ಜೀವನ ಸಾಗಿಸಲು ಪದಕ ಮಾರಾಟ!

ಶುಕ್ರವಾರ, ಮೇ 24, 2019
23 °C

ಜೀವನ ಸಾಗಿಸಲು ಪದಕ ಮಾರಾಟ!

Published:
Updated:

ಹಾಸನ: ಬೀಚ್ ವಾಲಿಬಾಲ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿ ದೇಶಕ್ಕೆ ಬಹುಮಾನ ತಂದುಕೊಟ್ಟಿರುವ ಕ್ರೀಡಾಪಟುಗಳು ಈಗ ತಮಗೆ ದೊರೆತ ಮೆಡಲ್, ಪ್ರಶಸ್ತಿಗಳನ್ನು ಮಾರಾಟ ಮಾಡಿ ಬದುಕು ಸಾಗಿಸಬೇಕಾದ ಸ್ಥಿತಿ ಎದುರಾಗಿದೆ.ಹಾಸನದ ಶಿಕ್ಷಣ ಇಲಾಖೆಯಲ್ಲಿ ಎಸ್‌ಡಿಸಿ ಹುದ್ದೆಯಲ್ಲಿ ದುಡಿಯುತ್ತಿರುವ ಅಂತೋಣಪ್ಪ ಎಂಬ ಕ್ರೀಡಾಪಟು ಈ ಸ್ಥಿತಿಗೆ ಬಂದಿದ್ದು, ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಳಲು ತೋಡಿಕೊಂಡರು.`ಅಂಗವಿಕಲರ ಕ್ರೀಡಾ ಕೂಟದಲ್ಲಿ ಕಳೆದ ಹಲವು ವರ್ಷಗಳಿಂದ ನಾನು ಮತ್ತು ನನ್ನ ಜತೆ ಆಟಗಾರರು ರಾಜ್ಯ, ರಾಷ್ಟ್ರಗಳನ್ನು ಪ್ರತಿನಿಧಿಸುತ್ತ ಬಂದಿದ್ದೇವೆ. ನಾಲ್ಕು ವರ್ಷಗಳಿಂದ ನಾನು ಭಾರತ ತಂಡದ ನಾಯಕನಾಗಿದ್ದೇನೆ. ನಾವು ಅಂತರರಾಷ್ಟ್ರೀಯ ಮಟ್ಟದ ಎಂಟು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದೇವೆ.ಈಚೆಗೆ ಜರ್ಮನಿಯಲ್ಲಿ ನಡೆದ ಕ್ರೀಡಾಕೂಟದಲ್ಲಿ ದೇಶಕ್ಕೆ ಎರಡನೇ ಸ್ಥಾನ ಗೆದ್ದು ತಂದಿದ್ದೇವೆ. ಆದರೆ ಸರ್ಕಾರ ನಮ್ಮ ವಿಮಾನದ ಖರ್ಚನ್ನೂ ಭರಿಸಲಿಲ್ಲ~ ಎಂದು ಅವರು ಬೇಸರ ವ್ಯಕ್ತಪಡಿಸಿದರು.ರಾಜ್ಯ. ರಾಷ್ಟ್ರ, ಅಂತರರಾಷ್ಟ್ರೀಯ ಕ್ರೀಡಾಕೂಟದ ಯಾವುದೇ ವಿಭಾಗದಲ್ಲಿ ಪಾಲ್ಗೊಂಡು ಬಹುಮಾನ ಗೆದ್ದರೆ ವೃತ್ತಿಯಲ್ಲಿ ಬಡ್ತಿ, ಕನಿಷ್ಠ ಐದು ವೇತನ ಬಡ್ತಿ ಹಾಗೂ ಇನ್ನೂ ಹಲವು ಸೌಲಭ್ಯಗಳನ್ನು ಕೊಡಬೇಕು ಎಂಬ ಸರ್ಕಾರದ ಮಾರ್ಗಸೂಚಿಯೇ ಇದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ ಗೆದ್ದರೆ ನಗದು ಹಣದ ಜತೆಗೆ ಒಂದು ನಿವೇಶನವನ್ನೂ ಕೊಡಬೇಕು. ನಾವು ಎಂಟುಬಾರಿ ರಾಷ್ಟ್ರವನ್ನು ಪ್ರತಿನಿಧಿಸಿದ್ದೇವೆ.