ಗುರುವಾರ , ಮೇ 6, 2021
26 °C
ಪ್ರಜಾವಾಣಿ ಸಂದರ್ಶನ

ಜಲ್-ಜನ್ ಜೋಡೊ...

ಸಂದರ್ಶನ: ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

`ಚೆಕ್ ಡ್ಯಾಂಗೆ ಜನ್ಮ ನೀಡುವ ಗಡ್ಡದ ವ್ಯಕ್ತಿ' ಎಂದೇ ರಾಜಸ್ತಾನದ ತುಂಬಾ ಮನೆಮಾತಾದ ರಾಜೇಂದ್ರ ಸಿಂಗ್, ಪರಿಸರದ ಆರೋಗ್ಯಕ್ಕೆ ಮಿಡಿಯುತ್ತಿರುವ ಆಯುರ್ವೇದ ವೈದ್ಯ. ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರಾದ ಈ ಆಧುನಿಕ ಭಗೀರಥ ಈಗ ಜಲ್-ಜನ್ ಜೋಡೊ ಯಾತ್ರೆ ಆರಂಭಿಸಿದ್ದಾರೆ. ಬೆಂಗಳೂರಿಗೆ ಆಗಮಿಸಿದ್ದ ಅವರು `ಪ್ರಜಾವಾಣಿ' ಜತೆ ಮಾತಿಗೆ ಸಿಕ್ಕಾಗ...*`ಭಾರತದ ಜಲ ಪುರುಷ' ಎಂದು ಹೆಸರಾದವರು ನೀವು. ಈ ಕೀರ್ತಿಗೆ ಕಾರಣವಾಗಿದ್ದು ತಾವು ರಾಜಸ್ತಾನದಲ್ಲಿ ಸದ್ದಿಲ್ಲದೆ ನಡೆಸಿದ ಜಲಕ್ರಾಂತಿ. ಮರುಭೂಮಿಯಲ್ಲಿ ಗಂಗೆಯನ್ನು ಕರೆತಂದದ್ದು ಹೇಗೆ?ನೀರಿಲ್ಲದೆ ಯಾವ ಪ್ರಗತಿಯೂ ಸಾಧ್ಯವಿಲ್ಲ. ಆದರೆ, ರಾಜಸ್ತಾನದ ಅರಾವಲಿ ಪರ್ವತ ಶ್ರೇಣಿಯ ಕುಗ್ರಾಮಗಳಲ್ಲಿ ನೀರಿನ ಸುಳಿವೇ ಇರಲಿಲ್ಲ. ಥಾರ್ ಮರುಭೂಮಿಗೆ ಹತ್ತಿರವಾದ ಈ ಪ್ರದೇಶದ ಮೇಲೆ ವರುಣ ಮತ್ತು ಸೂರ್ಯ ಇಬ್ಬರಿಗೂ ಅತಿಯಾದ ಪ್ರೀತಿ. ಹೀಗಾಗಿ ಇಲ್ಲಿಯ ಭೂಮಿ ಮಳೆ ಹನಿಗಳ ಮುಖ ನೋಡುವುದೇ ಅಪರೂಪ. ಬಿದ್ದ ಮಳೆ ನೀರೂ ಪ್ರಖರ ಬಿಸಿಲಿಗೆ ಬಹುಬೇಗ ಆವಿಯಾಗಿ ಬಿಡುತ್ತದೆ.