ಸೋಮವಾರ, ಮೇ 17, 2021
31 °C

ತನಿಖೆ ನಡೆಸಲು ಲೋಕಾಯಕ್ತರಿಗೆ ದೂರು: ಸಿ.ಎಸ್.ಜಯರಾಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನರಾಯಪಟ್ಟಣ: ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ 30 ವರ್ಷಕ್ಕೆ ಗುತ್ತಿಗೆ ನೀಡುವಾಗ ರೂ. 60 ಕೋಟಿ  ಅವ್ಯವಹಾರ ನಡೆದಿದ್ದು, ಈ ಕುರಿತು ತನಿಖೆ ಮಾಡುವಂತೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಕಾರ್ಖಾನೆ ಮಾಜಿ ನಿರ್ದೇಶಕ ಸಿ.ಎಸ್. ಜಯರಾಂ ಹೇಳಿದರು.ಬುಧವಾರ ನಡೆದ ಕಾರ್ಖಾನೆಯ `ಸರ್ವಸದಸ್ಯರ ಸಭೆ~ಯಲ್ಲಿ ಮಾತನಾಡಿದ ಅವರು, 2007ರಲ್ಲಿ ಕಾರ್ಖಾನೆಯನ್ನು ಗುತ್ತಿಗೆ ನೀಡಲು ಟೆಂಡರ್ ಆಹ್ವಾನಿಸಲಾಗಿತ್ತು. ಅನೇಕ ಸಂಸ್ಥೆಗಳು ಟೆಂಡರ್ ಹಾಕಲು ಆಸಕ್ತಿ ತೋರಿದರೂ, ಕೇವಲ ಒಂದೇ ಒಂದು ಟೆಂಡರ್ ಅರ್ಜಿ ಬರುವಂತೆ ನೋಡಿಕೊಂಡು ಚಾಮುಂಡೇಶ್ವರಿ ಷುಗರ್ಸ್‌ಗೆ 30 ವರ್ಷಕ್ಕೆ ರೂ.106 ಕೋಟಿಗೆ ಗುತ್ತಿಗೆ ನೀಡಲಾಯಿತು. 15     ದಿನದಲ್ಲಿ ತರಾತುರಿಯಲ್ಲಿ ಗುತ್ತಿಗೆ ನೀಡಲಾಗಿದೆ ಎಂದು ದೂರಿದರು.ಹೇಮಾವತಿ ಕಾರ್ಖಾನೆಗಿಂತ ಹಳೆಯದಾದ ಚುಂಚನಕಟ್ಟೆ ಸಕ್ಕರೆ ಕಾರ್ಖಾನೆಯನ್ನು 22 ವರ್ಷಕ್ಕೆ ರೂ.166 ಕೋಟಿಗೆ ಗುತ್ತಿಗೆ ನೀಡಲಾಗಿದೆ. ಆದರೆ ಉತ್ತಮ ಸ್ಥಿತಿಯಲ್ಲಿರುವ ಹೇಮಾವತಿ ಕಾರ್ಖಾನೆಯನ್ನು 30 ವರ್ಷಕ್ಕೆ ರೂ. 106 ಕೋಟಿಗೆ ಗುತ್ತಿಗೆ ನೀಡಲಾಗಿದೆ. ಇದರಲ್ಲಿ ಹಣ ದುರುಪಯೋಗವಾಗಿದ್ದು, ಲೋಕಾಯುಕ್ತರು ತನಿಖೆ ನಡೆಸಿದರೆ ಸತ್ಯಾಂಶ ಹೊರಬೀಳಲಿದೆ. ಗುತ್ತಿಗೆ ಪಡೆದ ಎರಡು ತಿಂಗಳಲ್ಲಿ ರೂ.5 ಕೋಟಿ  ನೀಡಿ ನೋಂದಣಿ ಮಾಡಿಸಿಕೊಳ್ಳಬೇಕಿತ್ತು. ಆದರೆ ಈಚೆಗೆ ಎರಡುವರೆ ಕೋಟಿ ರೂ. ನೀಡಿ ನೋಂದಣಿ ಮಾಡಿಸಲಾಗಿದೆ.ರೋಲರ್ ಸಾಗಿಸುವಲ್ಲಿ, ಗೋಣಿ ಚೀಲ  ಖರೀದಿಯಲ್ಲಿ ಅವ್ಯವಹಾರ... ಹೇಳುತ್ತಾ ಹೋದರೆ ಅಕ್ರಮಗಳ ಸರಮಾಲೆ ಬೆಳೆಯುತ್ತದೆ. ಸರ್ವಸದಸ್ಯರ ವಾರ್ಷಿಕ ವರದಿಯ ಪುಸ್ತಕದಲ್ಲಿ ಅನೇಕ ಅಂಶಗಳು ಕಾಣೆಯಾಗಿವೆ. ಆದರೆ ಲೆಕ್ಕಾಧಿಕಾರಿಗಳಿಂದ ಪಡೆದ ವರದಿಯಲ್ಲಿ ಎಲ್ಲ ವಿವರಗಳಿವೆ ಎಂದು ಸಭೆಯಲ್ಲಿ ಪ್ರದರ್ಶಿಸಿದರು.