ಡೊಮೇನ್ ಹೆಸರಿನ ನಿರ್ವಹಣೆ
ತಮ್ಮ ಜೀವನವನ್ನು ಸುಲಭವಾಗಿ ನಿರ್ವಹಿಸಲು ಹೆಚ್ಚು ಹೆಚ್ಚು ಜನರು ವಿವಿಧ ಉದ್ದೇಶಗಳಿಗೆ ಇಂದು ಇಂಟರ್ನೆಟ್ನ ಮೊರೆ ಹೋಗುತ್ತಿದ್ದಾರೆ.ಅದು ಶಾಪಿಂಗ್ ಇರಬಹುದು, ಬ್ಯಾಂಕ್ ಖಾತೆಗಳ ನಿರ್ವಹಣೆ ಇರಬಹುದು, ಟಿಕೆಟ್ ಬುಕ್ಕಿಂಗ್ ಇರಬಹುದು ಅಥವಾ ತಮ್ಮ ಸ್ನೇಹಿತರು ಮತ್ತು ಬಂಧುಗಳೊಂದಿಗೆ ಸಂಪರ್ಕದಲ್ಲಿ ಇರುವ ಉದ್ದೇಶ ಇರಬಹುದು. ವಿಶ್ವದಾದ್ಯಂತ 1.73 ಶತಕೋಟಿ ಇಂಟರ್ನೆಟ್ ಬಳಕೆದಾರರು ಇದ್ದಾರೆ. ಉದ್ಯಮದ ಕುರಿತು ಅರಿವು ಮೂಡಿಸಲು ಇಂಟರ್ನೆಟ್ ಈಗ ಒಂದು ಪ್ರಬಲ ಮಾಧ್ಯಮವಾಗಿ ಬೆಳೆದಿದೆ.
ಆನ್ಲೈನ್ನಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಮೊದಲ ಮಾಡಬೇಕಾದ ಕೆಲಸವೆಂದರೆ ಸೂಕ್ತವಾದ ಡೊಮೇನ್ ಹೆಸರನ್ನು ಆಯ್ಕೆ ಮಾಡಿ ಅದನ್ನು ನೋಂದಣಿ ಮಾಡುವುದು. ಭೌತಿಕವಾಗಿ ಯಾವುದೇ ಒಂದು ಕಚೇರಿಗೆ ಒಂದು ವಿಳಾಸ ಇರುವಂತೆ ಆನ್ಲೈನ್ ಪ್ರಪಂಚದಲ್ಲಿ ಡೊಮೇನ್ ಹೆಸರು ವಹಿವಾಟಿನ ಪರಿಚಯ ಕೊಡುತ್ತದೆ. ಡೊಮೇನ್ ಹೆಸರು ನೋಂದಣಿ ಮಾಡಿದ ಬಳಿಕ ವಹಿವಾಟಿನ ವಿವರ ಮತ್ತು ಬಿಸಿನೆಸ್ ಇ-ಮೇಲ್ ಖಾತೆ ಹೊಂದಲು ಇಂಟರ್ನೆಟ್ ತಾಣ (ವೆಬ್ಸೈಟ್) ಹೊಂದಬಹುದು.
