ಶುಕ್ರವಾರ, ಮೇ 7, 2021
19 °C
ಮಿನುಗು ಮಿಂಚು

ತಮಾಷೆಯಲ್ಲ ವಿಶ್ವ ಪರ್ಯಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಮಾಷೆಯಲ್ಲ ವಿಶ್ವ ಪರ್ಯಟನೆ

`ಸರ್ಕಮ್‌ನ್ಯಾವಿಗೇಷನ್' ಎಂದರೇನು?

ನಿರ್ದಿಷ್ಟ ಪ್ರದೇಶ ಸುತ್ತುವುದನ್ನು `ಸರ್ಕಮ್‌ನ್ಯಾವಿಗೇಷನ್' ಎಂದು ಇಂಗ್ಲಿಷ್‌ನಲ್ಲಿ ಹೇಳುತ್ತಾರೆ. ಸಾಮಾನ್ಯವಾಗಿ ಭೂಪ್ರದಕ್ಷಿಣೆ ಹಾಕುವುದನ್ನು ಸೂಚಿಸಲು ಈ ಪದ ಬಳಕೆಯಲ್ಲಿದೆ. ಪವರ್ ವಿಮಾನ, ಹಾಯಿದೋಣಿ, ಬೈಕ್, ಹೈಕಿಂಗ್ ಹೀಗೆ ವಿವಿಧ ಪ್ರಯಾಣ ಸಾಧನಗಳಿಂದ `ಸರ್ಕಮ್ ನ್ಯಾವಿಗೇಷನ್' ಮಾಡುತ್ತಾರೆ. ಪ್ರಯಾಣವನ್ನು ಎಲ್ಲಿಂದ ಪ್ರಾರಂಭಿಸಿರುತ್ತಾರೋ ಭೂಪ್ರದಕ್ಷಿಣೆಯ ನಂತರ ಅಲ್ಲಿಯೇ ಅಂತ್ಯಗೊಳಿಸಬೇಕೆಂಬುದು ನಿಯಮ. ಭೂಗೋಳದ ಎರಡು ಎದುರು ಬದುರು ಸ್ಥಳಗಳನ್ನಾದರೂ (ಆ್ಯಂಟಿಪೋಡ್ಸ್) ಹಾಯಬೇಕು. ಸಮಭಾಜಕ ವೃತ್ತ ಅಥವಾ ಭೂಮಧ್ಯರೇಖೆಯನ್ನು ಹಾದುಹೋಗಲೇಬೇಕು. ಆಗಷ್ಟೇ ಭೂಪ್ರದಕ್ಷಿಣೆಗೆ ಅರ್ಥ ಸಲ್ಲುವುದು.ಆ್ಯಂಟಿಪೋಡ್‌ಗಳೆಂದರೇನು?

ಭೂಮಿಯ ಎರಡು ಪ್ರತ್ಯೇಕ ಭಾಗಗಳಲ್ಲಿ ಪರಸ್ಪರ ಎದುರಲ್ಲಿರುವ ಎರಡು ಬಿಂದುಗಳನ್ನು ಆ್ಯಂಟಿಪೋಡ್‌ಗಳೆಂದು ಕರೆಯುತ್ತಾರೆ. ಸರಳರೇಖೆಯನ್ನು ಎಳೆದರೆ ಸಂಧಿಸುವಂಥ ಬಿಂದುಗಳು ಅವು.ಮೊದಲು ಭೂಪರ್ಯಟನೆ ಮಾಡಿದ್ದು ಯಾರು?

