ಗುರುವಾರ , ಜೂಲೈ 2, 2020
24 °C

ಜಾಗರಣೆಯಲ್ಲಿ ಭಜನೆ, ಸಂಗೀತ, ಯಕ್ಷಗಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾಗರಣೆಯಲ್ಲಿ ಭಜನೆ, ಸಂಗೀತ, ಯಕ್ಷಗಾನಕೂಡ್ಲಿಗಿ: ಪಟ್ಟಣದಲ್ಲಿಶಿವರಾತ್ರಿ ಹಬ್ಬದ ಪ್ರಯುಕ್ತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ , ಜಾಗರಣೆ ಕಾರ್ಯಕ್ರಮಗಳು ವೈವಿಧ್ಯಮಯವಾಗಿ ನಡೆದವು.

ಕೆಲವು ದೇವಸ್ಥಾನಗಳಲ್ಲಿ ಗುರುವಾರ ಬೆಳಗಿನವರೆಗೆ ಜಾಗರಣೆ ಪ್ರಯುಕ್ತ ಭಜನಾ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗಿತ್ತು. ವಿಶೇಷ ಅಲಂಕಾರ, ದೀಪಾಲಂಕಾರಗಳಿಂದಾಗಿ ದೇವಸ್ಥಾನಗಳು ವಿಶೇಷವಾಗಿ ಕಂಗೊಳಿಸುತ್ತಿದ್ದವು.

ಭಜನಾ ಕಾರ್ಯಕ್ರಮದಲ್ಲಿ ಅಂಜನಪ್ಪ ನಡಗುರ್ತಿ, ಗುರುಶಂಕರಪ್ಪ ರಾಮಸಾಗರಹಟ್ಟಿ, ರಾಮಲಿಂಗೇಶ್ವರ ಭಜನಾ ತಂಡ, ಭಜನಾ ಕೊತ್ಲಪ್ಪ, ಬಿ.ನರಸಿಂಹಪ್ಪ, ಮಲಿಯಮ್ಮ ಭಜನಾ ತಂಡ ಉತ್ತಮಲೈ, ಹುಲಿಕುಂಟೆ ಭಜನಾ ಸಂಘ, ಆಂಜನೇಯ ಭಜನಾ ಸಂಘ ಗಿರೇನಹಳ್ಳಿ ತಂಡಗಳು ಪಾಲ್ಗೊಂಡಿದ್ದವು.

ಸಂಗೀತದ ಅಲೆ

ಸಿರುಗುಪ್ಪ: ಈ ಬಾರಿಯ ಶಿವರಾತ್ರಿ ಅಂಗವಾಗಿ ನಡೆದ ಅಹೋರಾತ್ರಿ ಸಂಗೀತದ ಜಾಗರಣೆಯಲ್ಲಿ ಕಲಾವಿದರ ಸುಮಧುರ ಕಂಠದಲ್ಲಿ ಮೂಡಿಬಂದ ಸಂಗೀತದ ಝೇಂಕಾರ ಎಲ್ಲೆಡೆ ಪಸರಿಸಿತು.

ಬುಧವಾರ ರಾತ್ರಿ ಇಲ್ಲಿಯ ಅಭಯಾಂಜನೇಯ ದೇವಸ್ಥಾನದಲ್ಲಿ ಶಿವರಾತ್ರಿ ಜಾಗರಣೆಯ ಅಂಗವಾಗಿ ಆಯೋಜಿಸಿದ ಸಂಗೀತೋತ್ಸವದಲ್ಲಿ ಕಲಾವಿದರ ತಂಡ ದಾಸರ ಪದ, ವಚನ, ಮರಾಠಿ ಭಜನೆ ಮತ್ತು ಹಿಂದೂಸ್ತಾನಿ ಗಾಯನ ಪ್ರಸ್ತುತ ಪಡಿಸಿದರು.

ಆರಂಭದಲ್ಲಿ ರಾಯಚೂರಿನ ಶೇಷಗಿರಿದಾಸರು ‘ಬಾರೋ ರಾಘವೇಂದ್ರ’. ‘ಲಕ್ಷ್ಮಿ ಬಾರಮ್ಮ’ ದಾಸರ ಪದಗಳನ್ನು ಮನೋಜ್ಞವಾಗಿ ಹಾಡಿದರು. ಧಾರವಾಡದ ಬಸವರಾಜ ಹಿರೇಮಠರು ವಚನಗಾಯನದಲ್ಲಿ ‘ಜ್ಞಾನದ ಬಲದಿಂದ ಅಜ್ಞಾನದ ಕೇಡಾ ನೋಡಯ್ಯ’ ಎಂದು ಸಂಗೀತ ಸುಧೆ ಹರಿಸಿದರು.

