ಬುಧವಾರ, ಜುಲೈ 15, 2020
21 °C

ಟೆಕ್ಕಿಗಳ ಸೈಕಲ್ ಪಯಣ

ಅಮಿತ್ ಮೃಗವಧೆ Updated:

ಅಕ್ಷರ ಗಾತ್ರ : | |

ಟೆಕ್ಕಿಗಳ ಸೈಕಲ್ ಪಯಣ

ಬೆಳಗಿನಿಂದ ಮಧ್ಯರಾತ್ರಿಯವರೆಗೂ ಕಿವಿಯ ಮೇಲೆಯೇ ನರ್ತಿಸುತ್ತಿವೆಯೇನೋ ಎಂಬಂತೆ ಗಿಜಿಗುಡುವ ವಾಹನಗಳ ಕರ್ಕಶ ಸದ್ದು. ಹೊರಗೆ ಕಾಲಿಟ್ಟರೆ ಹೊಗೆ, ಧೂಳುಗಳ ಅಭಿಷೇಕ. ಒಟ್ಟಿನಲ್ಲಿ ಮಾಲಿನ್ಯ ನಗರಿಯಾಗಿ ಬದಲಾಗುತ್ತಿರುವ ಬೆಂಗಳೂರಿನ ಉದ್ಯಾನನಗರಿಯ ಖ್ಯಾತಿಗೆ ವಾಹನ ಸಾಮ್ರಾಜ್ಯ ಮಸಿ ಬಳಿಯುತ್ತಿರುವುದು ಸುಳ್ಳಲ್ಲ.ಕೆಲಸದ ಒತ್ತಡ, ಮನೆ ಸೇರುವ ತವಕ, ದಿನನಿತ್ಯದ ಜಂಜಾಟಗಳನ್ನು ನಿಭಾಯಿಸಲು ಸ್ವಂತ ವಾಹನವಿಲ್ಲದಿದ್ದರೆ ಸಾಧ್ಯವೇ ಇಲ್ಲ; ವಾಹನ ಇಲ್ಲದ ಬದುಕೇ ಅಸಾಧ್ಯ ಎಂದು ಗಟ್ಟಿಯಾಗಿ ನಂಬಿರುವ ಮನಸ್ಸುಗಳನ್ನು ಪರಿವರ್ತಿಸಿ ಸಿಲಿಕಾನ್ ಸಿಟಿಯ ಮಾಲಿನ್ಯಕ್ಕೆ ಕಡಿವಾಣ ಹಾಕಲು ಕೆಲವು ಯುವಕರು ಮುಂದೆ ಬಂದಿದ್ದಾರೆ. ದಿನನಿತ್ಯದ ಓಡಾಟಕ್ಕೆ ಸೈಕಲ್ ಬಳಸುವ ಮೂಲಕ ಮಾಲಿನ್ಯ ಕಡಿಮೆ ಮಾಡುವುದಲ್ಲದೆ, ಆರೋಗ್ಯವನ್ನೂ ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಚಾಲನೆ ನೀಡಿದ್ದಾರೆ.ಅಂದಹಾಗೆ ಈ ಯುವಕರು ವಿದ್ಯಾರ್ಥಿಗಳಲ್ಲ, ಸಮಾಜ ಸೇವೆಯ ಹೆಸರಿನಲ್ಲಿ ರಾಜಕೀಯಕ್ಕೆ ಇಳಿಯುವ ಮನೋಭಾವದವರೂ ಅಲ್ಲ. ‘ಬೆಂಗಳೂರಿಗೆ ಇವರ ಕಾಣಿಕೆ ಏನಿದೆ’ ಎಂದು ಎಲ್ಲರೂ ಸದಾ ದೂರುವ ಸಾಫ್ಟ್‌ವೇರ್ ಕ್ಷೇತ್ರದ ಉದ್ಯೋಗಿಗಳು. ಇನ್ನೂ ವಿಶೇಷವೆಂದರೆ ಇವರ್ಯಾರೂ ಕನ್ನಡಿಗರಲ್ಲ. ಉದ್ಯೋಗದ ಬೆನ್ನತ್ತಿ ಇಲ್ಲಿಗೆ ಬಂದವರು.ವೈಟ್‌ಫೀಲ್ಡ್‌ನಲ್ಲಿರುವ ‘ಸಾಪ್’ ಸಾಫ್ಟ್‌ವೇರ್ ಕಂಪೆನಿಯ ಉದ್ಯೋಗಿಗಳಾದ ಬಿಹಾರ ಮೂಲದ ಅಮೋಲ್ ಮತ್ತು ಚೆನ್ನೈ ಮೂಲದವರಾದ ಸತೀಶ್ ಹಾಗೂ ವೆಂಕಟ್ ದಿನನಿತ್ಯದ ಓಡಾಟಕ್ಕೆ ಸೈಕಲ್ ಬಳಸುವಂತೆ ಜನರಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ಪ್ರತಿನಿತ್ಯ ಸೈಕಲ್‌ನಲ್ಲಿಯೇ ಕಂಪೆನಿಗೆ ಬರುತ್ತಿದ್ದಾರೆ. ಇವರ ಉದ್ದೇಶಕ್ಕೆ ಕಂಪೆನಿ ಸಹ ಬಂಬಲ ನೀಡಿದೆ. ಇವರೊಂದಿಗೆ ಕೈಜೋಡಿಸಿರುವ ಸಮಾನ ಅಭಿರುಚಿಯುಳ್ಳ ಸಹೋದ್ಯೋಗಿಗಳು ಇದಕ್ಕಾಗಿಯೇ ಕ್ಲಬ್ ಸಹ ಹುಟ್ಟುಹಾಕಿದ್ದಾರೆ.