ಭಾನುವಾರ, ಜೂನ್ 13, 2021
22 °C

ಜಾನೂ ಗುಂಗಿನಲ್ಲಿ ದೀಪಾ

ಎಚ್.ಎಸ್.ರೋಹಿಣಿ Updated:

ಅಕ್ಷರ ಗಾತ್ರ : | |

ಜಾನೂ ಗುಂಗಿನಲ್ಲಿ ದೀಪಾ

ದೀಪಾ ಸನ್ನಿಧಿ ಖುಷಿಯಾಗಿದ್ದರು. ಪ್ರೀತಂ ಗುಬ್ಬಿ ನಿರ್ದೇಶನದ `ಜಾನೂ~ ಚಿತ್ರೀಕರಣ ಮುಗಿಸಿರುವ ದೀಪಾ ನಗುನಗುತ್ತಾ ಚಿತ್ರದ ಅನುಭವ ಹಂಚಿಕೊಂಡರು. `ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿದಿದೆ.ಒಂದು ಹಾಡು ಮಾತ್ರ ಬಾಕಿ ಉಳಿದಿದೆ~ ಎಂದರು. ಹಾಗೆಯೇ `ಪರಮಾತ್ಮ~ದ ನಿರ್ಮಾಪಕರಲ್ಲಿ ಒಬ್ಬರಾದ ಜಯಣ್ಣ ಅವರ ಬ್ಯಾನರ್‌ನಲ್ಲಿ ಮತ್ತೊಮ್ಮೆ ನಟಿಸಿದ್ದು ಪರಿಚಿತ ಕುಟುಂಬದಲ್ಲಿ ಇದ್ದು ಬಂದಂಥ ಅನುಭವ ನೀಡಿತು ಎನ್ನುತ್ತಾರೆ.ಕಳೆದ ವರ್ಷದ ಸೂಪರ್‌ಹಿಟ್ ಚಿತ್ರ `ಸಾರಥಿ~ಯ ಮೂಲಕ ಅಭಿನಯ ಕ್ಷೇತ್ರಕ್ಕೆ ಅಡಿಯಿಟ್ಟ ದೀಪಾ ಅದು ಬಿಡುಗಡೆಯಾಗುವುದಕ್ಕೆ ಮುಂಚೆಯೇ ಪುನೀತ್ ರಾಜ್‌ಕುಮಾರ್ ನಾಯಕರಾಗಿದ್ದ `ಪರಮಾತ್ಮ~ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದವರು.

 

`ಪರಮಾತ್ಮ~ ಚಿತ್ರದ ನಟನೆಗೆ ಮೆಚ್ಚುಗೆ ಪಡೆದುಕೊಂಡ ದೀಪಾ, ಪ್ರೀತಂ ಗುಬ್ಬಿ ನಿರ್ದೇಶನದ `ಜಾನೂ~ ಚಿತ್ರಕ್ಕೆ ರುಜು ಮಾಡಿದರು. ಸದ್ಯಕ್ಕೆ `ಜಾನೂ~ ಚಿತ್ರೀಕರಣ ಮುಗಿಸಿ ಅದರ ಗುಂಗಿನಲ್ಲಿಯೇ ತೇಲುತ್ತಿರುವ ಅವರಿಗೆ ಅವಕಾಶಗಳ ಕೊರತೆಯೇನೂ ಇಲ್ಲ. ಬರುತ್ತಿರುವ ಅವಕಾಶಗಳನ್ನು ತೂಗಿ ಅಳೆದು ನೋಡುವ ಪ್ರವೃತ್ತಿ ಅವರದು.ಅದರಿಂದ ಸಾಕಷ್ಟು ಸಮಯಾವಕಾಶ ತೆಗೆದುಕೊಂಡು ಪಾತ್ರಗಳ ಆಯ್ಕೆಯಲ್ಲಿ ನಿರತರಾಗಿದ್ದಾರೆ.`ಇನ್ನು ಕೆಲವೇ ದಿನಗಳಲ್ಲಿ ಎರಡು ಹೊಸ ಪ್ರಾಜೆಕ್ಟ್ ಒಪ್ಪಿಕೊಳ್ಳುವ ಸಾಧ್ಯತೆ ಇದೆ.

