ಶುಕ್ರವಾರ, ಏಪ್ರಿಲ್ 23, 2021
22 °C

ಜೋಡೆತ್ತಿನ ಓಟಕ್ಕೆ ಹುಬ್ಬೇರಿಸಿದ ಜನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೋಡೆತ್ತಿನ ಓಟಕ್ಕೆ ಹುಬ್ಬೇರಿಸಿದ ಜನ!

ತಿ.ನರಸೀಪುರ: ಪಟ್ಟಣ ಹೊರವಲಯದ ಕಾವೇರಿ ತೀರ ಭಾನುವಾರ ಅಕ್ಷರಶಃ ನಡುಗಿತು. ಹುಚ್ಚೆದ್ದು ಓಡಿದ ಬಲಿಷ್ಠ ಎತ್ತುಗಳ ಕಸರತ್ತಿಗೆ ಪ್ರೇಕ್ಷಕರಲ್ಲಿ ರೋಮಾಂಚನ. ಗದ್ದೆಯ ಕೆಲಸಗಳಿಗೆ ತುಸು ಬಿಡುವು ನೀಡಿ ಎತ್ತಿನಗಾಡಿ ಓಟದ ಸ್ಪರ್ಧೆ ನೋಡಲು ಬಂದಿದ್ದ ತಾಲ್ಲೂಕಿನ ರೈತರಿಗೆ ಹಬ್ಬವೋ ಹಬ್ಬ.ಪಟ್ಟಣದ ಶ್ರೀ ಚೌಡೇಶ್ವರಿ ಯುವಕರ ಸೇವಾ ಸಮಿತಿ ರಾಜ್ಯ ಮಟ್ಟದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆ ಏರ್ಪಡಿಸಿತ್ತು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಎತ್ತುಗಳ ಜೋಡಿ ಒಂದಕ್ಕಿಂತ ಒಂದು ವೇಗವಾಗಿ ಓಡಿ ನೋಡುಗರಲ್ಲಿ ಅಚ್ಚರಿ ಮೂಡಿಸಿದವು. ಛಂಗನೆ ನೆಗೆದು ಓಡುತ್ತಿದ್ದ ಎತ್ತುಗಳನ್ನು ಕಂಡು ಅಕ್ಕಪಕ್ಕದಲ್ಲಿ ನೆರೆದ ಜನರು `ಓ..ಹೋ...~ ಎಂದು ಕೂಗಿತು. ಸಿಳ್ಳೆ, ಕೇಕೆ, ಕೂಗಾಟ, ಚಪ್ಪಾಳೆಗಳ ಮೂಲಕ ಎತ್ತುಗಳನ್ನು ಮತ್ತಷ್ಟು ಹುರುದುಂಬಿಸಿದರು.ತಾಲ್ಲೂಕಿನಲ್ಲಿ ಇದೇ ಮೊದಲಬಾರಿಗೆ ಆಯೋಜಿಸಿದ್ದ ಈ ಬೃಹತ್ ಸ್ಪರ್ಧೆಯಲ್ಲಿ ಸುಮಾರು 70ಕ್ಕೂ ಹೆಚ್ಚು ಜೋಡಿಗಳು ಭಾಗವಹಿಸಿದ್ದವು. ವಿವಿಧೆಡೆಯಿಂದ ಬಂದಿದ್ದ ಸಾವಿರಾರು ರೈತರು ಕುಣಿದು ಕುಪ್ಪಳಿಸಿದರು. ಎತ್ತುಗಳ ಓಟಕ್ಕಾಗಿ ಎ ಮತ್ತು ಬಿ ಎಂಬ ಎರಡು ಅಂಕಣ ಮಾಡಲಾಗಿತ್ತು. ಏಕಕಾಲಕ್ಕೆ ಎರಡು ಜೋಡಿಗಳು ಗಾಡಿ ಹೊತ್ತು ಓಡುವ ದೃಶ್ಯ ಕಂಡು ಜನ ನಿಬ್ಬೆರಗಾದರು.ಚಿಕ್ಕಮಗಳೂರು, ಕಡೂರು, ಹಾಸನ, ಮಂಡ್ಯ, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ ಕೆ.