ಶನಿವಾರ, ಜೂನ್ 19, 2021
28 °C

ಜಿ.ಪಂ. ಸದಸ್ಯ ಬಡೀರಣ್ಣ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಾ: ಜಿಲ್ಲಾ ಪಂಚಾಯಿತಿ ಸದಸ್ಯ, ತಾಲ್ಲೂಕಿನ ಯಾದವ ಸಮಾಜದ ಹಿರಿಯ ಮುಖಂಡ ಬಿ.ಕೆ.ಬಡೀರಣ್ಣ (60) ಭಾನುವಾರ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.ತಾಲ್ಲೂಕಿನ ಬೇವಿನಹಳ್ಳಿ­ಯವ­ರಾ­ಗಿದ್ದ ಬಡೀರಣ್ಣ ತಾವರೇಕೆರೆ ಕ್ಷೇತ್ರ­ದಿಂದ ಜಿಲ್ಲಾ ಪಂಚಾಯಿತಿ ಪ್ರತಿನಿಧಿ­ಯಾಗಿ ಜೆಡಿಎಸ್‌ನಿಂದ ಆಯ್ಕೆಯಾಗಿ­ದ್ದರು. ಕೆಲ ಕಾಲ ಜೆಡಿಎಸ್ ಜಿಲ್ಲಾ ಹಿಂದು­ಳಿದ ವರ್ಗಗಳ ಘಟಕದ ಅಧ್ಯಕ್ಷ­ರಾಗಿದ್ದ ಅವರು ಈಚೆಗೆ ರಾಜ್ಯ ಜೆಡಿಎಸ್ ಹಿಂದುಳಿದ ವರ್ಗಗಳ ಘಟಕದ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು.ಹಿಂದಿನ ಮಂಡಲ ಪಂಚಾಯಿತಿ ಸದಸ್ಯರಾಗಿ, ಪ್ರಧಾನರಾಗಿ ರಾಜ­ಕೀಯ ಜೀವನ ಆರಂಭಿಸಿ ಎರಡು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಪರಭಾವಗೊಂಡಿದ್ದರು. ತಮ್ಮ ರಾಜಕೀಯ ಜೀವನದ ಆರಂಭ­ದಲ್ಲಿ ಯಾದವ ಸಮುದಾಯದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಬಡೀರಣ್ಣ, ವಿಧಾನಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 15 ಸಾವಿರಕ್ಕೂ ಅಧಿಕ ಮತ ಪಡೆದು ಪರಭಾವಗೊಂಡಿದ್ದರು. ನಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.ನಂತರ ನಡೆದ ವಿಧಾನಸಭೆ ಚುನಾವಣೆ ಸಮಯಕ್ಕೆ ಕಾಂಗ್ರೆಸ್ ತೊರೆದು ಬಿಜೆಪಿಯಿಂದ ವಿಧಾನ­ಸಭೆಗೆ ಸ್ಪರ್ಧಿಸಿ 20 ಸಾವಿರಕ್ಕೂ ಅಧಿಕ ಮತ ಗಳಿಸಿದ್ದರು.ಸಿದ್ದರಾಮಯ್ಯ ನೇತೃತ್ವದಲ್ಲಿ ಅಹಿಂದ ಚಳವಳಿಯಲ್ಲಿ ಕೆಲ ಕಾಲ ತೊಡಗಿಸಿಕೊಂಡಿದ್ದರು. ತಾಲ್ಲೂಕಿನಲ್ಲಿ ಎಬಿವಿಪಿ ಕಟ್ಟಿ ಬೆಳೆಸಿದ್ದರು. ಜೆಡಿಎಸ್‌ ಪಕ್ಷದ ಸಂಘಟನೆಯಲ್ಲೂ ಮುಂಚೂಣಿ­ಯಲ್ಲಿದ್ದರು. ಸಿದ್ದ­ರಾಮಯ್ಯ ಕಾಂಗ್ರೆಸ್ ಪಕ್ಷ ಸೇರಿದ ಕೂಡಲೇ ಜೆಡಿಎಸ್ ಸೇರಿ, ತಮ್ಮ ಕೊನೆಯ ದಿನದವರೆಗೂ ಪಕ್ಷದ ಸಂಘಟನೆ­ಯಲ್ಲಿ ತೊಡಗಿಸಿ­ಕೊಂಡಿದ್ದರು.ಒಮ್ಮೆ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿ, ಟಿಎಪಿಎಸ್ಎಂಎಸ್ ಅಧ್ಯಕ್ಷ­ರಾಗಿ ಕಾರ್ಯನಿರ್ವಹಿಸಿದ್ದ ಅವರು ತಾಲ್ಲೂಕಿನ ರಾಜ­ಕಾರಣ­ದಲ್ಲಿ ಪ್ರಮುಖ ಪಾತ್ರ ವಹಿಸುತ್ತ ಬಂದಿದ್ದರು.ಶನಿವಾರ ಶ್ವಾಸಕೋಶ ಸಂಬಂಧಿ ತೊಂದರೆಯಿಂದ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಸಣ್ಣ ಶಸ್ತ್ರ ಚಿಕಿತ್ಸೆ ನಂತರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು ಎಂದು ಕುಟುಂಬ ಮೂಲಗಳು ತಿಳಿಸಿವೆ.ಮೃತರಿಗೆ ಪತ್ನಿ ರತ್ನಮ್ಮ, ಪುತ್ರ ಪ್ರಭುದೇವ್ ಹಾಗೂ ತಾಲ್ಲೂಕು ಪಂಚಾ­ಯಿತಿ ಮಾಜಿ ಸದಸ್ಯ ಸುದ­ರ್ಶನ್ ಸೇರಿದಂತೆ ಮೂವರು ಸಾಕು ಮಕ್ಕಳು ಇದ್ದಾರೆ.  ಮೃತರ ಅಂತ್ಯ­ಕ್ರಿಯೆ ಸ್ವಗ್ರಾಮ ಬೇವಿನಹಳ್ಳಿಯಲ್ಲಿ ಸೋಮವಾರ ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.