ಕಾರ್ಖಾನೆಯ ಲೆಕ್ಕದಲ್ಲಿ 24 ಸಾವಿರ ಷೇರುದಾರರಿದ್ದರೆ, ಲೆಕ್ಕಾಧಿಕಾರಿಯವರ ವರದಿಯತೆ 22  ಸಾವಿರ ಇದ್ದಾರೆ. ಆಡಳಿತ ಮಂಡಳಿಯವರ ಪ್ರಕಾರ ಎರಡು ಸಾವಿರ ಷೇರುದಾರರು ಹೆಚ್ಚಾಗಿದ್ದಾರೆ. ಇದಕ್ಕೆ ಲೆಕ್ಕಪರಿಶೋಧಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾಲ್ಕು ವರ್ಷ ಹಿಂದೆ ಪರಿಶಿಷ್ಟಜಾತಿ, ವರ್ಗದವರನ್ನು ಷೇರುದಾರರನ್ನಾಗಿ ಮಾಡಿಕೊಳ್ಳಬೇಕು ಎಂದು ಕಾರ್ಖಾನೆಗೆ ಸರ್ಕಾರ ರೂ.22.09 ಲಕ್ಷ ಬಿಡುಗಡೆ ಮಾಡಿದೆ.ಇದುವರೆಗೆ ಆ ವರ್ಗಕ್ಕೆ ಸೇರಿದವರನ್ನು ಷೇರುದಾರರನ್ನಾಗಿ ಮಾಡಿಲ್ಲ. ಹಣ ಖರ್ಚುಮಾಡದಿರುವುದರಿಂದ ಈಗ ಹಣ ಸರ್ಕಾರಕ್ಕೆ ವಾಪಸ್ ಹೋಗುತ್ತದೆ. ಇದರ ನೇರ ಹೊಣೆಯನ್ನು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ಹೊರಬೇಕು ಎಂದು ಟೀಕಿಸಿದರು.ಕಾರ್ಖಾನೆಯ ಅಧ್ಯಕ್ಷ ಎನ್.ಸಿ. ನಾರಾಯಣಗೌಡ ಮಾತನಾಡಿ, ಷೇರುದಾರರು ಸೂಚಿಸಿರುವ ಸಮಸ್ಯೆ ಬಗೆಹರಿಸಲು ಯತ್ನಿಸಲಾಗುವುದು.  ರೈತರಿಗೆ ಕಬ್ಬು ಸಾಗಿಸಲು ಅನುಕೂಲವಾಗುವಂತೆ ಹೆಚ್ಚುವರಿ ಪರ್ಮಿಟ್ ನೀಡಲಾಗುವುದು. ಹೌಸಿಂಗ್ ಬೋರ್ಡ್ ಬಳಿ ಕಾರ್ಖಾನೆಗೆ ಸೇರಿದ ಜಾಗದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ  ಸಮುದಾಯ ಭವನ ನಿರ್ಮಿಸಲಾಗುವುದು. ಕಾರ್ಖಾನೆಯನ್ನು  ವಿಸ್ತರಿಸಲು ಖಾಸಗಿಯವರಿಗೆ ಸೂಚಿಸಲಾಗುವುದು ಎಂದರು.ಕಾರ್ಮಿಕ ಸಂಘದ ಅಧ್ಯಕ್ಷ ಎಂ.ಎ. ಗೋಪಾಲಸ್ವಾಮಿ, ಮಾತನಾಡಿ, ಖಾಸಗಿಯವರು ಕಾರ್ಮಿಕರ ವಿರುದ್ಧ ಹಗೆ ಸಾಧಿಸುತ್ತಿದ್ದಾರೆ. ಕಾರ್ಮಿಕರ ಸೇವಾವಧಿ ದಾಖಲೆಯನ್ನು ಖಾಸಗಿಯವರಿಗೆ ನೀಡುವುದು ತರವಲ್ಲ  ಎಂದರು.ಕಾರ್ಖಾನೆವ್ಯವಸ್ಥಾಪಕ ನಿರ್ದೇಶಕ ಸಿ. ರಾಜಣ್ಣರೆಡ್ಡಿ, ಮಾಜಿ ಶಾಸಕ ಡಾ. ಎನ್.ಬಿ. ನಂಜಪ್ಪ, ನಿರ್ದೇಶಕರಾದ ಸಿ.ಸಿ. ರವೀಶ್, ಎಚ್.ಎನ್. ದ್ಯಾವೇಗೌಡ, ಎಂ. ರಾಜೇಗೌಡ, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ, ಮಾಜಿ ಅಧ್ಯಕ್ಷ ಎಚ್.ಎಸ್. ಶ್ರೀಕಂಠಯ್ಯ, ಎಂ.ಎ. ಗೋಪಾಲಸ್ವಾಮಿ, ಎಚ್.ಎಸ್. ವಿಜಯಕುಮಾರ್, ಸಿ.ಎನ್. ಚಂದ್ರೇಗೌಡ, ಗುಳ್ಳಹಳ್ಳಿ ನಂಜುಂಡೇಗೌಡ, ವಿ.ಎನ್. ರಾಜಣ್ಣ, ಎಂ.ಎಸ್. ರಾಜು, ಶಿವರಾಂ, ಆನೇಕೆರೆ ರವಿ, ಗಿರೀಶ್, ಹೊನ್ನಶೆಟ್ಟಿ ರವಿ, ಅಣ್ಣಪ್ಪ, ಇತರರು ಮಾತನಾಡಿದರು. ನಿರ್ದೇಶಕರಾದ ಕೆ.ಎಸ್. ಕೃಷ್ಣೇಗೌಡ, ಮಂಜುನಾಥ್, ವಿ.ಕೆ.ನಾರಾಯಣ,ಸಿ.ಎನ್. ವೆಂಕಟೇಶ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.