ಜನರಿಗೆ ನೀರು ಪೂರೈಸಲಾಗದೆ ನಿತ್ರಾಣಗೊಂಡು ಮಲಗಿದ್ದ ಚೆಕ್‌ಡ್ಯಾಂ (ಜೋಹಡ್), ಕೆರೆ, ತೊರೆ ಮತ್ತು ನದಿಗಳಿಗೆ ಮರುಜನ್ಮ ನೀಡುವ ಉದ್ದೇಶದಿಂದ ತರುಣ ಭಾರತ ಸಂಘ ಕಟ್ಟಿದೆವು. ನಮ್ಮ ತಂಡ ಅರಾವಲಿ ಕುಗ್ರಾಮಗಳಿಗೆ ಭೇಟಿ ನೀಡಿದಾಗ ಅಲ್ಲಿ ಹೆಚ್ಚಾಗಿ ನೆಲೆಸಿದ್ದ ಗುಜ್ಜರು ಹಾಗೂ ಬುಡಕಟ್ಟು ಜನಾಂಗದ ಮೀನಾಗಳು ನಮ್ಮನ್ನು ಮಕ್ಕಳ ಕಳ್ಳರು ಎಂದು ಭಾವಿಸಿ ಉದ್ವಿಗ್ನಗೊಂಡಿದ್ದರು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ವರ್ಷಗಳೇ ಬೇಕಾದವು.ಅಲ್ವರ್ ಜಿಲ್ಲೆಯ ಪುಟ್ಟ ಹಳ್ಳಿ ಗೋಪಾಲಪುರದ ಮೂಲಕ ನಮ್ಮ ಮೌನಕ್ರಾಂತಿ ಶುರುವಾಯಿತು. ನೀರಿನ ಸುಳಿವೇ ಇಲ್ಲದ ಕಾರಣ `ಡಾರ್ಕ್ ಝೋನ್' ಎಂಬ ಹಣೆಪಟ್ಟಿಯನ್ನು ಪಡೆದಿದ್ದ ಪ್ರದೇಶ ಅದು. ನೋಡ ನೋಡುತ್ತಿದ್ದಂತೆ 8,600 ಜೋಹಡ್‌ಗಳು ನಿರ್ಮಾಣವಾದವು. ಮಳೆಯಿಂದ ಬಿದ್ದ ಹನಿ ನೀರೂ ವ್ಯರ್ಥವಾಗಿ ಹರಿಯದಂತೆ ಸಂಗ್ರಹಿಸಲಾಯಿತು. ಕಡು ಬೇಸಿಗೆಯಲ್ಲೂ ಜನ ಸಿಹಿನೀರು ಕುಡಿದು ಸಂಭ್ರಮಿಸಿದರು. ಒಂದು ಗ್ರಾಮದ ಯಶೋಗಾಥೆ ಇನ್ನೊಂದು ಊರಿನ ಹುಮ್ಮಸ್ಸಿಗೆ ಪ್ರೇರಣೆಯಾಯಿತು. ಅರ್ವಾರಿ, ರೂಪ್‌ರೇಲ್, ಸಾರ್ಸಾ, ಭಗನಿ ಮತ್ತು ಜಹಜ್‌ವಾಲಿ ನದಿಗಳಲ್ಲಿ ಮತ್ತೆ ನೀರು ಉಕ್ಕಿತು.*ತರುಣ ಭಾರತ ಸಂಘದ ಒಂದೆರಡು ಯಶೋಗಾಥೆಗಳನ್ನು ಹಂಚಿಕೊಳ್ಳಬಹುದೇ?ಜೈಪುರ ಜಿಲ್ಲೆಯಲ್ಲಿ ನೀಂಬಿ ಎಂಬುದು ಪುಟ್ಟ ಊರು. ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಇತ್ತು. ಕೃಷಿ ಕನಸಿನ ಮಾತಾಗಿತ್ತು. ರೂ 50,000 ವ್ಯಯಿಸಿ ಅಲ್ಲೊಂದು ಜೋಹಡ್ ನಿರ್ಮಿಸಿದೆವು. ಈಗ ಅಲ್ಲಿನ ಗ್ರಾಮಸ್ಥರು ವಾರ್ಷಿಕ ರೂ 3 ಕೋಟಿ ಮೌಲ್ಯದ ತರಕಾರಿ ಬೆಳೆಯುತ್ತಿದ್ದಾರೆ. ಬತ್ತಿಹೋಗಿದ್ದ ಅರ್ವಾರಿ ನದಿ ಪಾತ್ರದಲ್ಲಿ ನಾವು 375 ಚೆಕ್ ಡ್ಯಾಂ ನಿರ್ಮಿಸಿದ್ದೆವು. 