ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬ್ಬಿಂಗ್‌ ವಿವಾದದ ಸುತ್ತ

ಚರ್ಚೆ: ಡಬ್ಬಿಂಗ್‌ಗೆ ಅವಕಾಶ ಕೊಡದಿರುವುದು ಸಣ್ಣತನ, ಕೊಟ್ಟರೆ ಸೃಜನಶೀಲತೆಗೆ ಪೆಟ್ಟು ಎಂಬಂತಹ ಭಿನ್ನ ಅಭಿಪ್ರಾಯಗಳಿವೆ
Last Updated 4 ಆಗಸ್ಟ್ 2015, 19:34 IST
ಅಕ್ಷರ ಗಾತ್ರ

ಡಬ್ಬಿಂಗ್‌ ವಿರೋಧಿಗಳು ಕೊಡುತ್ತಿರುವ ಕಾರಣಗಳನ್ನು ಕನ್ನಡಿಗರು ಸುಲಭವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ, ಡಬ್ಬಿಂಗ್‌ ನಿಷೇಧದಿಂದ ಕನ್ನಡ ಚಿತ್ರರಸಿಕರಿಗೆ,  ಕನ್ನಡ ಭಾಷೆಗೆ ಲಾಭಕ್ಕಿಂತ ಅಪಾರ ನಷ್ಟವೇ ಆಗಿದೆ, ಆಗುತ್ತಿದೆ. ಡಬ್ಬಿಂಗ್‌ನಿಂದ ಕಾರ್ಮಿಕ ವರ್ಗ ಬೀದಿಪಾಲಾಗುತ್ತದೆ ಎಂಬ ಅವೈಜ್ಞಾನಿಕ ವಿಚಾರವನ್ನು ಡಬ್ಬಿಂಗ್‌ ವಿರೋಧಿಗಳು ಮುಂದೆ ತಂದರೇ ಹೊರತು, ಭಾಷೆಗೆ ಆಗಬಹುದಾದ ನಷ್ಟವನ್ನು ಮುಂದಾಲೋಚಿಸದಾದರು.

‘ನಾವು ಕನ್ನಡದಲ್ಲೇ ಸಿನಿಮಾ ಕೊಡುತ್ತೇವೆ’  ಎಂದವರಿಗೆ, ‘ಇಲ್ಲ ನಮಗೆ ನಿಮ್ಮ ಭಾಷೆಯಲ್ಲೇ ಕೊಡಿ, ಕನ್ನಡಕ್ಕೆ ಮಾರಕವಾಗುವಂಥ ಡಬ್ಬಿಂಗ್ ಬೇಡವೇ ಬೇಡ’ ಎಂಬ ವಾದವನ್ನು ಮುಂದಿಟ್ಟು, ಕನ್ನಡನಾಡಿನಲ್ಲಿ ಕನ್ನಡದಲ್ಲೇ ನೋಡಬಹುದಾದ್ದನ್ನೆಲ್ಲ ಅನ್ಯ ಭಾಷೆಗಳಲ್ಲಿ ನೋಡುವಂತೆ ಮಾಡಿದರು.

