ಶುಕ್ರವಾರ, ಏಪ್ರಿಲ್ 23, 2021
22 °C

ಡೆಂಗೆ ಜ್ವರ ನಿಯಂತ್ರಣಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲೆಯಲ್ಲಿ ಡೆಂಗೆ ಜ್ವರ ಹರಡದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು. ಗುರುವಾರ ತಮ್ಮ ಕಚೇರಿಯ ಸಭಾಂಗಣದಲ್ಲಿ ಆರೋಗ್ಯ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಗೋಕಾಕ ತಾಲ್ಲೂಕಿನ ಹಿರೇನಂದಿ ಗ್ರಾಮ ಸೇರಿದಂತೆ ನಗರ ಹಾಗೂ ಎಲ್ಲ ಗ್ರಾಮಗಳ ವ್ಯಾಪ್ತಿಗಳಲ್ಲಿ ಅಧಿಕಾರಿಗಳು ತಂಡಗಳನ್ನು ರಚಿಸಿಕೊಂಡು ಸಮರೋಪಾದಿಯಲ್ಲಿ ಮುಂಜಾಗತೆ ಕ್ರಮವನ್ನು ಕೈಗೊಳ್ಳಬೇಕು ಎಂದರು.ಡೆಂಗೆ ಜ್ವರ ಸಾಂಕ್ರಾಮಿಕ ಕಾಯಿಲೆಯಾಗಿದೆ. ಈ ರೋಗ ಹರಡುವ ಸೊಳ್ಳೆಗಳು ಮನೆಯೊಳಗೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಉತ್ಪತ್ತಿಯಾಗುತ್ತವೆ. ಆದ್ದರಿಂದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಗ್ರಾಮಸ್ಥರಲ್ಲಿ ಅವರು ಮನವಿ ಮಾಡಿದ್ದಾರೆ.ಸೊಳ್ಳೆಗಳು ಉತ್ಪತ್ತಿಯಾಗುವ ಸ್ಥಳಗಳಾದ ನೀರು ಸಂಗ್ರಹಣೆ ತೊಟ್ಟಿಗಳು, ಬ್ಯಾರಲ್‌ಗಳು, ಬಕೆಟ್‌ಗಳು, ಒಡೆದ ಬಾಟಲ್‌ಗಳು, ಬಯಲಿನಲ್ಲಿ ಬೀಸಾಡಿದ ಟಾಯರ್‌ಗಳು, ಒಡೆದ ಎಳನೀರಿನ ತೆಂಗಿನ ಚಿಪ್ಪುಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.ಮನೆಯೊಳಗಿನ ಹಾಗೂ ಮೇಲ್ಛಾವಣಿಯ ನೀರಿನ ತೊಟ್ಟಿಗಳಲ್ಲಿಯ (ಟ್ಯಾಂಕ್) ನೀರನ್ನು ವಾರಕ್ಕೊಮ್ಮೆ  ಖಾಲಿ ಮಾಡಿ ಒಣಗಿಸಬೇಕು. ನಂತರ ನೀರು ತುಂಬಿಸಿ ಭದ್ರವಾಗಿ ಮುಚ್ಚಬೇಕು. ಆರೋಗ್ಯ ಅಧಿಕಾರಿಗಳು ಗ್ರಾಮ ಹಾಗೂ ನಗರ ವ್ಯಾಪ್ತಿಯಲ್ಲಿ ಮೇಲಿಂದ ಮೇಲೆ ಭೇಟಿ ನೀಡಬೇಕು. ಈ ರೋಗದ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಲ್ಲಿ ಅರಿವು ಮೂಡಿಸಬೇಕು ಎಂದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿ.ಶಂಕರ, ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.  ಮುನ್ನೆಚ್ಚರಿಕೆ ಕ್ರಮಗಳು

ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೆದುಳು ಜ್ವರ ಹಾಗೂ ಡೆಂಗ್ಯೂ ಜ್ವರ ಹರಡದಂತೆ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಮನೆಯ ಸುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಮಕ್ಕಳು ತುಂಬು ತೋಳಿನ ಬಟ್ಟೆ ಧರಿಸಬೇಕು. ಸೊಳ್ಳೆ ಪರದೆಗಳನ್ನು ಮತ್ತು ಮ್ಯೋಟ್‌ಗಳನ್ನು ತಪ್ಪದೇ ಉಪಯೋಗಿಸಬೇಕು. ಕೀಟನಾಶಕಗಳನ್ನು ಮೇಲಿಂದ ಮೇಲೆ ಸಿಂಪಡಿಸಬೇಕು. ಪರಿಸರವನ್ನು ಸ್ವಚ್ಛವಾಗಿಡಬೇಕು.ಮೆದುಳು ಜ್ವರವು ಕ್ಯುಲೆಕ್ಸ್ ಎಂಬ ಸೊಳ್ಳೆಗಳಿಂದ ಹರಡುವುದು. ಈ ಸೊಳ್ಳೆಗಳು ಕಲುಷಿತ ನಿಂತ ನೀರಿನಲ್ಲಿ ಉತ್ಪತ್ತಿಯಾಗುತ್ತವೆ. ಸೊಳ್ಳೆಗಳು ಹಂದಿಗಳನ್ನು ಕಡಿದು ವೈರಸ್‌ನ್ನು ಪಡೆದು ಮನುಷ್ಯರನ್ನು ಕಡಿದಾಗ ರೋಗವು ಹರಡುತ್ತದೆ. ಕೊಳಚೆ ಮತ್ತು ಇತರೆ ಪ್ರದೇಶಗಳಲ್ಲಿ ನಿಂತ ನೀರಿನ ತಾಣಗಳನ್ನು ಮಣ್ಣಿನಿಂದ ಮುಚ್ಚವುದು ಹಾಗೂ ನೀರು ಹರಿದು ಹೋಗುವಂತೆ ನೋಡಿಕೊಳ್ಳಬೇಕು ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರಶಸ್ತಿ ಪ್ರದಾನ ಸಮಾರಂಭ ನಾಳೆ

ಬೆಳಗಾವಿ:
ಇಲ್ಲಿನ ಹೊಂಬೆಳಕು ಸಾಂಸ್ಕೃತಿಕ ಸಂಘ `ರಾಷ್ಟ್ರಕೂಟ ಸಾಹಿತ್ಯಶ್ರೀ~ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇದೇ 10ರಂದು ಬೆಳಿಗ್ಗೆ 11ಕ್ಕೆ ಬೈಲಹೊಂಗಲ ತಾಲ್ಲೂಕಿನ ಅಂಬಡಗಟ್ಟಿಯ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡಿದೆ. ಮಾಜಿ ಮೇಯರ್ ಸಿದ್ಧನಗೌಡ ಪಾಟೀಲ ಪ್ರಶಸ್ತಿ ಪ್ರದಾನ ಮಾಡುವರು. ಸಂಘದ ಅಧ್ಯಕ್ಷ ಸ.ರಾ.ಸುಳಕೊಡೆ ಅಧ್ಯಕ್ಷತೆ ವಹಿಸುವರು.ಬಸವೇಶ್ವರ ಸಹಕಾರಿ ಬ್ಯಾಂಕ್‌ನ ನಿರ್ದೇಶಕಿ ಸರಳಾ ಹೆರೇಕರ ಅತಿಥಿಗಳಾಗಿ ಆಗಮಿಸುವರು. ಡಾ.ಎಸ್.ವಿದ್ಯಾಶಂಕರ, ನಾಗರಾಜ ಅಂಗಡಿ, ಅಶೋಕ ನೀಲಗಾರ, ವೀರಮ್ಮ ಹಂಪಿಹೋಳಿ, ರೇಶ್ಮಾ ನಾಯಿಕ, ಡಾ. ಶಾಂತಾ ಇಮ್ರಾಪುರ, ಶಿಲ್ಪಾಸಿರಿ, ಸಂಗಮೇಶ ಮೆಣಸಿನಕಾಯಿ, ಮಾಧವಾನಂದ ವಾಘಮೋರೆ, ಸಂಜೀವನಗೌಡ ಗದಗ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.