ಶುಕ್ರವಾರ, ಜೂಲೈ 10, 2020
27 °C

ಜಿಲ್ಲಾಸ್ಪತ್ರೆ: ತುರ್ತು ಚಿಕಿತ್ಸಾ ನಿಗಾ ಘಟಕಕ್ಕೆ 1 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ‘ಭಾಗ್ಯಲಕ್ಷ್ಮಿ’ ಯೋಜನೆಯ ಫಲಾನುಭವಿ ತಾಯಂದಿರಿಗೆ ಸೀರೆ ವಿತರಿಸಲು ನವೆಂಬರ್ 15ರಂದು ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜನತೆಗೆ ನೀಡಿದ ಭರವಸೆಯಂತೆ ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ನಿಗಾ ಘಟಕ ಸ್ಥಾಪನೆಗೆ ಒಂದು ಕೋಟಿ ರೂಪಾಯಿ ಹಾಗೂ ಆಸ್ಪತ್ರೆಯ ಮುಂಭಾಗದಲ್ಲಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ 25 ಲಕ್ಷ ರೂಪಾಯಿ ಬಿಡುಗಡೆ ಮಾಡಲು ಆದೇಶಿಸಿದ್ದಾರೆ.ಈ ಸಂಬಂಧ ಮುಖ್ಯಮಂತ್ರಿಗಳು ಹಣ ಬಿಡುಗಡೆ ಮಾಡುವಂತೆ ಸೂಚಿಸಿ ಹಣಕಾಸು ಇಲಾಖೆಗೆ ಪತ್ರ ಬರೆದಿದ್ದಾರೆ. ಇನ್ನಷ್ಟೇ ಹಣ ಬಿಡುಗಡೆಯಾಗಬೇಕಿದೆ. ವಿಧಾನಸಭಾ ಅಧ್ಯಕ್ಷ ಕೆ.ಜಿ. ಬೋಪಯ್ಯ ಹಾಗೂ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಪ್ರಯತ್ನ ನಡೆಸಿದಲ್ಲಿ ಶೀಘ್ರ ಸರ್ಕಾರ ಹಣ ಬಿಡುಗಡೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.ಕೊಡಗು ಜಿಲ್ಲೆ ಆರೋಗ್ಯ ಕ್ಷೇತ್ರದಲ್ಲಿ ಸ್ವಲ್ಪ ಹಿಂದೆ ಬಿದ್ದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ‘ಭವ್ಯ ಬಂಗಲೆ’ಯಂತಹ ಜಿಲ್ಲಾಸ್ಪತ್ರೆಯಿದ್ದರೂ ಇದುವರೆಗೆ ಒಂದು ತುರ್ತು ಚಿಕಿತ್ಸಾ ನಿಗಾ ಘಟಕವಿಲ್ಲದೆ ನಲುಗುತ್ತಿತ್ತು. ಪರಿಣಾಮ, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಂತಹ ಗಾಯಾಳುಗಳನ್ನು ಮಂಗಳೂರೋ ಅಥವಾ ಮೈಸೂರಿಗೋ ಕೊಂಡೊಯ್ಯಬೇಕಾಗಿತ್ತು. ಹೀಗೆ, ಮಂಗಳೂರು ಅಥವಾ ಮೈಸೂರಿಗೆ ಕೊಂಡೊಯ್ಯುವಂತಹ ಗಾಯಾಳುಗಳು ಮಾರ್ಗಮಧ್ಯೆ ಸಾವನ್ನಪ್ಪಿದ ಉದಾಹರಣೆಗಳು ಹಲವು.ಮೈಸೂರು- ಮಂಗಳೂರು ರಾಜ್ಯ ಹೆದ್ದಾರಿ ನಡುವೆ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಮುಗಿದ ನಂತರ ಎಷ್ಟು ವೇಗ ಹಾಗೂ ಸಲೀಸಾಗಿ ವಾಹನಗಳು ಸಂಚರಿಸುತ್ತವೆಯೋ ಅಪಘಾತಗಳ ಸಂಖ್ಯೆ ಕೂಡ ಹೆಚ್ಚುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ, ಮಂಗಳೂರು ಹಾಗೂ ಮೈಸೂರಿಗೆ ಸಮಾನ ದೂರವಿರುವ ಕೊಡಗಿನ ಜಿಲ್ಲಾಸ್ಪತ್ರೆಯಲ್ಲಿ ಒಂದು ತುರ್ತು ಚಿಕಿತ್ಸಾ ನಿಗಾ ಘಟಕ ಅನಿವಾರ್ಯವಾಗಿತ್ತು.