ಬುಧವಾರ, ಏಪ್ರಿಲ್ 21, 2021
31 °C

ತಾಪಂ ಸಭೆಗೆ ನುಗ್ಗಿದ ವಿದ್ಯಾರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ನಿಲಯಗಳ ಮೇಲ್ವಿಚಾರಕರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೌಲಭ್ಯಗಳು ಗಗನಕುಸುಮವಾಗಿವೆ. ಈ ನಿಟ್ಟಿನಲ್ಲಿ ಹಲವು ಬಾರಿ ಹಿರಿಯ ಅಧಿಕಾರಿಗಳ ಗಮನ ಸೆಳೆದರು ಪ್ರಯೋಜನವಾಗಿಲ್ಲ. ತಾಪಂ ಆಡಳಿತ ಮಂಡಳಿ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಕೊಳ್ಳುವಂತೆ ಆಗ್ರಹಿಸಿ ಸೋಮವಾರ ತಾಪಂ ಸಾಮಾನ್ಯ ಸಭೆಗೆ ನುಗ್ಗಿದ ವಿದ್ಯಾರ್ಥಿಗಳು ತಾಲ್ಲೂಕು ಆಡಳಿತದ ವಿರುದ್ಧ ಧಿಕ್ಕಾರ ಹಾಕಿದ ಪ್ರಸಂಗ ಜರುಗಿತು.ಶೈಕ್ಷಣಿಕ ವರ್ಷದ ಆರಂಭದಿಂದಲು ಪ್ರತಿಯೊಂದು ವಸತಿ ನಿಲಯಗಳಲ್ಲಿ ನಡೆಯುವ ಸಮಸ್ಯೆಗಳ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ವಿದ್ಯಾರ್ಥಿಗಳ ಸೌಲಭ್ಯಗಳನ್ನು ಕಲ್ಪಿಸದೆ ವಂಚಿಸುತ್ತಿದ್ದಾರೆ. ಅಡುಗೆ ಮಾಡುವ ಮಹಿಳಾ ಕೆಲಸಗಾರರಿಗೆ ವೇತನ ನೀಡದೆ ಸತಾಯಿಸುತ್ತಿದ್ದಾರೆ. ಹೀಗಾಗಿ ಅಡುಗೆ ಮಾಡುವವರೆ ಇಲ್ಲದೆ ವಿದ್ಯಾರ್ಥಿಗಳು ಪರೀಕ್ಷಾ ಸಿದ್ಧತೆ ಮರೆತು ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮಧ್ಯ ಪ್ರವೇಶಿಸಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಸ್ ಪಾಟೀಲ, ಜಿಪಂ ಸದಸ್ಯರಾದ ಮಹಾದೇವಪ್ಪಗೌಡ ಮಸ್ಕಿ, ಭೂಪನಗೌಡ ಕರಡಕಲ್ಲ ವಿದ್ಯಾರ್ಥಿ ಮುಖಂಡರೊಂದಿಗೆ ಚರ್ಚಿಸಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಸ್.ಬಿ ಬಿರಾದರ ಅವರನ್ನು ಕರೆಯಿಸಿ ವಿಚಾರಿಸಿದಾಗ ಸಮಸ್ಯೆ ಇರುವುದನ್ನು ಒಪ್ಪಿಕೊಂಡರು. ಇದಕ್ಕೆ ಹಣಕಾಸಿನ ಸಮಸ್ಯೆ ಕಾರಣ ಎಂದು ವಿವರಣೆ ನೀಡಿ ಒಂದು ವಾರದಲ್ಲಿ ಸಮಸ್ಯೆ ನಿವಾರಣೆ ಮಾಡುವ ಭರವಸೆ ನೀಡಿದರು.ಪ್ರತಿಭಟನೆ ನೇತೃತ್ವವನ್ನು ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ಪ್ರಬುಲಿಂಗ ಮೇಗಳಮನಿ, ಅಮರೇಶ ಕುಪ್ಪಿಗುಡ್ಡ, ಅಂಬೇಡ್ಕರ್ ವಸತಿ ನಿಲಯದ ವಿದ್ಯಾರ್ಥಿ ಮುಖಂಡರಾದ ಭೀಮಣ್ಣ, ಬಸವರಾಜ, ಚಿದಾನಂದ, ನಾಗರಾಜ, ಹನುಮಂತ, ಹುಸೇನಪ್ಪ, ದುರುಗಪ್ಪ ಮತ್ತಿತರು ವಹಿಸಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.