ಶುಕ್ರವಾರ, ಮೇ 29, 2020
27 °C

ಜುಲೈನಿಂದ ಮೂರು ದಿನಕ್ಕೊಮ್ಮೆ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: `ಜುಲೈನಿಂದ  ಅವಳಿನಗರದಲ್ಲಿ ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತದೆ. ಅದಕ್ಕೆ ಬೇಕಾದ ಎಲ್ಲ ತಯಾರಿಗಳನ್ನೂ ಜಲ ಮಂಡಳಿ ಮಾಡಿಕೊಳ್ಳುತ್ತಿದೆ~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ತಿಳಿಸಿದ್ದಾರೆ.ಜಲ ಮಂಡಳಿಯ ಅಧಿಕಾರಿಗಳೊಂದಿಗೆ ಮಂಗಳವಾರ ಮಹತ್ವದ ಸಭೆ ನಡೆಸಿದ ಅವರು, ನಂತರ `ಪ್ರಜಾವಾಣಿ~  ಜೊತೆ ಮಾತನಾಡಿದರು. `ಕುಡಿಯುವ ನೀರಿನ ಸಮಸ್ಯೆ ಕುರಿತು ಬೆಂಗಳೂರಲ್ಲಿ ಸಭೆ ನಡೆಸಲಾಗಿದ್ದು, ಕಾರ್ಯ ಪ್ರಗತಿಯ ವಿಷಯವಾಗಿ ಚರ್ಚಿಸಲು ಮತ್ತೆ ಇಲ್ಲಿ ಸಭೆ ಸೇರಿದ್ದೆವು~ ಎಂದು ಅವರು ತಿಳಿಸಿದರು.`ಜೂನ್ 30ರೊಳಗೆ ಶೇ. 80ರಷ್ಟು ಕಾಮಗಾರಿಗಳು ಮುಗಿಯಲಿವೆ. ನಂತರ ಮೂರು ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಆಗಲಿದೆ. ಅಲ್ಲಿಯವರೆಗೆ ಐದು ದಿನಗಳಿಗೊಮ್ಮೆ ತಪ್ಪದೆ ನೀರು ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ~ ಎಂದು ಅವರು ಹೇಳಿದರು. `ಜುಲೈ ಎರಡನೇ ವಾರದೊಳಗೆ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲಿವೆ~ ಎಂದು ಭರವಸೆ ವ್ಯಕ್ತಪಡಿಸಿದರು.`ಸವದತ್ತಿಯಿಂದ ಅಮ್ಮಿನಬಾವಿವರೆಗೆ 29.3 ಕಿ.ಮೀ. ಪೈಪ್‌ಲೈನ್ ಹಾಕುವ ಕಾಮಗಾರಿ ಮುಗಿದರೆ ಪ್ರತಿನಿತ್ಯ 68 ದಶಲಕ್ಷ ಲೀಟರ್ (ಎಂಎಲ್‌ಡಿ) ನೀರು ಹೆಚ್ಚುವರಿಯಾಗಿ ಲಭ್ಯವಾಗಲಿದ್ದು, ಮೂರು ದಿನಕ್ಕೊಮ್ಮೆ ನೀರು ಪೂರೈಸಲು ಯಾವುದೇ ತೊಡಕಾಗದು ಎಂಬ ಭರವಸೆಯಿದೆ~ ಎಂದರು. ಅಮ್ಮಿನಬಾವಿಯಿಂದ ಹುಬ್ಬಳ್ಳಿಯ ನೃಪತುಂಗ ಬೆಟ್ಟದವರೆಗೆ ಈಗಾಗಲೇ ಪೈಪ್‌ಲೈನ್ ವ್ಯವಸ್ಥೆ ಮಾಡಲಾಗಿದ್ದು ಬೆಟ್ಟದಲ್ಲಿ 68.3 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣ ಕಾಮಗಾರಿ ಕೂಡ ಪೂರ್ಣಗೊಂಡಿದೆ. ಅವಳಿನಗರಕ್ಕೆ ನಿತ್ಯ 153.77 ದಶಲಕ್ಷ ಲೀಟರ್ ನೀರು ಬೇಕಿದೆ. ಆದರೆ, ಸದ್ಯ ಲಭ್ಯವಾಗುತ್ತಿರುವುದು 95 ದಶಲಕ್ಷ ಲೀಟರ್ ನೀರು ಮಾತ್ರ. ಮಲಪ್ರಭಾ ಮೂರನೇ ಹಂತದ ಯೋಜನೆ ಜಾರಿಗೆ ಬಂದರೆ ಸಮಸ್ಯೆ ಸಂಪೂರ್ಣವಾಗಿ ನೀಗಲಿದೆ. ಪೂರೈಕೆ ಜಾಲ ಸುಧಾರಣೆಗೊಂಡರೆ ನೀರಿನ ಸಮಸ್ಯೆ ಇರುವುದಿಲ್ಲ~ ಎಂದು ಜಲ ಮಂಡಳಿ ಅಧಿಕಾರಿಗಳು ವಿವರಿಸಿದರು.ಹುಬ್ಬಳ್ಳಿ-ಧಾರವಾಡದ ಎಲ್ಲ ಬಡಾವಣೆಗಳಲ್ಲಿ ನಿರಂತರ ನೀರು ಪೂರೈಕೆಗೆ ಪ್ರಯತ್ನಗಳು ನಡೆದಿವೆ. ಟಾಟಾ ಕನ್ಸಲ್ಟೆನ್ಸಿ ಸಂಸ್ಥೆ ಯೋಜನೆ ಕುರಿತಂತೆ ಈಗಾಗಲೇ ಸಮೀಕ್ಷೆಯನ್ನೂ ನಡೆಸಿದೆ. ಅವಳಿನಗರದಲ್ಲಿ ಹಾಲಿ ಇರುವ ನೀರು ಪೂರೈಕೆ ಜಾಲ ಅವೈಜ್ಞಾನಿಕವಾಗಿದ್ದು, ಪೈಪುಗಳು ಜೀರ್ಣಾವಸ್ಥೆಗೆ ತಲುಪಿದ್ದರಿಂದ ಶೇಕಡಾ 40ರಷ್ಟು ನೀರು ವ್ಯರ್ಥವಾಗಿ ಪೋಲಾಗುತ್ತಿದೆ. ನಿರಂತರ ನೀರು ಪೂರೈಕೆ ಯೋಜನೆ ಅನುಷ್ಠಾನಕ್ಕೆ ಬಂದಿದ್ದಾದರೆ ಅವಳಿನಗರದ ನೀರು ಪೂರೈಕೆ ವ್ಯವಸ್ಥೆಯನ್ನು ಸಮಗ್ರವಾಗಿ ಬದಲಾವಣೆ ಮಾಡಬೇಕಿದೆ.

 

ಈ ಎಲ್ಲ ವಿಷಯಗಳು ಸಭೆಯಲ್ಲಿ ಚರ್ಚೆಗೆ ಬಂದವು ಎಂದು ಅವರು ತಿಳಿಸಿದರು. ವಿಧಾನ ಪರಿಷತ್‌ರಾದ ಸದಸ್ಯ ವಿಜಯ ಸಂಕೇಶ್ವರ, ಬಸವರಾಜ ಹೊರಟ್ಟಿ, ಶಾಸಕರಾದ ಎಸ್.ಐ. ಚಿಕ್ಕನಗೌಡ್ರು, ಸೀಮಾ ಮಸೂತಿ, ಜಲ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಜಿ.ವಿ. ಕೊಂಗವಾಡ, ಜಿಲ್ಲಾಧಿಕಾರಿ ದರ್ಪಣ್ ಜೈನ್ ಹಾಗೂ ಜಲ ಮಂಡಳಿಯ ಅಧಿಕಾರಿಗಳಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.