ಸೋಮವಾರ, ಮಾರ್ಚ್ 8, 2021
19 °C

ಜೀರ್ಣೋದ್ಧಾರಕ್ಕೆ ಕಾದಿದೆ ದೇಗುಲ

ಹಿರೀಸಾವೆ Updated:

ಅಕ್ಷರ ಗಾತ್ರ : | |

ಜೀರ್ಣೋದ್ಧಾರಕ್ಕೆ ಕಾದಿದೆ ದೇಗುಲ

ಹಿರೀಸಾವೆ: ಹೋಬಳಿಯ ದಿಡಗ ಗ್ರಾಮದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿರುವ ಕಲ್ಲಿನ ಕಟ್ಟಡವು ಸಾವಿರಾರು ವರ್ಷದ ಇತಿಹಾಸ ಹೊಂದಿದ್ದು, ಅಲ್ಲಲ್ಲಿ ಶಿಥಿಲಗೊಂಡಿದೆ.ದಿಡಗ: ಕಲ್ಕಿಣಿ ನಾಡಿನೊಳಗಿನ ಸಾಮಂತರ ಆಳ್ವಿಕೆಯ ಕೇಂದ್ರಸ್ಥಾನ. ದಿಂಡುಗ ಎಂಬ ಕಾಡು ಜಾತಿಯ ಮರಗಳು ಹೆಚ್ಚು ಬೆಳೆದಿದ್ದ ಜಾಗವನ್ನು ಅಂದಿನ ಜನರು ಗುರುತಿಸಿದ್ದರು. ಈ ಮರವನ್ನು ವಿವಿಧ ಕೃಷಿ ಉಪಕರಣಗಳಿಗೆ ಬಳಕೆ ಮಾಡುತ್ತಿದ್ದರು.ದಿಂಡುಗ ಪ್ರದೇಶದಲ್ಲಿ ಜನರು ವಾಸ ಮಾಡಲು ಪ್ರಾರಂಭಿಸಿ, ಕಾಲಕ್ರಮೇಣ ಜನರ ಮಾತಿನಲ್ಲಿ ದಿಂಡುಗ ಎಂಬ ಪದವು ದಿಡಗವಾಗಿ ರೂಪಗೊಂಡಿದೆ ಎಂದು ಸ್ಥಳನಾಮಗಳ ಅಧ್ಯಯನ ನಡೆಸಿರುವ ನಿಂಬೇಹಳ್ಳಿಯ ಡಾ.ಚಂದ್ರು ಹೇಳುತ್ತಾರೆ.ಗ್ರಾಮದ ಈಶ್ಯಾನ ಭಾಗದಲ್ಲಿರುವ ಕೆರೆಯ ಕೊಡಿ ಪಕ್ಕದಲ್ಲಿ ದಕ್ಷಿಣಾಭಿಮುಖವಾಗಿ ಪ್ರವೇಶ ದ್ವಾರವಿರುವ ಬಲ್ಲೇಶ್ವರ (ಈಶ್ವರ) ಎಂಬ ದೇವಸ್ಥಾನವಿದೆ. ಇದರ ಪಕ್ಕದಲ್ಲಿಯೇ ಬಾಣೇಶ್ವರ ಎಂಬ ಇನ್ನೂಂದು ದೇವಸ್ಥಾನವಿದ್ದು, ಕಳೆದ ವರ್ಷ ಭಕ್ತರು ಪುನರ್ ನಿರ್ಮಾಣ ಮಾಡಿದ್ದಾರೆ.ಕ್ರಿ.ಶ.1112 ರಲ್ಲಿ ಹೊಯ್ಸಳರ ಆಡಳಿತದಲ್ಲಿ ದೇವಸ್ಥಾನವನ್ನು ಕಟ್ಟಲಾಗಿದೆ ಎಂದು ಸ್ಥಳದಲ್ಲಿ ದೊರೆತಿರುವ ಶಾಸನದಲ್ಲಿ ಕೆತ್ತಲಾಗಿದೆ. ವೇಸರ ಶೈಲಿಯ (ಹೊಯ್ಸಳ ಶೈಲಿ) ದ್ವಿಕೂಟ ಮಾದರಿಯಲ್ಲಿ ನಿರ್ಮಿಸಲಾಗಿದೆ. ಹೊರಭಾಗದ ಮುಖ್ಯ ದ್ವಾರದಲ್ಲಿ ಎರಡು ಕಂಬ, ದ್ವಾರ ಪಾಲಕರುಗಳ ವಿಗ್ರಹಳು ಇವೆ. ನವರಂಗದಲ್ಲಿ ನಾಲ್ಕು ಕಂಬಗಳಿದ್ದು, ಅವುಗಳು ಕುಸರಿ ಕೆತ್ತನೆಯಿಂದ ಕೂಡಿವೆ.