ಕೆಲವು ವರ್ಷಗಳ ಕಾಲ ಈ ನಿಷೇಧ ಯಶಸ್ವಿಯಾಗಿತ್ತು ಎಂದೆನಿಸಿದರೂ, ಬೂದಿ ಮುಚ್ಚಿದ ಕೆಂಡದಂತೆ ಒಳಗೊಳಗೇ ಗುಪ್ತವಾಗಿತ್ತು. ಪ್ರೇಕ್ಷಕನಿಗೂ ಉತ್ತಮ ಕನ್ನಡ ಚಿತ್ರಗಳು ಬರುವವರೆಗೂ ನಿಷೇಧದಿಂದ ನಷ್ಟವೇನೂ ಆಗಿರಲಿಲ್ಲ. ಆದರೆ, ನಂತರದ ದಿನಗಳಲ್ಲಿ ಕನ್ನಡ ಸಿನಿಮಾ ಗುಣಮಟ್ಟ ಹೀನಾಯ ಸ್ಥಿತಿ ತಲುಪಿರುವುದನ್ನು ಗಮನಿಸಿದ ಪ್ರೇಕ್ಷಕನ ಸಹನೆಯ ಕಟ್ಟೆ ಒಡೆಯಿತು.  ಅನ್ಯ ಭಾಷೆಯ ಒಳ್ಳೆಯ ಚಿತ್ರಗಳನ್ನು ಕಂಡಾಗ ನಿಧಾನವಾಗಿ ಕನ್ನಡದಿಂದ ಮುಖ ತಿರುಗಿಸಿದ. ಭಾಷೆ ಅರ್ಥವಾಗದಿದ್ದಾಗ ಅದನ್ನು ಕಲಿತು ನೋಡಲು ಮುಂದಾದ. ಇದರಿಂದ ಕನ್ನಡ ಪ್ರೇಕ್ಷಕನನ್ನು ಕನ್ನಡ ಚಿತ್ರೋದ್ಯಮವೇ ಕಳೆದುಕೊಂಡಿತು.

ಇಷ್ಟೆಲ್ಲಾ ಆದರೂ ಎಚ್ಚೆತ್ತುಕೊಳ್ಳದ ಕನ್ನಡ ಚಿತ್ರೋದ್ಯಮದ ಮಂದಿ, ನಿಷೇಧವನ್ನು ಇಂದಿನವರೆಗೂ ಕಟ್ಟುನಿಟ್ಟಾಗಿ ಪಾಲಿಸಿದರೇ ಹೊರತು, ಕನ್ನಡ ಚಲನಚಿತ್ರ ಸಾಮ್ರಾಜ್ಯ ಕಟ್ಟಲಿಲ್ಲ. ಕಟ್ಟಲು ಮುಂದಾದವರ ಬೆನ್ನನ್ನೂ ತಟ್ಟಲಿಲ್ಲ. ಇವರಿಗೆ ವಿರುದ್ಧವೆಂಬಂತೆ, ಅತ್ತ ತಮಿಳು ಹಾಗೂ ತೆಲುಗು ಚಿತ್ರೋದ್ಯಮದ ಗಣ್ಯರು ತಮ್ಮ ತಮ್ಮ ರಾಜ್ಯದಲ್ಲೇ ಚಿತ್ರ ತಯಾರಿಕಾ ಘಟಕಗಳನ್ನು ಸ್ಥಾಪಿಸಿಕೊಂಡರು. ಚಿತ್ರರಂಗದ ಏಳ್ಗೆಗೆ ಬೆಂಗಾವಲಾದರು.

ನಮ್ಮವರು ಪರಭಾಷೆಗಳ ವಿರುದ್ಧ ಬೊಬ್ಬೆಹೊಡೆಯಲು ಸಮಯ ವ್ಯರ್ಥಮಾಡಿದರೇ ಹೊರತು, ಸವಾಲೆನಿಸುವಂಥ ಚಿತ್ರಗಳನ್ನು ಕೊಡುವಲ್ಲಿ ವಿಫಲರಾದರು. ಕೊನೆಗೆ ಕೈಲಾಗದಿದ್ದಾಗ ತಾವೇ ಪರಭಾಷಾ ಚಿತ್ರಗಳನ್ನು ವಿತರಿಸುವಲ್ಲಿ, ರಿಮೇಕ್‌ ಮಾಡುವಲ್ಲಿ ತೊಡಗಿಸಿಕೊಂಡರು. ಇವೆಲ್ಲದರ ಪರಿಣಾಮವಾಗಿ ಇಂದಿಗೂ ಬರುತ್ತಿರುವ ಒಂದಷ್ಟು ಚೆಂದದ ಸಿನಿಮಾಗಳು ಪ್ರೇಕ್ಷಕನನ್ನು ತಲುಪುವಲ್ಲಿ ಸೋಲುತ್ತಿವೆ. ಚಿತ್ರಮಂದಿರದಲ್ಲಿ ನಿಲ್ಲಲು ಹೆಣಗಾಡುತ್ತಿವೆ. ಕನ್ನಡ ಚಿತ್ರರಂಗದ ಈ ಅಧೋಗತಿಗೆ ಕನ್ನಡ ಸಾಹಿತ್ಯ ಜಗತ್ತಾಗಲಿ, ರಾಜ್ಯ ಸರ್ಕಾರವಾಗಲಿ ಅಥವಾ ಕನ್ನಡ ಪ್ರೇಕ್ಷಕನಾಗಲಿ ಕಾರಣನಲ್ಲ. ಆದರೂ, ಇದನ್ನು ಚಿತ್ರೋದ್ಯಮದ ಮಂದಿ ಇಂದಿಗೂ ಅರಿಯುತ್ತಿಲ್ಲ.