1986ರಲ್ಲಿ ನಡೆದ ಪವಾಡದಲ್ಲಿ ನದಿ ಮತ್ತೆ ಜೀವ ತಳೆದು ಹರಿಯತೊಡಗಿತು. ನಮ್ಮ ಕಣ್ಣುಗಳನ್ನೇ ನಾವು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. 2000ರಲ್ಲಿ ಉಕ್ಕಿ ಹರಿಯುತ್ತಿದ್ದ ಅರ್ವಾರಿ ನದಿ ದಂಡೆ ಮೇಲೆ ನಡೆದ ಜಲ ಪಂಚಾಯ್ತಿ ಸಭೆಗೆ ಆಗಿನ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಸ್ವತಃ ಆಗಮಿಸಿ ಗ್ರಾಮಸ್ಥರನ್ನು ಸನ್ಮಾನಿಸಿದ್ದರು.*ಜಲ ಜಾಗೃತಿಗಾಗಿ ತಾವು ಹಲವು ಯಾತ್ರೆಗಳನ್ನು ಕೈಗೊಂಡಿದ್ದೀರಿ...ರಾಜಸ್ತಾನದ ಯಶಸ್ಸು ಉಳಿದವರಿಗೂ ಮಾದರಿ ಆಗಬೇಕು ಎಂಬ ಉದ್ದೇಶದಿಂದ 2002ರಲ್ಲಿ ದೇಶದಾದ್ಯಂತ ರಾಷ್ಟ್ರೀಯ ಜಲ ಯಾತ್ರೆಯನ್ನು ಕೈಗೊಂಡೆ. 144 ನದಿ ಪಾತ್ರಗಳಿಗೆ ಭೇಟಿ ನೀಡಿ, ಅಲ್ಲಿನ ಜನರಿಗೆ ನೀರಿನ ಮಹತ್ವ ತಿಳಿಸಲು ಪ್ರಯತ್ನಿಸಿದೆ. `ನದಿ-ನದಿಗಳ ಜೋಡಣೆಗಿಂತ, ನದಿ-ಜನ ಜೋಡಣೆ ಅಗತ್ಯ' ಎನ್ನುವುದು ನನ್ನ ಆಗ್ರಹ. ನದಿಗಳ ಜತೆ ಜನರ ಭಾವನಾತ್ಮಕ ಸಂಬಂಧ ಬೆಸೆದರೆ ಅವುಗಳ ರಕ್ಷಣೆಗೆ ಬೇರೆ ಯಾವ ಕಾನೂನಿನ ಅಗತ್ಯವೇ ಇಲ್ಲ. ರಾಜಸ್ತಾನದಲ್ಲಿ ಅಂತಹ ಸಂಬಂಧ ಇದೀಗ ಏರ್ಪಟ್ಟಿದೆ.1986ರಿಂದಲೂ ಪ್ರತಿವರ್ಷ ಮುಂಗಾರು ಋತುವಿನಲ್ಲಿ `ಪೇಡ್ ಬಚಾವೊ, ಪೇಡ್ ಲಗಾವೊ' ಪಾದಯಾತ್ರೆ ನಡೆಸಿಕೊಂಡು ಬರಲಾಗಿದೆ. 