ಶುಕ್ರವಾರ, ಮೇ 27, 2022
21 °C

ಡಿ.15ರಿಂದ ಬೆಂಗಳೂರಿನಲ್ಲಿ ಸಿನಿಮೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ರಾಜ್ಯ ವಾರ್ತಾ ಇಲಾಖೆ ಆಶ್ರಯದಲ್ಲಿ ಡಿಸೆಂಬರ್ 15ರಿಂದ 22ರ ವರೆಗೆ ನಡೆಯಲಿರುವ ನಾಲ್ಕನೆಯ `ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ~ದ ಲಾಂಛನವನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಮಂಗಳವಾರ ಅನಾವರಣಗೊಳಿಸಿದರು.ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಬಹುಸಂಸ್ಕೃತಿಯ ನಗರಿ ಬೆಂಗಳೂರಿನ ನಾಗರಿಕರಿಗೆ ಜಗತ್ತಿನ ಶ್ರೇಷ್ಠ ಚಲನಚಿತ್ರಗಳನ್ನು ವೀಕ್ಷಿಸುವ ಅವಕಾಶ ಕಲ್ಪಿಸುವುದು ಈ ಸಿನಿಮೋತ್ಸವದ ಆಶಯ~ ಎಂದು ತಿಳಿಸಿದರು.ಸಿನಿಮೋತ್ಸವದ ಆಯೋಜನೆಗಾಗಿ ಸರ್ಕಾರ 2.5 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಅಂತರರಾಷ್ಟ್ರೀಯ, ಏಷ್ಯಾ, ಭಾರತೀಯ ಮತ್ತು ಕನ್ನಡ ಸಿನಿಮಾಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಸಲಾಗುವುದು. ಇದರಲ್ಲಿ ಪ್ರಥಮ ಬಹುಮಾನ ಪಡೆದ ಚಿತ್ರಕ್ಕೆ ಚಿನ್ನದ ಭೇರುಂಡ ಮತ್ತು ದ್ವಿತೀಯ ಬಹುಮಾನ ಪಡೆದ ಚಿತ್ರಕ್ಕೆ ಬೆಳ್ಳಿಯ ಭೇರುಂಡ ಪಾರಿತೋಷಕ ನೀಡಲಾಗುವುದು ಎಂದರು.ಸಿನಿಮೋತ್ಸವದ ಅಂಗವಾಗಿ `ಲಿಡೊ~ ಚಿತ್ರಮಂದಿರ, ಸುಚಿತ್ರಾ ಫಿಲ್ಮ್ ಸೊಸೈಟಿ, ಬಾದಾಮಿ ಹೌಸ್, ರಾಗಿಗುಡ್ಡದ ಸೆಂಟ್ರಲ್ ಐಮ್ಯಾಕ್ಸ್, ಮಲ್ಲೇಶ್ವರದ `ರಿಜಾಯ್ಸ~ನಲ್ಲಿ ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ.ಎಸ್. ನಾಗಾಭರಣ ಮಾಹಿತಿ ನೀಡಿದರು.ಭಾರತೀಯ ಫಿಲ್ಮ್ ಸೊಸೈಟಿಗಳ ಒಕ್ಕೂಟದ ಅಧ್ಯಕ್ಷ ಎಚ್.ಎನ್. ನರಹರಿ ರಾವ್ ಮಾತನಾಡಿ, `ಈ ಬಾರಿಯ ಸಿನಿಮೋತ್ಸವದಲ್ಲಿ ರಾಜಕೀಯ ಕುರಿತು ಏಳು ಚಲನಚಿತ್ರಗಳನ್ನು ತೋರಿಸಲಾಗುವುದು. 