ಭಾನುವಾರ, ಜೂನ್ 20, 2021
21 °C

ಡಾ.ಬಾಬು ಜಗಜೀವನರಾಂ ಭವನಕ್ಕೆ ಅಡಿಗಲ್ಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: `ಜಾತಿ ನಿರ್ಮೂಲನೆಗೆ ಪ್ರಾಮಾಣಿಕ ಪ್ರಯತ್ನ ಮಾಡುವ ಬದಲು ಭವನ, ಸ್ಮಾರಕಗಳನ್ನು ನಿರ್ಮಾಣ ಮಾಡುವುದರಿಂದ ದಲಿತರ ಉದ್ಧಾರ ಅಸಾಧ್ಯ~ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ ನುಡಿದರು.ಹಳೆಹುಬ್ಬಳ್ಳಿಯಲ್ಲಿ ಭಾನುವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಹುಬ್ಬಳ್ಳಿ-ಧಾರವಾಡ ಮಹಾ ನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ.ಬಾಬು ಜಗಜೀವನರಾಮ ಭವನಕ್ಕೆ ಅಡಿಗಲ್ಲು ಪೂಜೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.`ಸ್ವಾತಂತ್ರ್ಯ ಬಂದು 65 ವರ್ಷಗಳು ಗತಿಸಿದರೂ ಜಾತಿ ವ್ಯವಸ್ಥೆ ನಿರ್ಮೂಲನೆಯಾಗಿಲ್ಲ. ಮೇಲು-ಕೀಳು ತಾರತಮ್ಯವೂ ಹೋಗಿಲ್ಲ. ಜಾತಿಪದ್ಧತಿ ಹೋಗಲಾಡಿ ಸಲು ಸ್ವತಂತ್ರ ಭಾರತದಲ್ಲಿ ಯಾರಾದರೂ ಪ್ರಯತ್ನ ಮಾಡಿದ್ದಾರೆಯೇ?~ ಎಂದು ಪ್ರಶ್ನಿಸಿದ ಅವರು, `ದಲಿತರು ಅಧಿಕಾರಕ್ಕೆ ಬಂದರೆ ತಮ್ಮ ಜನಾಂಗದ ಬಗ್ಗೆ ಕಳಕಳಿಯಿಂದ ಅಭಿವೃದ್ಧಿಗೆ ಪ್ರಾಮಾಣಿಕ ಯತ್ನ ಮಾಡುತ್ತಾರೆ ಎಂಬ ಭಾವನೆಯೂ ಹುಸಿಯಾಗಿದೆ~ ಎಂದು ವಿಷಾದಿಸಿದರು.`ಬಸವರಾಜ್ಯ ಉದಯವಾಗುವವರೆಗೆ, ಬಸವಣ್ಣ ನಂತಹ ಆಡಳಿತಗಾರರು ಮತ್ತೆ ಹುಟ್ಟಿಬರುವವರೆಗೆ ಹಾಗೂ ಅಂತರ್ಜಾತಿ ವಿವಾಹ ಆಗುವವರೆಗೆ ದಲಿತರ ವಿಮೋಚನೆ ಅಸಾಧ್ಯ~ ಎಂದು ಅವರು ನುಡಿದರು.ಭವನಕ್ಕೆ 10 ಲಕ್ಷ: `ಸದ್ಯದಲ್ಲೇ ಆರಂಭವಾಗಲಿರುವ ಜಗಜೀವನರಾಂ ಭವನದ ಕಟ್ಟಡ ನಿರ್ಮಾಣಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 10 ಲಕ್ಷ ರೂಪಾಯಿಗಳನ್ನು ನೀಡುತ್ತೇನೆ~ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಕಾರ್ಯಕ್ರಮ ದಲ್ಲಿ ಘೋಷಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ದರ್ಪಣ ಜೈನ್, `ಅಂದಾಜು 4.50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಭವನಕ್ಕೆ ಪಾಲಿಕೆಯ ಶೇ 22.75 ಯೋಜನೆಯಡಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೇ ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳಡಿಯಲ್ಲಿ ಲಭ್ಯ ವಿರುವ ಹಣವನ್ನು ಬಳಸಿಕೊಳ್ಳಲಾಗುತ್ತಿದೆ. ಆದರೂ ಇನ್ನಷ್ಟು ಹಣಕಾಸಿನ ಅಗತ್ಯವಿದ್ದು, ರಾಜ್ಯ ಸರ್ಕಾರ ಹೆಚ್ಚವರಿ ಹಣವನ್ನು ನೀಡಬೇಕು~ ಎಂದು ಸಚಿವರಿಗೆ ಮನವಿ ಮಾಡಿದರು.`ಒಟ್ಟು 23 ಸಾವಿರ ಚದರ ಅಡಿ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳಲಿರುವ ಈ ಭವನವು ಮುಂದಿನ 18 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಮೂರು ಅಂತಸ್ತನ್ನು ಹೊಂದಲಿರುವ ಭವನದಲ್ಲಿ 800 ಆಸನ ಸಾಮರ್ಥ್ಯದ ಅತ್ಯಾಧುನಿಕ ಸಭಾಂಗಣ, 150 ಆಸನ ಸಾಮರ್ಥ್ಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಕ್ಕಾಗಿ ಸಭಾಂಗಣ ನಿರ್ಮಾಣ ಗೊಳ್ಳಲಿದೆ. ಜಗಜೀವನರಾಂರ ಜೀವನವನ್ನು ಬಿಂಬಿಸುವ ಛಾಯಾಚಿತ್ರ ಪ್ರದರ್ಶನ ವ್ಯವಸ್ಥೆಯನ್ನೂ ಮಾಡಲಾ ಗುವುದು~ ಎಂದು ತಿಳಿಸಿದರು.ಶಾಸಕ ವೀರಭದ್ರಪ್ಪ ಹಾಲಹರವಿ, ಮೇಯರ್ ಪೂರ್ಣಾ ಪಾಟೀಲ, ರಾಜ್ಯ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ ಮಾತನಾಡಿದರು.`ಕಾರ್ಯಕ್ರಮ ನಡೀತದ ನೀ ನಡಿ~!`ಎಲ್ಲದರಲ್ಲೂ ರಾಜಕೀಯ ಮಾಡಬೇಡಿ~ ಎಂದು ಪಾಲಿಕೆ ಸದಸ್ಯ ಗಣೇಶ ಟಗರಗುಂಟಿ ಮಾತಿನಿಂದ ಕೆರಳಿದ ಸಚಿವ ಗೋವಿಂದ ಕಾರಜೋಳ `ಕಾರ್ಯಕ್ರಮ ತನ್ನ ಷೆಡ್ಯೂಲ್ ಪ್ರಕಾರ ನಡೀತದ, ನೀ ಮಾತು ಮುಗಿಸಿ ನಡೀ~ ಎಂದು ಹೇಳಿದ ಪ್ರಸಂಗ ನಡೆಯಿತು.ಕಾರ್ಯಕ್ರಮದಲ್ಲಿ ತಮ್ಮ ಮಾತನ್ನು ಆರಂಭಿಸುತ್ತಲೇ ಟಗರಗುಂಟಿ, `ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಾಸಕರು, ಪಾಲಿಕೆ ಸದಸ್ಯರು, ಅಧಿಕಾರಿಗಳು ರಾಜಕೀಯ ಮಾಡಬೇಡಿ~ ಎಂದು ಹೇಳಿದ್ದನ್ನೇ ಹಲವು ಬಾರಿ ಪುನರಾವರ್ತನೆ ಮಾಡಿದರು. ಮೊದಲಿಗೆ ಸುಮ್ಮನಿದ್ದ ಸಚಿವರು, ಒಂದು ಹಂತದಲ್ಲಿ ಕೋಪದಿಂದಲೇ ಮೇಲಿನಂತೆ ಪ್ರತಿಕ್ರಿಯೆ ನೀಡಿದರು.ತಕ್ಷಣವೇ ಮಾತನ್ನು ಮೊಟಕುಗೊಳಿಸಿದ ಟಗರಗುಂಟಿ ತಮ್ಮ ಆಸನದತ್ತ ತೆರಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.