40 ದಿನಗಳ ಕಾಲ ನಡೆಯುವ ಈ ಪಾದಯಾತ್ರೆ ರಕ್ಷಾಬಂಧನದ ದಿನ ಕೊನೆಗೊಳ್ಳುತ್ತದೆ. ಅಂದು ಗ್ರಾಮಸ್ಥರು ಮರಗಳ ರಕ್ಷಣೆಗೆ ಬದ್ಧವಾಗಿರುವ ಸಂಕೇತವಾಗಿ ಅವುಗಳಿಗೆ ರಾಖಿ ಕಟ್ಟುತ್ತಾರೆ. ಜಂಗಲ್-ಜೀವನ್ ಬಚಾವೊ, ಅರಾವಲಿ ಬಚಾವೊ ಯಾತ್ರೆಗಳೂ ನಡೆದಿವೆ. ಅರಾವಲಿ ಬಚಾವೊ ಯಾತ್ರೆ ಪರಿಣಾಮ ರಾಜಸ್ತಾನ ಸರ್ಕಾರ ಸಾವಿರ ಗಣಿಗಳನ್ನು ಬಂದ್ ಮಾಡಿತು.ಇದೀಗ ಜಲ್-ಜನ್ ಜೋಡೊ ಆಂದೋಲನ ಶುರುವಾಗಿದೆ. ನದಿಗೂ ಜನರಿಗೂ ಸಂಬಂಧ ಏರ್ಪಡಿಸಲು ಏನು ಮಾಡಬೇಕು ಎಂಬ ವಿವರವುಳ್ಳ ಪತ್ರವನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗಿದೆ. ನಮ್ಮ ಶಿಫಾರಸುಗಳನ್ನು ಉದ್ಯೋಗ ಖಾತ್ರಿ ಯೋಜನೆ ಮೂಲಕ ರಾಜ್ಯದಲ್ಲಿ ಅನುಷ್ಠಾನಕ್ಕೆ ತರುವ ಭರವಸೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ. ಪಾಟೀಲ ಅವರಿಂದ ಸಿಕ್ಕಿದೆ.*ದೇಶದ ಎಲ್ಲ ನದಿಗಳ ಇಂದಿನ ಸ್ಥಿತಿ ಕುರಿತು ಏನು ಹೇಳುತ್ತೀರಿ?ಜಗತ್ತಿನ ಬಹುತೇಕ ನಾಗರಿಕತೆಗಳು ನದಿ ದಂಡೆ ಮೇಲೇ ಬೆಳೆದಿವೆ. ಜಲಮೂಲಗಳು ಜೀವವೈವಿಧ್ಯದ ಉಳಿವಿಗೂ ಕಾರಣವಾಗಿವೆ. ನೀರಿಲ್ಲದೆ ಭೂಮಿಯೇ ಇಲ್ಲ. ಭಾರತ ಹಲವು ಶ್ರೇಷ್ಠ ನದಿಗಳ ಬೀಡು. ದುರ್ದೈವದಿಂದ ದೇಶದ ಯಾವ ನದಿ ನೀರೂ ಇಂದು ಪರಿಶುದ್ಧವಾಗಿಲ್ಲ. ನೀರಿನ ರೂಪದಲ್ಲಿ ವಿಷ ಹರಿಯುತ್ತಿದೆ. ನಗರಗಳ ಕೊಳಚೆಯನ್ನು ನೇರವಾಗಿ ಹರಿಬಿಡುವ ಮೂಲಕ ನದಿಗಳನ್ನು ಮಹಾ ಚರಂಡಿಗಳನ್ನಾಗಿ ಪರಿವರ್ತಿಸಿದ್ದೇವೆ. ನದಿ ಪಾತ್ರಗಳಲ್ಲಿಯೇ ಅಭಿವೃದ್ಧಿ ಸೌಧ ಕಟ್ಟುವ ಮೂಲಕ ಅವುಗಳನ್ನು ಕತ್ತು ಹಿಚುಕಿ ಕೊಂದಿದ್ದೇವೆ. ಕರ್ನಾಟಕದ ಅರ್ಕಾವತಿ, ಕುಮುದ್ವತಿ ಮತ್ತು ವೃಷಭಾವತಿ ನದಿಗಳ ಉದಾಹರಣೆ ಕಣ್ಣ ಮುಂದೆಯೇ ಇದೆ.