ಮಂಗಳವಾರ, ಮೇ 18, 2021
24 °C

ತವರಿಗೆ ಬಂದ ಯುವರಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ/ಐಎಎನ್‌ಎಎಸ್): ಕ್ಯಾನ್ಸರ್‌ಗೆ ಅಮೆರಿಕದಲ್ಲಿ ಚಿಕಿತ್ಸೆ ಪಡೆದಿರುವ ಭಾರತ ಕ್ರಿಕೆಟ್ ತಂಡದ ಆಟಗಾರ ಯುವರಾಜ್ ಸಿಂಗ್ ಸೋಮವಾರ ಸ್ವದೇಶಕ್ಕೆ ಆಗಮಿಸಿದರು.ಇಲ್ಲಿನ ವಿಮಾನ ನಿಲ್ದಾಣ ಹಾಗೂ ಅವರ ನಿವಾಸದ ಬಳಿ ನೆರೆದಿದ್ದ ಅಭಿಮಾನಿಗಳು ಯುವಿಗೆ ಆತ್ಮೀಯ ಸ್ವಾಗತ ಕೋರಿದರು. ಲಂಡನ್‌ನಿಂದ ಜೆಟ್ ಏರ್‌ವೇಸ್ ವಿಮಾನದಲ್ಲಿ ಬೆಳಿಗ್ಗೆ ಆಗಮಿಸಿದ ಅವರನ್ನು ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಾಯಿ ಶಬನಮ್ ಬರಮಾಡಿಕೊಂಡರು. ಕೆಂಪು ಟೋಪಿ, ಕೆಂಪು ಟಿ-ಶರ್ಟ್ ಹಾಗೂ ಖಾಕಿ ಪ್ಯಾಂಟ್ ಧರಿಸಿದ್ದ ಯುವಿ ಅಭಿಮಾನಿಗಳತ್ತ ಕೈಬೀಸಿ ಖುಷಿ ವ್ಯಕ್ತಪಡಿಸಿದರು.

 ಈ ಸಂದರ್ಭದಲ್ಲಿ ಮಾಧ್ಯಮದವರೂ ಇದ್ದರು. ತಾಯಿಯೊಂದಿಗೆ ನಿಂತ ಯುವಿ ಛಾಯಾಚಿತ್ರಗ್ರಾಹಕರಿಗೆ ಪೋಸ್ ನೀಡಿದರು. ಬಳಿಕ ಅವರು ಬಿಳಿ ಆಡಿ ಕಾರಿನಲ್ಲಿ ಗುಡಂಗಾವ್‌ನಲ್ಲಿರುವ ತಮ್ಮ ನಿವಾಸಕ್ಕೆ ತೆರಳಿದರು.ಶ್ವಾಸಕೋಶದ ನಡುವೆ ಆಗಿದ್ದ ಗೆಡ್ಡೆ ಕರಗಿಸಲು ಅಮೆರಿಕದ ಬಾಸ್ಟನ್‌ನ ಕ್ಯಾನ್ಸರ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಅವರು ಜನವರಿಯಿಂದ ಮಾರ್ಚ್‌ವರೆಗೆ ಮೂರು ಹಂತದ ಕಿಮೋಥೆರಪಿ ಚಿಕಿತ್ಸೆಗೆ ಒಳಗಾಗಿದ್ದರು. ಆ ಬಳಿಕ ವಿಶ್ರಾಂತಿ ಪಡೆಯಲು ಲಂಡನ್‌ಗೆ ತೆರಳಿದ್ದರು.`ತುಂಬಾ ದಿನಗಳ ನಂತರ ಸ್ವದೇಶಕ್ಕೆ ಆಗಮಿಸಿದ್ದೇನೆ. ಬಹಳ ಖುಷಿಯಾಗುತ್ತಿದೆ. ನಾನೀಗ ಚೇತರಿಸಿಕೊಳ್ಳುತ್ತಿದ್ದೇನೆ. ಮನೆಯಲ್ಲಿ ನನ್ನ ಮೊದಲ ಭೋಜನ ಗೋಬಿ ಪರೋಟ~ ಎಂದಷ್ಟೇ ಎಡಗೈ ಬ್ಯಾಟ್ಸ್‌ಮನ್ ನುಡಿದರು. ಅವರು ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದು ವಿವರ ನೀಡಲಿದ್ದಾರೆ.ತಮ್ಮ ನೆಚ್ಚಿನ ಆಟಗಾರನನ್ನು ನೋಡಲು ಗುಡಂಗಾವ್ ನಿವಾಸದ ಬಳಿಯೂ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಅವರಲ್ಲಿ ಕೆಲವರು ಪಂಜಾಬ್‌ನಿಂದ ಕೂಡ ಆಗಮಿಸಿದ್ದರು. ಮನೆಯ ಮಹಡಿ ಮೇಲೆ ನಿಂತ ಯುವಿ ಅಭಿಮಾನಿಗಳತ್ತ ಕೈಬೀಸಿ ವಿಜಯದ ಸಂಕೇತ ತೋರಿಸಿದರು.`ಕ್ಯಾನ್ಸರ್ ಅಂಶಗಳು ಅವರ ದೇಹದಿಂದ ಪೂರ್ಣ ಹೊರಹೋಗಿವೆ. ಅವರೀಗ ಪೂರ್ಣ ಗುಣವಾಗಿದ್ದಾರೆ~ ಎಂದು ಅಮೆರಿಕದಲ್ಲಿ ಚಿಕಿತ್ಸೆ ಪಡೆಯುವಾಗ ಯುವಿ ಜೊತೆಯಲ್ಲಿದ್ದ ಸ್ನೇಹಿತರೊಬ್ಬರು ತಿಳಿಸಿದರು.`ಯುವಿ ಚೆನ್ನಾಗಿದ್ದಾರೆ. 10ರಿಂದ15 ದಿನಗಳ ವಿಶ್ರಾಂತಿ ಅವರಿಗೆ ಬೇಕು. ಮೂರು ತಿಂಗಳ ಬಳಿಕ ಅವರು ತಮ್ಮ ವೈದ್ಯರನ್ನು ಕಾಣಲಿದ್ದಾರೆ. ಕ್ಯಾನ್ಸರ್ ವಿರುದ್ಧ ಅವರು ಸುದೀರ್ಘ ಹೋರಾಟ ನಡೆಸಿದ್ದಾರೆ.  ಅಭಿಮಾನಿಗಳು ಹಾಗೂ ಅವರ ಪ್ರಾರ್ಥನೆಗೆ ನಮ್ಮ ಧನ್ಯವಾದಗಳು~ ಎಂದು ತಾಯಿ ಶಬನಮ್ ಹೇಳಿದರು.`ಯುವರಾಜ್ ಅವರನ್ನು ಮತ್ತೆ ಕ್ರಿಕೆಟ್ ಅಂಗಳದಲ್ಲಿ ನೋಡುವ ವಿಶ್ವಾಸದಲ್ಲಿದ್ದೇನೆ. ಯುವಿ ಕಷ್ಟದ ಯುದ್ಧವನ್ನು ಗೆದ್ದಿದ್ದಾರೆ. ಅವರೀಗ ಬಲಿಷ್ಠವಾಗಿದ್ದಾರೆ. ನನ್ನ ಪಾಲಿಗೆ ಇದೊಂದು ಸುಂದರ ಕ್ಷಣ~ ಎಂದು ತಂದೆ ಯೋಗರಾಜ್ ಸಿಂಗ್ ನುಡಿದರು.ಭಾರತ ತಂಡ 28 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಂಜಾಬ್‌ನ ಈ ಆಲ್‌ರೌಂಡರ್ `ಟೂರ್ನಿ ಶ್ರೇಷ್ಠ~ ಎನಿಸಿದ್ದರು. ಕಳೆದ ನವೆಂಬರ್‌ನಲ್ಲಿ ಆಡಿದ್ದ ಪಂದ್ಯವೇ ಕೊನೆಯದಾಗಿತ್ತು. ಯುವಿ ಇನ್ನೂ ಕೆಲ ತಿಂಗಳುಗಳ ಕಾಲ ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇದೀಗ ಐಪಿಎಲ್ ಐದನೆಯ ಆವೃತ್ತಿಯಲ್ಲೂ ಕಣಕ್ಕಿಳಿಯುವುದಿಲ್ಲ.  `ಕೊನೆಗೂ ಆ ದಿನ ಬಂದೇಬಿಟ್ಟಿತು. ನನ್ನ ತವರು ನಾಡಿಗೆ ಹೋಗುತ್ತಿದ್ದೇನೆ. ಮೊದಲು ಗೆಳೆಯರನ್ನು, ಕುಟುಂಬದವರನ್ನು ನೋಡಬೇಕು. ಎಲ್ಲಕ್ಕಿಂತ ಮೊದಲು ನನ್ನ ಭಾರತ ನೋಡಬೇಕು. ಮೇರಾ ಭಾರತ್ ಮಹಾನ್~ ಎಂದು 30 ವರ್ಷ ವಯಸ್ಸಿನ ಯುವಿ ಭಾನುವಾರ `ಟ್ವಿಟರ್~ನಲ್ಲಿ ಬರೆದಿದ್ದರು. 

 

ಸಹೋದರನೇ ನಿನಗೆ ಸ್ವಾಗತ: ಸಚಿನ್

`ಯುವಿ ಬೇಗನೇ ಚೇತರಿಸಿಕೊಂಡಿದ್ದೀಯಾ? ಕ್ಯಾನ್ಸರ್ ವಿರುದ್ಧದ ಕಠಿಣ ಹೋರಾಟದಲ್ಲಿ ಗೆದ್ದು ತವರು ನಾಡಿಗೆ ಹಿಂದಿರುಗಿರುವ ನನ್ನ ಸಹೋದರನಿಗೆ ಸ್ವಾಗತ~ ಎಂದು ಸಚಿನ್ ತೆಂಡೂಲ್ಕರ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.