ಇಷ್ಟಕ್ಕೆ ತೃಪ್ತರಾಗದ ಈ ಯುವಕರು ಇತರ ಕಂಪೆನಿಗಳ ಉದ್ಯೋಗಿಗಳನ್ನೂ ಸೈಕಲ್ ಬಳಸುವಂತೆ ಪ್ರೇರೇಪಿಸಲು ‘ಸಾಪ್ ರೋಡೀಸ್’ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಕಂಪೆನಿಯ 20 ಉದ್ಯೋಗಿಗಳು ಮಾರತ್ತಹಳ್ಳಿಯಿಂದ ವೈಟ್‌ಫೀಲ್ಡ್‌ನಲ್ಲಿರುವ ಕಂಪೆನಿಯವರೆಗೂ ಸೈಕಲ್‌ನಲ್ಲಿಯೇ ಪ್ರಯಾಣಿಸಿದ್ದಾರೆ. ಇದರಿಂದ ಉತ್ತೇಜನಗೊಂಡು ಇತರರೂ ಸೈಕಲ್ ಬಳಸುತ್ತಾರೆ ಎಂಬ ಆಶಯ ಇವರದು.‘ಸೈಕಲ್‌ನಲ್ಲಿಯೇ ಓಡಾಡುವುದರಿಂದ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ. ಇದರಿಂದ ಹೊಗೆ ಕಾರುವ ವಾಹನಗಳ ಓಡಾಟ ಕಡಿಮೆಯಾಗುವುದಲ್ಲದೆ, ಮಾಲಿನ್ಯ ನಿಯಂತ್ರಣವೂ ಆಗುತ್ತದೆ. ಕುಳಿತು ಕೆಲಸ ಮಾಡುವ ದೇಹಗಳಿಗೆ ಉಚಿತ ದೈಹಿಕ ಶ್ರಮವೂ ಸಿಗುತ್ತದೆ. ಬೆಂಗಳೂರನ್ನು ಬದಲಾಯಿಸಲು ಇದಕ್ಕಿಂತ ಸುಲಭ ಮತ್ತು ಆರೋಗ್ಯಕಾರಿ ಮಾರ್ಗ ಬೇರೊಂದಿಲ್ಲ’ ಎನ್ನುತ್ತಾರೆ ಅಮೋಲ್.ವಿವಿಧ ಸಂಘಟನೆಗಳು, ಕ್ಲಬ್‌ಗಳು ನಡೆಸುವ ಸೈಕಲ್ ಮ್ಯಾರಥಾನ್‌ಗಳಲ್ಲಿ ಈ ಮೂವರೂ ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದಾರೆ. ಇವರ ಪ್ರಾಯೋಜಕತ್ವವನ್ನು ವಹಿಸಿಕೊಳ್ಳುವ ಮೂಲಕ ಕಂಪೆನಿ ಸಹ ಬೆಂಬಲ ನೀಡುತ್ತಿರುವುದು ಇವರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಸೈಕಲ್ ಜಾಗೃತಿಯ ಜೊತೆಯಲ್ಲಿ ಇತ್ತೀಚೆಗಷ್ಟೆ ಹೊಸಕೋಟೆಯಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನೂ ನಡೆಸಿದ್ದಾರೆ.ಬೆಂಗಳೂರಿನಾದ್ಯಂತ ಸೈಕಲ್ ಪ್ರಯಾಣದ ಬಗ್ಗೆ ಜನರಲ್ಲಿ ಆಸಕ್ತಿ ಬೆಳೆಸಲು ಸ್ಪರ್ಧೆಗಳನ್ನು ಮತ್ತು ರ್ಯಾಲಿಗಳನ್ನು ಹಮ್ಮಿಕೊಳ್ಳುವ ಉದ್ದೇಶವೂ ಇವರಲ್ಲಿದೆ. ಇವರ ಈ ಸದುದ್ದೇಶದ ಸಾಹಸಕ್ಕೆ ಕೈ ಜೋಡಿಸುವ ಆಸಕ್ತಿಯುಳ್ಳವರು k.sathish@gmail.com ವಿಳಾಸಕ್ಕೆ ಇ-ಮೇಲ್ ಮಾಡಬಹುದು.ತ್ರಿವಳಿ ಸಾಧನೆ

