ಸೋಮವಾರ, ಮೇ 10, 2021
21 °C
ಬ್ಲಾಗಿಲನು ತೆರೆದು...

ತಲ್ಲಣಿಸದಿರು ಕಂಡ್ಯ...

-ಸಾಕ್ಷಿ Updated:

ಅಕ್ಷರ ಗಾತ್ರ : | |

ಬ್ಲಾಗಿಗರ ಹೆಸರು ಸಚೇತನ. ಹೆಸರಿನಲ್ಲಿನ ಲಾವಣ್ಯವನ್ನು ನೋಡಿ ಹುಡುಗಿ ಎಂದುಕೊಂಡರೆ ಮೋಸಹೋಗುವಿರಿ. ಆದರೆ, ಅವರ ಬರಹಗಳಲ್ಲಿ ಮಾತ್ರ ಒಂದು ಬಗೆಯ ಲಾವಣ್ಯ, ಲಯ, ಚೇತನವನ್ನು ಕಾಣಬಹುದು. `ತಲ್ಲಣ' (sachetanbhat.blogspot.in) ಎನ್ನುವ ಬ್ಲಾಗಿನ ಹೆಸರಿನಲ್ಲೇ ಒಂದು ಬಗೆಯ ಕಂಪನವೂ ಪುಳಕವೂ ಇಣುಕುವುದು.ಸಚೇತನ ಅವರ ಬ್ಲಾಗ್ ಬರಹಗಳು ತಮ್ಮ ವಸ್ತು, ಶೈಲಿ ಎರಡು ಕಾರಣಗಳಿಂದಲೂ ಗಮನ ಸೆಳೆಯುತ್ತವೆ. ಕೆಲವು ಬರಹಗಳಿಗೆ ಪ್ರಬಂಧದ ಸ್ವರೂಪವೂ, ಕಥನದ ಕೌತುಕ ಗುಣವೂ ಇದೆ. ಉದಾಹರಣೆಯ ರೂಪದಲ್ಲಿ- `ಬಕೀಟುಂ ಬಹು ವಿಧ ರೂಪಂ!' ಎನ್ನುವ ಬರಹದ ಒಂದು ಭಾಗ ನೋಡಬಹುದು:

“ಬೆಳಿಗ್ಗೆ ಎದ್ದ ತಕ್ಷಣ ಮೊಸರುದ್ದೀನ ಮಾಡುತ್ತಿದ್ದ ಕೆಲಸವೆಂದರೆ ಅಸ್ತವ್ಯಸ್ತವಾಗಿ ಬಿದ್ದಿದ್ದ ಚಾದರವನ್ನು ಮಡಚಿಡುವದು.

ಆಯತಾಕಾರದ ಚಾದರದ ಬಲ ಹಾಗೂ ಎಡದ ಎರಡೂ ತುದಿಗಳನ್ನು ಒದಕ್ಕೊಂದು ಸೇರಿಸಿ ಹಿಡಿದುಕೊಂಡು ಥಟ್ಟನೆ ಎದ್ದು ನಿಂತು, ಎರಡೂ ಕೈಗಳನ್ನು ತಲೆಯ ಮೇಲಕ್ಕೆ ಎತ್ತಿ ಚಾದರದ ಅಂಚುಗಳು ಸಮನಾಗಿವೆಯೇ ಎಂದು ನೋಡುತ್ತಿದ್ದ. ಇದಾದ ನಂತರ ಚಾದರವನ್ನು ಅರ್ಧ ಭಾಗದಲ್ಲಿ ಮಡಚಿ, ಮತ್ತೆ ಕೈಗಳನ್ನು ಮೇಲಕ್ಕೆತ್ತುತ್ತಿದ್ದ. ಈ ಕ್ರಿಯೆಯನ್ನು ಹಲವಾರು ಬಾರಿ ಪುನರಾವರ್ತಿಸಿದ ನಂತರ ಚಾದರವನ್ನು ದಿಂಬಿನೆಡೆಗೆ ಸರಕ್ಕನೆ ಚಕ್ರವೆಸೆದಂತೆ ಎಸೆಯುತ್ತಿದ್ದ.

