ಶನಿವಾರ, ಫೆಬ್ರವರಿ 27, 2021
31 °C
ಕಣ್ಣಮುಂದೆಯೇ ಸುಪ್ರೀಂ ಆದೇಶ ಉಲ್ಲಂಘನೆ * ಕ್ರಮ ಕೈಗೊಳ್ಳದ ಪೊಲೀಸರು

ಜಾರಿಯಾಗದ ಹೆಲ್ಮೆಟ್ ಕಡ್ಡಾಯ ನಿಯಮ

ಎಸ್‌. ಸಂಪತ್‌ Updated:

ಅಕ್ಷರ ಗಾತ್ರ : | |

ಜಾರಿಯಾಗದ ಹೆಲ್ಮೆಟ್ ಕಡ್ಡಾಯ ನಿಯಮ

ರಾಮನಗರ: ರಾಜ್ಯದಾದ್ಯಂತ ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರು ಜ. 12ರಿಂದ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು ಎಂದು ಸರ್ಕಾರವೇನೋ ಆದೇಶಿಸಿದೆ. ಆದರೆ ರಾಮನಗರ ಜಿಲ್ಲೆಯಲ್ಲಿ ಈ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ.ನಗರ, ಗ್ರಾಮಾಂತರ ಪ್ರದೇಶ ರಸ್ತೆಗಳಲ್ಲಿ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಿಂಬದಿ ಸವಾರರಿರಲಿ, ಮುಂಬದಿ ಸವಾರರು ಸಹ ಹೆಲ್ಮೆಟ್‌ ಧರಿಸದೇ ರಾಜಾರೋಷವಾಗಿ ಸಂಚರಿಸುತ್ತಿದ್ದಾರೆ. ಕಣ್ಮುಂದೆಯೇ ಈ ರೀತಿ ಆದೇಶದ ಉಲ್ಲಂಘನೆ ಆಗುತ್ತಿದ್ದರೂ ಏನೂ ಮಾಡದೆ ಪೊಲೀಸರು ಮೌನಿಯಾಗಿದ್ದಾರೆ.ಕನಿಷ್ಠ ಸಿಗ್ನಲ್‌ಗಳ ಬಳಿ ಬರುವ ವಾಹನ ಸವಾರರನ್ನು ಹಿಡಿದು ದಂಡ ವಿಧಿಸುವ, ಬುದ್ಧಿ ಹೇಳುವ, ಎಚ್ಚರಿಕೆ ನೀಡುವ, ಜಾಗೃತಿ ಮೂಡಿಸುವ ಕಾರ್ಯವನ್ನು ಸಂಚಾರ ಪೊಲೀಸರು ಮಾಡುತ್ತಿಲ್ಲ!ರಸ್ತೆ ಸುರಕ್ಷತಾ ಸಪ್ತಾಹದ ನೆಪದಲ್ಲಿ ಜಿಲ್ಲಾ ಪೊಲೀಸರು ಕುಂಬಳಗೋಡು, ಬಿಡದಿ, ರಾಮನಗರ, ಚನ್ನಪಟ್ಟಣದ ಕೆಲವೆಡೆ ಎಚ್ಚರಿಕೆಯ ಫಲಕಗಳನ್ನಷ್ಟೇ ಪ್ರದರ್ಶಿಸಿದ್ದಾರೆ. ಅದರಲ್ಲಿ ಹೆಲ್ಮೆಟ್‌ ಧರಿಸುವುದರಿಂದ ಪ್ರಾಣ ರಕ್ಷಿಸಿಕೊಳ್ಳಬಹುದು, ಅಪಾಯದಿಂದ ಪಾರಾಗಬಹುದು ಎಂದು ಹೇಳಲಾಗಿದೆ. ಆದರೆ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕಠಿಣ ಕ್ರಮಗಳನ್ನು ಜಿಲ್ಲಾ ಪೊಲೀಸರು ಇಲ್ಲಿಯವರೆಗೂ ಕೈಗೊಂಡಿಲ್ಲ.ನಾಗರಿಕರ ನಿರ್ಲಕ್ಷ್ಯ: ‘ಸರ್ಕಾರ ಹೆಲ್ಮೆಟ್‌ ಕಡ್ಡಾಯಗೊಳಿಸಿರುವ ವಿಷಯಗೊತ್ತಿರುವ ಬಹುತೇಕ ನಾಗರಿಕರು ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಪೊಲೀಸರು ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂದಾದರಷ್ಟೇ ನಾಗರಿಕರಿಗೆ ಬಿಸಿ ಮುಟ್ಟುತ್ತದೆ. ಆಗ ಅವರು ಹೆಲ್ಮೆಟ್‌ ಧರಿಸಲು ಆರಂಭಿಸುತ್ತಾರೆ. ಆದರೆ ಆ ಕಾರ್ಯ ಇನ್ನೂ ರಾಮನಗರದಲ್ಲಿ ಆರಂಭವಾಗಿಲ್ಲ’ ಎಂದು ನಗರದ ನಿವಾಸಿ ಗೋಪಾಲ್‌ ಬೇಸರದಿಂದ ಹೇಳುತ್ತಾರೆ.ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತ: ಜಿಲ್ಲಾ ಸರಹದ್ದಿನಲ್ಲಿ ಬೆಂಗಳೂರು– ಮೈಸೂರು ಹೆದ್ದಾರಿಯು 53 ಕಿ.ಮೀ ಉದ್ದ ಇದ್ದು, ಈ ವ್ಯಾಪಿ್ತಯಲ್ಲಿ ಮೂರು ವರ್ಷದಲ್ಲಿ 1800 ಅಪಘಾತಗಳು ಸಂಭವಿಸಿವೆ. ಇದರಲ್ಲಿ 390 ಜನರು ಸಾವನ್ನಪ್ಪಿದ್ದರೆ, 1580 ಜನರು ಗಾಯಗೊಂಡಿದ್ದಾರೆ.ರಾಜ್ಯ ಹೆದ್ದಾರಿಯಾಗಿದ್ದ ಈ ರಸ್ತೆಯು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರುವುದಕ್ಕೂ ಮುನ್ನ ಲೋಕೋಪಯೋಗಿ ಇಲಾಖೆಯು ನಡೆಸಿದ ಸರ್ವೆ ಪ್ರಕಾರ ಈ ಹೆದ್ದಾರಿಯಲ್ಲಿ ದಿನವೊಂದಕ್ಕೆ ಸರಾಸರಿ 1 ಲಕ್ಷ ವಾಹನಗಳು ಸಂಚರಿಸುತ್ತಿವೆ. ಅದರಲ್ಲಿ 48 ಸಾವಿರ ವಾಣಿಜ್ಯ ಉದ್ದೇಶದ ವಾಹನಗಳಾಗಿವೆ. ರಸ್ತೆಯಾವಾಗಲೂ ವಾಹನಗಳಿಂದ ಗಿಜಿಗುಡುತ್ತಿರುತ್ತದೆ.ವಾರಾಂತ್ಯದಲ್ಲಿ ಹೆಚ್ಚಿನ ವಾಹನ ದಟ್ಟಣೆ: ಇನ್ನು ವಾರಾಂತ್ಯದಲ್ಲಿ ಬೆಂಗಳೂರು–ಮೈಸೂರು ನಡುವೆ ಸಂಚರಿಸುವ ವಾಹನಗಳ ಸಂಖ್ಯೆ ದುಪ್ಪಟ್ಟು, ತ್ರಿಪಟ್ಟು ಹೆಚ್ಚಾಗಿರುವುದೂ ಉಂಟು. ದ್ವಿಚಕ್ರ ವಾಹನ ಸವಾರರಂತೂ ಜೀವವನ್ನು ಗಟ್ಟಿಯಾಗಿ ಹಿಡಿದು  ಸವಾರಿ ಮಾಡಬೇಕಾದ ದುಃಸ್ಥಿತಿ ಇದೆ. ಇಲ್ಲಿ ಸಂಭವಿಸಿರುವ ಹಲವು ಅಪಘಾತಗಳಲ್ಲಿ ದ್ವಿಚಕ್ರ ವಾಹನ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನುತ್ತಾರೆ ಪೊಲೀಸರು.ಕಳೆದ ವರ್ಷ (2015) ಜಿಲ್ಲೆಯ ಹೆದ್ದಾರಿಗಳಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡಿರುವ 184 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದು, ₹ 18,600 ದಂಡ ವಸೂಲಿ ಮಾಡಿದ್ದಾರೆ. ಈ ವರ್ಷದಿಂದ ಈ ಕಾರ್ಯವನ್ನು ಚುರುಕಾಗಿ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ.ಇನ್ನು ಜಿಲ್ಲಾ ವ್ಯಾಪ್ತಿಯ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಹಾಗೂ ಇತರೆ ರಸ್ತೆಗಳಲ್ಲಿ 2015ರಲ್ಲಿ 1832 ಅಪಘಾತಗಳು ಸಂಭವಿಸಿದ್ದು, ಇದರಲ್ಲಿ 402 ಮಂದಿ ಮೃತಪಟ್ಟಿದ್ದಾರೆ. 1870 ಮಂದಿಗೆ ಗಾಯಗಳಾಗಿವೆ.  2014ರಲ್ಲಿ 1844 ಅಪಘಾತಗಳು ಸಂಭವಿಸಿದ್ದವು, ಅದರಲ್ಲಿ 422 ಸಾವು 1690 ಮಂದಿ ಗಾಯಗೊಂಡಿದ್ದರು ಎಂಬ ಅಂಕಿ ಅಂಶವನ್ನು ಜಿಲ್ಲೆಯ ಹಿರಿಯ ಪೊಲೀಸ್‌ ಅಧಿಕಾರಿ ನೀಡಿದ್ದಾರೆ.ನಿಯಮ ಉಲ್ಲಂಘನೆ ಪ್ರಕರಣಗಳು