ವೈಯಕ್ತಿಕವಾಗಿ ನಾನು ಕೂಡ 1999ರಿಂದಾಚೆಗೆ ಬಂದ ಯಾವ ಕನ್ನಡ ಸಿನಿಮಾವನ್ನೂ ನೋಡಿಲ್ಲ.  ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಂತೂ ಇಲ್ಲವೇ ಇಲ್ಲ. ನೋಡಬೇಕೆನಿಸಲೂ ಇಲ್ಲ. ಕೆಲವು ಇಂಗ್ಲಿಷ್‌ ಸಿನಿಮಾಗಳನ್ನು ನೋಡಿದ್ದೇನೆ. ಆನಂದಿಸಿದ್ದೇನೆ. ಅವರ ಶ್ರದ್ಧೆ, ನಟನೆ, ನಿರ್ದೇಶನಕ್ಕೆ ಬೆರಗಾಗಿದ್ದೇನೆ. ಆದರೆ, ಇಂದಿಗೂ ಒಳ್ಳೆಯ ಸಿನಿಮಾ ನೋಡಿದ ಪ್ರತಿ ಸಂದರ್ಭದಲ್ಲೂ ಮನಸ್ಸಿನ ಮೂಲೆಯಲ್ಲಿ  ನೋವಾಗುತ್ತದೆ.

ನಮ್ಮಲ್ಲೂ ಇಂಥ ಸಿನಿಮಾಗಳು ಭವಿಷ್ಯದಲ್ಲಿ ಬರಬಹುದೇ, ಕನ್ನಡದಲ್ಲೇ ವಿಶ್ವ ಶ್ರೇಷ್ಠ  ಚಿತ್ರಗಳನ್ನು ನಿರೀಕ್ಷಿಸಬಹುದೇ, ‘ಚೋಮನ ದುಡಿ’, ‘ಬಂಗಾರದ ಮನುಷ್ಯ’, ‘ಬೂತಯ್ಯನ ಮಗ ಅಯ್ಯು‘, ‘ಸಂಸ್ಕಾರ’ಗಳನ್ನು ಕೊಟ್ಟಿರುವ ನಮಗೆ ಇಂಥ ಸಿನಿಮಾಗಳನ್ನು ಕೊಡುವುದು ಕಷ್ಟವೇ ಅನ್ನಿಸುತ್ತದೆ.

ಒಂದು ವೇಳೆ ‘ಲಾರ್ಡ್ ಆಫ್ ದಿ ರಿಂಗ್ಸ್’ ಅಥವಾ ‘ಟ್ರಾಯ್’ನಂಥ ಇಂಗ್ಲಿಷ್‌ ಚಿತ್ರಗಳನ್ನು ಕನ್ನಡ ದಲ್ಲಿ ನೋಡುವ ಅವಕಾಶವಿದ್ದಿದ್ದರೆ ಬಹುಶಃ ಕನ್ನಡ ಪ್ರೇಕ್ಷಕನಿಗೆ ‘ಬಾಹುಬಲಿ’ ರುಚಿಸುತ್ತಿರಲಿಲ್ಲವೇನೋ. ಹಾಗೆಯೇ, ನಮ್ಮ ಕನ್ನಡದ ಮಕ್ಕಳಿಗೂ ‘ಫೈಂಡಿಂಗ್ ನೀಮೋ’, ‘ಸ್ಟಾರ್ ವಾರ್ಸ್’, ‘ಹ್ಯಾರಿ ಪಾಟರ್’, ‘ಜುರಾಸಿಕ್ ಪಾರ್ಕ್’, ‘ಫ್ರೋಜನ್’ಗಳನ್ನು ಕನ್ನಡದಲ್ಲಿ ತೋರಿಸಬಹುದಿತ್ತು, ಅವರ ಕ್ರಿಯಾತ್ಮಕ ಬೆಳವಣಿಗೆಗೆ ವಿಶಾಲವಾದ ವಾತಾವರಣ ಸೃಷ್ಟಿಸ ಬಹುದಿತ್ತು ಅನ್ನಿಸುತ್ತದೆ.