ಒಂದೆರಡು ತಿಂಗಳ ಹಿಂದೆಯಷ್ಟೇ ಸುದರ್ಶನ್ ಅತಿಥಿಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂಸದ ಎಚ್. ವಿಶ್ವನಾಥ್ ಕೂಡ ಜಿಲ್ಲಾಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ನಿಗಾ ಘಟಕ ಸ್ಥಾಪನೆಗೆ ಅಗತ್ಯವಿರುವ ಅನುದಾನವನ್ನು ತಮ್ಮ ಸಂಸದರ ನಿಧಿಯಿಂದ ನೀಡುವ ಭರವಸೆ ನೀಡಿದ್ದರು. ಸಂಸದರು ಭರವಸೆ ನೀಡಿದ ಬೆನ್ನಲ್ಲಿಯೇ ರಾಜ್ಯ ಸರ್ಕಾರ ತುರ್ತು ಚಿಕಿತ್ಸಾ ನಿಗಾ ಘಟಕ ಸ್ಥಾಪನೆಗೆ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಲು ಆದೇಶಿಸಿದೆ.ಆದರೆ, 25 ಲಕ್ಷ ರೂಪಾಯಿ ವೆಚ್ಚದಲ್ಲಿ ಜಿಲ್ಲಾಸ್ಪತ್ರೆಯ ಮುಂಭಾಗದಲ್ಲಿ ಸಂಪರ್ಕ ಸೇತುವೆ ನಿರ್ಮಿಸಲು ಕಷ್ಟ ಎನ್ನುತ್ತಾರೆ ಆಸ್ಪತ್ರೆಯ ಅಧಿಕಾರಿಗಳು. ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪರ್ಕ ಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಆದರೆ, ಸರ್ಕಾರ ಇದೀಗ ಒಂದು ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಇನ್ನೂ 75 ಲಕ್ಷ ರೂಪಾಯಿಗಳ ಅಗತ್ಯವಿದೆ.ಪ್ರಸ್ತುತ, ರಾಜ್ಯ ಸರ್ಕಾರ 25 ಲಕ್ಷ ರೂಪಾಯಿ ಬಿಡುಗಡೆ ಮಾಡಿದಲ್ಲಿ ಸಂಸದರು ಹಾಗೂ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ನೆರವು ಪಡೆದು ಸಂಪರ್ಕ ಸೇತುವೆಯನ್ನು ನಿರ್ಮಿಸಲು ಇಲಾಖೆ ಮುಂದಾಗಬೇಕಿದೆ. ಮಡಿಕೇರಿಯಿಂದ ಸಂಪಾಜೆ ನಡುವಣ ಹೆದ್ದಾರಿ ಕಾಮಗಾರಿ ಮುಗಿಯುವ ಮಧ್ಯೆಯೇ ಸಂಪರ್ಕ ಸೇತುವೆಗೂ ಸರ್ಕಾರ ಹಣ ಬಿಡುಗಡೆ ಮಾಡಿದಲ್ಲಿ ಯೋಜನೆ ಮುಂದುವರಿಸಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಜನಪ್ರತಿನಿಧಿಗಳು ಒಟ್ಟಿಗೆ ಪ್ರಯತ್ನ ನಡೆಸಬೇಕಾಗಿದೆ.ಜಿಲ್ಲಾಸ್ಪತ್ರೆಯಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪಿದವರ ಶವಗಳನ್ನು ರಸ್ತೆ ಮಧ್ಯೆ ಕೊಂಡೊಯ್ಯುವುದು, ರಕ್ತ ನಿಧಿಯಿಂದ ರಕ್ತ ಬೇಕಾದವರು, ಹೊರಗಿನ ಔಷಧಿ ಮಳಿಗೆಗಳಿಂದ ಔಷಧಿ ಖರೀದಿಸಬೇಕಾದವರು, ಮುಖ್ಯವಾಗಿ ವೈದ್ಯರು, ಶುಶ್ರೂಷಕಿಯರು ಹಾಗೂ ರೋಗಿಗಳಿಗೆ ಉದ್ದೇಶಿತ ಸಂಪರ್ಕ ಸೇತುವೆ ನಿರ್ಮಾಣ ಅನಿವಾರ್ಯವಾಗಿದೆ. ಹೆರಿಗೆ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಯನ್ನು ಬೇರ್ಪಡಿಸಿರುವ ಹೆದ್ದಾರಿ ಮಧ್ಯೆ ಸಂಪರ್ಕ ಸೇತುವೆ ನಿರ್ಮಾಣವಾದಲ್ಲಿ ಇದರಿಂದ ಸಾರ್ವಜನಿಕರಿಗೂ ಅನುಕೂಲವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.