ಸರಿಯಾದ ಡೊಮೇನ್ ಹೆಸರು ಆಯ್ಕೆ ಮಾಡುವುದು ಅತ್ಯಂತ ಅಗತ್ಯ. ಇಂಟರ್ನೆಟ್ನಲ್ಲಿ ಇದೇ ಯಾವುದೇ ಒಂದು ಸಂಸ್ಥೆಯ ಅಸ್ತಿತ್ವಕ್ಕೆ ಮೆರುಗು ನೀಡುವುದು. ಡಾಟ್ ಕಾಮ್ನಿಂದ ಅಂತ್ಯಗೊಳ್ಳುವ ಡೊಮೇನ್ ಹೆಸರು ನಿಮಗೆ ಅತ್ಯುತ್ತಮ ಆಯ್ಕೆಗಳನ್ನು ನೀಡುತ್ತದೆ. ಭಾರತದ ಮತ್ತು ಜಾಗತಿಕ ಆನ್ಲೈನ್ ಮಾರುಕಟ್ಟೆಯಲ್ಲಿ ನಿಮ್ಮ ಬ್ರಾಂಡ್ಗೆ ಮಾನ್ಯತೆ ದೊರೆಯುವಂತೆ ಮಾಡುತ್ತದೆ. ಎಲ್ಲ ಗಾತ್ರದ, ಎಲ್ಲ ಸ್ವರೂಪದ ಉದ್ಯಮಗಳಿಗೂ ಡಾಟ್ಕಾಮ್ ವಿಸ್ತರಣೆ ಹೊಂದಿರುವ ಡೊಮೇನ್ ಹೆಸರು ಪ್ರಶಸ್ತ ಎನಿಸುತ್ತದೆ. ನಿಮ್ಮ ಡೊಮೇನ್ ಹೆಸರು ನಿಮ್ಮ ವಹಿವಾಟು/ ಬ್ರಾಂಡ್ ಅನ್ನು ಇಂಟರ್ನೆಟ್ನಲ್ಲಿ ಗುರುತಿಸುತ್ತದೆ. ಆದ್ದರಿಂದ ಇದನ್ನು ಅತ್ಯಮೂಲ್ಯ ಆಸ್ತಿ ಎಂದು ಪರಿಗಣಿಸಬೇಕು. ಇದನ್ನು ಬ್ಯಾಂಕ್ ಖಾತೆಯೆಂದೇ ಪರಿಗಣಿಸಿ ಅತ್ಯಂತ ಎಚ್ಚರಿಕೆಯಿಂದ ನಿಭಾಯಿಸಬೇಕು. ಇಲ್ಲದಿದ್ದಲ್ಲಿ ಡೊಮೇನ್ ಹೆಸರು ಕಳೆದುಕೊಂಡು ಅದರ ಸುತ್ತ ಅಭಿವೃದ್ಧಿಪಡಿಸಲಾದ ಬ್ರಾಂಡ್ ತನ್ನ ಸಾಮರ್ಥ್ಯವನ್ನೇ ಕಳೆದುಕೊಳ್ಳುತ್ತದೆ.
ಡೊಮೇನ್ ಹೆಸರು ಸಂರಕ್ಷಿಸಿಕೊಳ್ಳಲು ಮತ್ತು ನಿರ್ವಹಿಸಲು ಹತ್ತು ಸೂತ್ರಗಳು ಹೀಗಿವೆ
1. ನಿಮ್ಮ ಕಂಪೆನಿಯ ಹೆಸರನ್ನೇ ಡೊಮೇನ್ನ ಮಾಲೀಕರೆಂದು ಪಟ್ಟಿ ಮಾಡಿ. ಡೊಮೇನ್ ಹೆಸರಿನ ಮಾಲೀಕತ್ವವನ್ನು ಕೇಂದ್ರೀಕೃತವಾಗಿರುವ ಮಾಹಿತಿ ಕೋಶದಲ್ಲಿ ನೀಡಲಾದ ಮಾಹಿತಿಯಂತೆ ನಿರ್ಧರಿಸಲಾಗುತ್ತದೆ. ಈ ಮಾಹಿತಿ ಕೋಶದಲ್ಲಿ ಮಾಲೀಕರ ಹೆಸರು, ಸಂಪರ್ಕ ಮಾಹಿತಿ, ಡೊಮೇನ್ ಹೆಸರಿನ ನೋಂದಣಿ ಮತ್ತು ಅದು ಕೊನೆಗೊಳ್ಳುವ ವಿವರ ಲಭ್ಯ ಇರುತ್ತದೆ. ಹೀಗಾಗಿ ಸಂಪರ್ಕ ಮಾಹಿತಿಯಲ್ಲಿ ಮಾಲೀಕತ್ವ ಮತ್ತು ವಿಶ್ವಾಸಾರ್ಹ ವ್ಯಕ್ತಿಯ/ ಹುದ್ದೆಯ ವಿವರ ಕೊಡಬೇಕು.
2. ಡೊಮೇನ್ ಹೆಸರು ಮತ್ತು ಅದಕ್ಕೆ ಸಂಬಂಧಿಸಿದ ಮಾಹಿತಿಗಳ ಮೇಲೆ ಸಂಪೂರ್ಣ ನಿಯಂತ್ರಣ ಇರಲಿ. ವಿವಾದದ ಸಂದರ್ಭದಲ್ಲಿ ನೋಂದಣಿಯ ಸಂದರ್ಭದಲ್ಲಿ ಯಾರ ಹೆಸರನ್ನು ಮಾಲೀಕರೆಂದು ನಮೂದಿಸಲಾಗಿತ್ತೋ ಅವರ ಹೆಸರಿಗೇ ಡೊಮೇನ್ ಹೆಸರು ಸಿಗುತ್ತದೆ. ಕೆಲವೊಮ್ಮೆ ವೆಬ್ಸೈಟ್ ವಿನ್ಯಾಸ ಮಾಡುವವರು, ಮರು ಮಾರಾಟ ಮಾಡುವವರೇ ತಮ್ಮ ಹೆಸರನ್ನು ಮಾಲೀಕರೆಂದು ನಮೂದಿಸುತ್ತಾರೆ. ಇದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಿ.
3. ಡೊಮೇನ್ ಹೆಸರಿನ ಪಾಸ್ವರ್ಡ್ ಅತ್ಯಂತ ರಹಸ್ಯವಾಗಿಟ್ಟುಕೊಳ್ಳಿ. ಬ್ಯಾಂಕ್ ಖಾತೆಗಳಲ್ಲಿ ನೀವು ಪಾಸ್ವರ್ಡ್ಗಳನ್ನು ರಹಸ್ಯವಾಗಿಟ್ಟುಕೊಳ್ಳುವಂತೆ ಇಲ್ಲಿಯೂ ಅದೇ ಮಾರ್ಗ ಅನುಸರಿಸಬೇಕು. ಯಾರೊಂದಿಗೂ ಅದನ್ನು ಹಂಚಿಕೊಳ್ಳಬೇಡಿ.
4.ಕಂಟ್ರೋಲ್ ಪ್ಯಾನೆಲ್ನ ವಿವರಗಳನ್ನು ವಿಶ್ವಾಸಾರ್ಹ ವ್ಯಕ್ತಿಗೆ ಮಾತ್ರ ನೀಡಿ. ಡೊಮೇನ್ ಕಂಟ್ರೋಲ್ ಪ್ಯಾನೆಲ್ನಲ್ಲಿ ಇರುವ ಮ್ಯಾನೇಜ್ ಡೊಮೇನ್ ಲಿಂಕ್ನಲ್ಲಿ ನಿಮ್ಮ ಎಲ್ಲ ಡೊಮೇನ್ಗಳ ವಿವರ ಇರುತ್ತದೆ. ಯಾವುದೇ ಡೊಮೇನ್ ಮೇಲೆ ಕ್ಲಿಕ್ಮಾಡಿ ಅಲ್ಲಿಯ ವಿವರಗಳನ್ನು ಬದಲಿಸಬಹುದು. ಹಾಗಾಗಿ ಸೂಕ್ತ ಎಚ್ಚರ ವಹಿಸುವುದು ಒಳ್ಳೆಯದು.
5. ನವೀಕರಣ ದಿನದ ಬಗ್ಗೆ ಎಚ್ಚರ ಇರಲಿ. ಡೊಮೇನ್ ಹೆಸರನ್ನು ಒಂದು ವರ್ಷದಿಂದ 10 ವರ್ಷಗಳವರೆಗೆ ನೋಂದಣಿ ಮಾಡಬಹುದು.ನವೀಕರಣ ಸಂದರ್ಭದ ಬಗ್ಗೆ ನೀವು ಹೆಚ್ಚಿನ ನಿಗಾ ವಹಿಸುವುದು ಅಗತ್ಯ. ನವೀಕರಣ ವಿಳಂಬವಾದರೆ ನೀವು ಡೊಮೇನ್ ಹೆಸರು ಕಳೆದುಕೊಳ್ಳುವ ಅಪಾಯ ಇದೆ. ಸಾಮಾನ್ಯವಾಗಿ ಸೇವಾದಾರರು ಅವಧಿ ಮುಗಿಯುವ ಒಂದು ತಿಂಗಳ ಮೊದಲೇ ಈ ಬಗ್ಗೆ ಮಾಹಿತಿ ರವಾನಿಸುತ್ತಾರೆ.
6. ನೋಂದಣಿ ಸೇವಾದಾರರು ಮತ್ತು ಮರು ಮಾರಾಟಗಾರರು ಅನುಸರಿಸುವ ನೋಂದಣಿ ನವೀಕರಣ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳಿ. ಅದು ಸಂಸ್ಥೆಯಿಂದ ಸಂಸ್ಥೆಗೆ ಬದಲಾಗುತ್ತಲೇ ಇರುತ್ತದೆ.
7. ಡೊಮೇನ್ ಹೆಸರಿನ ನೋಂದಣಿ ಸಂದರ್ಭದಲ್ಲಿ ಸರಿಯಾದ ಮತ್ತು ಸಮಂಜಸವಾದ ಮಾಹಿತಿ ಕೊಡಿ. ತಪ್ಪು ಮಾಹಿತಿ ನೀಡಿದ್ದು ಸಾಬೀತಾದಲ್ಲಿ ಡೊಮೇನ್ ಹೆಸರನ್ನೇ ರದ್ದುಗೊಳಿಸಬಹುದು.
8. ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಡೊಮೇನ್ ಹೆಸರುಗಳಿದ್ದರೆ ಮರೆತು ಹೋಗದಂತೆ ಅದನ್ನು ಪಟ್ಟಿ ಮಾಡಿಕೊಂಡಿರಿ.
9. ನೋಂದಣಿ ಸೇವಾದಾರರು ಮತ್ತು ಮರು ಮಾರಾಟಗಾರರೊಂದಿಗೆ ನಡೆಸಿದ ಪತ್ರ ವ್ಯವಹಾರದ ಪ್ರತಿಗಳನ್ನು ಮುದ್ರಿಸಿಕೊಂಡು ಜಾಗರೂಕತೆಯಿಂದ ಇಟ್ಟಿರಿ. ಮುಂದೆ ತೊಂದರೆಯಾದರೆ ಅದು ನೆರವಿಗೆ ಬರಬಹುದು.
10. ಏನಾದರೂ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿರುವುದು ನಿಮ್ಮ ಗಮನಕ್ಕೆ ಬಂದಲ್ಲಿ ತಕ್ಷಣ ಅದನ್ನು ನೋಂದಣಿ ಸೇವಾದಾರ ಅಥವಾ ಮರುಮಾರಾಟಗಾರರ ಗಮನಕ್ಕೆ ತನ್ನಿ.
ಡೊಮೇನ್ ಹೆಸರನ್ನು ನಿಭಾಯಿಸಲು ಶಿಸ್ತುಬದ್ಧ ಕಾರ್ಯತಂತ್ರ ಅಗತ್ಯ. ಕಚೇರಿಯಲ್ಲಿ ಕಾಗದಪತ್ರಗಳನ್ನು ಹೇಗೆ ನಿಭಾಯಿಸುತ್ತೀರೋ ಹಾಗೆಯೇ ಡೊಮೇನ್ ಹೆಸರನ್ನೂ ನಿಭಾಯಿಸಬೇಕು. ಉದಾಹರಣೆಗೆ ಕಚೇರಿಯ ಲೀಸ್ ಅವಧಿ ಮುಗಿಯುವುದನ್ನು ನೀವೆಂದಾದರೂ ಮರೆಯುತ್ತೀರಾ?
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.