ಭಾನುವಾರ, ಮೇ 16, 2021
22 °C

ಡೆಂಗೆಗೆ ಬಾಲಕ ಬಲಿ: ಅಧಿಕಾರಿಗಳ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಡಗಿ: ಬಾಲಕನೊಬ್ಬ ಭಾನುವಾರ ಶಂಕಿತ ಡೆಂಗೆ ಜ್ವರಕ್ಕೆ ಬಲಿಯಾದ ಹಿನ್ನೆಲೆಯಲ್ಲಿ ಪ್ರಭಾರಿ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ ಸಜ್ಜನ, ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಎಂ.ಎಲ್.ಪಾಟೀಲ ಸೋಮವಾರ ಮೃತ ಬಾಲಕನ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ಆರ್.ಲಮಾಣಿ ನೇತೃತ್ವದಲ್ಲಿ ಹಿರಿಯ ಆರೋಗ್ಯ ಸಹಾಯಕ ವೈ.ಎಂ.ಹಿರಿಯಕ್ಕನವರ, ಎನ್.ಎನ್.ಹೊನ್ನೂರಗಾರ, ಜರೀನಾ, ಆರೋಗ್ಯ ಇಲಾಖೆಯ ಹಾಗೂ ಆಶಾ ಕಾರ್ಯಕರ್ತರು ಪಟ್ಟಣದ ಚೌಡೇಶ್ವರಿ ನಗರ (ಕಟಗರ ಓಣಿ), ಗಾಂಧಿ ನಗರ, ಕೋಳೂರು ಕ್ಯಾಂಪ್, ಬಸವೇಶ್ವರ ನಗರ, ಸಂಗಮೇಶ್ವರ ನಗರಗಳಲ್ಲಿ ಮನೆ ಮನೆಗೆ ತೆರಳಿ ಲಾರ್ವಾ ಸಮೀಕ್ಷಾ ಕಾರ್ಯ ನಡೆಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಲಮಾಣಿ, `ಪಟ್ಟಣದ ಜನತೆಯಲ್ಲಿ ಡೆಂಗೆ ಜ್ವರದ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ ಹಲವಾರು ಮನೆಗಳಲ್ಲಿ ಲಾರ್ವಾ ಕಂಡು ಬಂದಿದ್ದು, ಸಂಗ್ರಹಿಸಿದ ನೀರನ್ನು ಖಾಲಿ ಮಾಡುವಂತೆ ತಿಳಿಸಿ, ಆರೋಗ್ಯ ಶಿಕ್ಷಣವನ್ನು ನೀಡಲಾಗಿದೆ. ಫಾಗಿಂಗ್ ಮೂಲಕ ಸೊಳ್ಳೆಗಳ ನಿಯಂತ್ರಣ ಹಾಗೂ ಚರಂಡಿಗಳ ಸ್ವಚ್ಛತೆ ಕೈಕೊಳ್ಳುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ತಿಳಿಸಿದರು.`ಜವಾಬ್ದಾರಿಯಿಂದ ನಿಯಂತ್ರಣ'

ಹಾನಗಲ್ಲ: `ಸಮುದಾಯದ ಸಹಭಾಗಿತ್ವ ಹಾಗೂ ಸಾಮಾಜಿಕ ಜವಾಬ್ದಾರಿಯಿಂದ ಡೆಂಗೆ ಜ್ವರವನ್ನು ನಿಯಂತ್ರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು' ಎಂದು ಜಿ.ಪಂ ಸದಸ್ಯ ಪದ್ಮನಾಭ ಕುಂದಾಪುರ ಹೇಳಿದರು.ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪ್ರೌಢ ಶಾಲೆಗಳು ಸಂಯುಕ್ತವಾಗಿ ಆಯೋಜಿಸಿದ್ದ ಡೆಂಗೆ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಥಳೀಯ ಆರೋಗ್ಯಾಧಿಕಾರಿ ಬಿ.ಎನ್.ಹರೀಶಕುಮಾರ, `ಡೆಂಗೆ ಜ್ವರ ಶೇಖರಿಸಿಟ್ಟ ನೀರಿನಿಂದ ಉತ್ಪತ್ತಿಯಾದ ಸೊಳ್ಳೆಯಿಂದ ಬರುತ್ತಿದ್ದು, ಸಿಮೆಂಟ್ ತೊಟ್ಟಿ, ಬ್ಯಾರಲ್, ಮಣ್ಣಿನ ಮಡಿಕೆಗಳಲ್ಲಿ ಸಂಗ್ರಹಿಸಿದ ನೀರನ್ನು ವಾರಕ್ಕೊಮ್ಮೆಯಾದರೂ ಖಾಲಿ ಮಾಡಿ ಬೇರೆ ನೀರನ್ನು ತುಂಬಬೇಕು' ಎಂದು ಸಲಹೆ ನೀಡಿದರು.    ಈ ಸಂದರ್ಭದಲ್ಲಿ ತಾ.ಪಂ.ಸದಸ್ಯೆ ಮಂಜುಳಾ ಕಾಮನಹಳ್ಳಿ, ಗ್ರಾ.ಪಂ ಅಧ್ಯಕ್ಷ ಗೂಡುಸಾಬ್, ಸದಸ್ಯರು, ಅಂಗನವಾಡಿ ಕಾರ್ಯಕರ್ತರು ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಜಾಗೃತಿ ಜಾಥಾ ಕೈಗೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.