ಮಂಗಳವಾರ, ಜೂಲೈ 7, 2020
22 °C

ಟೆನಿಸ್: ಮೋಡಿ ಮಾಡಿದ ಭಾರತ- ರಷ್ಯಾ ಜೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೆನಿಸ್: ಮೋಡಿ ಮಾಡಿದ ಭಾರತ- ರಷ್ಯಾ ಜೋಡಿ

ಇಂಡಿಯನ್ ವೆಲ್ಸ್, ಅಮೆರಿಕ (ಪಿಟಿಐ): ಸಾನಿಯಾ ಮಿರ್ಜಾ ಮತ್ತು ರಷ್ಯಾದ ಎಲೆನಾ ವೆಸ್ನಿನಾ ಜೋಡಿ ಇಲ್ಲಿ ನಡೆದ ಡಬ್ಲ್ಯುಟಿಎ ಬಿಎನ್‌ಪಿ ಪರಿಬಾಸ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿತು.

ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಸಾನಿಯಾ- ವೆಸ್ನಿನಾ 6-0, 7-5 ರಲ್ಲಿ ಅಮೆರಿಕದ ಬೆಥನಿ ಮಟೆಕ್ ಮತ್ತು ಮೇಘನ್ ಶಾಗ್ನೆಸ್ಸಿ ವಿರುದ್ಧ ಜಯ ಪಡೆದರು.

ಸಾನಿಯಾ ಮತ್ತು ವೆಸ್ನಿನಾ ಜೊತೆಯಾಗಿ ಆಡುತ್ತಿರುವ ಮೂರನೇ ಡಬ್ಲ್ಯುಟಿಎ ಟೂರ್ನಿ ಇದಾಗಿದೆ. ಫೆಬ್ರುವರಿ ತಿಂಗಳಲ್ಲಿ ದುಬೈ ಮತ್ತು ದೋಹಾದಲ್ಲಿ ನಡೆದ ಟೂರ್ನಿಗಳಲ್ಲಿ ಒಟ್ಟಾಗಿ ಆಡಿದ್ದ ಇವರು ಕ್ವಾರ್ಟರ್ ಫೈನಲ್‌ವರೆಗೆ ಪ್ರವೇಶಿಸಲು ಯಶಸ್ವಿಯಾಗಿದ್ದರು.

ಶ್ರೇಯಾಂಕರಹಿತ ಜೋಡಿಯಾಗಿ ಇಲ್ಲಿ ಕಣಕ್ಕಿಳಿದ ಇವರು ಟೂರ್ನಿಯುದ್ದಕ್ಕೂ ಸೊಗಸಾದ ಪ್ರದರ್ಶನ ನೀಡಿ ಚಾಂಪಿಯನ್ ಆದರು. ಈ ಮೊದಲು ಭಾರತ- ರಷ್ಯಾ ಜೋಡಿ 6-2, 6-3 ರಲ್ಲಿ ಏಳನೇ ಶ್ರೇಯಾಂಕದ ಇವೆಟಾ ಬೆನೆಸೋವಾ ಮತ್ತು ಬಾರ್ಬರಾ ಸ್ಟ್ರೈಕೊವಾ ಅವರಿಗೆ ಶಾಕ್ ನೀಡಿತ್ತು.

ಫೈನಲ್ ಪಂದ್ಯದ ಮೊದಲ ಸೆಟ್‌ನ್ನು ಸಾನಿಯಾ ಮತ್ತು ವೆಸ್ನಿನಾ ಕೇವಲ 25 ನಿಮಿಷಗಳಲ್ಲಿ ಗೆದ್ದುಕೊಂಡರು. ಎರಡನೇ ಸೆಟ್‌ನಲ್ಲಿ ರೋಚಕ ಹೋರಾಟ ಕಂಡುಬಂತು. ಪ್ರಭಾವಿ ಪ್ರದರ್ಶನ ನೀಡಿದ ಅಮೆರಿಕದ ಜೋಡಿ 5-1 ರಲ್ಲಿ ಮುನ್ನಡೆ ಪಡೆಯಿತು. ಪಂದ್ಯ ಮೂರನೇ ಸೆಟ್‌ಗೆ ಮುನ್ನಡೆಯುವುದೆಂದು ನಿರೀಕ್ಷಿಸಲಾಗಿತ್ತು. ಆದರೆ ಈ ಹಂತದಲ್ಲಿ ಲಯ ಕಂಡುಕೊಂಡ ಭಾರತ- ರಷ್ಯಾದ ಜೋಡಿ ಸತತ ಆರು ಗೇಮ್‌ಗಳನ್ನು ಗೆದ್ದುಕೊಂಡು ಗೆಲುವಿನ ನಗು ಬೀರಿತು.

