ಶನಿವಾರ, ಜನವರಿ 18, 2020
26 °C

ಜಿಲ್ಲೆಯಾದ್ಯಂತ ಕ್ರಿಸ್‌ಮಸ್‌ ಸಂಭ್ರಮ, ಸಡಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಲ್ಲೆಯಾದ್ಯಂತ ಕ್ರಿಸ್‌ಮಸ್‌ ಸಂಭ್ರಮ, ಸಡಗರ

ಚಿಕ್ಕಬಳ್ಳಾಪುರ:  ಜಿಲ್ಲೆಯಾದ್ಯಂತ ಮಂಗಳವಾರ ಮಧ್ಯರಾತ್ರಿ ಕ್ರಿಸ್‌ಮಸ್‌ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ನಗರ, ಪಟ್ಟಣಗಳಲ್ಲಿ ಅಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿನ ಚರ್ಚ್‌ಗಳಲ್ಲಿ ಯೇಸು ಕ್ರಿಸ್ತನನ್ನು ಸ್ಮರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ಸ್ನೇಹಿತರು, ಸಂಬಂಧಿಕರು ಮತ್ತು ಆಪ್ತರೊಡನೆ ಹಬ್ಬವನ್ನು ಆಚರಿಸಲು ಎಲ್ಲರೂ ಚರ್ಚ್‌ಗೆ ಆಗಮಿಸಿದ್ದರು. ಪೋಷಕರು ತಮ್ಮ ಮಕ್ಕಳೊಡನೆ ಚರ್ಚ್‌ಗೆ ಆಗಮಿಸಿದ್ದರೆ, ಯುವಜನರು ತಮ್ಮ ಸ್ನೇಹಿತರು ಮತ್ತು ಆಪ್ತರೊಡನೆ  ಬಂದಿದ್ದರು.ಸಾಮೂಹಿಕವಾಗಿ ‘ವಿಶ್ವದೆಲ್ಲೆಡೆ ಶಾಂತಿ ಮತ್ತು ನೆಮ್ಮದಿ ನೆಲೆಸಲಿ. ವಿಶ್ವದ ಪ್ರತಿಯೊಂದು ಜೀವಿಗೂ ಬದುಕುವ ಅವಕಾಶ ಸಿಗಲಿ’ ಎಂದು ಪ್ರಾರ್ಥಿಸಿದರು.ನಗರದ ಪ್ರವಾಸಿ ಮಂದಿರ ಎದುರಿನ ಸಿಎಸ್ಐ ಕ್ರೈಸ್ಟ್‌ ಚರ್ಚ್‌ನಲ್ಲಿ ಸಂಜೆ 6.30ಕ್ಕೆ ಮೇಣದ ಬತ್ತಿ ಆರಾಧನಾ ಪ್ರಾರ್ಥನೆಯಲ್ಲಿ ಚರ್ಚ್‌ನ ಸಭಾಪಾಲಕರಾದ ರೆವರೆಂಡ್‌ ಶೈಲಶ್ರೀ ಸುರೇಶ್‌, ಕಾರ್ಯದರ್ಶಿ ಎಸ್‌.ರವಿಕುಮಾರ್‌, ಖಜಾಂಚಿ ಡಿ.ಅರುಣ್‌ಕುಮಾರ್‌, ಕಾರ್ಯಕ್ರಮ ಸಂಯೋಜಕ ಆರ್‌.ಹೆನ್ರಿ ಪ್ರಸನ್ನಕುಮಾರ್‌ ಮುಂತಾದವರು ಭಾಗವಹಿಸಿದ್ದರು. ಹಬ್ಬದ ಪ್ರಯುಕ್ತ ಬುಧವಾರ ಬೆಳಿಗ್ಗೆ 8.30ಕ್ಕೆ ವಿಶೇಷ ಆರಾಧನೆ ಕಾರ್ಯಕ್ರಮ ಜರುಗಲಿದೆ.ನಗರದ ಬಿ.ಬಿ.ರಸ್ತೆ ಬದಿಯಲ್ಲಿರುವ ಸಂತ ಫ್ರಾನ್ಸಿಸ್‌ ಕ್ಸೇವಿಯರ್‌ ಚರ್ಚ್‌ನಲ್ಲಿ ರಾತ್ರಿ 11.30ರ ಸುಮಾರಿಗೆ ವಿಶೇಷ ಪ್ರಾರ್ಥನೆ ಆರಂಭಗೊಂಡಿತು. ಮಧ್ಯರಾತ್ರಿ 12ರ ಸುಮಾರಿಗೆ ಯೇಸು ಕ್ರಿಸ್ತ ಜನಿಸಿದ್ದನ್ನು ಸ್ಮರಿಸಿ ವಿಶೇಷ ಗೀತೆಗಳನ್ನು ಹಾಡಲಾಯಿತು. ಚರ್ಚ್‌ನ ಫಾದ್ರಿ ರೆವರೆಂಡ್‌ ರಾಯ್ಸ್‌ ಅವರ ಅಧ್ಯಕ್ಷತೆಯಲ್ಲಿ ಗಾಯನ, ಪ್ರಾರ್ಥನೆ ನೆರವೇರಿತು. ಸಂತ ಫ್ರಾನ್ಸಿಸ್‌ ಕ್ಸೇವಿಯರ್‌ ಚರ್ಚ್‌ ಯೂಥ್‌ ಅಸೋಸಿಯೇಷನ್‌ನ ಪೀಟರ್‌, ಅಪ್ಪು, ರಿಷಿ, ಸಂಜಯ್‌, ಬಾಲು, ನವೀನ್‌ ಉಪಸ್ಥಿತರಿದ್ದರು.ಶಾಲೆಯಲ್ಲಿ ಕ್ರಿಸ್‌ಮಸ್‌ ಸಂಭ್ರಮ