*ಅರ್ಕಾವತಿ ನದಿ ರಕ್ಷಣೆಗೆ ಹೋರಾಟಕ್ಕೂ ಧುಮುಕಿದ್ದೀರಿ. ಈ ನದಿಯ ಪುನರ್ಜನ್ಮಕ್ಕೆ ತುರ್ತಾಗಿ ಆಗಬೇಕಿರುವ ಕೆಲಸಗಳು ಯಾವುವು?ನದಿ ಸಂರಕ್ಷಿಸಬೇಕಾದರೆ ಮೊದಲು ಅದರ ಪಾತ್ರವನ್ನು ಸ್ಪಷ್ಟವಾಗಿ ಗುರುತಿಸಬೇಕು. ಪ್ರವಾಹದ ವಿಸ್ತಾರವನ್ನೂ ಲೆಕ್ಕ ಹಾಕಬೇಕು. ಅಷ್ಟೂ ಪ್ರದೇಶವನ್ನು ಸಂರಕ್ಷಿತ ವಲಯವನ್ನಾಗಿ ಘೋಷಿಸಬೇಕು. ಕೊಳಚೆ ನೀರು ಯಾವುದೇ ರೂಪದಲ್ಲಿ ನದಿ ನೀರಿನೊಂದಿಗೆ ಬೆರೆಯದಂತೆ ಎಚ್ಚರ ವಹಿಸಬೇಕು. ಸಂಸ್ಕರಿಸಿದ ಕೊಳಚೆ ನೀರನ್ನು ಕೈಗಾರಿಕೆ ಇಲ್ಲವೆ ಕೃಷಿಗೆ ಬಳಕೆ ಮಾಡಬಹುದು. ಯಾವ ಕಾರಣಕ್ಕೂ ನದಿಗೆ ಸೇರ್ಪಡೆ ಮಾಡಬಾರದು. ನದಿಗೆ ಸ್ವತಂತ್ರವಾಗಿ ಹರಿಯಲು ಬಿಟ್ಟು ಮರಳು-ಕಲ್ಲು ಗಣಿಗಾರಿಕೆ ಮೇಲೆ ನಿಷೇಧ ಹೇರಬೇಕು. ನದಿ ನೀತಿಯನ್ನು ಜಾರಿಗೆ ತರಬೇಕು. *ನದಿ ಆಧಾರಿತ ಯೋಜನೆಗಳು ಬೇಡವೇ ಬೇಡ ಎನ್ನುವುದು ನಿಮ್ಮ ವಾದವೇ?ನಾವೇನೂ ಅಭಿವೃದ್ಧಿ ವಿರೋಧಿಗಳಲ್ಲ. ನದಿಗಳ ಜೀವವನ್ನೇ ನುಂಗುವಂತಹ ಯೋಜನೆಗಳು ಬೇಡ ಎನ್ನುವುದಷ್ಟೇ ನಮ್ಮ ವಾದ. ನದಿಗಳ ಮೂಲದಲ್ಲೇ ಯೋಜನೆ ತರಲು ಹೊರಟರೆ ಅದು ಬದುಕುವುದಾದರೂ ಹೇಗೆ? ಚೆಕ್‌ಡ್ಯಾಂ ನಿರ್ಮಾಣಕ್ಕೂ ಅಣೆಕಟ್ಟೆ ಕಟ್ಟುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಚೆಕ್‌ಡ್ಯಾಂ ಭೂಮಿಗೆ ನೀರು ಮರುಪೂರಣ ಮಾಡುತ್ತಾ ಹೋದರೆ, ಅಣೆಕಟ್ಟು ಪರಿಸರ ಸಮತೋಲನ ತಪ್ಪಿಸುತ್ತದೆ. ವಿದ್ಯುತ್ ಸಮಸ್ಯೆ ಬಗೆಹರಿಸಲು ಸೌರ ಹಾಗೂ ಪವನಶಕ್ತಿ ಬಳಕೆಯತ್ತ ಗಮನ ಹರಿಸಬೇಕು. ಒಮ್ಮೆ ನದಿ ಸತ್ತರೆ ಅದನ್ನು ಜೀವಂತಗೊಳಿಸುವ ಯಾವ ತಂತ್ರಜ್ಞಾನವೂ ಇಲ್ಲ.