ಕಳೆದಬಾರಿಯಂತೂ ಎರಡನೇ ಸ್ಥಾನ ಪಡೆದಿದ್ದೇವೆ. ನಿವೇಶನವಿರಲಿ, ನಮಗೆ ಊಟದ ಖರ್ಚನ್ನೂ ಕೊಟ್ಟಿಲ್ಲ. ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ಸಾಲ ಮಾಡುತ್ತ ಹೋಗಿ ಈಗ ಮೂರೂವರೆ ಲಕ್ಷ ರೂಪಾಯಿ ಸಾಲದಲ್ಲಿ ಮುಳುಗಿದ್ದೇನೆ. ಇದೇ ಸ್ಥಿತಿ ಮುಂದುವರಿದರೆ ದೇಶವನ್ನು ಪ್ರತಿನಿಧಸಲು ನೀಡಿದ್ದ ಕಲರ್ಸ್‌, ಪಡೆದ ಮೆಡಲು, ಶೀಲ್ಡ್‌ಗಳನ್ನು ಮಾರಾಟ ಮಾಡಿ ಸಾಲ ತೀರಿಸಬೇಕಾಗುತ್ತದೆ.ನಗರಸಭೆಯವರು ಮೂರು ವರ್ಷ ಹಿಂದೆ ನನಗೆ ಆರ್ಥಿಕ ಸಹಾಯ ಒದಗಿಸುನ ಠರಾವು ಅಂಗೀಕರಿಸಿದ್ದರು. ಆದರೆ ಈವರೆಗೆ ಒಂದು ರೂಪಾಯಿಯನ್ನೂ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿದ್ದ ಚಿತ್ರ ಕಲಾವಿದ ಕೆ.ಟಿ. ಪ್ರಕಾಶ್ ಮಾತನಾಡಿ, `ಅಂತೋಣಪ್ಪ ಕೆಲವು ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿದ್ದು, ಜಿಲ್ಲಾಧಿಕಾರಿ ಈ ಬಗ್ಗೆ ಮುತುವರ್ಜಿ ವಹಿಸಬೇಕು. ಅವರಿಗೆ ವೇತನ, ಹಾಗೂ ವೃತ್ತಿಯಲ್ಲಿ ಬಡ್ತಿ ನೀಡುವುದರ ಜತೆಗೆ ನಗರದಲ್ಲಿ ಒಂದು ನಿವೇಶನ ಮತ್ತು ಹೊರವಲಯದಲ್ಲಿ ಸ್ವಲ್ಪ ಕೃಷಿಭೂಮಿಯನ್ನು ನೀಡುವ ಮೂಲಕ ರಾಜ್ಯ, ರಾಷ್ಟ್ರಕ್ಕೆ ಗೌರವ ತಂದ ವ್ಯಕ್ತಿಯನ್ನು ಪುರಸ್ಕರಿಸಬೇಕು~ ಎಂದು ಮನವಿ ಮಾಡಿದರು.ಈ ವಿಚಾರವನ್ನು ನಗರಸಭೆಯ ಅಧ್ಯಕ್ಷ ಸಿ.ಆರ್. ಶಂಕರ್ ಅವರ ಗಮನಕ್ಕೆ ತಂದಾಗ, `ನಗರಸಭೆ ಠರಾವು ಅಂಗೀಕರಿಸಿದ್ದ ವಿಚಾರ ನಿನ್ನೆ ನನ್ನ ಗಮನಕ್ಕೆ ಬಂದಿದೆ. ಮಂಗಳವಾರ ನಡೆದ ಸಭೆಯಲ್ಲಿ ಅಂತೋಣಪ್ಪ ಅವರಿಗೆ ನೆರವು ನೀಡಲು ತೀರ್ಮಾನಿಸಿದ್ದು, ಶೀಘ್ರದಲ್ಲೇ ಹಣ ನೀಡಲಾಗುವುದು~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry