ಗುರುವಾರ , ಮೇ 13, 2021
16 °C

ಡಯಟ್ ಒಲ್ಲದ ರಾಧಿಕಾ

ಸಂದರ್ಶನ: ರೋಹಿಣಿ ಮುಂಡಾಜೆ Updated:

ಅಕ್ಷರ ಗಾತ್ರ : | |

`ಸ್ವೀಟಿ' ಮೂಲಕ ಚಿತ್ರರಂಗಕ್ಕೆ ಮರು ಎಂಟ್ರಿ ಕೊಟ್ಟಿರುವ ನಟಿ ರಾಧಿಕಾ ಕುಮಾರಸ್ವಾಮಿ, ಮೂರೂವರೆ ವರ್ಷದ ಮಗಳಿದ್ದಾಳೆ ಎಂದು ನಂಬಲಾಗದಷ್ಟು ಫಿಟ್‌ನೆಸ್ ಕಾಯ್ದುಕೊಂಡಿದ್ದಾರೆ. ಹಾಗಂತ ಇಷ್ಟದ ಚಾಕೊಲೇಟು, ಕುಸುಬಲಕ್ಕಿಯ ಅನ್ನ, ತಿನಿಸು, ಐಸ್‌ಕ್ರೀಮ್‌ಯಾವುದನ್ನೂ ಅವರು ಬಿಟ್ಟಿಲ್ಲ. ಫಿಟ್‌ನೆಸ್ ಕಾಪಾಡಿಕೊಂಡಿದ್ದು ಹೇಗೆ ಎಂಬ ಪ್ರಶ್ನೆಗೆ ಅವರ ಬಾಯಲ್ಲೇ ಉತ್ತರ ಕೇಳಿ.`ಸ್ವೀಟಿ' ಸಿನಿಮಾಕ್ಕೆಂದೇ ಶರೀರವನ್ನು ತಿದ್ದಿ ತೀಡಿಕೊಂಡು ಸಜ್ಜಾದಿರಾ?

ಇಲ್ಲಪ್ಪ. ನಾನು ಯಾವತ್ತೂ ಬಹಳ ದಪ್ಪ ಆಗಿರಲಿಲ್ಲ. ನನ್ನ ದೇಹ ಪ್ರಕೃತಿಯೇ ಹಾಗೆ. `ಸ್ವೀಟಿ'ಗೆಂದು ವಿಶೇಷವಾಗಿ ತಯಾರಾಗಲಿಲ್ಲ. ದೇಹತೂಕವೂ ನಾರ್ಮಲ್ ಆಗಿಯೇ ಇತ್ತು.ಈ ಸುಂದರ ಮೈಕಟ್ಟಿನ ಗುಟ್ಟೇನು?

ಡಾನ್ಸ್. ಸಣ್ಣ ವಯಸ್ಸಿನಿಂದಲೂ ನನಗೆ ಡಾನ್ಸ್ ಅಂದ್ರೆ ತುಂಬಾ ತುಂಬಾ ಇಷ್ಟ. ಸ್ವಲ್ಪ ವಿರಾಮ ಸಿಕ್ಕಿದರೂ ಕುಣೀತಿದ್ದೆ. ಟೀವಿ ನೋಡಿಯೇ ನಾನು ಡಾನ್ಸ್ ಕಲಿತದ್ದು. ಈಗಲೂ ಅಷ್ಟೇ. ಅಪ್ಪ ಅಮ್ಮ ಈಗಲೂ ತಮಾಷೆ ಮಾಡ್ತಾರೆ. ಅದೇನು ಮಕ್ಕಳ ಹಾಗೆ ಕುಣೀತಿರ‌್ತೀಯಾ ಅಂತ.ನೃತ್ಯದಿಂದ ನಿಮಗಾಗಿರುವ ಲಾಭವೇನು?

ನಿಮಗೇ ಗೊತ್ತಿದೆ. ನೃತ್ಯ ಮತ್ತು ಸಂಗೀತದಿಂದ ಮನಸ್ಸು ಪ್ರಫುಲ್ಲವಾಗಿರುತ್ತದೆ. ಡಾನ್ಸ್ ಮಾಡುವಾಗ ತಲೆಯಿಂದ ಉಂಗುಷ್ಟದವರೆಗೆ ವ್ಯಾಯಾಮ ಕಸರತ್ತು ಸಿಗುತ್ತದೆ. ಜಿಮ್‌ಗೆ ಹೋಗುವುದಕ್ಕಿಂತಲೂ ನೃತ್ಯ ಮಾಡುವುದರಿಂದ ಹೆಚ್ಚಿನ ಲಾಭ ಇದೆ. ಮುಖ ಮತ್ತು ತ್ವಚೆಗೆ ವಿಶೇಷ ಹೊಳಪು ಬರುತ್ತದೆ.ತಾಯಿಯಾದ ಮೇಲೆ ಸಾಮಾನ್ಯವಾಗಿ ಅನೇಕರು ದಪ್ಪ ಆಗುತ್ತಾರೆ. ನೀವು?

ಶಮಿಕಾಳನ್ನು ಹೆತ್ತು ಒಂಬತ್ತನೇ ದಿನಕ್ಕೇ ನಾನು ವಾಕಿಂಗ್ ಶುರು ಮಾಡಿದ್ದೆ. ಅಜ್ಜಿ ಬೈತಾನೇ ಇದ್ರು. ಆದ್ರೆ ಅವರು ಮಾಡಿಕೊಟ್ಟ ಮಂಗಳೂರು ಶೈಲಿಯ ಬಾಣಂತಿ ಮದ್ದು ಮತ್ತು ಪಥ್ಯಾಹಾರ ತಪ್ಪಿಸಲಿಲ್ಲ. ಬಾಣಂತಿಯರು ಮಾಡುವಂತೆ ರೆಸ್ಟ್ ಮಾಡಲೇ ಇಲ್ಲ. ಬಾಣಂತನದ ಅವಧಿಯಲ್ಲೇ ಡಾನ್ಸ್ ಮಾಡಲು ಶುರು ಮಾಡಿದೆ. ಹಾಗಾಗಿ ಅನಗತ್ಯ ಬೊಜ್ಜು ಬೆಳೆಯಲು ಅವಕಾಶವೇ ಸಿಗಲಿಲ್ಲ.ನಿಮ್ಮ ಡಯಟ್?

ನಾನು ಡಯಟ್ ಮಾಡೋದಾ? ನೋ ಚಾನ್ಸ್. ನನಗೆ ಚಾಕೊಲೇಟ್ ಅಂದ್ರೆ ಪ್ರಾಣ. ನಾನು ತಿನ್ನುವಷ್ಟು ಚಾಕೊಲೇಟ್ ಯಾರೂ ತಿಂದಿರಲಿಕ್ಕಿಲ್ಲ. ಚಾಕೊಲೇಟ್ ಫ್ಲೇವರ್‌ನದ್ದು ಮಾತ್ರ ನಾನು ತಿನ್ನೋದು. ಒಬ್ಬಳೇ ಕುಳಿತುಕೊಂಡು ತಿನ್ನಲು ಶುರು ಮಾಡಿದ್ರೆ ಇಡೀ ಬಾಕ್ಸ್ ಖಾಲಿ ಮಾಡಿಬಿಡುತ್ತೇನೆ. ಕುರುಕುರೆ, ಚಿಪ್ಸ್, ಲೇಸ್ ಅಂದ್ರೂ ಹಾಗೇ.ತಮಾಷೆಯೆಂದರೆ ನಾನು ನಿಯಮಿತವಾಗಿ ಚಪಾತಿ ತಿಂದರೆ ದಪ್ಪ ಆಗುತ್ತೇನೆ! ಎಲ್ಲರೂ ಡಯಟ್ ಅಂತ ಚಪಾತಿ ತಿಂದ್ರೆ ನನಗೆ ಅದು ಉಲ್ಟಾ. ಹಾಗಾಗಿ ನಮ್ಮೂರು ಮಂಗಳೂರಿನ ಕುಸುಬಲಕ್ಕಿ (ಕುಚಿಲಕ್ಕಿ/ ಬಾಯಿಲ್ಡ್ ರೈಸ್) ಅನ್ನವೇ ನನಗೆ ಇಷ್ಟ. ಚಿಕನ್ ಬಿರಿಯಾನಿ, ಮಂಗಳೂರಿನ ಫೇವರಿಟ್ ಕೋಳಿ ರೊಟ್ಟಿ, ಮೀನು ಸಾರು, ಫ್ರೈ, ಕೋಳಿ ಪುಳಿಮುಂಚಿ ಇದ್ರೆ ಸ್ವಲ್ಪ ಅನ್ನ ಜಾಸ್ತಿಯೇ ತಿನ್ನುತ್ತೇನೆ. ನಾನು ಒಂದೇ ಸಲಕ್ಕೆ ಪೂರ್ಣಪ್ರಮಾಣದಲ್ಲಿ ಊಟ/ತಿಂಡಿ ಮಾಡುವುದಿಲ್ಲ. ಅದನ್ನೇ ಎರಡು ವಿಭಾಗ ಮಾಡಿಕೊಂಡು ತಿನ್ನುತ್ತೇನೆ. (ನನ್ನ ಮಗಳಿಗೂ ಅದೇ ರೂಢಿಯಾಗಿದೆ). ದಿನಕ್ಕೊಂದು ಲೋಟ ಹಾಲು, ಹಣ್ಣಿನ ರಸ, ಮಧ್ಯಾಹ್ನದ ಊಟದ ಜತೆ ಸಾಕು ಅನ್ನಿಸುಷ್ಟು ಮಜ್ಜಿಗೆ ಮತ್ತು ಮೊಸರು ಹೀಗೆ ಎಲ್ಲವನ್ನೂ ಸೇವಿಸುತ್ತೇನೆ.ಮಗಳ ಚಟುವಟಿಕೆ?