ಸಂಗೀತಾ ಕಟ್ಟಿ ಕುಲಕರ್ಣಿಯವರು ‘ಹೇ ಶಿವ ಗಂಗಾಧರಾ’. ‘ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ’, ‘ಎನ್ನ ಕಾಯವ ದಂಡಿಗೆಯ ಮಾಡಯ್ಯ’, ‘ಪಂಪಾಪುರ ನಿವಾಸ ಪ್ರಮಥರೇಶ’, ‘ಈತ ಲಿಂಗದೇವ ಶಿವನು ಆತ ರಂಗಧಾಮ ವಿಷ್ಣು’.. ಹೀಗೆ ದಾಸರಪದ, ವಚನಗಳು ಮತ್ತು ಮರಾಠಿ ಭಜನೆ ಹಾಡಿ ಸಂಗೀತದ ಜಾಗರಣೆಗೆ ಮೆರುಗು ನೀಡಿದರು.

ಪುರಂದರ ಪ್ರಶಸ್ತಿ ವಿಜೇತ ಬಾಗಲಕೋಟೆಯ ಅನಂತ ಕುಲಕರ್ಣಿಯವರು ಶಿವರಾತ್ರಿ ಜಾಗರಣೆಯ ದಾಸರ ಪದ ‘ಶಿವದರುಶನ ನಮಗಾಯಿತು ಕೇಳಿ ಶಿವರಾತ್ರಿಯಲಿ’ ಎಂದು ಹಾಡುತ್ತಿದ್ದಂತೆಯೇ ಮಧ್ಯರಾತ್ರಿಯ ಜಾಗರಣೆಗೆ ಚೈತನ್ಯ ನೀಡಿದಂತಾಯಿತು.

ಕೆ.ರಾಮಚಂದ್ರ ಬೆಂಗಳೂರು, ಇಬ್ರಾಹಿಂ ರಾಯಚೂರು, ವೀರಭದ್ರಯ್ಯ ಗದಗ, ನಾರಾಯಣ ತಾಸಗಾಂಕರ್ ಬಾಗಲಕೋಟೆ, ಪುಟಾಣಿ ಸುಧನ್ವ ಕಾರಿಗನೂರು ವಚನ, ದಾಸರ ಪದಗಳನ್ನು ಹಾಡಿ ರಂಜಿಸಿದರು.

ಧಾರವಾಡದ ಪ್ರಶಾಂತಗೌಡ, ಮದಿರೆ ಮರಿಸ್ವಾಮಿ, ವಿಜಯ ಪಂಚಮುಖಿ, ವಿನಯ ಕುಲಕರ್ಣಿ, ಕೆ.ಎಂ. ಮರಿಸ್ವಾಮಿ ಹಾರ್ಮೋನಿಯಂ ಸಾಥ್ ನೀಡಿದರು. ಕೇಶವ ಜೋಶಿ, ಬೆಂಗಳೂರು ತಬಲಾ ಸಾಥ್ ನೀಡಿದರು. ರಾಯಚೂರಿನ ರಘುಪತಿ ಪೂಜಾರ್ ದಿನ್ನಿ ಕ್ಲಾರಿಯೋನೇಟ್ ವಾದನ ನುಡಿಸಿದರು.

ಮಾಜಿ ಶಾಸಕ ಎಂ.ಶಂಕರರೆಡ್ಡಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕವಿ ಬಿ.ಮಂಜಣ್ಣ ಸಿರಿಗೇರಿ ಅವರು ರಚಿತ ’ಇರುಳ ಮರಿಗಳು’ ಕವನ ಸಂಕಲನ ಬಿಡುಗಡೆಯಾಯಿತು. ಸಂಗೀತ ಕಾರ್ಯಕ್ರಮ ಆರಂಭಕ್ಕೆ ಮೊದಲು ಆಗಲಿದ ಸಂಗೀತ ದಿಗ್ಗಜರಾದ ಪಂ.ಪುಟ್ಟರಾಜ ಗವಾಯಿಗಳು ಮತ್ತು ಭೀಮಸೇನ ಜೋಶಿಯವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಸಂಘಟಕ ಎಂ.ಗೋಪಾಲರೆಡ್ಡಿ ಸ್ವಾಗತಿಸಿದರು. ಶಿವಕುಮಾರ್ ಬಳಿಗಾರ್ ಕಲಾವಿದರನ್ನು ಪರಿಚಯಿಸಿದರು.