‘ನಾವು ಕೊನೆಯ ಕ್ಷಣದಲ್ಲಿ ಇಲ್ಲಿ ಜೊತೆಯಾಗಿ ಆಡಲು ನಿರ್ಧರಿಸಿದೆವು. ಏಕೆಂದರೆ ಇಂಡಿಯನ್ ವೆಲ್ಸ್‌ನಲ್ಲಿ ನಡೆಯುವ ಟೂರ್ನಿಯಲ್ಲಿ ಪಾಲ್ಗೊಳ್ಳದಿರುವ ನಿರ್ಧರಿಸಿದ್ದೆ. ಇದೀಗ ಋತುವಿನ ಇನ್ನುಳಿದ ಅವಧಿಯಲ್ಲೂ ನಾವಿಬ್ಬರು ಜೊತೆಯಾಗಿ ಆಡುವ ತೀರ್ಮಾನ ಕೈಗೊಂಡಿದ್ದೇವೆ’ ಎಂದು ಪಂದ್ಯದ ಬಳಿಕ ಸಾನಿಯಾ ನುಡಿದರು.

‘ದುಬೈ ಮತ್ತು ದೋಹಾದಲ್ಲಿ ಜೊತೆಯಾಗಿ ಆಡಿದ ಸಂದರ್ಭ ನಮ್ಮ ನಡುವೆ ಉತ್ತಮ ಹೊಂದಾಣಿಕೆ ಕಂಡುಬಂದಿತ್ತು. ಇದೀಗ ಇಲ್ಲಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿದೆ’ ಎಂದು ವೆಸ್ನಿನಾ ತಿಳಿಸಿದರು.

ಸಾನಿಯಾ ಅವರಿಗೆ ಲಭಿಸಿದ 10ನೇ ಡಬ್ಲ್ಯುಟಿಎ ಡಬಲ್ಸ್ ಪ್ರಶಸ್ತಿ ಇದಾಗಿದೆ. ಮತ್ತೊಂದೆಡೆ ವೆಸ್ನಿನಾಗೆ ದೊರೆತ ಮೂರನೇ ಡಬಲ್ಸ್ ಪ್ರಶಸ್ತಿ ಇದು. ‘ಡಬಲ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಸಿಂಗಲ್ಸ್‌ನಲ್ಲಿ ಆಡುವ ಸಂದರ್ಭ ಸಹಾಯಕವಾಗುತ್ತದೆ’ ಎಂದು ಸಾನಿಯಾ ಹೇಳಿದರು.

ಬೆಥನಿ ಮಟೆಕ್ ಮತ್ತು ಮೇಘನ್ ಶಾಗ್ನೆಸ್ಸಿ ಅವರು ಸೆಮಿಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಲಿಜೆಲ್ ಹುಬೆರ್ ಹಾಗೂ ನದಿಯಾ ಪೆಟ್ರೋವಾ ವಿರುದ್ಧ ಅಚ್ಚರಿಯ ಗೆಲುವು ಸಾಧಿಸಿದ್ದರು. ಆದರೆ ಫೈನಲ್‌ನಲ್ಲಿ ಅವರಿಗೆ ಹೊಂದಾಣಿಕೆಯ ಪ್ರದರ್ಶನ ನೀಡಲು ಆಗಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.