ಗುರುವಾರ , ಮೇ 13, 2021
24 °C
ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಆರಂಭ ್ಞ ಕಾರ್ಯಕರ್ತರ ಜೊತೆ ಮೊದಲ ಸಭೆ

ಡಿ.ಕೆ.ಶಿವಕುಮಾರ್ ರಾಜ್ಯದ ಶಕ್ತಿ: ಕೆ.ಜೆ.ಜಾರ್ಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ:  `ಕನಕಪುರದ ಶಾಸಕ ಡಿ.ಕೆ.ಶಿವಕುಮಾರ್ ಅವರು ರಾಮನಗರ ಜಿಲ್ಲೆಯ ಶಕ್ತಿಯಷ್ಟೇ ಅಲ್ಲ, ಇಡೀ ರಾಜ್ಯಕ್ಕೆ ಶಕ್ತಿ. ಆದಷ್ಟು ಬೇಗ ಅವರಿಗೆ ಸರ್ಕಾರದಲ್ಲಿ ಒಳ್ಳೆಯ ಜವಾಬ್ದಾರಿ ದೊರೆಯಲಿದೆ' ಎಂದು ಗೃಹ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ವಿಶ್ವಾಸ ವ್ಯಕ್ತಪಡಿಸಿದರು.ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಮೊದಲ ಬಾರಿಗೆ ರಾಮನಗರಕ್ಕೆ ಸೋಮವಾರ ಆಗಮಿಸಿದ್ದ ಸಚಿವರು, ಜಿಲ್ಲಾ ಕಾಂಗ್ರೆಸ್ ಸಮಿತಿಯು ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.`ನಾನು ಮತ್ತು ಶಿವಕುಮಾರ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು. 1990ರಲ್ಲಿ ಇಬ್ಬರೂ ಸಚಿವರಾಗಿ ಕೆಲಸ ಮಾಡಿದ್ದೇವೆ. ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸಂಘಟಿಸುತ್ತಿರುವ ಶಿವಕುಮಾರ್ ಶಕ್ತಿ ಎಂತಹುದು ಎಂಬುದು ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯದ ಮುಖಂಡರಿಗೆ ಗೊತ್ತಿದೆ. ಹಾಗಾಗಿ ಅವರನ್ನು ಯಾರಿಗೂ ಪರಿಚಯಿಸುವ ಅಗತ್ಯವಿಲ್ಲ. ಆದರೆ ಅವರಿಗೇಕೆ ಸಚಿವ ಸ್ಥಾನ ದೊರೆತಿಲ್ಲ ಎಂಬುದು ಗೊತ್ತಿಲ್ಲ. ಶೀಘ್ರದಲ್ಲಿಯೇ ಉತ್ತಮ ಸ್ಥಾನ ಮತ್ತು ಹೆಚ್ಚಿನ ಜವಾಬ್ದಾರಿ ಅವರಿಗೆ ದೊರೆಯಲಿದೆ' ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಕಾರ್ಯಕರ್ತರಿಗೆ ಆದ್ಯತೆ:  `ಪಕ್ಷದ ಕಾರ್ಯಕರ್ತರಿಗೆ ಮೊದಲಿನಿಂದಲೂ ಗೌರವ ಕೊಡುವುದನ್ನು ನಾನು ಕಲಿತಿದ್ದೇನೆ. ಎಲ್ಲಿಗೆ ಹೋದರೂ ಅಲ್ಲಿನ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ, ಕಾರ್ಯಕರ್ತರ ಜತೆ ಚರ್ಚಿಸುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರಾದ ನಂತರವೂ ಅದು ಮುಂದುವರೆಯಲಿದೆ. ಅಲ್ಲದೆ ಮುಖ್ಯಮಂತ್ರಿ ಸ್ದ್ದಿದರಾಮಯ್ಯ ಅವರೂ ಎಲ್ಲ ಸಚಿವರಿಗೆ ಇದೇ ಕ್ರಮ ಅನುಸರಿಸಲು ಸೂಚನೆ ನೀಡಿದ್ದಾರೆ' ಎಂದು ಅವರು ಹೇಳಿದರು.