ಯಕ್ಷಗಾನ ಪ್ರದರ್ಶನ

ಕಂಪ್ಲಿ: ಪಟ್ಟಣದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಂಘಟನೆಯು ಕನಕಾಂಗಿ ಕಲ್ಯಾಣ ಎನ್ನುವ ಪೌರಾಣಿಕ ಹಾಸ್ಯ ಪ್ರದಾನ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಿತ್ತು. ಪ್ರದರ್ಶನವನ್ನು ಡಿ.ವೀರಪ್ಪ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕಂಪ್ಲಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಜಿ.ಲಿಂಗನಗೌಡ, ಪಿಎಸ್‌ಐ ಡಾ.ಎಸ್.ಮಲ್ಲಿಕಾರ್ಜುನ, ಮಾರುತಿ, ಕ್ಲಾರಿಯೋನೆಟ್ ವಾದಕ ಕೆ.ಹನುಮಂತಪ್ಪ, ಯಕ್ಷಗಾನ ಪ್ರದರ್ಶನದ ವ್ಯವಸ್ಥಾಪಕ ವೆಂಕಟೇಶ ಮತ್ತು ಶಿಕ್ಷಕರಾದ ಎಸ್.ಜಿ. ಚಿತ್ರಗಾರ ಉಪಸ್ಥಿತರಿದ್ದರು.

ಯಕ್ಷಗಾನ ಪ್ರದರ್ಶನದ ರೂವಾರಿಗಳಾದ ಮಾರುತಿ, ಯಕ್ಷಗಾನ ಕಲೆ ಕುರಿತು ವಿವರಿಸಿದರು. ಪಿಎಸ್‌ಐ. ಡಾ.ಎಸ್. ಮಲ್ಲಿಕಾರ್ಜುನ ಮಾತನಾಡಿದರು. ನಂತರ ನಡೆದ ಯಕ್ಷಗಾನ ಪ್ರದರ್ಶನದಲ್ಲಿ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಕಲಾವಿದ ಮಹಾಬಲೇಶ್ವರ ಹೆಗಡೆ ಬಲರಾಮನಾಗಿ, ರಮಾನಂದ ಹೆಗಡೆ  ಕೃಷ್ಣನಾಗಿ, ಮಹಾಭಲೇಶ್ವರ ಭಟ್ಟ ಸುಭದ್ರೆಯಾಗಿ, ಸಂಜಯ ಬೆಳಯೂರ ಘಟೋದ್ಗಜನಾಗಿ, ಎಂ.ಆರ್. ನಾಯ್ಕ ಕೌರವನಾಗಿ, ಎಂ.ಆರ್. ಹೆಗಡೆ ದುಶ್ಯಾಸನನಾಗಿ, ವೆಂಕಟೇಶ್ವರ ಹೆಗಡೆ ಅಭಿಮನ್ಯುವಾಗಿ, ಅರ್ಪಿತ ಹೆಗಡೆ ಕನಕಾಂಗಿಯಾಗಿ, ಲಕ್ಷ್ಮಣನಾಗಿ ಲೋಕೇಶ್, ಮತ್ತು ಹಾಸ್ಯ ಪಾತ್ರದಲಿ ್ಲನಾಗರಾಜ ಮಂಚಿಕೇರಿ ಅಭಿನಯಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು. ಹಿಮ್ಮೇಳದಲ್ಲಿ ಸತೀಶ್ ಹೆಗಡೆ ದಂಟಕಲ್, ಮಹಾದೇವ ಭಟ್ಟ ಕೊಳಗಿ, ಮೃದಂಗ ವಾದಕರಾಗಿ ಶಂಕರ್ ಭಾಗವಾತ ಯಲ್ಲಾಪುರ, ಮದ್ದಳೆ ವಾದಕರಾಗಿ ವೈದ್ಯರು ಸಾಥ್ ನೀಡಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.