ಆರ್. ನಗರ, ಬನ್ನೂರು, ಸಾಲಿಗ್ರಾಮದಿಂದ ಎತ್ತುಗಳು ಭಾಗವಹಿಸಿದ್ದವು. ಭಾನುವಾರ ಇಳಿ ಸಂಜೆವರೆಗೂ ಸ್ಪರ್ಧೆ ನಡೆದೇ ಇತ್ತು.ದಿನ ಬೆಳಗಾದರೆ ಎತ್ತು, ಗಾಡಿ, ಮಳೆ, ಬೆಳೆ ಎಂದೆಲ್ಲ ಮಾತನಾಡುತ್ತ, ಗದ್ದೆಗಳ  ಮಧ್ಯೆ ಕಳೆದುಹೋಗುತ್ತಿದ್ದ ರೈತರು ಮನದುಂಬಿ ಆನಂದಿಸಿದರು. ಇಡೀ ದಿನ ಎತ್ತುಗಳ ಕಸರತ್ತು ಕಂಡು ಖುಷಿಪಟ್ಟರು. ಗಡಿಬಿಡಿ ಬದುಕಿನಲ್ಲಿ ಕಾಲ ಕಳೆಯುವ ಪಟ್ಟಣದ ಜನತೆಗೂ ಈ ಸ್ಪರ್ಧೆ ಇನ್ನಿಲ್ಲದಂತೆ ಮುದ ನೀಡಿತು.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಾ.ಪು.ಸಿದ್ಧಲಿಂಗಸ್ವಾಮಿ ಬೆಳಿಗ್ಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೀರಭದ್ರೇಶ್ವರ ಫ್ಯೂಯಲ್ ಸರ್ವೀಸ್ ಸ್ಟೇಷನ್ ಮಾಲೀಕ ಪಿ.ಪುಟ್ಟರಾಜು ಅವರು ಟೇಪ್ ಕತ್ತರಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು.ಮುಖಂಡರಾದ ಬಿ.ವೀರಭದ್ರಪ್ಪ, ಲಿಂಗಪ್ಪಾಜಿ, ಪಟೇಲ್  ಚೌಡೇಗೌಡ, ಶ್ರೀ ಚೌಡೇಶ್ವರಿ ಯುವಕರ ಸೇವಾ ಸಮಿತಿಯ ಅಧ್ಯಕ್ಷ ಸಂದೇಶ್‌ಕುಮಾರ್, ಸದಸ್ಯರಾದ ಸಿ.ನಾಗೇಂದ್ರ, ಆರ್.ಚೇತನ್, ಶಿವಕುಮಾರ್, ಮುಕುಂದ, ಹರೀಶ್, ಚೇತನ್, ಸತೀಶ್, ರಘು, ಭರತ, ರಾಜೇಶ್, ಜಯರಾಂ, ರಾಮು, ಕಾರ್ತಿಕ್, ದೀಪಕ್, ದೀಪು,    ಮೋಹನ್, ಮಣಿಕಂಠ ರಾಜ್, ಎಂ.ಮಿಥುನ್, ಪುಟ್ಟು, ಎಂ.ನೂತನ್, ಪ್ರಭುಸ್ವಾಮಿ, ಸಿ.ಡಿ. ವೆಂಕಟೇಶ್, ಗಣೇಶ್, ಉಮೇಶ್, ತಿರುಮಕೂಡಲು ಶ್ರೀನಿವಾಸ, ಅಂದಾನಿಗೌಡ, ಸೋಸಲೆ ಗಿರಿಮಲ್ಲೇಶ್. ಎಂ.ಎಸ್. ಜಯಣ್ಣ, ದೈಹಿಕ ಶಿಕ್ಷಕರಾದ ಆರ್.ಎಸ್. ಬಸವರಾಜು, ಅತ್ತಹಳ್ಳಿ ಮಹದೇವು ಇತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.