ಜಿಲ್ಲೆಯಲ್ಲಿ 2015ರಲ್ಲಿ 29,168 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ₹ 55 ಲಕ್ಷಕ್ಕೂ ಹೆಚ್ಚು ದಂಡವನ್ನು ವಸೂಲಿ ಮಾಡಲಾಗಿದೆ. ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ 90 ಪ್ರಕರಣಗಳು ದಾಖಲಾಗಿದ್ದು, ₹ 1,57,900 ದಂಡ ವಿಧಿಸಲಾಗಿದೆ. ವಾಹನ ಚಲಿಸುವಾಗ ಸವಾರರು ಮೊಬೈಲ್‌ ಬಳಸಿದ್ದಕ್ಕೆ ಸಂಬಂಧಿಸಿದಂತೆ 395 ಪ್ರಕರಣಗಳನ್ನು ದಾಖಲಿಸಿ ₹ 50 ಸಾವಿರಕ್ಕೂ ಹೆಚ್ಚು ದಂಡ ವಸೂಲಿ ಮಾಡಲಾಗಿದೆ.

ಅತಿ ವೇಗದ ಚಾಲನೆಗೆ ಸಂಬಂಧಿಸಿದಂತೆ 2513 ಪ್ರಕರಣಗಳನ್ನು ದಾಖಲಿಸಿ ₹7,66,700 ದಂಡ ಪಡೆಯಲಾಗಿದೆ. ‘ನೋ ಪಾರ್ಕಿಂಗ್‌’ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಿದ್ದಂತ 570 ಪ್ರಕರಣಗಳನ್ನು ದಾಖಲಿಸಿ ₹ 47,800 ದಂಡವಾಗಿ ಪಡೆಯಲಾಗಿದೆ. ಇವೇ ಅಲ್ಲದೆ, ಚಾಲನಾ ಪರವಾನಗಿ ಇಲ್ಲದ, ವಿಮೆ ನವೀಕರಿಸದ, ದ್ವಿಚಕ್ರ ವಾಹನದಲ್ಲಿ ಮೂವರು ಪ್ರಯಾಣಿಸುತ್ತಿದ್ದ, ಸಂಚಾರಿ ನಿಯಮ ಪಾಲಿಸದ ಹಾಗೂ ಇತರೆ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಸವಾರರ ವಿರುದ್ಧ ಸುಮಾರು 19 ಸಾವಿರ ಪ್ರಕರಣಗಳು ದಾಖಲಾಗಿದ್ದು, ₹ 31 ಲಕ್ಷ ದಂಡ ವಿಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.