಅವಕಾಶ ನೀಡಬೇಕು' ಎಂದು ಪಟ್ಟು ಹಿಡಿದಿದ್ದ ಮೃತರ ಸಂಬಂಧಿಕ ಮಹಿಳೆಯರು ಶವ ಸಂಸ್ಕಾರದ ವೇಳೆ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹಾಗೂ ಪೊಲೀಸರನ್ನು ನಿಂದಿಸಿದರು.ಶವ ಸಂಸ್ಕಾರಕ್ಕೂ ಮೊದಲು ವಿವಾದಕ್ಕೆ ಸಂಬಂಧಿಸಿದಂತೆ ಒಕ್ಕಲಿಗ, ಕುರುಬ ಸಮಾಜದ ಮುಖಂಡರ ಜತೆ ಜಿಲ್ಲಾಧಿಕಾರಿ ಸತ್ಯಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ ಗುಪ್ತ ಸಂಧಾನದ ಮಾತುಕತೆ ನಡೆಸಿದರು.ಈ ವೇಳೆ ಕುರುಬ ಸಮಾಜದ ಮುಖಂಡರು, ನಮ್ಮ ಪೂರ್ವಿಕರ ಸಮಾಧಿಗಳೆಂದು ಹೇಳಲಾಗುವ ಸ್ಥಳದಲ್ಲಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡಬೇಕು. ಇಲ್ಲವೆ ಮಠದ ಆವರಣದಲ್ಲಿ ಪರ್ಯಾಯ ಜಾಗ ನೀಡಬೇಕು ಎಂದು ಪಟ್ಟು ಹಿಡಿದರು.ಇದಕ್ಕೆ ಮಠದ ಭಕ್ತ ಮಂಡಳಿ ಪ್ರತಿಕ್ರಿಯಿಸಿ, ಮಠದ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ ಪ್ರಕರಣ ಹಿಂಪಡೆದರೆ ಮಾತ್ರ ಪರ್ಯಾಯ ಜಾಗ ನೀಡುವ ಬಗ್ಗೆ ಚಿಂತಿಸುವುದಾಗಿ ಹೇಳಿದರು ಎನ್ನಲಾಗಿದೆ.ಸಂಧಾನ ವಿಫಲವಾದ ಕಾರಣ, ಜಿಲ್ಲಾಧಿಕಾರಿ ಸತ್ಯಮೂರ್ತಿ ಮೃತ ಜಯಮ್ಮ ಸಂಬಂಧಿಕರಿಗೆ `ಮಧ್ಯಾಹ್ನ 1 ಗಂಟೆಯೊಳಗೆ ಅಂತ್ಯಸಂಸ್ಕಾರ ನಡೆಸಬೇಕು. ಇಲ್ಲದಿದ್ದರೆ ಮೃತ ದೇಹದ ವಾಸನೆ ಹಲವು ರೀತಿಯ ಸಂಕ್ರಾಮಿಕ ರೋಗಗಳಿಗೆ ಕಾರಣವಾಗಿ ಕಿರಿಕಿರಿಯಾಗಲಿದೆ' ಎಂದು ಎಚ್ಚರಿಸಿದರು.ಇದಕ್ಕೆ ಸಮ್ಮತಿಸಿ ಒಂದು ಗಂಟೆಯೊಳಗೆ ತೀರ್ಮಾನಕ್ಕೆ ಬರಬೇಕು. ಇಲ್ಲವೇ ಕಾನೂನು ರೀತಿ ಕ್ರಮ ಜರುಗಿಸುವುದಾಗಿ ಎಚ್ಚರಿಸಿ ಮೃತರ ಕುಟುಂಬದವರಿಗೆ ತುರ್ತು ನೋಟಿಸ್ ಜಾರಿಗೊಳಿಸಿದ್ದರು.ಆಗ ಮೃತರ ಸಂಬಂಧಿಕರು ತಮ್ಮ ಸಂಬಂಧಿಕರ ಜಮೀನಿನಲ್ಲಿ ಅಂತ್ಯ ಸಂಸ್ಕಾರಕ್ಕೆ ಜಾಗ ನಿಗದಿಗೊಳಿಸಿದರು. ಗಡುವು ಮುಗಿದ ಕೂಡಲೇ ಶವದ ಬಳಿಗೆ ಬಂದ ಜಿಲ್ಲಾಧಿಕಾರಿ ಸತ್ಯಮೂರ್ತಿ ಮೃತ ದೇಹವನ್ನು ಪೊಲೀಸರ ನೆರವಿನೊಂದಿಗೆ ಅಂತ್ಯ ಸಂಸ್ಕಾರ ಸ್ಥಳಕ್ಕೆ ಸಾಗಿಸಿದರು.ಇದೇ ವೇಳೆ ವಿವಾದಕ್ಕೆ ಸಂಬಂಧಿಸಿದಂತೆ ಜುಲೈ 17ರಂದು ಎರಡು ಸಮಾಜದ ಮುಖಂಡರ ಸಭೆ ಕರೆದು ಚರ್ಚಿಸುವ ಭರವಸೆ ನೀಡಿದರು.ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ 144ರ ಕಲಂ ಅನ್ವಯ ನಿಷೇಧಾಜ್ಞೆ ಜಾರಿಯಿದೆ. ಪರಿಸ್ಥಿತಿ ಅವಲೋಕಿಸಿ ನಿಷೇಧಾಜ್ಞೆ ತೆರವುಗೊಳಿಸಲಾಗುವುದು ಎಂದು ಎಸ್‌ಪಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.