ಭಾನುವಾರ, ಏಪ್ರಿಲ್ 18, 2021
33 °C

ಜ್ಞಾನಭಾರತಿ ಆವರಣಕ್ಕೆ ಹೆಚ್ಚಿನ ಭದ್ರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಅಹಿತಕರ ಪ್ರಕರಣ ನಡೆಯದಂತೆ ನೋಡಿಕೊಳ್ಳಲು ಭದ್ರತಾ ವ್ಯವಸ್ಥೆ ಹೆಚ್ಚಿಸುವ ಜೊತೆಗೆ ಕುಲಪತಿಗಳ ನೇತೃತ್ವದಲ್ಲಿ ವಿಚಕ್ಷಣಾ ಸಮಿತಿ ರಚಿಸಲು ಮಂಗಳವಾರ ನಡೆದ ವಿಶ್ವವಿದ್ಯಾಲಯದ ವಿಶೇಷ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಗಳ ಬಗೆಗೆ ವಿವಿಯ ರಿಜಿಸ್ಟ್ರಾರ್ ಡಾ.ಬಿ.ಸಿ. ಮೈಲಾರಪ್ಪ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.`ಜ್ಞಾನಭಾರತಿ ಆವರಣದ ಸುತ್ತ ಬೇಲಿ ಹಾಕುವುದು, ರಸ್ತೆಗಳಲ್ಲಿ ತಪಾಸಣಾ ಕೇಂದ್ರ ತೆರೆಯುವುದು ಮತ್ತು ಸಿಸಿ ಕ್ಯಾಮೆರಾ ಅಳವಡಿಸುವುದೂ ಸೇರಿದಂತೆ ಹಲವು ಸಲಹೆಗಳು ಕೇಳಿಬಂದಿವೆ. ಅವುಗಳನ್ನೆಲ್ಲ ಪರಿಶೀಲಿಸಿ ಕೈಗೊಳ್ಳಬಹುದಾದ ಕ್ರಮಗಳ ವಿಷಯವಾಗಿ ಶಿಫಾರಸು ಮಾಡಲು ಸಿಂಡಿಕೇಟ್ ಸದಸ್ಯ ಕೆ.ವಿ. ಆಚಾರ್ಯ ಅವರ ನೇತೃತ್ವದಲ್ಲಿ ಉಪ ಸಮಿತಿ ರಚಿಸಲಾಗಿದೆ~ ಎಂದು ತಿಳಿಸಿದರು.`ಜ್ಞಾನಭಾರತಿ ಆವರಣದಲ್ಲಿ ಈ ಹಿಂದೆ ಕೆಲ ಅಹಿತಕರ ಘಟನೆಗಳು ನಡೆದಿವೆ. ಎರಡು ದಿನಗಳ ಹಿಂದೆಯಷ್ಟೇ ಶ್ರೀಗಂಧದ ಮರವನ್ನೂ ಕತ್ತರಿಸಿಕೊಂಡು ಹೋಗಲಾಗಿದೆ. ಈ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸುವುದು ಅಗತ್ಯವಾಗಿದೆ~ ಎಂದು ಹೇಳಿದರು.`ವಿಶ್ವವಿದ್ಯಾಲಯದ ವಿಶ್ವೇಶರಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ (ಯುವಿಸಿಇ) ಎಂಟನೇ ಸೆಮಿಸ್ಟರ್‌ನ ಒಂದೇ ಪರೀಕ್ಷೆಯನ್ನು ಎರಡು ಬಾರಿ ನಡೆಸಿದ ಪ್ರಕರಣ ಮತ್ತು ಪರೀಕ್ಷಾ ವಿಭಾಗದ ರಿಜಿಸ್ಟ್ರಾರ್ ಆಗಿದ್ದ ಸಯ್ಯದ್ ಜಮಾಲ್ ಅವರಿಂದ ನಡೆದಿದೆ ಎನ್ನಲಾದ ಒಎಂಆರ್ ಶೀಟ್‌ಗಳ ತಿರುಚಿದ ಪ್ರಕರಣಗಳಿಗೆ ಕುರಿತಂತೆ ತನಿಖೆ ನಡೆಸಲು ಸಿಂಡಿಕೇಟ್ ಸದಸ್ಯೆ ಜಹೀದಾ ಬೇಗಂ ಮುಲ್ಲಾ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ~ ಎಂದು ವಿವರಿಸಿದರು.`ಪರೀಕ್ಷಾ ವಿಭಾಗದಿಂದ ನಡೆದ ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಬೇಕು ಮತ್ತು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಎರಡು ವಾರಗಳಲ್ಲಿ ವರದಿ ನೀಡಬೇಕು ಎಂಬ ಸೂಚನೆ ನೀಡಲಾಗಿದೆ~ ಎಂದು ತಿಳಿಸಿದರು. `ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಕಾನೂನು ಕ್ರಮ ಜರುಗಿಸಲಾಗುವುದು~ ಎಂದು ಸ್ಪಷ್ಟಪಡಿಸಿದರು.ಹಂಗಾಮಿ ಕುಲಪತಿ ಡಾ.ಎನ್. ರಂಗಸ್ವಾಮಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಡಾ.ಕೆ.ವಿ.ಆಚಾರ್ಯ, ಡಾ. ಕೆ.ಬಿ. ವೇದಮೂರ್ತಿ, ಸಿ.ಕೆ. ಜಗದೀಶ್ ಪ್ರಸಾದ್, ಡಿ.ಎಸ್. ಕೃಷ್ಣ, ಡಾ.ಮಾನಸ ನಾಗಭೂಷಣಂ ಸೇರಿದಂತೆ ಸಿಂಡಿಕೇಟ್ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.ಶಿಫಾರಸಿನಲ್ಲಿ ಹೊಸ ಹೆಸರು: ಕೋಲಾಹಲ