ಚನ್ನಪಟ್ಟಣದಲ್ಲಿ ಶಾಸಕರು ನಡೆಸುತ್ತಿದ್ದ ಕಾರ್ಯಕ್ರಮಕ್ಕೆ ಹೋಗುವುದು ಉಚಿತವಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ ಕಾರಣಕ್ಕೆ, ನಾನು ಚನ್ನಪಟ್ಟಣಕ್ಕೆ ತೆರಳಲಿಲ್ಲ. ಈ ನಿರ್ಧಾರವನ್ನು ಕೇವಲ ಒಂದು ನಿಮಿಷದಲ್ಲಿ ತೆಗೆದುಕೊಂಡಿದ್ದೇನೆ. ಇದು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ನಾನು ಎಷ್ಟು ಆದ್ಯತೆ ನೀಡುತ್ತೇನೆ ಎಂಬುದರ ನಿದರ್ಶನ ಎಂದರು.ರಾಮನಗರಕ್ಕೆ ಕಾವೇರಿ 2ನೇ ಹಂತದಿಂದ ಕುಡಿಯುವ ನೀರು ತರುವ ಅಥವಾ ಮಂಚನಬೆಲೆಯಿಂದ ನೀರು ತರುವ ವಿಚಾರವನ್ನು ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ. ಪಹಣಿಯಲ್ಲಿ ಉಂಟಾಗುತ್ತಿರುವ ಲೋಪ ಸರಿಪಡಿಸಲು ಮತ್ತು ಹೆಚ್ಚುವರಿ ಪಹಣಿ ವಿತರಣಾ ಕೇಂದ್ರ ಸ್ಥಾಪಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಇದೇ ಸಂದರ್ಭದಲ್ಲಿ ಹೇಳಿದರು.ಲೋಕಸಭೆ ಚುನಾವಣೆಗೆ ಸಜ್ಜಾಗಲು ಕರೆ: ಕೇಂದ್ರದಲ್ಲಿ ಯುಪಿಎ ಸರ್ಕಾರ ಮುಂದುವರೆಯಬೇಕು ಎಂದರೆ ಮುಂಬರುವ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಕಾರ್ಯಕರ್ತರು ಕೆಲಸ ಮಾಡಬೇಕು. ಎದುರಾಳಿಗಳು ಎಂತಹ ಪ್ರಬಲ ಸ್ಪರ್ಧಿಯೇ ಆದರೂ ಕಾಂಗ್ರೆಸ್ ಅಭ್ಯರ್ಥಿ ಪರ ನಿಂತು ಕಚ್ಚೆದೆಯಿಂದ ಚುನಾವಣೆ ಎದುರಿಸಿ, ಕಾಂಗ್ರೆಸ್ ಜಯಿಸುವಂತೆ ಮಾಡಬೇಕು ಎಂದು ಅವರು ಕಾರ್ಯಕರ್ತರಿಗೆ ತಿಳಿಸಿದರು.ಮಾಜಿ ಶಾಸಕರಾದ ಸಿ.ಎಂ.ಲಿಂಗಪ್ಪ, ಎಸ್.ರವಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ  ಸೈಯದ್ ಜಿಯಾವುಲ್ಲಾ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮರಿದೇವರು, ಕೆಪಿಸಿಸಿ ಸದಸ್ಯ ಎ.ಮಂಜುನಾಥ್, ಚನ್ನಪಟ್ಟಣದ ತಾಲ್ಲೂಕು ಘಟಕದ ಅಧ್ಯಕ್ಷ ವೀರೇಗೌಡ ಮಾತನಾಡಿದರು.ಕೆಪಿಸಿಸಿ ಉಸ್ತುವಾರಿ ಕಾರ್ಯದರ್ಶಿ ನಿಸಾರ್ ಅಹಮದ್, ಕೆಪಿಸಿಸಿ ಸದಸ್ಯರಾದ ರಮೇಶ್, ಶ್ರೀಕಂಠು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಕೆಂಪರಾಜು, ಮುಖಂಡ ಕೆ.ಶೇಷಾದ್ರಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಕಾವೇರಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯ ಇಕ್ಬಾಲ್ ಹುಸೇನ್ ಇತರರು ಉಪಸ್ಥಿತರಿದ್ದರು.`ಡಿ.ಕೆ.ಶಿವಕುಮಾರ್ ಇನ್ನೂ ಸತ್ತಿಲ್ಲ'

`ಡಿ.ಕೆ.ಶಿವಕುಮಾರ್ ಸತ್ತಿದ್ದಾನೆ ಎಂದು ತಿಳಿದುಕೊಂಡಿದ್ದರೆ ಅದು ತಪ್ಪು. ನಾನು ಸತ್ತಿಲ್ಲ' ಎಂದು ಶಾಸಕ ಡಿ.ಕೆ.ಶಿವಕುಮಾರ್ ಆಕ್ರೋಶದ ಬೆಂಕಿ ಕಾರಿದರು.`ಸರ್ಕಾರ ರಚನೆಯಾಗಿ ಕೆಲವೇ ದಿನದಲ್ಲಿ ಚನ್ನಪಟ್ಟಣದ ಶಾಸಕರು ಕಟ್ಟಡವೊಂದರ ಶಂಕುಸ್ಥಾಪನೆಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಆಹ್ವಾನಿಸಿದ್ದರು. ಈ ವಿಷಯ ಅಲ್ಲಿನ ಬ್ಲಾಕ್ ಕಾಂಗ್ರೆಸ್ ಮುಖಂಡರಿಗೂ ಗೊತ್ತಿರಲಿಲ್ಲ. ಪಕ್ಷದ ಕಾರ್ಯಕರ್ತರನ್ನು ರಕ್ಷಿಸುವ ಹೊಣೆ ಅರಿತ ನಾನು ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ, ಉಸ್ತುವಾರಿ ಸಚಿವರನ್ನು ಕಳುಹಿಸುವುದು ಸರಿಯಲ್ಲ ಎಂದೆ. ಅವರು ಜಾರ್ಜ್ ಅವರಿಗೆ ವಿಷಯ ತಿಳಿಸಿದರು. ಜಾರ್ಜ್ ತಕ್ಷಣವೇ ನನ್ನ ಮಾತಿಗೆ ಬೆಲೆ ನೀಡಿ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು' ಎಂದು ಶಿವಕುಮಾರ್ ಹೇಳಿದರು.`ಕಾಂಗ್ರೆಸ್ ಬೆನ್ನಿಗೆ ಚಾಕು ಹಾಕಿದವರನ್ನು ನಂಬಲು ಸಾಧ್ಯವೇ ಇಲ್ಲ. ಪಕ್ಷದ ಸಿದ್ಧಾಂತ, ಚಿನ್ಹೆ, ತತ್ವ, ರಾಷ್ಟ್ರೀಯ ನಾಯಕರನ್ನು ನಂಬುವವರಿಗೆ ಮಾತ್ರ ಬೆಲೆ ನೀಡುತ್ತೇವೆ. ಕುತಂತ್ರ ಮಾಡುವವರನ್ನು ನಂಬುವುದಿಲ್ಲ' ಎಂದು ಅವರು ಪರೋಕ್ಷವಾಗಿ ಚನ್ನಪಟ್ಟಣದ ಸಮಾಜವಾದಿ ಪಕ್ಷದ ಶಾಸಕ ಸಿ.ಪಿ.ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.`ಜಿಲ್ಲೆಯಲ್ಲಿ ಕಾಂಗ್ರಸ್ ಕಟ್ಟಲು ಶ್ರಮಿಸುತ್ತಿರುವ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆಯ ಅಗತ್ಯವಿದೆ. ಜಿಲ್ಲಾ ಕಾಂಗ್ರೆಸ್ ಹೇಳುವುದು ಸರ್ಕಾರದ ಕೂಗು ಅಥವಾ ಧ್ವನಿಯಾಗಬೇಕು. ಆಗ ಇಲ್ಲಿನ ಕಾರ್ಯಕರ್ತರಿಗೆ ಶಕ್ತಿ ಬರುತ್ತದೆ' ಎಂದು ಅವರು ಹೇಳಿದರು.`ನನಗೆ ಸಚಿವ ಸ್ಥಾನದ ಕೇಸು ಜಾರ್ಜ್ ಅಥವಾ ಮುಖ್ಯಮಂತ್ರಿ ಅವರ ಕೋರ್ಟ್‌ನ ಮುಂದಿಲ್ಲ. ಅದು ಸೋನಿಯಾ ಗಾಂಧಿ ಅವರ ನ್ಯಾಯಾಲಯದಲ್ಲಿದ್ದು, ಅನ್ಯಾಯದ ತೀರ್ಪು ಕೊಡುವುದಿಲ್ಲ' ಎಂಬ ಭರವಸೆ ಇದೆ. ಮೇಡಂ ನನಗೆ ಸೂಕ್ತ ಸ್ಥಾನ ನೀಡುವ ಭರವಸೆ ಮತ್ತು ನಂಬಿಕೆ ನನಗಿದೆ' ಎಂದರು.ಕಾಂಗ್ರೆಸ್ ಸರ್ಕಾರ ಎಂಬ ಭಾವನೆ ಬರಬೇಕು

`ಧರ್ಮಸಿಂಗ್ ಸರ್ಕಾರ ಇದ್ದಾಗ ಇಲ್ಲಿ ಜೆಡಿಎಸ್ ಆಡಳಿತವೇ ನಡೆದದ್ದು. ಎಲ್ಲಿ ಧ್ವನಿಯೆತ್ತಿದರೆ ಸರ್ಕಾರಕ್ಕೆ ಕುತ್ತಾಗುತ್ತದೆಯೋ ಎಂದು ನಾನೂ ಸುಮ್ಮನಿದ್ದೆ. ಈ ಬಾರಿ ಕಾಂಗ್ರೆಸ್ ಯಾವ ಹಂಗಿಲ್ಲದೆ ಅಧಿಕಾರಕ್ಕೆ ಬಂದಿದ್ದು, ಐದು ವರ್ಷ ಪೂರ್ಣ ಆಳ್ವಿಕೆ ನಡೆಸುತ್ತದೆ. ಈ ಅವಧಿಯಲ್ಲಿ ರಾಮನಗರ, ಮಾಗಡಿ, ಚನ್ನಪಟ್ಟಣದ ಪಕ್ಷದ ಕಾರ್ಯಕರ್ತರಿಗೆ ಇದು ಕಾಂಗ್ರೆಸ್ ಸರ್ಕಾರ ಎಂಬ ಭಾವನೆ ಬರುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಆಡಳಿತ ನಡೆಸಬೇಕು' ಎಂದು ಶಿವಕುಮಾರ್ ಮನವಿ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.