ಭಾನುವಾರ, ಮೇ 9, 2021
25 °C

ತಲೆಮರೆಸಿಕೊಳ್ಳದಿರಲು ಸಯೀದ್ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಲಾಹೋರ್ (ಪಿಟಿಐ): ಅಮೆರಿಕವು ತನ್ನ ತಲೆಗೆ 10 ದಶಲಕ್ಷ ಡಾಲರ್ ಬಹುಮಾನ ಘೋಷಿಸಿರುವ ಹಿನ್ನೆಲೆಯಲ್ಲಿ, ಈ ಮೊದಲು ತಲೆಮರೆಸಿಕೊಳ್ಳಬಹುದೆಂದು ಶಂಕಿಸಲಾಗಿದ್ದ ಪಾಕಿಸ್ತಾನದ ಜಮಾತ್- ಉದ್- ದವಾ (ಜೆಯುಡಿ) ಮುಖ್ಯಸ್ಥ ಹಾಗೂ 26/11ರ ಮುಂಬೈ ದಾಳಿಯ ಸೂತ್ರಧಾರ ಹಫೀಜ್ ಮೊಹಮ್ಮದ್ ಸಯೀದ್ ಇದೀಗ ಆ ನಿರ್ಧಾರ ಕೈಬಿಟ್ಟಿದ್ದಾನೆ.ಕೆಲ ಕಾಲ ಭೂಗತನಾಗಿರುವಂತೆ ಸ್ನೇಹಿತರು ಸಯೀದ್‌ಗೆ ಸಲಹೆ ನೀಡಿದ್ದರು. ಆದರೆ ಪಾಕಿಸ್ತಾನದ ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ಹಾಗೂ ಧಾರ್ಮಿಕ ಮುಖಂಡರ ಒತ್ತಾಸೆಗೆ ಕಟ್ಟುಬಿದ್ದು ಸಯೀದ್ ಭೂಗತನಾಗದಿರಲು ನಿರ್ಧರಿಸಿದ್ದಾನೆ.ತಲೆಮರೆಸಿಕೊಂಡರೆ ಅದು ಸ್ವತಃ ಸಯೀದ್‌ಗೆ ಹಾಗೂ ಜೆಯುಡಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸಂಘಟನೆ ಅಭಿಪ್ರಾಯ ಪಟ್ಟಿದ್ದಾಗಿ ಹೆಸರು ಹೇಳಲು ಇಚ್ಛಿಸದ ಜೆಯುಡಿ ನಾಯಕನೊಬ್ಬ ತಿಳಿಸಿದ್ದಾನೆ.

`ಸಯೀದ್‌ಗೆ ಪಿಎಂಎಲ್-ಎನ್, ಪಿಎಂಎಲ್-ಕ್ಯು, ಪಾಕಿಸ್ತಾನ್ ತೆಹ್ರಿಕ್- ಎ-ಇನ್‌ಸಾಫ್ ಹಾಗೂ ಜಮಿಯತ್ ಉಲೇಮಾ-ಎ- ಇಸ್ಲಾಂನಂಥ ಪ್ರಮುಖ ಪಕ್ಷಗಳ ಬೆಂಬಲ ಕೂಡ ಇದೆ. ಡೆಫಾ- ಎ- ಪಾಕಿಸ್ತಾನ್ ಕೌನ್ಸಿಲ್ ಬ್ಯಾನರ್ ಅಡಿಯಲ್ಲಿ ಸುಮಾರು 40ಕ್ಕೂ ಹೆಚ್ಚಿನ ಪಕ್ಷಗಳು ಸಯೀದ್ ಬೆಂಬಲಕ್ಕೆ ನಿಂತಿದ್ದು, ಜನರನ್ನು ಅಮೆರಿಕ ಹಾಗೂ ಭಾರತದ ವಿರುದ್ಧ ಪ್ರಚೋದಿಸುವಂತೆ ಆತನಿಗೆ ಸೂಚನೆ ನೀಡಿವೆ~ ಎಂದು ಜೆಯುಡಿ ಮುಖಂಡ ದೂರವಾಣಿ ಮೂಲಕ ಸುದ್ದಿ ಸಂಸ್ಥೆಗೆ ತಿಳಿಸಿದ್ದಾನೆ.