ಹದಿನಾರನೇ ಶತಮಾನದಲ್ಲಿ ಫರ್ಡಿನಾಂಡ್ ಮೆಗೆಲನ್ ಮೊದಲಿಗೆ ಭೂಪರ್ಯಟನೆ ಮಾಡಿದ. 1519ರಲ್ಲಿ ಈ ಸಾಹಸಕ್ಕೆ ಕೈಹಾಕಿದ ಸ್ಪೇನ್‌ನ ತಂಡವನ್ನು ಅವನು ಮುನ್ನಡೆಸಿದ. ಅಟ್ಲಾಂಟಿಕ್, ಪೆಸಿಫಿಕ್ ಹಾಗೂ ಹಿಂದೂಮಹಾಸಾಗರವನ್ನು ಹಾದ ಅವನ ತಂಡ `ಕೇಪ್ ಆಫ್ ಗುಡ್ ಹೋಪ್' ಅನ್ನು ಯಶಸ್ವಿಯಾಗಿ ಪ್ರದಕ್ಷಿಣೆ ಹಾಕಿ 1522ರಲ್ಲಿ ಸ್ಪೇನ್‌ಗೆ ಮರಳಿತು. ದಂಡಯಾತ್ರೆಯ ಮಧ್ಯೆಯೇ ಮೆಗೆಲನ್ 1521ರಲ್ಲಿ ಫಿಲಿಪ್ಪೀನ್ಸ್‌ನಲ್ಲಿ ಹತ್ಯೆಯಾದ. ಆಮೇಲೆ ಜುಆನ್ ಸೆಬಾಸ್ಟಿಯನ್ ಎಲ್ಕೆನೊ ಯಾತ್ರೆಯ ನೇತೃತ್ವ ವಹಿಸಿಕೊಂಡರು. ಯಾತ್ರೆಗೆ ಹೊರಟಿದ್ದು 260 ಮಂದಿ. ನಾಲ್ಕು ಹಡಗುಗಳಲ್ಲಿ ಅವರೆಲ್ಲಾ ಉತ್ಸಾಹದಿಂದ ಹೊರಟರು. ಆದರೆ ಸ್ಪೇನ್‌ಗೆ ಮರಳಿದ್ದು ಹದಿನೆಂಟೇ ಮಂದಿ, ಅದೂ ಒಂದೇ ಒಂದು ಹಡಗಿನಲ್ಲಿ.ವಿಶ್ವ ಪರ್ಯಟನೆ ಮಾಡಿದ ಅತಿ ಕಿರಿಯ ಯಾರು?

ಹಾಲೆಂಡ್‌ನ ಲಲನೆ ಲಾರಾ ಡೆಕ್ಕರ್ ತಾನೇ ಹೇಳಿಕೊಂಡಂತೆ ವಿಶ್ವ ಪರ್ಯಟನೆ ಮಾಡಿದ ಅತಿ ಚಿಕ್ಕ ಪ್ರಾಯದವಳು. ಜನವರಿ 21, 2012ರಲ್ಲಿ ವಿಶ್ವ ಪರ್ಯಟನೆಯನ್ನು ಮುಗಿಸಿದಾಗ ಅವಳಿಗೆ 16 ವರ್ಷ 123 ದಿನ ತುಂಬಿತ್ತು.ಟಾಮಿ ಮಾಡಿದ ದಾಖಲೆಯು 2009ರಲ್ಲಿ ದಿಲೀಪ್ ಡೋಂಡೆ ಮಾಡಿದ ದಾಖಲೆಗಿಂತ ಹೇಗೆ ಭಿನ್ನ?

2009ರಲ್ಲಿ ದಿಲೀಪ್ ಡೋಂಡೆ 276 ದಿನಗಳಲ್ಲಿ ವಿಶ್ವ ಪರ್ಯಟನೆ ಮಾಡಿ, ಅಂಥ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡರು. ಆದರೆ ಅವರು ನಾಲ್ಕು ಕಡೆ ತಂಗಿದ್ದರು. ಆದರೆ ಲೆಫ್ಟಿನೆಂಟ್ ಕಮಾಂಡರ್ ಅಭಿಲಾಷ್ ಟಾಮಿ, ದಿಲೀಪ್ ಅವರಂತೆಯೇ ಹಾಯಿದೋಣಿಯಲ್ಲಿ ವಿಶ್ವ ಪರ್ಯಟನೆಗೆ ಹೊರಟರು. ಅವರು ಯಾವ ಬಂದರನ್ನೂ ಮುಟ್ಟಲಿಲ್ಲ. ಈ ವರ್ಷ ಏಪ್ರಿಲ್ 9ರಂದು ಅವರು ತಮ್ಮ 150 ದಿನಗಳ ಯಾತ್ರೆಯನ್ನು ಮುಗಿಸಿದರು. ಒಟ್ಟು 22,000 ನೌಕಾಮೈಲುಗಷ್ಟು ದೂರವನ್ನು ಅವರು ಕ್ರಮಿಸಿದ್ದರು. ಏಕಾಂಗಿಯಾಗಿ, ವಿಶ್ರಾಂತಿಯನ್ನೇ ತೆಗೆದುಕೊಳ್ಳದೆ ಅವರ ಮಾಡಿದ ಈ ಸಾಧನೆ ಶ್ಲಾಘನೀಯ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.