‘ತುರ್ತು ಚಿಕಿತ್ಸಾ ನಿಗಾ ಘಟಕಕ್ಕೆ ಒಂದು ಕೋಟಿ ರೂಪಾಯಿ ಹಾಗೂ ಸಂಪರ್ಕ ಸೇತುವೆ ನಿರ್ಮಾಣಕ್ಕೆ 25 ಲಕ್ಷ ರೂಪಾಯಿ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳು ಹಣಕಾಸು ಇಲಾಖೆಗೆ ಬರೆದಿರುವ ಪತ್ರ ತಮ್ಮ ಕೈತಲುಪಿದೆ. ಆದರೆ, ಇನ್ನೂ ಹಣ ಬಿಡುಗಡೆಯಾಗಿಲ್ಲ. ಈ ಸಂಬಂಧ ಇಲಾಖೆಯ ಮೇಲಧಿಕಾರಿಗಳಿಗೂ ಪತ್ರ ಬರೆದಿದ್ದು, ಹಣ ಬಿಡುಗಡೆಗೆ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಸಿ.ಕೆ. ಅಜಿತ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.ಈ ಬಗ್ಗೆ ಜಿಲ್ಲಾಧಿಕಾರಿ ಕೆ.ಎಚ್. ಅಶ್ವತ್ಥನಾರಾಯಣಗೌಡ ಅವರನ್ನು ಸಂಪರ್ಕಿಸಿದಾಗ, ‘ಮುಖ್ಯಮಂತ್ರಿಗಳು ಮಡಿಕೇರಿಗೆ ಬಂದಾಗ ನೀಡಿದ ಭರವಸೆಯಂತೆ ಸಂಬಂಧಪಟ್ಟ ಇಲಾಖೆಗಳ ಪ್ರಸ್ತಾವದ ಮೇರೆಗೆ ಹಣ ಬಿಡುಗಡೆ ಮಾಡಲು ಆದೇಶಿಸಿದ್ದಾರೆ. ಆದರೆ, ಇದುವರೆಗೆ ಯಾವುದಕ್ಕೂ ಹಣ ಬಿಡುಗಡೆಯಾಗಿಲ್ಲ. ಶೀಘ್ರ ಬಿಡುಗಡೆಯಾಗುವ ಸಾಧ್ಯತೆಯಿದೆ’ ಎಂದು ಹೇಳಿದರು.ಒಟ್ಟಿನಲ್ಲಿ, ಇನ್ನೂ ಅಗತ್ಯ ಮೂಲಭೂತ ಸೌಲಭ್ಯಗಳಿಂದ ನಲುಗುತ್ತಿರುವ ಜಿಲ್ಲಾಸ್ಪತ್ರೆಗೆ ತುರ್ತು ಚಿಕಿತ್ಸಾ ನಿಗಾ ಘಟಕಕ್ಕೆ 1 ಕೋಟಿ ರೂಪಾಯಿ ಹಾಗೂ ಆಸ್ಪತ್ರೆಯ ಮುಂಭಾಗದಲ್ಲಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ 25 ಲಕ್ಷ ರೂಪಾಯಿ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳು ಆದೇಶಿಸುವ ಮೂಲಕ ನುಡಿದಂತೆ ನಡೆದಿದ್ದಾರೆ. ಆದರೆ, ಹಣ ಬಿಡುಗಡೆ ಮಾಡಿಸಿ ಕೆಲಸ ಮಾಡಿಸುವ ಜವಾಬ್ದಾರಿ ನಮ್ಮ ಜನಪ್ರತಿನಿಧಿಗಳದ್ದು.ನಮ್ಮ ಇಬ್ಬರು ಶಾಸಕರು ಕೂಡ ತಮ್ಮದೇ ಆದ ಸರ್ಕಾರದ ಮೇಲೆ ಪ್ರಭಾವ ಬೀರುವಷ್ಟು ಸಾಮರ್ಥ್ಯ ಹೊಂದಿರುವುದರಿಂದ ದಸರಾ ಸಂದರ್ಭದಲ್ಲಿ ಯಾವ ರೀತಿ ಹಣ ಬಿಡುಗಡೆಗೆ ಪ್ರಯತ್ನ ನಡೆಸಿದರೋ ಅದೇ ರೀತಿ, ಇಂತಹ ಅಭಿವೃದ್ಧಿ ಕಾಮಗಾರಿಗಳಿಗೂ ಹಣ ಬಿಡುಗಡೆ ಮಾಡಿಸಲು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲಿ ಎಂಬುದು ನಾಗರಿಕರ ಮನವಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.