ಅಷ್ಟಮೂಲೆಯ ಪಾಣಿಪೀಠದ ಮೇಲೆ ಶಿವನ ಲಿಂಗ ಪ್ರತಿಷ್ಠಾಪಿಸಲಾಗಿದೆ. ಸುಬ್ರಹ್ಮಣ್ಯ ಸೇರಿದಂತೆ ಹಲವು ದೇವರುಗಳ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡಿರುವ ಕುರುಹುಗಳು ಇಲ್ಲಿವೆ.ಹಲವು ವರ್ಷಗಳಿಂದ ನಿರ್ವಹಣೆ ಇಲ್ಲದೇ ದೇವಸ್ಥಾನವು ಪಾಳು ಬಿದ್ದಿದೆ. ಮುಖ್ಯದ್ವಾರದ ಶಿಖರಗಳು ಬಿದ್ದುಹೋಗಿವೆ. ದೇವಾಲಯದ ಹೊರಭಾಗದ ಗೋಡೆಯ ಸುತ್ತ ಗಿಡಗಂಟಿ ಬೆಳೆದು ದೇವಸ್ಥಾನವೇ ಕಾಣದಾಗಿದೆ.ಹಲವು  ವಿಗ್ರಹಗಳನ್ನು ಭಗ್ನಗೊಳಿಸಲಾಗಿದೆ. ದೇವಸ್ಥಾನದಲ್ಲಿದ್ದ ಸಪ್ತಮಾತೃಕೆಯರ ವಿಗ್ರಹಗಳು ಕಳ್ಳತನವಾಗಿವೆ. ‘ಶಿಲ್ಪ ಕಲೆ ಮತ್ತು ಹೊಯ್ಸಳರ ಇತಿಹಾಸ ತಿಳಿಸುವ ದೇವಸ್ಥಾನದ ಬಗ್ಗೆ ಪುರಾತತ್ವ ಇಲಾಖೆಯಾಗಲಿ ಆಥವಾ ಸ್ಥಳಿಯ ಆಡಳಿತವಾಗಲಿ ಗಮನಹರಿಸದಿರುವುದು ದುರದೃಷ್ಟದ ಸಂಗತಿ’ ಎನ್ನುತ್ತಾರೆ ಶಾಸನಗಳ ಕಿರಿಯ ಸಂಶೋಧಕ ಹಿರೀಸಾವೆ ಚೇತನ್.

ಹಲವು ವರ್ಷಗಳ ಹಿಂದೆ ಈ ದೇವಸ್ಥಾನದ ಪಕ್ಕದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಈಚಿನ ದಿನಗಳಲ್ಲಿ ಗ್ರಾಮಸ್ಥರು ಆಸಕ್ತಿ ವಹಿಸಿ ಶಿಥಿಲಗೊಂಡಿರುವ ದೇವಸ್ಥಾನವನ್ನು ಶಾಲಾ ಆವರಣಕ್ಕೆ ಸೇರಿಸಿ, ಬೇಲಿ ಹಾಕಿದ್ದಾರೆ. ಇನ್ನೂ ಸಾಕಷ್ಟು ಕೆಲಸಗಳು ಬಾಕಿ ಇವೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.