-ಸಿದ್ಧೇಗೌಡ, ಕುಪರ್ಟಿನೊ, ಕ್ಯಾಲಿಫೋರ್ನಿಯ

ಬೇರೆ ಆಯಾಮವೂ ಇದೆ
ರಾಜ್ಯದಲ್ಲಿ ಡಬ್ಬಿಂಗ್‌ಗೆ ಸಂಬಂಧಿಸಿದಂತೆ  ಇತ್ತೀಚೆಗೆ ಮಾಧ್ಯಮಗಳಲ್ಲಿ ಕಾವೇರಿದ ಚರ್ಚೆಗಳು ನಡೆಯುತ್ತಿವೆ. ಆದರೆ ಇದರಿಂದ ಚಿತ್ರೋದ್ಯಮಕ್ಕಾಗುವ ಲಾಭ-ನಷ್ಟವನ್ನು ಬದಿಗಿಟ್ಟು ನೋಡಿದರೆ, ಈ ಸಂದರ್ಭದಲ್ಲಿ ಎಲ್ಲರೂ ಮರೆಯುತ್ತಿರುವ ಬೇರೆ ಆಯಾಮವೂ ಇದೆ.

ಚಲನಚಿತ್ರ/ ನಾಟಕದ ಪ್ರಮುಖ ಆಯಾಮ ಅದರ ಭಾಷೆ; ನಟ-ನಟಿಯರು ಹೇಗೆ ತಮ್ಮ ತಮ್ಮ ಭಾವನೆಗಳನ್ನು ಧ್ವನಿ, ಅದರ ಏರಿಳಿತ, ಉಚ್ಚಾರ, ಸ್ಫುಟತೆ ಇತ್ಯಾದಿಗಳ ಮೂಲಕ ವ್ಯಕ್ತಪಡಿಸುತ್ತಾರೆ ಎಂಬುದು. ಪೃಥ್ವಿರಾಜ್ ಕಪೂರ್,  ಅಮಿತಾಭ್ ಬಚ್ಚನ್, ಚಾರ್ಲ್‌ಟನ್ ಹೆಸ್ಟನ್, ಮೀನಾಕುಮಾರಿ, ರಾಜಕುಮಾರ್ ಅವರಂತಹ ಮೇರು ನಟ-ನಟಿಯರು ತಮ್ಮದೇ ಆದ ಅನುಕರಣಾತೀತ ವಿಶಿಷ್ಟ ಮಾತುಗಾರಿಕೆಯನ್ನು ಹಾಗೂ ಸಂಭಾಷಣಾ ಶೈಲಿಯನ್ನು ರೂಢಿಸಿಕೊಂಡಿರುತ್ತಾರೆ.