 

ನನಗೆ ಕತೆಯ ಜೊತೆಗೆ ಇಡೀ ತಂಡ ಮುಖ್ಯ. ಅದರಿಂದ ಸಿನಿಮಾ ಒಪ್ಪಿಕೊಳ್ಳುವುದು ತಡವಾಗುತ್ತದೆ~ ಎನ್ನುವ ದೀಪಾ ಅವರದು ಒಂದೇ ಬಾರಿಗೆ ಸಾಕಷ್ಟು ಸಿನಿಮಾಗಳನ್ನು ಒಪ್ಪಿಕೊಳ್ಳುವ ಜಾಯಮಾನ ಅಲ್ಲ.`ಜಾನೂ~ ಚಿತ್ರದಲ್ಲಿ ಹುಬ್ಬಳ್ಳಿ ಶೈಲಿಯ ಕನ್ನಡವನ್ನು ಮಾತನಾಡಿರುವ ದೀಪಾ ಅದರಿಂದ ಪುಳಕಿತ ಭಾವ ಅನುಭವಿಸುತ್ತಿದ್ದಾರೆ. `ಚಿತ್ರದಲ್ಲಿ ಹಳ್ಳಿಹುಡುಗಿಯೊಬ್ಬಳು ನಗರಕ್ಕೆ ಬಂದು, ನಾಯಕನನ್ನು ಭೇಟಿ ಮಾಡಿ ಪ್ರೀತಿ ಮಾಡುವುದು ಕತೆ.ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕದ ಬೀದರ್, ಬಾದಾಮಿ ಸುತ್ತಮುತ್ತ ಹೋಗಿದ್ದೆ. ಅಲ್ಲಿನ ಜನರ ದೇಹ ಭಾಷೆ, ಮಾತಿನ ಶೈಲಿ ಕಲಿತುಕೊಳ್ಳುವುದಕ್ಕೆ ಅಲ್ಲಿಯೇ ಚಿತ್ರೀಕರಣ ಮಾಡಿದ್ದು ನೆರವಾಯಿತು.

 

ಯಶ್ ಯಾವತ್ತೂ ಅನುಭವಿ ನಟರಂತೆ ವರ್ತಿಸಲಿಲ್ಲ. `ನನಗೂ ಮೊದಲು ಹೀಗಾಗಿತ್ತು~ ಎಂದು ಹೇಳಿ ನನ್ನ ತಪ್ಪುಗಳನ್ನು ತಿದ್ದುತ್ತಿದ್ದರು~ ಎಂದು ನಮ್ರವಾಗಿ ಮಾತನಾಡುವ ದೀಪಾಗೆ ಒಟ್ಟಾರೆ ಚಿತ್ರತಂಡ ನೀಡಿದ ಸಹಕಾರ ಇಷ್ಟವಾಗಿದೆ.ಪ್ರೀತಂ ಗುಬ್ಬಿ ತಮ್ಮ ಪಾತ್ರ ನಿರ್ವಹಣೆಯಲ್ಲಿ ನೆರವಾದ ವಿಚಾರವನ್ನು ಮಾತನಾಡುತ್ತಾ, `ಉತ್ತರ ಕರ್ನಾಟಕದ ಹುಡುಗಿಯರು ತುಂಬಾ ಎತ್ತರದ ದನಿಯಲ್ಲಿ ಮಾತನಾಡುತ್ತಾರೆ ಅದನ್ನು ಕಲಿಯುವುದೇ ನನಗೊಂದು ಸವಾಲಾಗಿತ್ತು.ಅದೆಲ್ಲವನ್ನೂ ಮಕ್ಕಳಿಗೆ ಕಲಿಸುವಂತೆ ಕಲಿಸಿಕೊಟ್ಟವರು ಪ್ರೀತಂ~ ಎಂದು ದೀಪಾ ಮೆಚ್ಚುಗೆ ಸೂಸುತ್ತಾರೆ.`ಜಾನೂ~ ತಂಡದಲ್ಲಿ ಹೆಚ್ಚು ಯುವಕರೇ ಇದ್ದ ಕಾರಣ ಭಾವನೆಗಳ ಪರಸ್ಪರ ವಿನಿಮಯ ಸುಲಭವಾಯಿತು. ಮನರಂಜನೆಯ ಥೀಮ್ ಇರುವ ಲವ್‌ಸ್ಟೋರಿ ಚಿತ್ರದ್ದು.

 

ಎಲ್ಲರೂ ಗಂಭೀರವಾಗಿ ತೊಡಗಿಸಿಕೊಂಡು ಚಿತ್ರ ಮುಗಿಸಿರುವುದಾಗಿ ಹೇಳಿದ ದೀಪಾ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.