ಬುಧವಾರ, ಮಾರ್ಚ್ 3, 2021
26 °C
ಗಡಿಭಾಗದಲ್ಲಿರುವ ಬಾಂದಾರ ತುಂಬಿ ಹರಿದರೂ ತುಂಬದ ಜಲಾಶಯ

ಡ್ಯಾಂ ಸೇರಬೇಕಾದ ನೀರು ಕಾಡುಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡ್ಯಾಂ ಸೇರಬೇಕಾದ ನೀರು ಕಾಡುಪಾಲು

ಮುಂಡಗೋಡ: ಜಲಾಶಯಕ್ಕೆ ಕಳೆದ ಕೆಲವು ದಿನಗಳಿಂದ ಸುರಿದ ಮಳೆಯ ನೀರು ಸಂಗ್ರಹವಾಗದೇ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಆಗುವ ಸನವಳ್ಳಿ ಅರಣ್ಯದಲ್ಲಿ ಪೋಲಾಗಿದೆ ಎಂಬ ಆರೋಪ ರೈತರಿಂದ ವ್ಯಕ್ತವಾಗಿದೆ.ಕಳೆದ ಒಂದು ವಾರದಿಂದ ಸತತವಾಗಿ ತಾಲ್ಲೂಕಿನಲ್ಲಿ ಮಳೆ ಸುರಿದಿದೆ. ಅಲ್ಲದೇ ಗಡಿಭಾಗದ ಶಿಗ್ಗಾವಿ ತಾಲ್ಲೂಕಿನಲ್ಲಿಯೂ ಮಳೆ ಸುರಿದಿದೆ. ಆದರೇ ಪಕ್ಕದ ತಾಲ್ಲೂಕಿನಿಂದ ಕಾಲುವೆ ಮೂಲಕ ಜಲಾಶಯ ಸೇರಬೇಕಿದ್ದ  ನೀರು ಅರಣ್ಯದ ಪಾಲಾಗಿದೆ. ಇದಕ್ಕೆ ಪೂರಕವೆಂಬಂತೆ ಗಡಿಭಾಗದಲ್ಲಿರುವ ಬಾಂದಾರ ತುಂಬಿ ಹರಿದರೂ ಪೂರಕ ಕಾಲುವೆಯ ಒಡ್ಡು ಒಡೆದು ಅರಣ್ಯಕ್ಕೆ ಸೇರಿದೆ ಎಂದು ರೈತರು ದೂರಿದ್ದಾರೆ.‘ಸನವಳ್ಳಿ ಜಲಾಶಯದ ಅಭಿವೃದ್ಧಿಗೆ ಕಳೆದ ಫೆಬ್ರುವರಿ ತಿಂಗಳಲ್ಲಿಯೇ ಸುಮಾರು ₨1ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಶಿವರಾಮ ಹೆಬ್ಬಾರ ಚಾಲನೆ ನೀಡಿದ್ದು ಸದ್ಯ ಪ್ರಗತಿಯಲ್ಲಿದೆ. ಸನವಳ್ಳಿ ಜಲಾಶಯಕ್ಕೆ ನೀರು ಸೇರಿಸುವ ಸುಮಾರು 1.6 ಕಿ.ಮೀ. ಉದ್ದದ ಕಾಲುವೆ ನಿರ್ಮಾಣ ಕಾಮಗಾರಿಯನ್ನು ಮಳೆಗಾಲದಲ್ಲಿಯೇ ಆರಂಭಿಸಲಾಗಿದ್ದು, ಮೊದಲಿಗೆ ಇದ್ದ ಪೈಪ್‌ಗಳನ್ನು ತೆಗೆದು ದುರಸ್ತಿ ಕಾರ್ಯ ಮಾಡುತ್ತಿರುವುದು ಸಹ ನೀರಿನ ಹರಿವಿಗೆ ತಡೆಯಾಗಿದೆ ಎನ್ನಲಾಗಿದೆ.‘ಕಳೆದ ಒಂದು ವಾರದಿಂದ ಸತತ ಮಳೆಯಾಗಿದೆ. ಆದರೆ ಜಲಾಶಯಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದುಬಂದಿಲ್ಲ. ಅರಣ್ಯ ಭಾಗದಲ್ಲಿರುವ ಕಾಲುವೆ ಕೆಲವೆಡೆ ಒಡೆದಿರುವುದು ಕಂಡುಬಂದಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದ ನಂತರ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಮಳೆಯ ಪ್ರಮಾಣ ನೋಡಿದರೇ 3–4 ಅಡಿ ನೀರು ಜಲಾಶಯದಲ್ಲಿ ಸಂಗ್ರಹವಾಗಬೇಕಿತ್ತು. ಆದರೆ ಒಡೆದ ಕಾಲುವೆ ಹಾಗೂ ದುರಸ್ತಿ ಕಾರ್ಯದಿಂದ ನೀರಿನ ಹರಿವಿಗೆ ಹಿನ್ನಡೆಯಾಗಿದೆ. ಜಲಾಶಯ ಪೂರ್ತಿ ಯಾಗಿ ತುಂಬದಿದ್ದರೇ ಪಟ್ಟಣಕ್ಕೆ  ನೀರಿನ ಸಮಸ್ಯೆ ಎದುರಾಗಬಹುದು’ ಎಂದು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಫಣಿರಾಜ ಹದಳಗಿ ಹೇಳಿದರು.‘ಮಳೆಯ ನೀರು ಜಲಾಶಯಕ್ಕೆ ಸಮರ್ಪಕವಾಗಿ ಸೇರಿದೆ. ಸುಮಾರು 1.5 ಅಡಿ ನೀರು ಜಲಾಶಯಕ್ಕೆ ಹರಿದು ಬಂದಿದೆ. ಮೊದಲಿಗೆ ಬಾಂದಾರದಿಂದ ಅನತಿ ದೂರದಲ್ಲಿ ಕಾಲುವೆ ಒಡೆದಿರುವುದು ಗಮನಕ್ಕೆ ಬಂದ ಕೂಡಲೇ ದುರಸ್ತಿ ಮಾಡಿಸಲಾಗಿದೆ. ಸದ್ಯ ನಡೆಯುತ್ತಿರುವ ಕಾಲುವೆ ಕಾಮಗಾರಿಯಿಂದ ನೀರಿನ ಹರಿವಿಗೆ ಯಾವುದೇ ತೊಂದರೆಯಾಗಿಲ್ಲ’ ಎಂದು ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ ಆರ್‌.ಎನ್‌.ನಾಯ್ಕ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.