ಅಯ್ಯೋ ತುಂಬಾ ತುಂಟಿ. ಬಹಳ ಮಾತನಾಡುತ್ತಾಳೆ. ಅವಳಿಗೆ ನನ್ನಂತೆಯೇ ಡಾನ್ಸ್ ಹುಚ್ಚು. ಹಿಂದೆ ನಾನೊಬ್ಬಳೇ ದೆವ್ವದ ಹಾಗೆ ಕುಣೀತಿದ್ದೆ. ಈಗ ಅವಳಿದ್ದಾಳೆ. ಗೆಳತಿಯಾಗಿ, ಸಹಪಾಠಿಯಾಗಿ! ನನ್ನಮ್ಮ, ಅಪ್ಪನನ್ನು ನಾನು ಕರೆಯುವಂತೆ ಪಪ್ಪ ಅಮ್ಮ ಅಂತ ಕರೀತಾಳೆ. ನನ್ನ ತಮ್ಮನಂತೆ ಅಕ್ಕ ಅಂತಾಳೆ. ಕೆಲವರು ಕೇಳ್ತಾರೆ, ಅಕ್ಕ ಅಂತ ಕರೆಯಲು ನೀವೇ ಹೇಳಿಕೊಟ್ಟಿದ್ದಾ ಅಂತ. ತನ್ನ ಸುತ್ತಮುತ್ತಲಿನ ಜಗತ್ತನ್ನು ಯಥಾವತ್ ಫಾಲೋ ಮಾಡುವ ವಯಸ್ಸು ಅವಳದು. ಅದಕ್ಕೆ ಹಾಗಾಗಿದೆ ಅಷ್ಟೇ.ಹೈದರಾಬಾದ್ ಮತ್ತು ಗೋವಾಕ್ಕೆ ಚಿತ್ರೀಕರಣಕ್ಕೆ ಹೋದಾಗ ಅಪ್ಪ ಅಮ್ಮ ಮತ್ತು ಮಗಳನ್ನೂ ಕರೆದೊಯ್ದಿದ್ದೆ. ಎಷ್ಟೇ ಬ್ಯುಸಿ ಇದ್ದರೂ ಸಂಜೆಯಾದ ಮೇಲೆ ಅವಳನ್ನು ಬಿಟ್ಟು ಇರಲು ಆಗುವುದಿಲ್ಲ.ಬ್ಯೂಟಿಪಾರ್ಲರ್, ಸ್ಪಾ ಭೇಟಿ?

ಇಲ್ಲವೇ ಇಲ್ಲ. ಬ್ಯೂಟಿಷಿಯನ್ ಭೇಟಿ ಏನಿದ್ದರೂ ಐ ಬ್ರೋ ಶೇಪಿಂಗ್ ಮತ್ತು ವ್ಯಾಕ್ಸಿಂಗ್‌ಗೆ. ಉಳಿದಂತೆ ಮನೆಯಲ್ಲೇ ಅಡುಗೆಮನೆಯ ಸೌಂದರ್ಯ ರಕ್ಷಕ, ವರ್ಧಕ ವಸ್ತುಗಳನ್ನೇ ಬಳಸುತ್ತೇನೆ. ನೆನೆಸಿ ರುಬ್ಬಿದ ಮೆಂತೆ ಮತ್ತು ತೆಂಗಿನಹಾಲು ತಲೆಗೆ ಹಚ್ಚಿ ಸ್ನಾನ ಮಾಡುತ್ತೇನೆ. ಮುಖ ಮತ್ತು ಚರ್ಮದ ಸೌಂದರ್ಯಕ್ಕೆ ದಿನಕ್ಕೆ ನಾಲ್ಕು ಲೀಟರ್ ನೀರು ಕುಡಿಯೋದು, ಅರಿಶಿನ ಕೊಂಬನ್ನು ಹಾಲಿನಲ್ಲಿ ತೇದು ಹಚ್ಚೋದು.ಎಲ್ಲಕ್ಕಿಂತ ಹೆಚ್ಚಾಗಿ ಖುಷಿ ಖುಷಿಯಾಗಿ ಇದ್ದರೆ ದೇಹ ಮತ್ತು ಮನಸ್ಸು ಉಲ್ಲಾಸದಿಂದ ಇರುತ್ತದೆ. ಮುಖದಲ್ಲಿ ಅದು ಪ್ರತಿಬಿಂಬಿಸುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.