1940-50ರ ದಶಕದ ಚಲನಚಿತ್ರಗಳನ್ನು ಹಿರಿಯ ನಾಗರಿಕರಿಗಾಗಿ ಪ್ರದರ್ಶಿಸಲಾಗುವುದು~ ಎಂದು ತಿಳಿಸಿದರು.ದೇಶ ವಿದೇಶಗಳ ಒಟ್ಟು 250 ಚಲನಚಿತ್ರಗಳು ಆಯ್ಕೆ ಸಮಿತಿಯ ಮುಂದಿವೆ. ಅವುಗಳ ಪೈಕಿ 180 ಚಲನಚಿತ್ರಗಳನ್ನು ಸಿನಿಮೋತ್ಸವದಲ್ಲಿ ಪ್ರದರ್ಶಿಸಲಾಗುವುದು. ಡಿ. 15ರಂದು ಸೆಂಟ್ರಲ್ ಕಾಲೇಜಿನ `ಜ್ಞಾನಜ್ಯೋತಿ~ ಸಭಾಂಗಣದಲ್ಲಿ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ಇರಾನಿ ಚಲನಚಿತ್ರ ನಿರ್ದೇಶಕ ಡಾರಿಯಚ್ ಮೆಹಜೂಯಿ ಮತ್ತು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಕೆ. ಬಾಲಚಂದರ್ ಭಾಗವಹಿಸಲಿದ್ದಾರೆ ಎಂದರು.3,500 ಪಾಸ್: ಸಿನಿಮೋತ್ಸವದ ವೀಕ್ಷಣೆಗೆ ಈ ಬಾರಿ ಒಟ್ಟು 3,500 ಪಾಸ್‌ಗಳನ್ನು ಮಾರಾಟ ಮಾಡಲಾಗುವುದು. ಸಾರ್ವಜನಿಕರ ಪಾಸ್‌ಗಳಿಗೆ 500 ರೂಪಾಯಿ, ಚಿತ್ರರಂಗದವರಿಗೆ 200 ರೂಪಾಯಿ ಮತ್ತು ವಿದ್ಯಾರ್ಥಿಗಳಿಗೆ 100 ರೂಪಾಯಿ ದರ ನಿಗದಿ ಮಾಡಲಾಗಿದೆ. ಹಿರಿಯ ನಾಗರಿಕರಿಗೆ ರಿಯಾಯಿತಿ ದರದಲ್ಲಿ ನೀಡುವ ಯೋಚನೆ ಇದೆ. ಒಂದು ಪಾಸ್ ಪಡೆದರೆ ಒಟ್ಟು 35 ಚಲನಚಿತ್ರಗಳನ್ನು ವೀಕ್ಷಿಸಬಹುದು ಎಂದು ಹೇಳಿದರು. ಚಿತ್ರೋದ್ಯಮದ ಪ್ರತಿನಿಧಿಗಳು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.`ಹಣದ ಕೊರತೆ ಬಾರದು~

ಬೆಂಗಳೂರು: ಸಿನಿಮೋತ್ಸವ ನಡೆಸಲು ಸರ್ಕಾರ ನೀಡಿರುವ 2.5 ಕೋಟಿ ರೂಪಾಯಿ ಸಾಲದು. ಇದಕ್ಕೆ ಇನ್ನೂ 50 ಲಕ್ಷ ರೂಪಾಯಿ ಅಗತ್ಯವಿರುವ ಹಿನ್ನೆಲೆಯಲ್ಲಿ ಅಕಾಡೆಮಿ ಪ್ರಾಯೋಜಕರ ಹುಡುಕಾಟದಲ್ಲಿದೆ ಎಂದು ಟಿ.ಎಸ್. ನಾಗಾಭರಣ ಹೇಳಿದರು.ಅವರ ಮಾತಿಗೆ ಪ್ರತಿಕ್ರಿಯಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ, `ಇಂಥ ಉತ್ತಮ ಕಾರ್ಯಕ್ರಮಗಳ ಆಯೋಜನೆಗೆ ಹಣಕಾಸಿನ ಕೊರತೆ ಬರಬಾರದು. ಉಳಿದ 50 ಲಕ್ಷ ರೂಪಾಯಿಗಳನ್ನೂ ಸರ್ಕಾರ ನೀಡುತ್ತದೆ~ ಎಂದು ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.