ಗುರುವಾರ , ಮೇ 13, 2021
24 °C

ಜಿಲ್ಲಾ ಕೌಟುಂಬಿಕ ನ್ಯಾಯಾಲಯಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲಾ ಕೇಂದ್ರವಾದ ನಗರದಲ್ಲಿ ಸೋಮವಾರದಿಂದ ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಕಾರ್ಯಾರಂಭ ಮಾಡಿದೆ.

ಪ್ರಸ್ತುತ ಕೋಲಾರ ನಗರ ಮತ್ತು ಕಂದಾಯ ತಾಲ್ಲೂಕು ವ್ಯಾಪ್ತಿಯ ಎಲ್ಲ ಕೌಟುಂಬಿಕ ವ್ಯಾಜ್ಯಗಳು ಮಾತ್ರ ಇನ್ನು ಮುಂದೆ ಇದೇ ನ್ಯಾಯಾಲಯದಲ್ಲಿ ಇತ್ಯರ್ಥವಾಗಲಿದೆ. ಜಿಲ್ಲಾ ನ್ಯಾಯಾಲಯದಲ್ಲಿದ್ದ ಕುಟುಂಬ ಕಲಹಕ್ಕೆ ಸಂಬಂಧಿಸಿದ 426 ಮೊಕದ್ದಮೆಗಳನ್ನು ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.ನಗರದ ವಕೀಲರ ಸಂಘದ ಸಭಾಂಗಣದಲ್ಲಿ ಸೋಮವಾರ ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರೇಣುಕಾ ಪ್ರಸಾದ್, ಕೌಟುಂಬಿಕ ವ್ಯಾಜ್ಯಗಳ ಶೀಘ್ರ ವಿಲೇವಾರಿ ಸಲುವಾಗಿ ರಾಜ್ಯದಲ್ಲಿ 10 ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯಗಳ ಸ್ಥಾಪನೆಗೆ ಅನುಮೋದನೆ ದೊರೆತಿದೆ. ಇದರ ಜತೆ ಬಳ್ಳಾರಿ, ಚಿಕ್ಕಮಗಳೂರು, ಗದಗ, ಹಾಸನ, ತುಮಕೂರು, ಕೋಲಾರದಲ್ಲಿ ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಸ್ಥಾಪನೆಯಾಗಿವೆ ಎಂದರು.ಕೌಟುಂಬಿಕ ಕಲಹದ ಪ್ರಕರಣವನ್ನು ಕಕ್ಷಿದಾರರು ಏಕಾಏಕಿ ದಾಖಲಿಸುವಂತಿಲ್ಲ. ಅವರು ಮನವಿ ಸಲ್ಲಿಸಿ ತಮ್ಮ ಸಮಸ್ಯೆ ಮಂಡಿಸಬೇಕು. ತಮ್ಮ ಪರ ವಕೀಲರನ್ನು ನೇಮಿಸಿಕೊಳ್ಳಲು ಕೋರಿಕೆ ಸಲ್ಲಿಸಬೇಕು. ಹೊರಗಿನ ಪ್ರಭಾವಗಳಿಗೆ ಕಕ್ಷಿದಾರರು ಒಳಗಾಗುವುದನ್ನು ತಪ್ಪಿಸಲು ಈ ವ್ಯವಸ್ಥೆ ಮಾಡಲಾಗಿದೆ ಎಂದರು.ಪ್ರಕರಣ ದಾಖಲಿಸಿದ ಬಳಿಕ ಸಮಾಲೋಚನಾ ಹಂತದಲ್ಲಿ ತಜ್ಞ ವಕೀಲರು ಸಮಾಲೋಚನೆ ನಡೆಸುತ್ತಾರೆ. ಇದು ಕಡ್ಡಾಯ. ನಂತರ ಮಧ್ಯಸ್ಥಿಕೆ ಹಂತದಲ್ಲಿ ದಾಂಪತ್ಯ ಸರಿಪಡಿಸಲು ಪ್ರಯತ್ನಿಸಲಾಗುತ್ತದೆ. ಅಲ್ಲಿಯೂ ಸಾಧ್ಯವಾಗದಿದ್ದರೆ ಮಾತ್ರ ವಿವಾಹ ವಿಚ್ಛೇದನದಂಥ ತೀರ್ಪನ್ನು ನೀಡಲಾಗುತ್ತದೆ ಎಂದರು.

ನ್ಯಾಯಾಧೀಶರಾದ ಪ್ರೇಮಾವತಿ ಮನಗೋಳಿ, ಮಲ್ಲಿಕಾರ್ಜುನ ಕಿಣಕೇರಿ, ವಕೀಲರ ಸಂಘದ ಪ್ರಮುಖರಾದ ಟಿ.ಎಂ.ಶಿವಣ್ಣ, ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.