*ರಾಷ್ಟ್ರೀಯ ಗಂಗಾ ನದಿ ಪ್ರಾಧಿಕಾರದ ಸದಸ್ಯರಾಗಿ ತಮ್ಮ ಅನುಭವ ಏನು?ಪ್ರಧಾನಿಯವರೇ ಪ್ರಾಧಿಕಾರದ ಅಧ್ಯಕ್ಷರು. ಗಂಗಾ ನದಿ ವಿಷಯವಾಗಿ ತಮ್ಮ ಹೊಣೆಗಾರಿಕೆ ಏನೆಂಬುದರ ಅರಿವೇ ಅವರಿಗಿಲ್ಲ. ನದಿ ರಕ್ಷಣೆಗೆ ಶಾಸನಬದ್ಧ ಕ್ರಮಕ್ಕಾಗಿ ಗಂಗಾ ಲೋಕ ಮಸೂದೆ ಸಿದ್ಧಪಡಿಸಿದ್ದೇವೆ. ಅದನ್ನು ಸಂಸತ್ತಿನ ಮುಂದೆ ತರುವ ಎದೆಗಾರಿಕೆ ಸರ್ಕಾರಕ್ಕಿಲ್ಲ. ಸಭೆ ಕರೆಯಲೂ ಅಧ್ಯಕ್ಷರಿಗೆ ಪುರುಸೊತ್ತು ಇಲ್ಲ. ಪ್ರಾಧಿಕಾರದ ಸದಸ್ಯರಾಗಿರುವ ಆರೂ ರಾಜ್ಯಗಳ ಮುಖ್ಯಮಂತ್ರಿಯವರಿಗೂ ಗಂಗೆಯ ಪುನರುತ್ಥಾನ ಬೇಕಾಗಿಲ್ಲ. 

*ರಾಜಸ್ತಾನದಲ್ಲಿ ಪ್ರಚಲಿತದಲ್ಲಿರುವ ಪಾನಿ ಪಂಚಾಯತ್ (ಜಲ ಪಂಚಾಯ್ತಿ) ಸಾಧನೆ ಏನು?ಈ ಜಲ ಪಂಚಾಯ್ತಿಗಳಿಗೆ ಅರ್ವಾರಿ ಸಂಸತ್ತು ಎಂದೂ ಕರೆಯುತ್ತೇವೆ. 11 ಪ್ರಮುಖ ನಿಯಮಗಳನ್ನು ಈ ಸಂಸತ್ತು ರೂಪಿಸಿದೆ. ಅದರಲ್ಲಿ ಅಧಿಕ ನೀರು ಬಯಸುವ ಕಬ್ಬಿನ ಬೆಳೆ ನಿಷೇಧ ಪ್ರಮುಖವಾದುದು. ಲಭ್ಯವಾದ ನೀರಿನ ಪ್ರಮಾಣಕ್ಕೆ ತಕ್ಕಂತೆ ಬೆಳೆ ಪದ್ಧತಿಯನ್ನು ರೈತರೇ ನಿರ್ಧರಿಸುತ್ತಾರೆ. ಯಾರಿಗೆ ಎಷ್ಟು ಪ್ರಮಾಣದ ನೀರು ಕೊಡಬೇಕು ಎಂಬುದು ಸಹ ಇದೇ ಸಂಸತ್ತಿನಲ್ಲಿ ನಿರ್ಧಾರವಾಗುತ್ತದೆ. 500 ಹೆಕ್ಟೇರ್ ಪ್ರದೇಶಕ್ಕೆ ಒಬ್ಬರಂತೆ ಪ್ರತಿನಿಧಿಯನ್ನು ಜಲ ಸಂಸತ್ತಿಗೆ ಆಯ್ಕೆ ಮಾಡಲಾಗುತ್ತದೆ. ನದಿ ಪಾತ್ರದ ಪ್ರದೇಶದಲ್ಲಿ ಅದರ ತೀರ್ಮಾನವೇ ಅಂತಿಮ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.