ಶನಿವಾರ, ಜನವರಿ 18, 2020
20 °C

ಡಿಟಿಎಚ್‌ ಕಂಪೆನಿ ಬದಲಿಗೆ ಅವಕಾಶ: ಟ್ರಾಯ್‌ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಡಿಟಿಎಚ್‌ ಬಳಕೆದಾರರು ಸೆಟ್‌ ಟಾಪ್‌ ಬಾಕ್ಸ್‌­ಗಳನ್ನು ತಮ್ಮ ಆಯ್ಕೆಗೆ ಅನುಗುಣ­ವಾಗಿ ಇತರ ಕಂಪೆನಿಗಳ ಸೇವೆ ಪಡೆದು­ಕೊಳ್ಳುವುದಕ್ಕೂ ಅನುಕೂಲ­ವಾಗು­ವಂತಹ ವ್ಯವಸ್ಥೆ ರೂಪಿಸಬೇಕು ಎಂದು ಭಾರತೀಯ ದೂರ­ಸಂಪರ್ಕ ನಿಯಂತ್ರಣ ಪ್ರಾಧಿ­ಕಾರದ (ಟ್ರಾಯ್‌) ಅಧ್ಯಕ್ಷ ರಾಹುಲ್‌ ಖುಲ್ಲರ್‌ ಹೇಳಿದ್ದಾರೆ.ಒಂದು ಕಂಪೆನಿಯ ಸೇವೆ ಪಡೆ­ಯುತ್ತಿರುವ ಬಳಕೆದಾರರು ಕಂಪೆನಿ­ಯನ್ನು ಬದಲಾಯಿಸಿದರೆ ಅದೇ ಸೆಟ್‌ ಟಾಪ್‌ ಬಳಸಿ ತಮ್ಮ ಆಯ್ಕೆಯ ಬೇರೊಂದು ಕಂಪೆನಿಯ ಸೇವೆ ಪಡೆಯಲು ತಾಂತ್ರಿಕವಾಗಿ ಸಾಧ್ಯ­ವಾಗಬೇಕು.ತಾಂತ್ರಿಕವಾಗಿ ಇದು ಕಷ್ಟ ಸಾಧ್ಯ ಎಂದಾದರೆ ವಾಣಿಜ್ಯಿಕವಾಗಿ ಈ ಆಯ್ಕೆಯನ್ನು ಬಳಕೆದಾರರಿಗೆ ನೀಡ­ಬೇಕು. ಅಂದರೆ ಕಂಪೆನಿಯನ್ನು ಬದ­ಲಾಯಿ­ಸುವಾಗ ಆ ಕಂಪೆನಿ­ಯಿಂದ ಖರೀದಿಸಿರುವ ಸೆಟ್‌ ಟಾಪ್‌ ಬಾಕ್ಸನ್ನು ಕಂಪೆನಿಯು ವಾಪಸ್‌ ಪಡೆದು ಅದರ ಬೆಲೆಯನ್ನು ಪಾವತಿಸ­ಬೇಕು. ಈ ಹಣದಿಂದ ಹೊಸ ಕಂಪೆನಿಯ ಸೆಟ್‌ ಟಾಪ್‌ ಬಾಕ್ಸ್‌ ಖರೀದಿಸಲು ಬಳಕೆ­ದಾರರಿಗೆ ಸಾಧ್ಯವಾಗಬೇಕು.ಗ್ರಾಹಕರ ಹಿತ­ದೃಷ್ಟಿ­ಯಿಂದ ಇದು ಸಾಧ್ಯವಾಗು­ವಂತೆ ಮಾಡಬೇಕು ಎಂದು ಖುಲ್ಲರ್‌ ಸೂಚನೆ ನೀಡಿದ್ದಾರೆ. ಹೊಸ ಡಿಟಿಎಚ್‌ ಪರವಾನಗಿ ನೀಡಿಕೆಗೆ ಶಿಫಾರಸುಗಳನ್ನು ರೂಪಿ­ಸುವ ಡಿಟಿಎಚ್‌ ಸೇವಾ ಕಂಪೆನಿ­ಗಳೊಂದಿಗಿನ ಮುಕ್ತ ಸಮಾಲೋಚನೆ­ಯಲ್ಲಿ ಖುಲ್ಲರ್‌ ಈ ಸಲಹೆ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)