ಗುರುವಾರ , ಮೇ 13, 2021
16 °C

ಡಿಜಿಟಲ್ ಮಾದರಿ ಮೌಲ್ಯಮಾಪನದಲ್ಲಿ ಕೆಪಿಎಸ್‌ಸಿ ಆಸಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ.ಟಿ.ಯು) ಇದೇ ಜನವರಿಯಲ್ಲಿ ಜಾರಿಗೆ ತಂದಿರುವ ಡಿಜಿಟಲ್ ಮಾದರಿಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪದ್ಧತಿ ಅಳವಡಿಸಿಕೊಳ್ಳಲು ರಾಜ್ಯ ಲೋಕಸೇವಾ ಆಯೋಗ ಆಸಕ್ತಿ ತೋರಿಸಿದೆ ಎಂದು ವಿ.ವಿ. ರಿಜಿಸ್ಟ್ರಾರ್ (ಮೌಲ್ಯಮಾಪನ) ಡಾ.ಜಿ.ಎನ್. ಕೃಷ್ಣಮೂರ್ತಿ ತಿಳಿಸಿದರು.ಈ ಕುರಿತು ಅಧ್ಯಯನ ನಡೆಸಲು ಆಯೋಗದ ಮುಖ್ಯಸ್ಥರು ಇತ್ತೀಚೆಗೆ ವಿ.ವಿ.ಗೆ ಭೇಟಿ ನೀಡಿದ್ದಾರೆ. ಲೋಕಸೇವಾ ಆಯೋಗ ಮಾತ್ರವಲ್ಲದೆ, ಗುಜರಾತ್ ತಾಂತ್ರಿಕ ವಿ.ವಿ. ಮತ್ತು ಛತ್ತೀಸ್‌ಗಡ ವಿ.ವಿ. ಕೂಡ ಆಸಕ್ತಿ ತೋರಿವೆ ಎಂದು ಡಿಜಿಟಲ್ ಮೌಲ್ಯಮಾಪನ ಪದ್ಧತಿ ಬಗ್ಗೆ ಶ್ರುತ್ ಅಂಡ್ ಸ್ಮಿತ್ ಪ್ರತಿಷ್ಠಾನ ಮತ್ತು ಶೈಕ್ಷಣಿಕ ಸುಧಾರಣೆಗಾಗಿ ವೃತ್ತಿಪರರ ಕಾರ್ಯಪಡೆ (ಪೇಸರ್) ಬೆಂಗಳೂರಿನಲ್ಲಿ ಬುಧವಾರ ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ಹೇಳಿದರು.ಆಂತರಿಕ ಮೌಲ್ಯಮಾಪನ ಕಾರ್ಯವನ್ನೂ ಡಿಜಿಟೈಸ್ ಮಾಡಲಾಗಿದೆ. ಇದರಿಂದ ವಾರ್ಷಿಕ ಅಂದಾಜು 20 ಲಕ್ಷ ಪ್ರತಿಗಳಷ್ಟು ಕಾಗದ ಉಳಿಯುತ್ತದೆ. ಪರೀಕ್ಷೆಗಳಿಗೆ ಹಾಜರಾಗದ ವಿದ್ಯಾರ್ಥಿಗಳ ಪಟ್ಟಿಯನ್ನೂ ಡಿಜಿಟೈಸ್ ಮಾದರಿಯಲ್ಲಿ ಸಿದ್ಧಪಡಿಸುವ ಕುರಿತು ಚಿಂತನೆ ನಡೆದಿದೆ. ಹಾಗೆಯೇ ಆನ್‌ಲೈನ್ ಮೂಲಕ ಪರೀಕ್ಷೆಗೆ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನೂ ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದರು.ವಿ.ವಿ. ಕಾರ್ಯಕಾರಿ ಪರಿಷತ್ತಿನ ಸದಸ್ಯ ಪ್ರೊ.ಎಸ್. ವಿದ್ಯಾಶಂಕರ್ ಮಾತನಾಡಿ, `ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತಂದಾಗ, ಸಹಜವಾಗಿಯೇ ಕೆಲವು ನ್ಯೂನತೆಗಳು ಇರುತ್ತವೆ. ಅವುಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಉತ್ತರ ಪತ್ರಿಕೆಗಳನ್ನು ಕತ್ತರಿಸಿ ಸ್ಕ್ಯಾನ್ ಮಾಡಬೇಕಾದ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು~ ಎಂದು ಹೇಳಿದರು.ಕೊಯಮತ್ತೂರಿನ ಅಣ್ಣಾ ವಿ.ವಿ.ಯಲ್ಲಿ ಮೂರು ವರ್ಷಗಳ ಹಿಂದೆಯೇ ಈ ವ್ಯವಸ್ಥೆ ಜಾರಿಗೆ ಬಂದಿದೆ. ಆಂತರಿಕ ಮೌಲ್ಯಮಾಪನ ಕೂಡ ಡಿಜಿಟಲ್ ಮಾದರಿಯಲ್ಲೇ ನಡೆಯುತ್ತಿದೆ. ಈ ವ್ಯವಸ್ಥೆಯಿಂದ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಏರುಪೇರು ಕಂಡುಬರುತ್ತದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಮಾನವ ಸಹಜ ದೋಷಗಳಿಂದ ಆಗುತ್ತಿದ್ದ ತಪ್ಪುಗಳು ಈ ಪದ್ಧತಿಯಲ್ಲಿ ಇಲ್ಲವಾಗಿವೆ. ಆದರೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇದನ್ನು ವಿರೋಧಿಸುತ್ತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ವಿ.ಟಿ.ಯು ಸಂಯೋಜಿತ ವಿವಿಧ ಕಾಲೇಜುಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.