ಬೆಂಗಳೂರು:
ಬೆಂಗಳೂರು ವಿಶ್ವ ವಿದ್ಯಾಲಯದ ನೂತನ ಕುಲಪತಿ ನೇಮಕಕ್ಕೆ ಸಂಬಂಧಿಸಿದಂತೆ ಕಳೆದ ಸಿಂಡಿಕೇಟ್ ಸಭೆಯಲ್ಲಿ ಮಾಡಿದ ಶಿಫಾರಸ್ಸಿಗೆ ಇನ್ನೊಂದು ಹೆಸರು ಸೇರ್ಪಡೆಯಾಗಿದ್ದು ಮಂಗಳವಾರ ನಡೆದ ವಿಶೇಷ ಸಿಂಡಿಕೇಟ್ ಸಭೆಯಲ್ಲಿ ಸದಸ್ಯರನ್ನು ತೀವ್ರವಾಗಿ ಕೆರಳುವಂತೆ ಮಾಡಿತು.`ಕುಲಪತಿ ಸ್ಥಾನಕ್ಕೆ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ (ಐಸೆಕ್) ನಿರ್ದೇಶಕ ಡಾ.ಆರ್.ಎಸ್. ದೇಶಪಾಂಡೆ ಅವರ ಹೆಸರನ್ನು ಮಾತ್ರ ಶಿಫಾರಸು ಮಾಡಲು ತೀರ್ಮಾನಿಸಲಾಗಿತ್ತು. ಅದರ ಜೊತೆಗೆ ಪಾಂಡಿಚೇರಿ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ.ವಿ.ಟಿ.ಪಾಟೀಲ ಅವರ ಹೆಸರೂ ಸೇರ್ಪಡೆಯಾಗಿದ್ದು ಹೇಗೆ~ ಎಂದು ಸಿ.ಕೆ. ಜಗದೀಶ್ ಪ್ರಸಾದ್ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದರು.`ಸಿಂಡಿಕೇಟ್ ನಿರ್ಣಯವನ್ನೇ ತಿರುಚಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು~ ಎಂದೂ  ಒತ್ತಾಯಿಸಿದರು.

ಕುಲಪತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುವಾಗ ಪಾಂಡಿಚೇರಿ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ.ವಿ.ಟಿ.ಪಾಟೀಲ ಅವರ ಹೆಸರೂ ಪ್ರಸ್ತಾಪವಾಗಿತ್ತು. ನಡಾವಳಿ ಬರೆಯುವಾಗ ಆ ಹೆಸರನ್ನೂ ಸೇರಿಸಲಾಗಿತ್ತು. ಅದನ್ನು ಸರಿಪಡಿಸಲಾಗಿದ್ದು ದೇಶಪಾಂಡೆ ಅವರ ಹೆಸರಿನ ಪ್ರಸ್ತಾವ ಇರುವ ಪತ್ರವನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ~ ಎಂದು ಮೈಲಾರಪ್ಪ ಸ್ಪಷ್ಟಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.