ಚಿಕ್ಕಬಳ್ಳಾಪುರ:
ಮಕ್ಕಳ ಮಾನಸಿಕ ಮತ್ತು ದೈಹಿಕ ವಿಕಸನಕ್ಕೆ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಇತರ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಮಗುವಿನ ಸಮತೋಲನದ ಬೆಳವಣಿಗೆಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಮುಖ್ಯ ಎಂದು ಸಿಎಸ್‌ಐ ಕ್ರೈಸ್ಟ್‌ ಚರ್ಚ್‌ ಸಭಾಪಾಲಕರಾದ ಶೈಲಶ್ರೀ ಸುರೇಶ್‌ ತಿಳಿಸಿದರು.ನಗರದ ನ್ಯೂ ಬಿಷಷ್ ಕಾಟನ್‌ ಶಾಲೆಯಲ್ಲಿ ಇತ್ತೀಚೆಗೆ ನಡೆದ ಶಾಲಾ ವಾರ್ಷಿಕೋತ್ಸವ ಮತ್ತು ಕ್ರಿಸ್‌ಮಸ್ ಹಬ್ಬದ ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರು ಮತ್ತು ಪೋಷಕರು ಸಹ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.ಸಿಎಸ್ಐ ಕ್ರೈಸ್ಟ್‌ ಚರ್ಚ್‌ನ ಕಾರ್ಯದರ್ಶಿ ರವಿಕುಮಾರ್‌, ಜಯಕುಮಾರ್‌, ಅರುಣ್‌ಕುಮಾರ್‌, ಕಿರಣ್‌ ವಿಕ್ಟರ್‌, ಮೋಹನ್‌ಕುಮಾರ್‌, ಸನತ್‌ಕುಮಾರ್‌ ಮತ್ತು ಚರ್ಚ್‌ನ ಸಭಾಪಾಲನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ಸುಧಾಮಣಿ ಶಾಲೆಯ ವಾರ್ಷಿಕ ವರದಿ ವಾಚಿಸಿದರು. ಶಾಲೆಯ ಶಿಕ್ಷಕರಾದ ವಿಕ್ರಮ್‌, ಮೇರಿ, ಮಂಜುಳಾ ಸುಧಾಕರ್‌, ಶೋಭಾರಾಣಿ, ಪ್ರಭಾವತಿ, ಲಾವಣ್ಯಾ, ಗಿರಿಜಾ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)