`ಪಿಎಂಎಲ್-ಎನ್‌ನ ಚೌಧರಿ ನಿಸಾರ್ ಅಲಿ ಖಾನ್, ಪಿಎಂಎಲ್-ಕ್ಯು ಪಕ್ಷದ ಚೌಧರಿ ಸುಜತ್ ಹುಸೇನ್, ಇಮ್ರಾನ್ ಖಾನ್ ಪಕ್ಷದ ಜಾವೇದ್ ಹಶ್ಮಿ, ಜೆಯುಐನ ಫಜ್ಲುರ್ ರೆಹಮಾನ್ ಅವರು ಸಯೀದ್‌ಗೆ ಕರೆ ಮಾಡಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ, ಹೀಗಿರುವಾಗ ಯಾರು ತಾನೇ ತಲೆಮರೆಸಿಕೊಳ್ಳಲು           ಇಷ್ಟಪಡುತ್ತಾರೆ~ ಎಂದು ಆತ ಹೇಳಿದ್ದಾನೆ.2008ರ ಮುಂಬೈ ದಾಳಿ ಬಳಿಕ 6 ತಿಂಗಳವರೆಗೆ ಗೃಹ ಬಂಧನದಲ್ಲಿದ್ದ ಸಯೀದ್ ಸದ್ಯ ಜೆಯುಡಿ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.`ಅಮೆರಿಕವು ತನ್ನ ತಲೆಗೆ ಬಹುಮಾನ ಘೋಷಿಸಿದ್ದೇ ತಡ ಸಯೀದ್ ಮತ್ತಷ್ಟು ಚುರುಕಾಗಿದ್ದಾನೆ. ಈ ವಿಷಯವನ್ನು ತನ್ನ ಬೆಂಬಲಿಗರ ಮುಂದೆ  ಇಡಲು ಆತ, ಪಂಜಾಬ್ ಪ್ರಾಂತ್ಯದಲ್ಲಿ ಪ್ರವಾಸ ಮಾಡುತ್ತಿದ್ದಾನೆ.ಸೋಮವಾರ ಸಯೀದ್ ಲಾಹೋರ್‌ನಲ್ಲಿ ಇದ್ದ. ಇಂದು ಸಹಿವಾಲ್ ಜಿಲ್ಲೆಯಲ್ಲಿ ತನ್ನ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿ, ಅಮೆರಿಕ ಹಾಗೂ ಭಾರತದ ವಿರುದ್ಧ ಅವರನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿದ್ದಾನೆ~ ಎಂದು ಪಾಕಿಸ್ತಾನ ಪೀಪಲ್ಸ್ ಪಕ್ಷದ (ಪಿಪಿಪಿ) ಹಿರಿಯ ಮುಖಂಡರೊಬ್ಬರು ಮಂಗಳವಾರ ಹೇಳಿದ್ದಾರೆ.ಸರ್ಕಾರವು ಪಾಕಿಸ್ತಾನದಲ್ಲಿ ಉಗ್ರವಾದವನ್ನು ನಿಯಂತ್ರಿಸಲು ನಿಜವಾಗಿಯೂ ಆಸಕ್ತಿ ಹೊಂದಿದ್ದಲ್ಲಿ ಅದು ನಿಷೇಧಿತ ಸಂಘಟನೆಗಳಿಗೆ ಲಗಾಮು ಹಾಕಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಯೀದ್ ವಿಷಯದಲ್ಲಿ ಪಿಪಿಪಿ, ಇತರ ಪಕ್ಷಗಳ ಹಾದಿಯನ್ನು ತುಳಿದಿಲ್ಲ. ಅದು ಸಯೀದ್‌ಗಾಗಲೀ, ಜೆಯುಡಿಗಾಗಲೀ ತನ್ನ ಬೆಂಬಲ ಸೂಚಿಸಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.