ಈ ಮೂವರು ಸೈಕಲ್ ಸವಾರಿ ಪ್ರಿಯರ ಸಾಧನೆಯ ಪಟ್ಟಿ ಸಾಕಷ್ಟು ದೊಡ್ದದಾಗಿಯೇ ಇದೆ. ಅವುಗಳಲ್ಲಿ ಮುಖ್ಯ ಎಂದರೆ-

* 2009ರ ಸನ್‌ಫೀಸ್ಟ್ ವಿಶ್ವ 10 ಕಿಮಿ ಸೈಕ್ಲಿಂಗ್‌ನ ಕಾರ್ಪೊರೇಟ್ ವಿಭಾಗದಲ್ಲಿ ಮೊದಲ ಸ್ಥಾನ.

* ಮುಂಬೈ, ಆರೋವಿಲ್ಲೆ ಮ್ಯಾರಥಾನ್.

* ಅಲ್ಟ್ರಾ ಮ್ಯಾರಥಾನ್ (50 ಕಿಮಿ), ಅರ್ಬನ್ ಸ್ಟಾಂಪೇಡ್‌ನಲ್ಲಿ ಭಾಗಿ.

* 10 ತಾಸಿನಲ್ಲಿ ಬೆಂಗಳೂರು- ಮೈಸೂರು ಸೈಕ್ಲಿಂಗ್.

* 21.5 ತಾಸಿನಲ್ಲಿ ಬೆಂಗಳೂರಿನಿಂದ ಸೈಕಲ್‌ನಲ್ಲಿ ಚೆನ್ನೈಗೆ.

*ಕಚೇರಿಗೆ ನಿತ್ಯ ಸೈಕಲ್‌ನಲ್ಲೇ ಪಯಣ.

* ನೀಲಗಿರಿ ಸೈಕ್ಲಿಂಗ್ (ಸುಮಾರು 800 ಕಿಮಿ).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.