ಭಾನುವಾರ, ಮೇ 16, 2021
22 °C

ತಮ್ಮನ ಸಾಧನೆಗೆ ಅಣ್ಣನ ಸಂತಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಕ್ಕೇರಿ: `ಚಂದ್ರಪ್ಪಗೆ ಪ್ರಶಸ್ತಿ ಸಿಕ್ಕದ್ದು ಬಹಳ ಚೆಲು ಆತ್ರಿ. ಅಂವ ಸಣ್ಣವನಿದ್ದಾಗಿನಿಂದ ಬಹಳ ಶ್ಯಾಣ್ಯಾ ಇದ್ದರಿ. ಹಂಗಾಗಿ ನಮ್ಮ ಅಪ್ಪ ಅವನ ಸಾಲಿ ಕಲಸಾಕ ಬಹಳ ತ್ರಾಸ್ ತೊಗಾಂಡಾನ್ರಿ~ ಎಂದು ಡಾ. ಚಂದ್ರಶೇಖರ ಕಂಬಾರ ಅವರ ಅಣ್ಣ ಪರಸಪ್ಪ ಕಂಬಾರ ಘೋಡಗೇರಿಯಲ್ಲಿ ಮಂಗಳವಾರ ಹೇಳಿದರು.ತಮ್ಮನಿಗೆ ಜ್ಞಾನಪೀಠ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಗ್ರಾಮದಲ್ಲಿನ ಕಂಬಾರರ ಮೂಲ ಮನೆಯಲ್ಲಿ ತಮ್ಮನ್ನು ಭೇಟಿ ಮಾಡಿದ `ಪ್ರಜಾವಾಣಿ~ಯೊಂದಿಗೆ ಅವರು ಸಂತೋಷ ಹಂಚಿಕೊಂಡರು.`ಕುಟುಂಬ ಬಡತನದಲ್ಲಿತ್ತು. ನಾವು ಐವರು ಮಕ್ಕಳು. ತಂದೆ ಬಸವಣ್ಣೆಪ್ಪ ಆಗಿನ ಕಾಲದಲ್ಲಿ ವಿದ್ಯಾವಂತ. ಅವರ ಪ್ರೇರಣೆ ಕುಟುಂಬದ ಮೇಲೆ ಇದ್ದರೂ ಬಡತನದ ಕಾರಣದಿಂದ ನಾನೂ ಸೇರಿದಂತೆ ನಾಲ್ವರು ಶಿಕ್ಷಣ ಮೊಟಕು ಮಾಡಬೇಕಾಯಿತು~ ಎಂದು ಪರಸಪ್ಪ ಜ್ಞಾಪಿಸಿಕೊಂಡರು.`ಗೋಕಾಕದಲ್ಲಿ ಶಾಲೆ ಕಲಿಯುವಾಗ ದಾನಪ್ಪ ಎಂಬಾತ  ನನ್ನ ತಮ್ಮನಿಗೆ ಆತ್ಮೀಯ ಸೇಹಿತನಿದ್ದ. ಅವನು ತಮ್ಮನಿಗೆ ಬಹಳ ಉಪಕಾರ ಮಾಡಿದ. ಆದರೆ ದಾನಪ್ಪನ ಆಕಸ್ಮಿಕ ನಿಧನದಿಂದ ಮತ್ತೆ ಚಂದ್ರು ಒಬ್ಬಂಟಿಗನಾದ. ಕಷ್ಟದ ಪರಿಸ್ಥಿತಿ ನೋಡಲಾರದೆ ಬಾಳಪ್ಪ ಮಾಸ್ತರರು ತಮ್ಮ ಚಂದ್ರುವನ್ನು ಬೆಳಗಾವಿ ನಾಗನೂರು ಮಠಕ್ಕೆ ಕರೆದೊಯ್ದು ಸಹಾಯ ಮಾಡಿದರು. ಅಲ್ಲಿಂದ ಧಾರವಾಡಕ್ಕೆ ಹೋದಾಂವ ಈ ಮಟ್ಟಕ್ಕೆ ಬೆಳೆದಾನ ನೋಡ್ರಿ~ ಎಂದು ಪರಸಪ್ಪ ಹರ್ಷ ವ್ಯಕ್ತಪಡಿಸಿದರು.ಸಭ್ಯ: ಪ್ರಾಥಮಿಕ ಶಾಲೆಯಲ್ಲಿ ಕಲಿಯುವಾಗ ಚಂದ್ರಪ್ಪ ಹೆಚ್ಚು ಓದಿನೆಡೆಗೆ ಲಕ್ಷ್ಯ ವಹಿಸುತ್ತಿದ್ದ. ಸ್ವಲ್ಪ ಮಟ್ಟಿಗೆ ಆಟ ಆಡುತ್ತಿದ್ದ. ಆಟ ಆಡುವಾಗ ಯಾರಾದರೂ ಕಾಡಿಸಿದರೆ ಅಥವಾ ಪೀಡಿಸಿದರೆ ಸುಮ್ಮನಿರುತ್ತಿದ್ದ. ಯಾರ ಜೊತೆಯೂ ಜಗಳ ಆಡುತ್ತಿರಲಿಲ್ಲ ಎಂದು ಆತನ ಸಹಪಾಠಿಗಳಾದ ನಾಗಪ್ಪ ಭೂಷಿ ಮತ್ತು ವೆಂಕಪ್ಪ ಹೇಳಿದರು.ಸುಮಾರು ಐದೂವರೆ ಸಾವಿರ ಜನಸಂಖ್ಯೆ ಹೊಂದಿರುವ ಹುಕ್ಕೇರಿ ತಾಲ್ಲೂಕಿನ ಘೋಡಗೇರಿ ಗ್ರಾಮ ಇಂದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಕ್ಕೆ ಚಂದ್ರಪ್ಪನೇ (ಡಾ. ಚಂದ್ರಶೇಖರ ಕಂಬಾರ) ಕಾರಣ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೆಕಾಂತ ಭೂಷಿ ಹೆಮ್ಮೆಯಿಂದ ನುಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.