ಶನಿವಾರ, ಮೇ 21, 2022
28 °C

ತಾತನ ಪತ್ತೆಗೆ ಮೊಮ್ಮಗನ ಪ್ರಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕುತೂಹಲ ಎಂಬುದಕ್ಕೆ ಕಾಲ-ದೇಶಗಳ ಎಲ್ಲೆ ಇರುವುದಿಲ್ಲ. ಈ ಕುತೂಹಲವೇ ಬ್ರಿಟಿಷ್ ಪತ್ರಕರ್ತರೊಬ್ಬರನ್ನು ಕರ್ನಾಟಕದವರೆಗೂ ಕರೆ ತಂದಿದೆ. ಒಂದು ವಾರದ ಹಿಂದೆ ನಗರಕ್ಕೆ ಅವರು ಭೇಟಿ ನೀಡಿದ್ದು ಅವರ ತಾತನ ಕುಟುಂಬ ಇಲ್ಲಿ ವಾಸಿಸುತ್ತಿದೆಯೇ ಎಂಬುದನ್ನು ಪತ್ತೆ ಹಚ್ಚುವುದಕ್ಕಾಗಿ.ಬ್ರಿಟಿಷ್ ಪತ್ರಕರ್ತ ಮೈಕ್ ಸೌಟರ್ ಅವರ ತಾತ ಫ್ರೆಡರಿಕ್ ಡೆನಿಸನ್ ಸ್ಮಿತ್ ಅವರು ಮೈಸೂರು ಒಡೆಯರ ಆಸ್ಥಾನದಲ್ಲಿ ಚಿತ್ರ ಕಲಾವಿದರಾಗಿದ್ದರು. ಮೈಸೂರು ಹಾಗೂ ಬೆಂಗಳೂರು ಅರಮನೆಗಳಲ್ಲಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅವರು ಎಂ.ಎ ಅಜೀಜ್ ಎಂಬ ಹೆಸರಿನಲ್ಲಿ ಸಹಿ ಮಾಡಿದ ಕಲಾಕೃತಿಗಳನ್ನು ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಈಗಲೂ ಕಾಣಬಹುದು.ಸ್ಮಿತ್ ಅವರು ಹೊಂದಿದ್ದರು ಎನ್ನಲಾದ ಭಾರತೀಯ ಕುಟುಂಬದ ಹುಡುಕಾಟದಲ್ಲಿ ತೊಡಗಿರುವ ಅವರ ಮೊಮ್ಮಗ ಸೌಟರ್ ಮೈಸೂರಿಗೆ ಶೀಘ್ರವೇ ಭೇಟಿ ನೀಡುತ್ತಿದ್ದಾರೆ.ಅಲ್ಲಿಯಾದರೂ ತಮ್ಮ ತಾತನ ಕುಟುಂಬ ಪತ್ತೆಯಾಗಬಹುದು ಎಂಬ ಆಶಯ ಅವರದ್ದು. ಸ್ಕಾಟ್ಲೆಂಡ್‌ನಲ್ಲಿ ತನ್ನ 88 ವರ್ಷದ ತಾಯಿಯ ಬಳಿ ಇದ್ದ ಕಲಾಕೃತಿಗಳು ಸೌಟರ್‌ನ ಕುತೂಹಲ ಕೆರಳಿಸಿದವು.ಅದರಲ್ಲಿ ಎಂ.ಎ. ಅಜೀಜ್ ಹೆಸರಿನಲ್ಲಿದ್ದ ಸಹಿಯ ಬಗ್ಗೆ ನಂತರ ಅವರು ಭಾರತದ ಕ್ಯೂರೇಟರ್‌ಗಳು ಹಾಗೂ ಹರಾಜುದಾರರೊಂದಿಗೆ ಚರ್ಚಿಸಿದರು. ಮೈಸೂರಿನ ರಾಯಲ್ ಕಲೆಕ್ಷನ್ಸ್‌ನ ಕ್ಯೂರೇಟರ್ ಆದ ಮೈಕೆಲ್ ಲುಡ್‌ಗ್ರೋವ್ ಅವರ ಮನಸ್ಸಿನಲ್ಲಿ ‘ಅಜೀಜ್’ ಹೆಸರು ರಿಂಗಣಿಸಿತು. ಈ ಹೆಸರಿನ ಸಹಿ ಹೊಂದಿರುವ ಅನೇಕ ಕೃತಿಗಳು ಮೈಸೂರಿನ ಅರಮನೆಯಲ್ಲಿವೆ ಎಂದು ಅವರು ತಿಳಿಸಿದರು.ಸೌಟರ್ ತಾಯಿಯ ಬಳಿ ಇರುವ ಭಾವಚಿತ್ರದಲ್ಲಿ ಮಹಾರಾಜರೊಂದಿಗೆ ಅವರ ತಾತ ಪುಟ್ಟ ಮಕ್ಕಳು ಹಾಗೂ ಮಹಿಳೆಯರು ಇರುವ ಚಿತ್ರ ದೊರೆತಿದೆ. ಇದೇ ಸ್ಮಿತ್ ಹುಡುಕಾಟಕ್ಕೆ ನಾಂದಿಹಾಡಿದ್ದು ಅವರ ಕುಟುಂಬದಲ್ಲಿ ಭಾವೋದ್ವೇಗಕ್ಕೆ ಕಾರಣವಾಗಿದೆ.ಮೊದಲು ಇಂಗ್ಲೆಂಡ್‌ನಲ್ಲಿ ಕಲಾವಿದರಾಗಿದ್ದ ಸ್ಮಿತ್ ತಾತ ಕಾರಣಾಂತರಗಳಿಂದ 1904ರಲ್ಲಿ ಭಾರತಕ್ಕೆ ಬಂದರು. ಅವರು ಈ ಮೊದಲು ಸಿ ಲಜಾರಸ್ ಕಂಪೆನಿಯಲ್ಲಿ ಅಲಂಕಾರ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಬೆಂಗಳೂರು ಹಾಗೂ ಮೈಸೂರು ಅರಮನೆಗಳಲ್ಲಿ ಕಂಪೆನಿ ಗುತ್ತಿಗೆ ಕಾರ್ಯದಲ್ಲಿ ತೊಡಗಿದ್ದರು.  ಮೈಸೂರಿನ ‘ಹಿಲ್ ವ್ಯೆ’ ಎಂಬ ಮನೆಯಲ್ಲಿ ವಾಸವಿದ್ದರು. 1912ರಲ್ಲಿ ಇಂಗ್ಲೆಂಡ್‌ಗೆ ಮರಳಿದ ಅವರು ಸೌಟರ್ ಅವರ ಅಜ್ಜಿ ಡೊರೋತಿ ವೆಸ್ಟ್ ಅವರನ್ನು ವಿವಾಹವಾದರು. ತನ್ನ ತಾತನ ಭಾರತೀಯ ಕುಟುಂಬವನ್ನು ಪತ್ತೆ ಹಚ್ಚಿಕೊಡುವಂತೆ ಸೌಟರ್ ಬೆಂಗಳೂರು ಹಾಗೂ ಮೈಸೂರಿನ ನಾಗರಿಕರ ಮೊರೆ ಹೋಗಿದ್ದಾರೆ. ಸೌಟರ್ ಅವರನ್ನು ಸಂಪರ್ಕಿಸಬಹುದಾದ ಇ-ಮೇಲ್ ವಿಳಾಸ: mdsouter@gmail.com

  

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.