ಕಾಮ-ಕ್ರೋಧ-ದುಃಖ ಇತ್ಯಾದಿ ಭಾವನೆಗಳಲ್ಲಿಯೇ ಅದ್ದಿದಂತಿರುವ ಅವರ ಸಂಭಾಷಣೆಯನ್ನು ಕೇಳುವುದಕ್ಕಾಗಿಯೇ ಹೆಚ್ಚಿನ ಪ್ರೇಕ್ಷಕರು ಅವರ ಚಿತ್ರಗಳಿಗೆ ಹೋಗುತ್ತಾರೆ. ಆದರೆ ಡಬ್ಬಿಂಗ್ ಇಂತಹ ಭಾಷೆಯ ಆಯಾಮವನ್ನೇ ಕೊಲ್ಲುತ್ತದೆ ಮತ್ತು ಈ ಭಾಷಿಕ ಆಯಾಮವನ್ನು ಮರೆತರೆ ಎಲ್ಲ ಚಿತ್ರಗಳೂ ಕ್ರೈಮ್ ಇಲ್ಲವೇ ಪ್ರೇಮ ಕಥೆಗಳಾಗುತ್ತವೆ. ಡಬ್ಬಿಂಗ್‌ ತಂತ್ರ ಪ್ರೇಕ್ಷಕರಿಗೆ ಮಾಡುವ ಮೋಸ. ಏಕೆಂದರೆ, ಮೇಲೆ ಹೇಳಿದಂತಹ ನಟ-ನಟಿಯರ ಭಾಷಿಕ ಸಂವಹನ ಅಪೂರ್ವ ಅನುಭವವನ್ನು ಪ್ರೇಕ್ಷಕರಿಗೆ ಕೊಡುತ್ತದೆ; ಡಬ್ಬಿಂಗ್ ಒಪ್ಪಿಕೊಂಡರೆ, ಆ ವಿಶಿಷ್ಟ ಅನುಭವದಿಂದಲೇ  ಅಸಂಖ್ಯಾತ ಕನ್ನಡ ಪ್ರೇಕ್ಷಕರನ್ನು ವಂಚಿಸಿದಂತಾಗುವುದಿಲ್ಲವೆ?

‘ನನಗೆ ಹಿಂದಿ- ಇಂಗ್ಲಿಷ್- ತಮಿಳು ಇತ್ಯಾದಿ ಬರುವುದಿಲ್ಲ; ನಾನೇನು ಮಾಡಲಿ?’ ಎಂಬ ಪ್ರಶ್ನೆಗೆ ನನ್ನ ಅನುಭವವನ್ನೇ ಆಧರಿಸಿ ಉತ್ತರಿಸುವುದಾದರೆ, ಒಂದು ಚಿತ್ರದ ಎಲ್ಲ ಪದ-ವಾಕ್ಯಗಳು ಅರ್ಥವಾಗಲೇ ಬೇಕೆಂದಿಲ್ಲ; ನಟ-ನಟಿಯರ ಭಾವ-ಭಂಗಿ, ಧ್ವನಿಯ ಆಳ, ಏರಿಳಿತಗಳು ನಮ್ಮ ಅನುಭವಕ್ಕೆ ಬಂದರೆ ಸಾಕು.

ಇದು ನಿಜವಲ್ಲದಿದ್ದರೆ ಬಿ.ವಿ.ಕಾರಂತರು ಸುಮಾರು 15 ಭಾಷೆಗಳಲ್ಲಿ ನಾಟಕಗಳನ್ನು ನಿರ್ದೇಶಿಸಲು ಸಾಧ್ಯವಾಗುತ್ತಿರಲಿಲ್ಲ.  ನಾನು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ ನನಗೆ ತಮಿಳಿನ/ತೆಲುಗಿನ ಒಂದು ಪದವೂ ಅರ್ಥವಾಗುತ್ತಿರಲಿಲ್ಲ; ಆದರೂ ಆಗ ನೋಡಿ ಆನಂದಿಸಿದ ಶಿವಾಜಿ ಗಣೇಶನ್ ಅಭಿನಯದ ‘ರಕ್ತಕಣ್ಣೀರ್,’ ನಾಗೇಶ್ವರರಾವ್ ಅಭಿನಯದ ‘ದೇವದಾಸು’, ಪೃಥ್ವಿರಾಜ್- ಸೊಹ್ರಾಬ್ ಮೋದಿ ಅಭಿನಯದ ‘ಸಿಕಂದರ್’ ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿವೆ. ಇಂಥ ಅನುಭವದಿಂದ ಕನ್ನಡಿಗರು ವಂಚಿತರಾಗಬೇಕೆ?
-ಸಿ.ಎನ್. ರಾಮಚಂದ್ರನ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT