ಭಾನುವಾರ, ಜನವರಿ 19, 2020
27 °C

ತಂದೆಯಷ್ಟು ಜನಪ್ರೀತಿ ಗಳಿಸುವುದು ಅಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಂದೆಯಷ್ಟು ಜನಪ್ರೀತಿ ಗಳಿಸುವುದು ಅಸಾಧ್ಯ

ಬಾಲಿವುಡ್‌ ದಿಗ್ಗಜ ಅಮಿತಾಭ್ ಬಚ್ಚನ್‌ ಅವರಷ್ಟು ಎತ್ತರಕ್ಕೆ ಏರುವುದು ಹಾಗೂ ಅಪಾರ ಜನಪ್ರೀತಿ ಗಳಿಸುವುದು ಕನಸಿನ ಮಾತು ಎಂದು ಸ್ವತಃ ಅವರ ಮಗ ಅಭಿಷೇಕ್‌ ಬಚ್ಚನ್‌ಗೆ ಅನಿಸಿದೆಯಂತೆ. ಕಳೆದ ನಾಲ್ಕು ದಶಕಗಳಿಂದ 180ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಮೆಗಾಸ್ಟಾರ್‌ ಅಮಿತಾಭ್‌ಗೆ ಈಗ 71 ವರ್ಷ.

ಈ ಇಳಿ ವಯಸ್ಸಿನಲ್ಲೂ ಬೆಳ್ಳಿತೆರೆ, ಕಿರುತೆರೆ ಎರಡರಲ್ಲೂ ಬಹುದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಜತೆಗೆ ಬಾಲಿವುಡ್‌ನಲ್ಲಿ ಸದ್ಯಕ್ಕೆ ಬಿಡುವಿಲ್ಲದ ನಟ ಕೂಡ ಅವರೇ. ‘ಯುವ’, ‘ಬಂಟಿ ಔರ್‌ ಬಬ್ಲಿ’, ‘ಗುರು’ ಚಿತ್ರಗಳಲ್ಲಿನ ಅಭಿನಯಕ್ಕೆ ಮೆಚ್ಚುಗೆ ಗಳಿಸಿರುವ ಅಭಿಷೇಕ್‌ ಅವರ ಪ್ರಕಾರ ‘ನನ್ನ ತಂದೆ ಸೂರ್ಯನಿದ್ದಂತೆ.

ಸೂರ್ಯನ ಮಟ್ಟಕ್ಕೆ ಹೋಗುವುದು ಅಸಾಧ್ಯ. ಆದರೆ ಕನಿಷ್ಠ ಮಂಗಳನ ಕನಸು ಕಂಡರೆ ಸಾಕು. ಆ ಹಾದಿಯಲ್ಲಿ ಸಾಗಿ ಕನಸು ಸಾಕಾರಗೊಳಿಸುವ ಪ್ರಯತ್ನವನ್ನಾದರೂ ನಡೆಸಬಹುದು.  ತಮ್ಮ ತಂದೆ ನಟಿಸಿದ ಮಾತ್ರಕ್ಕೆ ಸಿನಿಮಾ ಯಶಸ್ವಿಯಾಗುತ್ತದೆ ಎನ್ನುವುದು ಸುಳ್ಳು. ಅವರು ಶೇ 100ರಷ್ಟು ತಮ್ಮ ಶ್ರಮ ಹಾಕಿರುತ್ತಾರೆ. ಆದರೆ ಕಥೆ ಹಾಗೂ ನಿರ್ಮಾಣವೂ ಅಷ್ಟೇ ಮುಖ್ಯ’ ಎನ್ನುವುದು ಅವರ ಅಭಿಪ್ರಾಯ.ತಂದೆಯ ನೆರಳಲ್ಲೇ ಸಾಗ ಬಯಸುವ ಅಭಿಷೇಕ್‌ಗೆ ‘ಪಾ’ ಚಿತ್ರದ ನಂತರ ಅಂಥ ಉತ್ತಮ ಚಿತ್ರಕಥೆ ಸಿಗದುದ್ದಕ್ಕೆ ಬೇಸರವಿದೆ. ಮಾತ್ರವಲ್ಲ  ಇಬ್ಬರೂ ಜತೆಯಾಗಿ ನಟಿಸಿದ ‘ಬಂಟಿ ಔರ್‌ ಬಬ್ಲಿ’, ‘ಸರ್ಕಾರ್‌’, ‘ಸರ್ಕಾರ್‌ ರಾಜ್‌’, ‘ಕಭಿ ಅಲ್ವಿದ ನಾ ಕೆಹನಾ’ ಚಿತ್ರಗಳು ಗೆಲ್ಲಾಪೆಟ್ಟಿಗೆಯಲ್ಲಿ ಭಾರೀ ಮನ್ನಣೆ ಗಳಿಸಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಅಭಿಷೇಕ್‌, ತಮ್ಮ ತಂದೆಗೆ ಅದೃಷ್ಟಶಾಲಿ ಸಹನಟ ಸಿಕ್ಕಿರುವುದಕ್ಕೆ ಈ ಚಿತ್ರಗಳ ಗೆಲುವೇ ಸಾಕ್ಷಿ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಪ್ರತಿಕ್ರಿಯಿಸಿ (+)