ಚಾದರವನ್ನು ಮಡಚಿದಷ್ಟೇ ಪ್ರೀತಿಯಿಂದ ಮೊಸರುದ್ದೀನ ಹಾಸಿಗೆ ಮಡಚುತ್ತಿರಲಿಲ್ಲ. ಹಾಸಿಗೆಯನ್ನು ಇದ್ದ ಸ್ವರೂಪದಲ್ಲಿಯೆ ಸುರುಳಿ ಸುತ್ತಿ, ಶರವೇಗದಲ್ಲಿ ಪಾಯಖಾನೆಗೆ ಓಡಿ, ಆಂಗ್ಲ ಶೈಲಿಯ ಕಮೋಡಿನಲ್ಲಿ ಭಾರತೀಯ ಪರಂಪರೆಯ ಕಾಯುವ ವೀರ ಯುವಕನಂತೆ ಕುಕ್ಕರುಗಾಲಿನಲ್ಲಿ ಕುಳಿತು ಬಹು ಎತ್ತರದ ಪ್ರದೇಶದಿಂದ, ಹೊಲಸಿನಿಂದ ತಾನು ಬಹು ಎತ್ತರದ ಪ್ರದೇಶದಲ್ಲಿ ಇರುವವ ಎನ್ನುವ ಅವರ್ಚನೀಯ ಭಾವ ಹೊಳೆದು ವಿಸರ್ಜನಾ ಸುಖ ಅನುಭವಿಸುತ್ತಿದ್ದ.ಇಷ್ಟಾದರೂ ಅದರ ಆ ಭಾವನೆಯ ಜೊತೆ ಜೊತೆಗೆ ಈ ವಿಸರ್ಜನೆ ತನ್ನ ಹೊಟ್ಟೆಯೊಳಗೆ ಸಂಗ್ರಹವಾಗಿತ್ತೆಂಬ ಯೋಚನೆ ಹೊಳೆದು ಬೆಚ್ಚಿ ಬೀಳುತ್ತಿದ್ದುದು ಇದೆ. ಪಾಯಖಾನೆಯ ಬಾಗಿಲಿಗೆ ಹಲ್ಲುಜ್ಜುವ ಹಲವಾರು ಸಲಕರಣೆಗಳನ್ನು ಇಟ್ಟುದರಿಂದ ಮೊಸರುದ್ದೀನ, ವಿಸರ್ಜನೆಯ ಬೆಚ್ಚಿ ಬೀಳುವ ಪರ್ವವಾದೊಡನೆ ಹಲ್ಲುಜ್ಜಲು ಪ್ರಾರಂಭಿಸುತ್ತಿದ್ದ. ಹೀಗೆ ಜೀರ್ಣ ಕ್ರಿಯೆಯ ಬುಡ ಹಾಗು ತುದಿಗಳೆರಡರ ಸ್ವಚ್ಛತಾ ಕಾರ್ಯ ಮುಗಿದೊಡನೆ ಬಚ್ಚಲು ಮನೆಯನ್ನು ಘನ ಗಾಂಭಿರ್ಯದಿಂದ ಪ್ರವೇಶಿಸುತ್ತಿದ್ದ.ಮೊಸರುದ್ದೀನನ ಬಚ್ಚಲು ಮನೆ ಎಂಬುದು ಒಂದು ಕತ್ತಲು ಬೆಳಕಿನ ಮಂದ ಮಾಯಾಲೋಕವೇ ಸರಿ. ಮೊಸರುದ್ದೀನನ ಬಚ್ಚಲು ಮನೆಯೆಂದರೆ ಅದೊಂದು ಬಕೀಟುಗಳ ಲೋಕ. ಅನಾದಿಕಾಲದಿಂದಲೂ ಬಕೀಟು ಹಿಡಿಯುವ, ಬಕೀಟು ಸಂಗ್ರಹಿಸುವ ಹುಚ್ಚಿನ ಅವನ ಮನೆಯಲ್ಲಿ ತರಹೇವಾರಿ ಬಕೀಟುಗಳು ತಮ್ಮ ತಮ್ಮ ಆಯುಷ್ಯವನ್ನು ಕಳೆಯುತ್ತಿದ್ದವು.

ವಿಸರ್ಜನ ಕ್ರಿಯೆಯಿಂದ ಬಚ್ಚಲು ಮನೆಯನ್ನು ಹೊಕ್ಕ ಮೊಸರುದ್ದೀನನಿಗೆ ಸುತ್ತ ಜೋಡಿಸಿಟ್ಟಿರುವ ಸಣ್ಣ, ಅಗಲ, ದೊಡ್ಡ, ಗಿಡ್ಡ, ಉದ್ದನೆಯ, ತೆಳ್ಳನೆಯ, ದಪ್ಪನೆಯ, ಬಣ್ಣವಿರುವ ಬಣ್ಣವಿಲ್ಲದ, ಹಿಡಿಕೆಯಿರುವ ಹಿಡಿಕೆಯಿರದ, ಹೀಗೆ ಹಲವಾರು ಬಕೀಟುಗಳು ಕಣ್ಣಿಗೆ ಬೀಳುತ್ತಲೇ ಅತ್ಯುತ್ಸಾಹ ಉಕ್ಕಿ ಬರುತ್ತಿತ್ತು...”ಹೀಗೆ ಪ್ರಾರಂಭವಾಗುವ ಮೊಸರುದ್ದೀನನ ಕಥನ `ಬಕೀಟು ಮೀಮಾಂಸೆ'ಯೊಂದನ್ನು ಸೊಗಸಾಗಿ ಬಿಂಬಿಸುತ್ತಿದೆ. ಚಾತುರ್ಯ, ವಿಡಂಬನೆ, ಕಥೆ, ವಿವರ- ಹೀಗೆ ಅನೇಕ ಮಗ್ಗಲುಗಳ ಇಂಥ ಬರಹಗಳ ಸಂಕಲನದ ರೂಪದಲ್ಲಿ `ತಲ್ಲಣ' ಗಮನ ಸೆಳೆಯುತ್ತದೆ.ಸಚೇತನ ಸೊಗಸಾಗಿ ಕವಿತೆ ರಚಿಸಬಲ್ಲರು. ಕವಿತೆಯೊಳಗೂ ಒಂದು ಕಥೆ ಹೇಳಬಲ್ಲರು. ಕಿರುಗವಿತೆಗಳ ಮೂಲಕ ಮಿಂಚು ಹಾಯಿಸಬಲ್ಲರು. `ಬೆತ್ತಲು' ಎನ್ನುವ ಕವಿತೆಯಂತೂ ಓದುಗರನ್ನು ತಲ್ಲಣಗೊಳಿಸಲೇ ರಚಿಸಿದಂತಿದೆ. ಕವಿತೆ ಶುರುವಾಗುವುದು ಆಸ್ಪತ್ರೆಯ ಚಿತ್ರದ ಮೂಲಕ.

ಕಟ ಲಟ ಪಟ ಚಟ

ಸದ್ದುಗದ್ದಲದ ಆಸ್ಪತ್ರೆಯ ಸ್ಟ್ರೆಚರ್ನ ಮೇಲೆ,

ಕಂಡೂ ಕಾಣದ ಬಿಳಿಯ ಹೊದಿಕೆಯ ಒಳಗೆ

ಶಬ್ದವಿಲ್ಲದೇ ಮಲಗಿದ್ದಾಳೆ 

ವಿಠೋಬಾನ ಮಗಳು.

ಅಲ್ಲಿ,

ಗಿರಾಕಿಗಳಿಲ್ಲದ, ವಿಠೋಬಾನ ಬಜ್ಜಿ ತಣ್ಣಗಾಗುತ್ತಿವೆ.

ಇಲ್ಲಿ,

ಉಸಿರಿಲ್ಲದೇ ವಿಠೋಬಾನ ಮಗಳು ತಣ್ಣಗಾಗಿದ್ದಾಳೆ.

                              ***

ಶ್! ನನಗೂ ಗೊತ್ತು 

ವಿಠೋಬಾನ ಬಜ್ಜಿ ಸ್ವಲ್ಪ ಉಪ್ಪಾಗಿದೆ,

ಸುಮ್ಮನಿರಿ ದಮ್ಮಯ್ಯ.

ಆಸ್ಪತ್ರೆಯ ಬಿಲ್ಲಿನಲ್ಲೆ ಬಜ್ಜಿ ಕಟ್ಟಿ ಕೊಟ್ಟಿದ್ದಾನೆ.

ಒಂದೆರಡು ಹನಿ ಕಣ್ಣೀರು 

ಕಟ್ಟಿದ ಬಿಲ್ಲಿನ ಮೇಲೆ ಬಿದ್ದಿರಲಿಕ್ಕೂ ಸಾಕು..!

ಹೀಗೆ ಸಾಗುವ ಕವಿತೆ- `ಚಿತೆಗೆ ಸಾಕಾಗುವಷ್ಟು ಬಿಲ್ಲುಗಳು ಇನ್ನೂ ಬಾಕಿ ಇವೆ / ಬರ‌್ರನೇ ಉರಿಯುತ್ತವೆ / ಒಳಗೂ ಹೊರಗೂ' ಎಂದು ಕೊನೆಗೊಳ್ಳುತ್ತದೆ. ಆ ಉರಿಯ ತೀವ್ರತೆ ಓದುಗನ ಎದೆಗೂ ತಾಕುತ್ತದೆ.ಸಚೇತನ ಅವರ ಬ್ಲಾಗಿನಲ್ಲಿ ಬರಹಗಳ ಸಂಖ್ಯೆ ಹೆಚ್ಚೇನಿಲ್ಲ. ಆದರೆ ಇರುವ ದಾಖಲುಗಳಲ್ಲೇ ಓದುಗರನ್ನು ತಲ್ಲಣಗೊಳಿಸುವ ಶಕ್ತಿಯ ರಚನೆಗಳಿವೆ. ಈ ತಲ್ಲಣ ವಿಷಾದ ಅಥವಾ ಸೂತಕವೆಂದಷ್ಟೇ ಭಾವಿಸಬೇಕಿಲ್ಲ. ಸುಖದಲ್ಲೂ ತಲ್ಲಣದ ಕಂಪನ ಸಾಧ್ಯವಿದೆ. ಯಾವ ಬಗೆಯಲ್ಲಾದರೂ `ತಲ್ಲಣ'ಗೊಳದೆ ಬ್ಲಾಗಿನಿಂದ ಹೊರಕ್ಕೆ ಬಾಗಿಲು ಕಾಣಿಸುವುದಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.